More

    ಸರ್ವರನ್ನು ಸಮಭಾವದಿಂದ ಕಾಣುವವನೇ ಪಂಡಿತ

    ಶ್ರೀಶೈಲಂ: ಉಚ್ಚ-ನೀಚ, ಮೇಲು-ಕೀಳು, ಬಡವ-ಬಲ್ಲಿದ ಎಂದು ಭೇದ ಮಾಡದೆ ಸರ್ವರನ್ನು ಸಮಭಾವದಿಂದ ನೋಡುವ ಮತ್ತು ಸರ್ವರಲ್ಲಿ ಶಿವನನ್ನೇ ಕಾಣುವ ಶಿವದೃಷ್ಟಿ ಹೊಂದಿದ ಶಿವಜ್ಞಾನಿಯೇ ಪಂಡಿತ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

    ಶ್ರೀಶೈಲ ಪೀಠದಲ್ಲಿ ಜಗದ್ಗುರು ಪಂಡಿತಾರಾಧ್ಯ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಪವಿತ್ರ ಶುಭ ಪರ್ವದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಆಣವ ಮುಂತಾದ ಮಲತ್ರಯಗಳ ಆವರಣದಿಂದ ಜೀವನಲ್ಲಿ ಭೇದ ದೃಷ್ಟಿ ಉಂಟಾಗಿ ಅವನ ಬಂಧನಕ್ಕೆ ಕಾರಣವಾಗಿರುತ್ತದೆ. ಸಮಾಜದಲ್ಲಿ ಆಗಲಿ ಅಥವಾ ಸರ್ಕಾರದಲ್ಲಿ ಆಗಲಿ ಹಲವಾರು ಅವಾಂತರಗಳಿಗೆ ಈ ಭೇದ ದೃಷ್ಟಿಯೇ ಕಾರಣವೆಂಬುದು ಸರ್ವರಿಗೆ ತಿಳಿದ ಸಂಗತಿಯಾಗಿದೆ. ಇಂತಹ ಭೇದ ದೃಷ್ಟಿಯನ್ನು ತೊಡೆದು ಶಿವಮಯವಾದ ಸಮದೃಷ್ಟಿಯನ್ನು ನೀಡುವುದಕ್ಕಾಗಿ ಜಗದ್ಗುರು ಪಂಡಿತಾರಾಧ್ಯರು, ಮಹಾಶಿವರಾತ್ರಿಯ ದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿಲಿರ್ಂಗದಿಂದ ‘ಪಂಡಿತಾರಾಧ್ಯ’ ಎಂಬ ಹೆಸರಿನಿಂದ ಅವತರಿಸಿದ್ದಾರೆ. ಇದಲ್ಲದೆ ಈ ಉದ್ದೇಶದಿಂದಲೇ ಸರ್ವರಿಗೂ ಸಮನಾಗಿ ಪ್ರಕಾಶವನ್ನು ನೀಡುವ ಮೂಲಕ ಸಮಾನತೆಗೆ ಮತ್ತೊಂದು ಹೆಸರಾದ ಸೂರ್ಯದೇವನ ಹೆಸರಿನಿಂದ ಶ್ರೀಶೈಲದಲ್ಲಿ ಸೂರ್ಯ ಸಿಂಹಾಸನವನ್ನು ಸಂಸ್ಥಾಪಿಸಿದ್ದಾರೆ. ಆದ್ದರಿಂದ ಲಿಂಗದೀಕ್ಷೆಯನ್ನು ಪಡೆದು ಮಲತ್ರಯಗಳನ್ನು ಕಳೆದುಕೊಂಡು ಲಿಂಗಧಾರಿಗಳಾಗಿ ಪ್ರತಿನಿತ್ಯ ಲಿಂಗಪೂಜೆ ಮಾಡುವುದರ ಜೊತೆಗೆ ಶಿವಮಯವಾದ ಸಮಾನ ದೃಷ್ಟಿಯನ್ನು ಬೆಳೆಸಿಕೊಳ್ಳುವುದೇ ಜಗದ್ಗುರು ಪಂಡಿತಾರಾಧ್ಯರ ನಿಜವಾದ ಜಯಂತಿಯಾಗಿದೆ ಎಂದು ತಿಳಿಸಿದರು.

    ಶ್ರೀ ಜಗದ್ಗುರು ಪಂಡಿತಾರಾಧ್ಯರ ಜಯಂತಿ ಮಹೋತ್ಸವದ ನಿಮಿತ್ತ ಬೆಳಗ್ಗೆ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಮುಂತಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

    ಹಿರೇಜೇವರ್ಗಿಯ ಜಯಶಾಂತಲಿಂಗಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸ್ಥಳೀಯ ಶಾಸಕ ಸ್ವಲ್ಪ ಚಕ್ರಪಾಣಿ ರೆಡ್ಡಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎ.ಎಸ್. ರಾಮರಾವ್, ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಹಲವಾರು ಗಣ್ಯರು ಮತ್ತು ಸದ್ಭಕ್ತರು ಪಾಲ್ಗೊಂಡಿದ್ದರು. ಆಂಧ್ರ ಪ್ರದೇಶದ ಹಣಕಾಸು ಸಚಿವ ರಾಜೇಂದ್ರ ರೆಡ್ಡಿ ಆಗಮಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು.



    ಸರ್ವರನ್ನು ಸಮಭಾವದಿಂದ ಕಾಣುವವನೇ ಪಂಡಿತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts