More

    ಟಿ20 ವಿಶ್ವಕಪ್ ಸೂಪರ್-12 ; ಇಂದು ಆಸೀಸ್-ಶ್ರೀಲಂಕಾ ಹಣಾಹಣಿ

    ದುಬೈ: ಸೂಪರ್-12ರ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಿಣುಕಾಡಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ 2ನೇ ಹಣಾಹಣಿಯಲ್ಲಿ 2014ರ ಚಾಂಪಿಯನ್ ಶ್ರೀಲಂಕಾ ತಂಡವನ್ನು ಗುರುವಾರ ಎದುರಿಸಲಿದೆ. ಮೊದಲ ಸುತ್ತಿನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ರಧಾನ ಸುತ್ತಿಗೇರಿದ್ದ ಶ್ರೀಲಂಕಾ ತಂಡ, ಸೂಪರ್-12ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರು ಭರ್ಜರಿ ಜಯ ದಾಖಲಿಸಿತ್ತು. ಇದೀಗ ಟೂರ್ನಿಯಲ್ಲಿ ಮೊದಲ ಬಾರಿಗೆ ಬಲಿಷ್ಠ ತಂಡವೊಂದರ ಸವಾಲು ಲಂಕಾಗೆ ಎದುರಾಗಲಿದೆ. ಮತ್ತೊಂದೆಡೆ, ದ.ಆಫ್ರಿಕಾ ತಂಡವನ್ನು 118 ರನ್‌ಗಳಿಗೆ ನಿಯಂತ್ರಿಸಿದರೂ, ಈ ಅಲ್ಪಮೊತ್ತ ಬೆನ್ನಟ್ಟಲು ಪರದಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟಿಂಗ್ ವಿಭಾಗದ್ದೇ ದೊಡ್ಡ ಸಮಸ್ಯೆಯಾಗಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದು, ಜಯ ದಾಖಲಿಸಿದ ತಂಡದ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

    ಮೊದಲ ಪಂದ್ಯದಲ್ಲಿ ಅಲ್ಪಮೊತ್ತ ಬೆನ್ನಟ್ಟಲು ಆಸೀಸ್ ಬ್ಯಾಟರ್‌ಗಳು ಪರದಾಡಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ನಾಯಕ ಆರನ್ ಫಿಂಚ್ ಶೂನ್ಯ ಸಂಪಾದಿಸಿದರೆ, ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ರನ್‌ಗಳಿಸಿವುದನ್ನೇ ಮರೆತಂತಿದೆ. ಐಪಿಎಲ್‌ನಲ್ಲಿ ಕಳಪೆ ನಿರ್ವಹಣೆಯಿಂದಲೇ ಸನ್‌ರೈಸರ್ಸ್‌ ತಂಡದ ನಾಯಕತ್ವದ ಜತೆಗೆ ಹನ್ನೊಂದರ ಬಳಗದಿಂದಲೂ ವಾರ್ನರ್ ಹೊರಬಿದ್ದಿದ್ದರು. ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಹಾಗೂ ದ.ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೂ ವಾರ್ನರ್ ಸ್ಫೋಟಿಸಲು ವಿಫಲರಾಗಿದ್ದಾರೆ. ಅನನುಭವಿ ಸ್ಟೀವನ್ ಸ್ಮಿತ್ ನಿರ್ವಹಣೆ ತಂಡದ ಪಾಲಿಗೆ ಪ್ರಮುಖವಾಗಿದೆ. ಐಪಿಎಲ್‌ನಲ್ಲಿ ಸ್ಫೋಟಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್, ಪ್ಯಾಟ್ ಕಮ್ಮಿನ್ಸ್‌ರಂಥ ಸ್ಟಾರ್ ವೇಗಿಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎದುರಾಳಿ ತಂಡಕ್ಕೆ ಕಂಟಕವಾಗಬಹುದು.

    ಆತ್ಮವಿಶ್ವಾಸದಲ್ಲಿ ಶ್ರೀಲಂಕಾ: ಗೆಲುವಿನ ಲಯದಲ್ಲಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ ಬಲಿಷ್ಠ ಆಸೀಸ್ ಎದುರಿನ ಕಾಳಗಕ್ಕೆ ಸನ್ನದ್ಧವಾಗಿದೆ. ಲೆಗ್ ಸ್ಪಿನ್ನಿಂಗ್ ಆಲ್ರೌಂಡರ್ ವನಿಂದು ಹಸರಂಗ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಆರಂಭಿಕ ಕುಸಲ್ ಪೆರೇರ, ನಾಯಕ ದಸುನ್ ಶನಕ, ಚರಿತ್ ಅಸಲಂಕಾ, ಪಥುಮ್ ನಿಸ್ಸಂಕ, ಅವಿಷ್ಕಾ ಫೆರ್ನಾಂಡೊ ಒಳಗೊಂಡ ಬ್ಯಾಟಿಂಗ್ ಪಡೆ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ. ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರಷ್ಟೇ ಲಂಕಾ ತಂಡ ಪ್ರತಿಹೋರಾಟ ತೋರಬಹುದು.

    ಮುಖಾಮುಖಿ: 16, ಆಸ್ಟ್ರೇಲಿಯಾ: 8, ಶ್ರೀಲಂಕಾ: 8
    ಟಿ20 ವಿಶ್ವಕಪ್‌ನಲ್ಲಿ: 3, ಆಸ್ಟ್ರೇಲಿಯಾ: 2, ಶ್ರೀಲಂಕಾ: 1
    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts