More

    ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ;  ಅಧಿಕಾರಿಗಳಿಗೆ ಶಾಸಕ ಡಾ.ರಂಗನಾಥ್ ಸೂಚನೆ

    ಕುಣಿಗಲ್ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ತಿಂಡಿ, ವೈದ್ಯಕೀಯ, ಸಾರಿಗೆ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಶಾಸಕ ಡಾ.ಎಚ್.ಡಿ.ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜು.19 ಮತ್ತು ಜು.22ರಂದು 2021ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಏನು ಕ್ರಮಕೈಗೊಂಡಿದ್ದೀರಾ ಎಂಬ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಇಒ ತಿಮ್ಮರಾಜು, ಈ ಬಾರಿ 3014 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಪಟ್ಟಣ ಸೇರಿ ತಾಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

    ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಪ್ರತಿ ಕೇಂದ್ರದಲ್ಲೂ ಸ್ಯಾನಿಟೈಸೇಷನ್ ಮಾಡಿಸಲಾಗುವುದು. ಗ್ರಾಮೀಣ ಮಕ್ಕಳಿಗೆ ವಿಶೇಷ ಬಸ್ ವ್ಯವಸ್ಥೆ ಈ ಬಾರಿ ಇರುವುದಿಲ್ಲ. ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಕಾರಣಕ್ಕಾಗಿ ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ 8.30ಕ್ಕೆ ಹಾಜರಾಗಬೇಕು, ಕರೊನಾ ಲಕ್ಷಣಗಳು ಕಂಡು ಬಂದಲ್ಲಿ ಆ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು. ಕರೊನಾ ಲಸಿಕೆ ಪಡೆದ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವುದು, ಪರೀಕ್ಷೆ ಕೇಂದ್ರದಿಂದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ, ಇದರ ಅಕ್ಕ ಪಕ್ಕದಲ್ಲಿ ಇರುವ ಜೆರಾಕ್ಸ್ ಅಂಗಡಿಗಳ ಬಂದ್‌ಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಆನ್‌ಲೈನ್‌ನಲ್ಲಿ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಮಾಡಿಲ್ಲ. ಈ ನಡುವೆ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ನಿರ್ಭಯವಾಗಿ ಪರೀಕ್ಷೆ ಬರೆಯುವ ವಾತಾವರಣ ಸೃಷ್ಟಿ ಮಾಡುವಂತೆ ಬಿಇಒ ತಿಮ್ಮರಾಜುಗೆ ಶಾಸಕ ರಂಗನಾಥ್ ತಿಳಿಸಿದರು.
    ತಾಪಂ ಇಒ ಜೋಸೆಫ್, ಸಿಪಿಐಗಳಾದ ಡಿ.ಎಲ್.ರಾಜು, ಗುರುಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್ ಇದ್ದರು.

    ಬಸ್ ವ್ಯವಸ್ಥೆ ಕಲ್ಪಿಸಿ: ಪರೀಕ್ಷೆ ದಿನದಂದು ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಮಹಬಲೇಶ್ವರಗೆ ಶಾಸಕರು ಸೂಚಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕುಣಿಗಲ್ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್‌ಗೆ ತಿಳಿಸಿದರು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವೈದ್ಯರನ್ನು ನಿಯೋಜಿಸುವಂತೆ ಟಿಎಚ್‌ಒ ಜಗದೀಶ್ ಅವರಿಗೆ ಸೂಚಿಸಿದರು, ಪರೀಕ್ಷಾ ಕೇಂದ್ರಗಳ ಬಿಗಿ ಭದ್ರತೆ ಏರ್ಪಡಿಸಲು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts