More

    ವಿಶ್ವಕಪ್ ವಿದಾಯಕ್ಕೆ ಸಿದ್ಧಗೊಂಡ ಸ್ಟಾರ್ ಆಟಗಾರರು: ವಿಶ್ವಕಪ್ ಗೆಲುವು ವೃತ್ತಿಜೀವನದ ದೊಡ್ಡ ಕನಸು

    ಬೆಂಗಳೂರು: ಇತರ ಕ್ರೀಡಾಪಟುಗಳಿಗೆ ಹೇಗೆ ಒಲಿಂಪಿಕ್ಸ್ ಪದಕ ಪರಮೋಚ್ಛ ಗುರಿಯೋ ಹಾಗೆಯೇ ಕ್ರಿಕೆಟಿಗರಿಗೆ ವಿಶ್ವಕಪ್ ಗೆಲುವು ವೃತ್ತಿಜೀವನದ ದೊಡ್ಡ ಕನಸು ಆಗಿರುತ್ತದೆ. ದಿಗ್ಗಜ ಸಚಿನ್ ತೆಂಡುಲ್ಕರ್ ಅವರೇ ಈ ಕನಸು ನನಸಾಗಿಸಲು 6 ಆವೃತ್ತಿ ಕಾದಿದ್ದರು. ಕ್ರಿಕೆಟಿಗರಿಗೆ ಪ್ರತಿ ವಿಶ್ವಕಪ್ ಕೂಡ ಶ್ರೇಷ್ಠ. ಅದರಲ್ಲೂ ವೃತ್ತಿಜೀವನದ ಕೊನೇ ವಿಶ್ವಕಪ್‌ನಲ್ಲಿ ಜೀವನಶ್ರೇಷ್ಠ ನಿರ್ವಹಣೆಯ ತುಡಿತ ಹೊಂದಿರುತ್ತಾರೆ. ಗುರುವಾರದಿಂದ ಭಾರತದ ಆತಿಥ್ಯದಲ್ಲಿ ನಡೆಯಲಿರುವ 13ನೇ ಆವೃತ್ತಿಯ ವಿಶ್ವಕಪ್ ಕೆಲ ಸ್ಟಾರ್ ಕ್ರಿಕೆಟಿಗರಿಗೆ ಕೊನೇ ಟೂರ್ನಿ ಎನಿಸಿದೆ. ಟೂರ್ನಿಗೆ ಸಂಭ್ರಮದ ವಿದಾಯ ಹೇಳಲು ಸಜ್ಜಾಗಿರುವ ಅಂಥ ಕೆಲ ಕ್ರಿಕೆಟಿಗರ ವಿವರ ಇಲ್ಲಿದೆ.

    ವಿರಾಟ್ ಕೊಹ್ಲಿ:  ಟೀಮ್ ಇಂಡಿಯಾದ ರನ್ ಮೆಷಿನ್, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಪಾಲಿಗೆ ಇದೇ 4ನೇ ಹಾಗೂ ಕೊನೇ ವಿಶ್ವಕಪ್ ಆದರೆ ಅಚ್ಚರಿಯಿಲ್ಲ. ಟೂರ್ನಿಯ ನಡುವೆ ನವೆಂಬರ್ 5ಕ್ಕೆ 35ನೇ ವಯಸ್ಸಿಗೆ ಕಾಲಿಡಲಿರುವ ಅವರು, 39ನೇ ವಯಸ್ಸಿನಲ್ಲಿ ಇನ್ನೊಂದು ವಿಶ್ವಕಪ್ ಆಡುವ ಸಾಧ್ಯತೆ ಕಡಿಮೆ. ಐಸಿಸಿ ದಶಕದ ಕ್ರಿಕೆಟಿಗನಾಗಿ ಮಿಂಚಿರುವ ಕೊಹ್ಲಿ 2011ರಲ್ಲಿ ಆಡಿದ ಮೊದಲ ವಿಶ್ವಕಪ್‌ನಲ್ಲೇ ಟ್ರೋಫಿ ಗೆಲುವು ಕಂಡಿದ್ದರು. ಹೀಗಾಗಿ ಕೊನೇ ವಿಶ್ವಕಪ್‌ನಲ್ಲೂ ಟ್ರೋಫಿಗೆ ಮುತ್ತಿಕ್ಕುವ ಕನಸಿನಲ್ಲಿದ್ದಾರೆ. ನಾಯಕನಾಗಿ ವಿಶ್ವಕಪ್ ಎತ್ತಿಹಿಡಿಯುವ ಆಸೆ ಪೂರೈಸಲಿಲ್ಲ ಎಂಬುದನ್ನು ಬಿಟ್ಟರೆ, ಬ್ಯಾಟಿಂಗ್‌ನಲ್ಲಿ ಈಗಾಗಲೆ ಬಹುತೇಕ ದಾಖಲೆಗಳ ಒಡೆಯರಾಗಿದ್ದಾರೆ. ಕೊಹ್ಲಿ ವಿಶ್ವಕಪ್ ಬಳಿಕ ಟೆಸ್ಟ್ ವೃತ್ತಿ ಜೀವನದತ್ತ ಹೆಚ್ಚಿನ ಗಮನಹರಿಸುವ ನಿರೀಕ್ಷೆ ಇದೆ.

    ರೋಹಿತ್ ಶರ್ಮ: ತವರಿನಲ್ಲಿ 2ನೇ ಮತ್ತು ಒಟ್ಟಾರೆ 3ನೇ ಬಾರಿ ವಿಶ್ವಕಪ್ ಗೆಲ್ಲುವ ಕೋಟ್ಯಂತರ ಅಭಿಮಾನಿಗಳ ಆಸೆಯನ್ನು ಪೂರೈಸುವ ಜವಾಬ್ದಾರಿ ನಾಯಕ ರೋಹಿತ್ ಶರ್ಮ ಹೆಗಲಿನಲ್ಲಿದೆ. 2011ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದ 36 ವರ್ಷದ ರೋಹಿತ್, ನಂತರ 2 ವಿಶ್ವಕಪ್‌ಗಳಲ್ಲಿ ಸೆಮೀಸ್‌ನಲ್ಲಿ ನಿರಾಸೆ ಕಂಡಿದ್ದರು. ಈ ಬಾರಿ ವಿಶ್ವಕಪ್ ಗೆದ್ದ ಭಾರತೀಯ ನಾಯಕರಾದ ಕಪಿಲ್ ದೇವ್, ಎಂಎಸ್ ಧೋನಿ ಸಾಲಿಗೆ ಸೇರುವ ತವಕದಲ್ಲಿದ್ದಾರೆ. ಮುಂದಿನ ವಿಶ್ವಕಪ್ ವೇಳೆಗೆ ರೋಹಿತ್ 40ರ ಗಡಿಯಲ್ಲಿರುತ್ತಾರೆ. ಅದಕ್ಕಿಂತ ಮುನ್ನ ಈ ವಿಶ್ವಕಪ್ ನಂತರದಲ್ಲೇ ಅವರ ವೃತ್ತಿಜೀವನ ಸಂಧ್ಯಾಕಾಲದತ್ತ ಸಾಗುವ ಸಾಧ್ಯತೆಗಳಿವೆ.

    ಡೇವಿಡ್ ವಾರ್ನರ್: ವಿಶ್ವದ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾದ ಡೇವಿಡ್ ವಾರ್ನರ್ 2015ರಲ್ಲಿ ವಿಶ್ವಕಪ್ ಗೆದ್ದ ಆಸೀಸ್ ತಂಡದ ಭಾಗವಾಗಿದ್ದರು. ಈ ಸಲ 3ನೇ ಬಾರಿ ವಿಶ್ವಕಪ್ ಆಡಲಿರುವ 36 ವರ್ಷದ ವಾರ್ನರ್ 2ನೇ ಬಾರಿ ಟ್ರೋಫಿ ಜಯಿಸುವ ತವಕದಲ್ಲಿದ್ದಾರೆ. ಇದು ಅವರಿಗೆ ಕೊನೇ ವಿಶ್ವಕಪ್ ಮಾತ್ರವಲ್ಲದೆ ಕೊನೇ ಏಕದಿನ ಟೂರ್ನಿಯೂ ಆಗುವ ಸಾಧ್ಯತೆಗಳಿವೆ. ವರ್ಷಾಂತ್ಯದಲ್ಲಿ ಕ್ರಿಕೆಟ್‌ಗೆ ವಿದಾಯ ೋಷಿಸುವ ಸುಳಿವನ್ನು ಈಗಾಗಲೆ ನೀಡಿದ್ದಾರೆ.

    ಶಕೀಬ್ ಅಲ್ ಹಸನ್ : ವಿಶ್ವದ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಪಾಲಿಗೆ ಇದು 5ನೇ (2007, 2011, 2015, 2019) ವಿಶ್ವಕಪ್. 2011ರಲ್ಲಿ ತಂಡವನ್ನು ಮುನ್ನಡೆಸಿದ್ದ 36 ವರ್ಷದ ಶಕೀಬ್‌ಗೆ ಮತ್ತೆ ನಾಯಕ ಪಟ್ಟ ಒಲಿದು ಬಂದಿದೆ. ಯಾವುದೇ ತಂಡಕ್ಕೆ ಶಾಕ್ ನೀಡುವ ಸಾಮರ್ಥ್ಯ ಹೊಂದಿರುವ ಬಾಂಗ್ಲಾಗೆ ಮೊಟ್ಟಮೊದಲ ಐಸಿಸಿ ಟ್ರೋಫಿ ಉಡುಗೊರೆ ನೀಡಿ ನಿವೃತ್ತಿ ಹೇಳುವ ಕನಸಿನಲ್ಲಿದ್ದಾರೆ.

    ಬೆನ್ ಸ್ಟೋಕ್ಸ್: 2019ರ ವಿಶ್ವಕಪ್ ೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ರೂವಾರಿ. 32 ವರ್ಷದ ಬೆನ್ ಸ್ಟೋಕ್ಸ್ ಆಧುನಿಕ ಕ್ರಿಕೆಟ್ ಲೋಕದ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಪ್ರಮುಖರು. ಈ ಬಾರಿ ಮತ್ತೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ನಿವೃತ್ತಿಯನ್ನು ಹಿಂಪಡೆದು ಮರಳಿ ಕಣಕ್ಕಿಳಿಯಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬಜ್‌ಬಾಲ್ ಮೂಲಕ ಹೆಚ್ಚು ಸದ್ದು ಮಾಡುತ್ತಿರುವ ಸ್ಟೋಕ್ಸ್ ವಿಶ್ವಕಪ್ ಬಳಿಕ ಮತ್ತೆ ಏಕದಿನ ಕ್ರಿಕೆಟ್ ಗುಡ್ ಬೈ ಹೇಳಲಿದ್ದಾರೆ.

    ಕೇನ್ ವಿಲಿಯಮ್ಸನ್: ಕ್ರಿಕೆಟ್ ಜಗತ್ತಿನ ಅತ್ಯುತ್ತಮ ನಾಯಕರಲ್ಲೊಬ್ಬರು. ಎಂಥ ಸಂದರ್ಭದಲ್ಲಿಯೂ ಸಮಚಿತ್ತದಿಂದ ತಂಡವನ್ನು ಮುನ್ನಡೆಸುವ ಕಲೆಯನ್ನು ಅರಿತಿರುವ ಆಟಗಾರ. ಕಳೆದ ಬಾರಿ ಕೂದಲೆಳೆಯ ಅಂತರದಲ್ಲಿ ಕಿವೀಸ್‌ಗೆ ತಪ್ಪಿದ ವಿಶ್ವಕಪ್ ಕನಸನ್ನು ಈ ಸಲ ನನಸಾಗಿಸುವ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಗಾಯದ ನಡುವೆಯೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 33 ವರ್ಷದ ವಿಲಿಯಮ್ಸನ್‌ಗೆ ಇದು 3ನೇ ವಿಶ್ವಕಪ್ ಮತ್ತು ಕೊನೆಯದೂ ಆದರೆ ಅಚ್ಚರಿ ಇಲ್ಲ.

    ಕ್ವಿಂಟನ್ ಡಿ ಕಾಕ್: 20ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್- ಬ್ಯಾಟರ್ ಕ್ವಿಂಟನ್ ಡಿಕಾಕ್‌ಗೆ ಈಗ 30 ವರ್ಷ. ಆದರೆ ವಿಶ್ವಕಪ್ ನಂತರದಲ್ಲಿ ಏಕದಿನ ಮಾದರಿಯಿಂದ ನಿವೃತ್ತಿಯಾಗುವುದಾಗಿ ಈಗಾಗಲೆ ೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್‌ನಲ್ಲಿ 7ನೇ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಎನಿಸಿರುವ ಡಿಕಾಕ್, ಟ್ರೋಫಿಯೊಂದಿಗೆ ವಿದಾಯ ಹೇಳುವ ತವಕದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts