More

    ಪ್ರತಿಭಾವಂತ ಎಸ್‌ಟಿ ವಿದ್ಯಾರ್ಥಿನಿಯರಿಗೆ ಸಿಕ್ಕಿಲ್ಲ ಸರ್ಕಾರದ ಪ್ರೋತ್ಸಾಹ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಕ್ಕೆಕಟ್ಟೆ
    ಬೇಟಿ ಪಡಾವೊ ಬೇಟಿ ಬಚಾವೊ ಕೇಂದ್ರದ ಘೋಷಣೆ.. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿಬಾಂಡ್.. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಎಸ್ಸಿ ಎಸ್ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಸರ್ಕಾರ ಉತ್ತೇಜನ ನೀಡುತ್ತಿದ್ದರೂ, ಎಸ್‌ಟಿ ಹೆಮ್ಮಕ್ಕಳಿಬ್ಬರು ವಿದ್ಯಾಭ್ಯಾಸ ಮೊಟಕುಗೊಳ್ಳುವ ಆಪಾಯದಲ್ಲಿ ಸಿಲುಕಿದ್ದಾರೆ.

    ಉಡುಪಿ ತಾಲೂಕು ಕುಕ್ಕೆಕಟ್ಟೆ ಬೆಳ್ಳಂಪಳ್ಳಿ ಬಿಎ ಪದವೀಧರ ಪ್ರಭಾಕರ ನಾಯ್ಕ ಹಾಗೂ ವಿಜಯಾ ನಾಯ್ಕ ದಂಪತಿ ಪುತ್ರಿಯರು ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರು. ಮೂರನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಪ್ರಜ್ಞಾ ಹಾಗೂ ಎರಡನೇ ವರ್ಷದ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮಾಡುತ್ತಿರುವ ಪೂಜಾ ಪಿ. ನಾಯ್ಕ ಅವರಿಗೆ ದುಡಿಮೆಯಿಲ್ಲದ ಹೆತ್ತವರ ಅಸಹಾಯಕತೆಯಿಂದ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಪ್ರತಿಭಾನ್ವಿತರಾಗಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ದೊಡ್ಡಮಗಳು ಎಸ್ಸೆಸ್ಸೆಲ್ಸಿ ಶೇ.89, ಪಿಯುಸಿಯಲ್ಲಿ ಶೇ.80 ಉತ್ತಮ ಅಂಕ ಪಡೆದು ಉತ್ತೀರ್ಣಳಾದರೆ, ಎರಡನೇ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ.95,36, ಪಿಯುಸಿ ಪಿಸಿಎಂಬಿ ವಿಭಾಗದಲ್ಲಿ ಶೇ.96 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಮೊದಲ ವರ್ಷದ ಇಂಜಿನಿಯರಿಂಗ್‌ನಲ್ಲೂ ಉತ್ತಮ ಅಂಕ ಪಡೆದಿದ್ದಾಳೆ. ವಿದ್ಯಾರ್ಥಿನಿಯರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ 15 ಸಾವಿರ ರೂ. ಪ್ರೋತ್ಸಾಹಧನ ಬಿಟ್ಟರೆ ಹೆಚ್ಚಿನ ಸವಲತ್ತು ಸಿಕ್ಕಿಲ್ಲ.

    ಪ್ರಭಾಕರ ನಾಯ್ಕ ದಂಪತಿ ಬೆಳ್ಳಂಪಳ್ಳಿ ಸರ್ಕಾರಿ ನಿವೇಶನ ಅಡಿಯಲ್ಲಿ 2.75 ಸೆಂಟ್ಸ್ ಜಾಗದಲ್ಲಿ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಹಿಂದೆ ಮೀನು ಕಾರ್ಖಾನೆಯಲ್ಲಿ ಪತಿ, ಪತ್ನಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇತ್ತೀಚೆಗೆ ಕಾರ್ಖಾನೆ ಮುಚ್ಚಿದ್ದರಿಂದ ಕೆಲಸ ಕಳೆದುಕೊಂಡಿದ್ದಾರೆ. ಪ್ರಸಕ್ತ ಪ್ರಭಾಕರ ನಾಯ್ಕ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಆಶಾ ಕಾರ‌್ಯಕರ್ತೆಯಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ತಿಂಗಳಿಗೆ 10 ಸಾವಿರ ಖರ್ಚು ಬರುತ್ತಿದ್ದು, ಈಗಾಗಲೇ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಕಟ್ಟಲೆಂದು 2 ಲಕ್ಷ ರೂ. ಸಾಲ ಮಾಡಿದ್ದು, ಮುಂದೆ ಏನು ಎನ್ನುವ ಚಿಂತೆಯಲ್ಲಿದ್ದಾರೆ. ಹೆತ್ತವರಿಗೆ ಸಾಕಷ್ಟು ಆದಾಯ ಇಲ್ಲದೆ ತಮ್ಮ ವಿದ್ಯಾಭ್ಯಾಸ ಎಲ್ಲಿ ಮೊಟಕಾಗುತ್ತದೋ ಇನ್ನುವ ಭಯದಲ್ಲಿ ಹೆಮ್ಮಕ್ಕಳಿದ್ದಾರೆ.

    ದೊಡ್ಡ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು ಪಾಸಾದರೆ, ಪಿಯುಸಿ ನಂತರ ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶವಿಟ್ಟುಕೊಂಡಿದ್ದರೂ ಬಡತನ ಅಡ್ಡಿ ಬಂದಿದ್ದರಿಂದ ಉಡುಪಿಯಲ್ಲಿ ನರ್ಸಿಂಗ್ ಮಾಡುತ್ತಿದ್ದಾಳೆ. ಎರಡನೇ ಮಗಳು ಮಂಗಳೂರು ಕಾಲೇಜೊಂದರಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಎರಡನೇ ಮಗಳ ಪಿಜಿ, ಯೂನಿಫಾರಂ, ಪ್ರಾಜೆಕ್ಟ್ ರಿಪೋರ್ಟ್‌ಗೆಲ್ಲ ಕನಿಷ್ಠ 6 ಸಾವಿರ ರೂ. ತಿಂಗಳಿಗೆ ಬೇಕಾದರೆ, ನರ್ಸಿಂಗ್ ಮಾಡುತ್ತಿರುವ ದೊಡ್ಡಮಗಳಿಗೆ ಬಸ್ ಚಾರ್ಜ್ ಅದೂ ಇದೂ ಎಂದು 4 ಸಾವಿರ ತಿಂಗಳಿಗೆ ತೆಗೆದಿಡಬೇಕು. ಕೂಲಿ ಕೆಲಸ ಮಾಡಿ, ತಮ್ಮ ಹೊಟ್ಟೆ ತುಂಬಿಸಿಕೊಂಡು ಮಕ್ಕಳನ್ನು ಓದಿಸಬೇಕು ಎಂದರೆ ಆಗದ ಮಾತು. ನೀರು ಕೂಡ ಹಣ ಕೊಟ್ಟು ಕೊಳ್ಳಬೇಕು. ಮಾಹಿತಿಗೆ ವಿಜಯ ದೂರವಾಣಿ ಸಂಖ್ಯೆ-7899471951 ಸಂಪರ್ಕಿಸಬಹುದು.

    ಲ್ಯಾಪ್‌ಟಾಪ್ ಸಿಕ್ಕಿಲ್ಲ: ಇಂಜಿನಿಯರಿಂಗ್ ಹಾಗೂ ನರ್ಸಿಂಗ್ ಮಾಡುತ್ತಿರುವ ಮಕ್ಕಳ ಪ್ರಾಜೆಕ್ಟ್ ರಿಪೋರ್ಟ್, ಇನ್ನಿತರ ಅನುಕೂಲಕ್ಕಾಗಿ ಪ್ರಭಾಕರ ನಾಯ್ಕ ಹಾಗೂ ವಿಜಯಾ ಲ್ಯಾಪ್‌ಟಾಪ್ ವ್ಯವಸ್ಥೆಗಾಗಿ ಹೈರಾಣಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಲ್ಯಾಪ್‌ಟಾಪ್ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿಗೂ ಅರ್ಜಿ ಹಾಕಿದ್ದು, ಗ್ರಾಪಂ ಪಿಡಿಒ ಕೊಡಲು ಸಾಧ್ಯವಿಲ್ಲ ಎಂಬ ಹಿಂಬರಹ ಕೊಟ್ಟಿದ್ದಾರೆ. ಮರಾಟಿ ಸಂಘಟನೆಯವರು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ ಸುಮ್ಮನಾಗಿದ್ದಾರೆ.

     ಪರಿಶಿಷ್ಟ ಪಂಗಡಕ್ಕೆ ಸೇರಿದ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್ ನೀಡುವ ಬಗ್ಗೆ ಜಿಪಂ ಸಿಎಸ್ ಅವರ ಜತೆ ಮಾತನಾಡಿ, ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡುವಂತೆ ಸೂಚಿಸುವ ಜತೆ ಖುದ್ದು ನಾನೇ ಈ ಸಮಸ್ಯೆ ಅಟೆಂಡ್ ಮಾಡುತ್ತೇನೆ.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಅಂಗೈ ಅಗಲದ ಮನೆಯಲ್ಲಿದದ್ದು, ಪಿಸಿಎಂಬಿ ವಿಭಾಗದಲ್ಲಿ ಶೇ.96 ಅಂಕ ಪಡೆದು ಉತ್ತೀರ್ಣರಾಗಿರುವುದು ಎಸ್ಟಿ ವಿದ್ಯಾರ್ಥಿನಿ ವಿಶೇಷ ಸಾಧನೆಯಾಗಿದೆ. ವಿದ್ಯಾರ್ಥಿನಿ ಹೆತ್ತವರು ಪರಿಶಿಷ್ಟ ಜಾತಿಗಿರುವ ಅನುದಾನದಲ್ಲಿ ಲ್ಯಾಪ್‌ಟಾಪ್ ಕೊಡಿಸುವಂತೆ ಸ್ಥಳೀಯ ಗ್ರಾಪಂಗೆ ಮನವಿ ಮಾಡಿದ್ದು, ಎಸ್ಸಿಎಸ್ಟಿ ಅನುದಾನ ವಿಭಗಿಸಿ ಜನರಿಗೆ ಹಂಚಲಾಗುತ್ತದೆ ಎಂದು ಪಂಚಾಯಿತಿ ಹೇಳಿದೆ. ಇದು ಸರಿಯಾದ ನಡೆಯಲ್ಲ. ಪ್ರತಿಭಾವಂತ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಒದಗಿಸಿ ಉತ್ತೇಜನ ನೀಡಬೇಕಿತ್ತು. ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಲ್ಯಾಪ್‌ಟಾಪ್ ಹಾಗೂ ಮುಂದಿನ ಶಿಕ್ಷಣಕ್ಕೆ ಸಹಕಾರ ಮಾಡಬೇಕು.
    -ಗಣೇಶ್ ಕೊರಗ,ಅಧ್ಯಕ್ಷ, ಕೊರಗ ಶ್ರೇಯೋಭಿವೃದ್ಧಿ ಸಂಘ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts