More

    22 ಗುತ್ತಿಗೆ ಪೌರ ಕಾರ್ಮಿಕರಿಗೆ ಏಕಾಏಕಿ ಗೇಟ್‌ಪಾಸ್

    ಹೊಳೆಹೊನ್ನೂರು: ಇಲ್ಲಿನ ಪಟ್ಟಣ ಪಂಚಾಯಿತಿಯ 22 ಗುತ್ತಿಗೆ ಪೌರ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಮಂಗಳವಾರ ಪೌರ ಕಾರ್ಮಿಕರು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪಪಂ ಮುಖ್ಯಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

    ಮೂರ‌್ನಾಲ್ಕು ವರ್ಷಗಳಿಂದ ಪಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಇಂದು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದರೆ ನಮ್ಮ ಬದುಕಿನ ಪಾಡೇನು. ಇಲ್ಲಿಯವರೆಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಸಂಬಳವನ್ನು ನೀಡಿಲ್ಲ. ಅಲ್ಲದೆ ಅಧಿಕಾರಿಗಳು ಶಾಮಿಲಾಗಿ ನಮ್ಮ ಬದಲಿಗೆ ಬೇರೆಯವರನ್ನು ನೇಮಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
    ಕೆಲಸ ಕಾಯಂ ಮಾಡುತ್ತಾರೆಂಬ ಆಸೆಯಿಂದ ಹಿಂದೆ ಇದ್ದ ಅಧಿಕಾರಿಯೊಬ್ಬರಿಗೆ ಹಣ ನೀಡಿ ಮೋಸ ಹೋಗಿದ್ದೇವೆ. ಇಂದು ಹಣ ಪಡೆದ ಅಧಿಕಾರಿಯೂ ಇಲ, ಅತ್ತ ಕೆಲಸವೂ ಇಲ್ಲ ಎಂದು ಮಹಿಳಾ ಕಾರ್ಮಿಕರು ಕಣ್ಣೀರು ಹಾಕಿದರು.
    ಮುಖಂಡ ಆರ್.ಉಮೇಶ್ ಮಾತನಾಡಿ, ಸಮಸ್ಯೆಯನ್ನು ಮೂಲದಿಂದ ಸರಿ ಪಡಿಸಬೇಕು. ಕಾರ್ಮಿಕರು ನಾಲ್ಕೈದು ವರ್ಷಗಳಿಂದ ನಮ್ಮೂರಿನಲ್ಲಿ ಸ್ವಚ್ಛತೆ ಮಾಡಿಕೊಂಡು ಬರುತ್ತಿದ್ದಾರೆ. ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಕಾರ್ಮಿಕರು ಕೆಲಸ ಮಾಡಲಿಲ್ಲ ಎಂದರೆ ಪಪಂ ಕಸದ ಗೂಡಾಗುತ್ತದೆ. ಕಾರ್ಮಿಕರು ಮಾಮೂಲಿಯಂತೆ ಸ್ವಚ್ಛತಾ ಕೆಲಸ ಮಾಡಲಿ. ಪಪಂ ಯಾವುದಾದರೂ ಮೂಲದಿಂದ ಸಂಬಳ ನೀಡುವ ವ್ಯವಸ್ಥೆ ಮಾಡಲಿ ಎಂದು ಮನವಿ ಮಾಡಿದರು.
    ಪಪಂ ಮುಖ್ಯಾಧಿಕಾರಿ ಬಸವರಾಜ್ ಪ್ರತಿಕ್ರಿಯಿಸಿ, ಪೌರ ಕಾರ್ಮಿಕರ ಸಮಸ್ಯೆ ಜಿಲ್ಲಾಧಿಕಾರಿಗಳ ಗಮನಕ್ಕೂ ಇದೆ. ಪಪಂಗೆ ಪೌರ ಕಾರ್ಮಿಕರ ನೇರ ನೇಮಕಾತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದವರಿಗೆ ಆದ್ಯತೆ ನೀಡಲಾಗುವುದು. ಅದರಂತೆ ಅನುಭವದ ಪ್ರಮಾಣಪತ್ರ ನೀಡಿ ನೇಮಕಾತಿ ಹಂತಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಸಹ್ಯಾದ್ರಿ ಹರೀಶ್, ಶಂಕರಪ್ಪ, ರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts