More

    ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿ ಕ್ರೀಡಾಂಗಣ

    ಲಿಂಗದಹಳ್ಳಿ (ತರೀಕೆರೆ ತಾ.): ತಾಲೂಕಿನಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ತರೀಕೆರೆಯಲ್ಲಿ 11 ಎಕರೆ ವಿಸ್ತೀರ್ಣದಲ್ಲಿ, ಅಜ್ಜಂಪುರದಲ್ಲಿ 6 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

    ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
    ತರೀಕೆರೆ ತಾಲೂಕಿಗೆ 3ರಿಂದ 4 ಪಬ್ಲಿಕ್ ಶಾಲೆಗಳನ್ನು ನೀಡುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಇದರಲ್ಲಿ ಒಂದನ್ನು ಲಿಂಗದಹಳ್ಳಿಗೆ ನೀಡಲಾಗುವುದು. ಯಾವುದೇ ಜಿಲ್ಲೆ ಉನ್ನತ ಮಟ್ಟದತ್ತ ಸಾಗಲು ಜಿಲ್ಲಾಧಿಕಾರಿ, ಎಸ್ಪಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಉತ್ಸಾಹಿಗಳಾಗಿರಬೇಕು. ಜಿಲ್ಲೆಯ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
    ನಾನು ಮೊದಲ ಬಾರಿ ಶಾಸಕನಾಗಿದ್ದ ಸಂದರ್ಭ ಲಿಂಗದಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು. ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಭಾಗವಹಿಸಿದ್ದರು. ಅವರು ಕಾರ್ಯಕ್ರಮ ಆಯೋಜನೆ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅದೇ ರೀತಿ ಮೈಸೂರು ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಸುವ್ಯವಸ್ಥಿತವಾಗಿ ನಡೆಯಲು ಶಾಲಾಡಳಿತ ಮಂಡಳಿ ಮತ್ತು ಈ ಭಾಗದ ಗ್ರಾಮಸ್ಥರೇ ಮುಖ್ಯ ಕಾರಣ ಎಂದರು.
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಎನ್.ಲಿಂಗರಾಜು ಮಾತನಾಡಿ, ಲಿಂಗದಹಳ್ಳಿ ಶಾಲೆ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೂ ಕಳೆದ ಅನೇಕ ದಿನಗಳಿಂದ ಪಂದ್ಯಾವಳಿ ಯಶಸ್ವಿಗಾಗಿ ಶ್ರಮಪಡುತ್ತಿರುವುದಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು.
    ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರಚನಾ ಮಾತನಾಡಿ, ಕಳೆದ 15 ದಿನಗಳಿಂದ ಶಾಲಾ ಆಡಳಿತ ಮತ್ತು ಶಿಕ್ಷಕರು ಪಂದ್ಯಾವಳಿಯ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮುಖ್ಯ ಶಿಕ್ಷಕ ಸೋಮಶೇಖರಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಸುವ್ಯವಸ್ಥಿತವಾಗಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.
    ಲಿಂಗದಹಳ್ಳಿಯಲ್ಲಿ ನಡೆಯುತ್ತಿರುವ 2 ದಿನಗಳ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ 8 ಜಿಲ್ಲೆಗಳ 300 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಸಿ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
    ಡಿಡಿಪಿಐ ಜಿ.ರಂಗನಾಥಸ್ವಾಮಿ, ಡಿಡಿಪಿಯು ಕೆ.ಎಸ್.ಪ್ರಕಾಶ್, ಬಿಇಒ ಎಚ್.ಗಂಗಾಧರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಎನ್.ಜ್ಞಾನಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಯದೇವಪ್ಪ, ತರೀಕೆರೆ ತಾಪಂ ಇಒ ಗೀತಾ ಶಂಕರ್, ಅಕ್ಷರ ದಾಸೋಹ ಉಪನಿರ್ದೇಶಕ ಗಣೇಶ್, ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಚಂದ್ರಪ್ಪ, ಎಂ.ಆರ್.ಧನಂಜಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಲತಾ ತಮ್ಮಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts