More

    ಕೂಡಲಿ ಮಠದಲ್ಲಿ ಶರವನ್ನರಾತ್ರಿ ಮಹೋತ್ಸವಕ್ಕೆ ಚಾಲನೆ

    ಹೊಳೆಹೊನ್ನೂರು: ಸನ್ಯಾಸಿಗಳಿಗೆ ಪೂರ್ವಾಶ್ರಮದ ನೆನಪು ಮಾಡಿಸುವುದು ಪಾಪಕ್ಕೆ ಸಮಾನ ಎಂದು ಕೂಡಲಿ ಶೃಂಗೇರಿ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಹೇಳಿದರು.

    ಸಮೀಪದ ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾಂಬಾ ಪೀಠದಲ್ಲಿ ಭಾನುವಾರ ಶರವನ್ನರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
    ಮಠಗಳು ಔನ್ನತ್ಯದೆಡೆ ಮುನ್ನಡೆಯಬೇಕು. ಮಠದ ಉನ್ನತಿಯನ್ನು ಬೌದ್ಧಿಕ, ಆರ್ಥಿಕ ವಿಚಾರದಲ್ಲಿ ಅಳೆಯುವ ಬದಲಿಗೆ ಮಠ ಬೀರುವ ಧಾರ್ಮಿಕ ಪ್ರಭಾವಗಳ ದೃಷ್ಟಿಯಲ್ಲಿ ಅಳೆಯಬೇಕು. ಕಾಲದ ಹೊಡೆತಕ್ಕೆ ಸಿಲುಕಿ ವಿಶ್ವದಲ್ಲಿ ವಿದ್ಯಮಾನಗಳು ಜರುಗುತ್ತಿವೆ. ನಮ್ಮೊಳಗಿನ ಆಂತರಿಕ ಸಂಘರ್ಷಗಳು ಕೊನೆಯಾಗಬೇಕು. ಪ್ರತಿಯೊಬ್ಬರೂ ಕರ್ಮಫಲ ಅನುಭವಿಸಬೇಕು. ಮುಂದಿನ 9 ದಿನಗಳ ಕಾಲ 9 ಲಕ್ಷ ಕುಂಕುಮಾರ್ಚನೆ ನೆರವೇರಿಸಲು ಸಂಕಲ್ಪ ಮಾಡಲಾಗಿದೆ ಎಂದರು.
    ಆರ್ಶೀವಚನ ನೀಡಿದ ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಅಭಿನವ ಶ್ರೀಗಳು, ವಿಶ್ವದಲ್ಲಿ ನಡೆಯುತ್ತಿರುವುದೆಲ್ಲ ಕಾಲ ನಿಶ್ಚಿತ. ಮಾನವ ಪಾತ್ರಧಾರಿಗಳು ಮತ್ತು ಸೂತ್ರಧಾರಿಯಂತೆ ನೆಪಮಾತ್ರಕ್ಕಿರುವುದು. ಹಿಂದೆ ನಡೆದಿರುವುದು ಮುಂದೆ ನಡೆಯುವುದು ಎಲ್ಲವೂ ಕಾಲನಿರ್ಣಯ. ಎಲ್ಲರಲ್ಲೂ ಭಗವಂತನ ಇಚ್ಛಾಶಕ್ತಿ ಇದೆ. ಜೀವಿಗಳ ಕಲ್ಯಾಣಕ್ಕಾಗಿ ತುಡಿಯುವ ಭಗವಂತನಿಂದ ಮನುಜ ಕುಲಕ್ಕೆ ತೊಂದರೆಯಾಗದು. ಸತ್ಯ ಸಂಕಲ್ಪದಿಂದ ಎಲ್ಲವೂ ಸಾಧ್ಯ. ಪವಿತ್ರ ಕಾರ್ಯಗಳ ಕರ್ಮದ ಫಲದ ಭಕ್ತಿಯ ಸುಗಂಧ ವಿಶ್ವಕ್ಕೆ ಹರಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
    ಶರವನ್ನರಾತ್ರಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಭಾನುವಾರ ಮುಂಜಾನೆ ಶಾರದಂಬಾ ಪೀಠದಲ್ಲಿ ನವಚಂಡಿಕಾ ಹವನ, ಕೌಮಾರಿಕಾ ಪೂಜೆ, ಸುವಾಸಿನಿ ಪೂಜೆ, ಸುವಾಸಿನಿಯರಿಂದ ಲಕ್ಷ ಕುಂಕುಮಾರ್ಚನೆ, ದೇವಿ ಭಾಗವತ ಪಾರಾಯಣ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು. ಶಾರದಾಂಬಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಠದ ಆವರಣವನ್ನು ವಿದ್ಯುತ್ ದೀಪಗಳಿಂದ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು. ಗಣೇಶ ಪ್ರಸಾದ್, ರಾಜೇಶ್ ಶಾಸ್ತ್ರಿ, ಅನಂತದತ್ತ, ಕೇಶವಮೂರ್ತಿ, ಶ್ರೀನಿವಾಸ್ ಐಯ್ಯರ್, ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts