More

    ವಿದ್ಯಾರ್ಥಿಗಳ ಬಳಕೆಗೆ ಸಿಗದ ಕ್ರೀಡಾಂಗಣ

    ಹಾನಗಲ್ಲ: ಪಟ್ಟಣದ ತಾಲೂಕು ಕ್ರೀಡಾಂಗಣ ಕ್ರೀಡೆಗಳಿಗಿಂತಲೂ ಹೆಚ್ಚಾಗಿ ಇತರ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದರತ್ತ ಯಾವ ಇಲಾಖೆ ಅಧಿಕಾರಿಗಳೂ ಗಮನಹರಿಸದಿರುವುದು ವಿಪರ್ಯಾಸವೇ ಸರಿ.

    5-6 ಎಕರೆ ವಿಸ್ತೀರ್ಣ ಹೊಂದಿರುವ ವಿಶಾಲವಾದ ತಾಲೂಕು ಕ್ರೀಡಾಂಗಣ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾದಂತಿದೆ. ಅದನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬಿಕೋ ಎನ್ನುವಂತಿರುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಸುತ್ತಿದ್ದಾರೆ.

    ಸಂಜೆ ಸಮಯದಲ್ಲಿ ಕ್ರೀಡಾಂಗಣದ ಮೂಲೆ- ಮೂಲೆಗಳಲ್ಲಿ ಕುಳಿತು ಮದ್ಯಪಾನ ಮಾಡುವ ಗುಂಪುಗಳು ಕಂಡುಬರುತ್ತವೆ. ಕುಡಿದ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಕ್ರೀಡಾಂಗಣದ ಸುತ್ತ ಯಾವುದೇ ಬೀದಿ ದೀಪ ಇಲ್ಲದಿರುವುದು ಈ ಚಟುವಟಿಕೆಗೆ ಸಹಕಾರಿಯಾದಂತಾಗಿದೆ.

    ಕ್ರೀಡಾಂಗಣದ ಸಮೀಪವೇ ಮದ್ಯದ ಅಂಗಡಿ ಇರುವುದರಿಂದ ಕ್ರೀಡಾಂಗಣದಲ್ಲಿ ಕುಳಿತುಕೊಳ್ಳಲು ಅನುಕೂಲವಾಗುತ್ತಿದೆ. ಒಳಭಾಗದಲ್ಲಿರುವ ಈಜುಗೊಳದ ಕಟ್ಟೆಯ ಮೇಲೂ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ. ಸುತ್ತಲೂ ಮದ್ಯದ ಬಾಟಲಿಗಳನ್ನು ಎಸೆಯಲಾಗುತ್ತಿದೆ. ಕ್ರೀಡಾಂಗಣ ಹಗಲಿನಲ್ಲಿ ಬಿಡಾಡಿ ದನಗಳಿಗೆ ತಂಗುದಾಣವಾಗಿ ಪರಿಣಮಿಸಿದೆ. ಕೆಲವರು ದನ ಮೇಯಿಸಲೂ ಬಳಸಿಕೊಳ್ಳುತ್ತಿದ್ದಾರೆ.

    ಆರಂಭಗೊಳ್ಳಲಿ ತರಬೇತಿ: ಪಟ್ಟಣದಲ್ಲಿ ಹತ್ತಾರು ಪ್ರಾಥಮಿಕ, ಪ್ರೌಢಶಾಲೆಗಳಿವೆ. ಸಾವಿರಾರು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಬಹಳಷ್ಟು ಶಾಲೆಗಳಿಗೆ ಆಟದ ಮೈದಾನದ ಕೊರತೆಯಿದೆ. ಅಂಥ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾಂಗಣದಲ್ಲಿ ವಾರದಲ್ಲಿ ನಾಲ್ಕಾರು ದಿನಗಳಂದು ಕ್ರೀಡಾಭ್ಯಾಸಕ್ಕೆ ಅವಕಾಶ ನೀಡುವುದರಿಂದ ಅನುಕೂಲವಾಗಲಿದೆ. ಶಿಕ್ಷಣ ಇಲಾಖೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಸ್ಥಳೀಯ ಪುರಸಭೆ ಒಟ್ಟಾಗಿ ಕುಳಿತು ಚರ್ಚಿಸಿದರೆ ಕ್ರೀಡಾಂಗಣದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಬಲ್ಲದು ಎಂಬುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯವಾಗಿದೆ.

    ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅನೈತಿಕ ಚಟುವಟಿಕೆಯನ್ನು ತಡೆಯುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇದು ಯಾವ ಇಲಾಖೆಯ ಸುಪರ್ದಿಯಲ್ಲಿದೆ. ಸ್ಥಳೀಯ ಸಂಘ- ಸಂಸ್ಥೆಗಳಿಗೆ ನಿರ್ವಹಣೆಗೆ ನೀಡಿದರೆ ಪ್ರತಿ ದಿನ ಕ್ರೀಡಾ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾಂಗಣವನ್ನು ನಿವೃತ್ತ ದೈಹಿಕ ಶಿಕ್ಷಕರು ನಿರ್ವಹಿಸಲೂ ಸಾಧ್ಯವಿದೆ. ತಾಲೂಕು ಆಡಳಿತ ಅಥವಾ ಕ್ರೀಡಾ ಇಲಾಖೆ ಇದರತ್ತ ಗಮನ ಹರಿಸಲಿ.
    I ಕೆ.ಎಲ್. ದೇಶಪಾಂಡೆ
    ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts