More

    ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ!

    ನವದೆಹಲಿ: ಏಷ್ಯನ್​​ ಕ್ರಿಕೆಟ್​ ಮಂಡಳಿ (ಎಸಿಸಿ)ಯ ಅಧ್ಯಕ್ಷ ಮತ್ತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕಾರ್ಯದರ್ಶಿ ಜಯ್​ ಷಾ ವಿರುದ್ಧ ಶ್ರೀಲಂಕಾ ಕ್ರಿಕೆಟ್​ನ ಮಾಜಿ ನಾಯಕ ಅರ್ಜುನ್​ ರಣತುಂಗ ಅವರು ಮಾಡಿದ್ದ ಹಾಸ್ಯಾಸ್ಪದ ಟೀಕೆಗಳಿಗೆ ಲಂಕಾ ಸರ್ಕಾರ ಕ್ಷಮೆಯಾಚಿಸಿದೆ.

    ಇಂದು ನಡೆದ ಸಂಸತ್ತಿನ ಅಧಿವೇಶನದಲ್ಲಿ ಸಚಿವರುಗಳಾದ ಹರಿನ್​ ಫರ್ನಾಂಡೋ ಮತ್ತು ಕಾಂಚನ ವಿಜೆಶೇಖರ ಅವರು ಅರ್ಜುನ್​ ರಣತುಂಗ ಹೇಳಿಕೆಗೆ ಪಶ್ಚಾತಾಪ ವ್ಯಕ್ತಪಡಿಸಿದರು. ನಾವು ಸರ್ಕಾರದ ಭಾಗವಾಗಿ ಜಯ್​ ಷಾ ಅವರ ಬಳಿ ಕ್ಷಮೆಯಾಚಿಸುತ್ತೇವೆ. ನಮ್ಮ ಕ್ರಿಕೆಟ್​ ಮಂಡಳಿಯ ನ್ಯೂನತೆಗಾಗಿ ನಾವು ಜಯ್​ ಷಾ ಅಥವಾ ಇತರೆ ದೇಶಗಳ ವಿರುದ್ಧ ಬೊಟ್ಟು ಮಾಡುವುದಿಲ್ಲ. ಇದೊಂದು ತಪ್ಪು ಕಲ್ಪನೆ ಎಂದು ಸಚಿವ ಕಾಂಚನ ವಿಜೆಶೇಖರ ಹೇಳಿದರು.

    ಇದರ ನಡುವೆ ಲಂಕಾದ ಪ್ರವಾಸೋದ್ಯಮ ಸಚಿವ ಹರಿನ್ ಫೆರ್ನಾಂಡೋ ಮಾತನಾಡಿ, ಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಲಂಕಾ ಕ್ರಿಕೆಟ್‌ಗೆ ಐಸಿಸಿ ವಿಧಿಸಿರುವ ನಿಷೇಧವನ್ನು ಪರಿಹರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಐಸಿಸಿ ನಿಷೇಧವು ದೇಶಕ್ಕೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಚಿವ ಹರಿನ್ ಫೆರ್ನಾಂಡೋ ಎಚ್ಚರಿಸಿದರು. ವಿಶೇಷವಾಗಿ ಮುಂದಿನ ವರ್ಷದ ಜನವರಿಯಲ್ಲಿ ಲಂಕಾ ಆತಿಥ್ಯ ವಹಿಸಿರುವ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಅರ್ಜುನ್​ ರಣತುಂಗ ಏನು ಹೇಳಿದ್ದರು?
    ಸ್ಥಳೀಯ ಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಣತುಂಗ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಜತೆಗಿನ ನಿಕಟ ಸಂಪರ್ಕದಿಂದಾಗಿ ಮಂಡಳಿಯನ್ನು ನಿಯಂತ್ರಿಸಬಹುದು ಎಂದು ಜಯ್ ಷಾ ಅವರು ತಿಳಿದುಕೊಂಡಿದ್ದಾರೆ. ಜಯ್ ಷಾ ಲಂಕಾ ಕ್ರಿಕೆಟ್ ಮಂಡಳಿಯನ್ನು ಮುನ್ನಡೆಸುತ್ತಿದ್ದು, ಅವರ ಒತ್ತಡದಿಂದಾಗಿ ಎಸ್‌ಎಲ್‌ಸಿ ಹಾಳಾಗುತ್ತಿದೆ. ಭಾರತದ ಒಬ್ಬ ವ್ಯಕ್ತಿಯಿಂದಾಗಿ ಶ್ರೀಲಂಕಾದಲ್ಲಿ ಕ್ರಿಕೆಟ್ ಕೆಳಮಟ್ಟ ತಲುಪಿದೆ ಎಂದು ಆರೋಪ ಮಾಡಿದ್ದರು.

    ಕಳೆದ ಒಂದು ವಾರದಿಂದ ಲಂಕಾ ಕ್ರಿಕೆಟ್ ಮಂಡಳಿಯ ಒಳಗೆ ಮತ್ತು ಹೊರಗೆ ಸಾಕಷ್ಟು ವಿಷಯಗಳು ನಡೆದಿವೆ. ಜಯ್ ಷಾ ಅವರ ತಂದೆ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿ (ಅಮಿತ್ ಷಾ) ಆಗಿರುವುದರಿಂದ ಅವರು (ಜಯ್ ಷಾ) ಪ್ರಭಾವಿ ವ್ಯಕ್ತಿ ಎನಿಸಿದ್ದಾರೆ ಎಂದು ಕಿಡಿಕಾರಿದ್ದರು.

    ಅಂದಹಾಗೆ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟ ಶ್ರೀಲಂಕಾ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಕೂಡ ವಿಫಲಗೊಂಡಿದೆ. (ಏಜೆನ್ಸೀಸ್​)

    ಲಂಕಾ ಕ್ರಿಕೆಟ್‌ನಲ್ಲಿ ಜಯ್ ಷಾ ಹಸ್ತಕ್ಷೇಪ: ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಮಾಜಿ ನಾಯಕ ಅರ್ಜುನ ರಣತುಂಗ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts