More

    ಅಡಕೆ ತೋಟಗಳಲ್ಲಿ ಅಳಿಲುಗಳ ಕಾಟ!

    ತುಮಕೂರು: ಅಳಿಲು ಕಾಟದಿಂದ ಹೈರಾಣಾಗಿರುವ ಅಡಕೆ ಬೆಳೆಗಾರರು ಮರಗಳಿಗೆ ಖಾಲಿ ಬಿಯರ್ ಬಾಟಲಿ, ಖಾಲಿ ಟಿನ್ ಕಟ್ಟುವ ಜತೆಗೆ ದಿನವಿಡೀ ತಟ್ಟೆ ಹಿಡಿದು ಬಡಿಯುವ ಕಾಯಕದಲ್ಲಿ ತೊಡಗುವಂತಾಗಿದೆ. ಜಿಲ್ಲೆಯಲ್ಲಿ ಮಳೆ, ನೀರಾವರಿ ಆಶ್ರಿತ ಅಡಕೆ ಬೆಳೆಗಾರರಿಗೆ ಅಡಕೆ ಧಾರಣೆ ಕೈಹಿಡಿದಿದೆ. ಆದರೆ, ಇಳುವರಿಗೆ ‘ಅಳಿಲು’ ಕಂಟಕವಾಗುತ್ತಿರುವುದು ಆತಂಕಕಾರಿ ಎನಿಸಿದೆ.

    ಪ್ರತಿ ಎಕರೆಗೆ 8-10 ಕ್ವಿಂಟಾಲ್ ಅಡಕೆ ಇಳುವರಿ ಸಿಗಲಿದೆ. ಆದರೆ, ಹೊಂಬಾಳೆ ಒಡೆದು ಪೀಚು ಬಿಡುವ ಸಂದರ್ಭದಲ್ಲಿ ಆಕ್ರಮಿಸುವ ಅಳಿಲು ಸೇನೆ ಪೀಚುಗಳನ್ನು ಕೊರೆದು ಸಿಹಿನೀರು ಕುಡಿದು ಉದುರಿಸಿಬಿಡುತ್ತವೆ. ಇದರಿಂದ ಶೇ.20 ಇಳುವರಿ ಕಡಿಮೆಯಾಗುತ್ತದೆ. ಅಳಿಲು ದಾಳಿಯಿಂದ ನಲುಗಿರುವ ರೈತರು, ಆದಾಯ ಕೈತಪ್ಪದಂತೆ ನೋಡಿಕೊಳ್ಳಲು ಹಲವು ಮಾರ್ಗೋಪಾಯಗಳಿಗೆ ಮೊರೆ ಹೋಗಿದ್ದಾರೆ. ದಿನವಿಡೀ ಅಡಕೆ ತೋಟಗಳಲ್ಲಿ ತಟ್ಟೆ ಬಡಿಯುವುದರ ಜತೆಗೆ ಪಟಾಕಿ ಸಿಡಿಸಿ ಅಳಿಲು ಓಡಿಸುವ ರೈತರು, ಅಡಕೆಮರಗಳಿಗೆ ಖಾಲಿ ಬಿಯರ್ ಬಾಟಲಿ, ಖಾಲಿ ಬಿಯರ್ ಟಿನ್‌ಗಳನ್ನು ಕಟ್ಟುವ ತಂತ್ರ ಅನುಸರಿಸುತ್ತಿದ್ದಾರೆ.

    ಅಳಿಲು ಜತೆಗೆ ರಾತ್ರಿವೇಳೆ ಹಿರೇಹಕ್ಕಿ ಕಾಟ ಕೂಡ ಇದೆ. ಈ ಹಿರೇಹಕ್ಕಿಗಳ ನಿಯಂತ್ರಣಕ್ಕೆ ಹಳೆಯ ಸೀರೆಗಳನ್ನು ಮರಗಳಿಗೆ ಕಟ್ಟುವುದರ ಜತೆಗೆ ಟೇಪ್ ರೆಕಾರ್ಡರ್‌ನ ಹಳೆಯ ಕ್ಯಾಸೆಟ್‌ಗಳ ಟೇಪ್‌ಗಳನ್ನು ಸಹ ಮರಗಳಿಗೆ ಕಟ್ಟಿ ಹಕ್ಕಿಗಳಿಗೆ ಬಲೆ ನಿರ್ಮಿಸುವಂತೆ ಭಯಹುಟ್ಟಿಸುವ ರೈತರು, ಅಳಿಲು ಕಾಟಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಲು ತೋಟಗಾರಿಕೆ ಇಲಾಖೆ ನೆರವಿಗೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.

    ಹಗಲಿನಹೊತ್ತು ಅಳಿಲು ಕಾಟ. ರಾತ್ರಿವೇಳೆ ಹಿರೇಹಕ್ಕಿ ಕಾಟ. ಇದರಿಂದ ಶೇ.20-25ರಷ್ಟು ಇಳುವರಿ ಕಡಿಮೆ ಆಗಲಿದೆ. ಪ್ರತಿ ವರ್ಷ 1 ಎಕರೆಗೆ 2.5-3 ಲಕ್ಷ ರೂ., ಚೇಣಿ ಕೊಟ್ಟವರು ಹಣ ಕಡಿತ ಮಾಡಲಿದ್ದು, ಅನಿವಾರ್ಯವಾಗಿ ಅಳಿಲು ಕಾಟಕ್ಕೆ ನಾವು ತಟ್ಟೆ ಬಡಿಯುವುದು, ಪಟಾಕಿ ಸಿಡಿಸುವುದು ಸೇರಿದಂತೆ ಅನ್ಯ ದಾರಿಗಳನ್ನು ಕಂಡುಕೊಂಡಿದ್ದೇವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಡಕೆಬೆಳೆಗಾರರ ನೆರವಿಗೆ ಬಂದರೆ ಒಳಿತು.
    ರಮೇಶ್ ಅಡಕೆ ಬೆಳೆಗಾರ, ನೆಲಹಾಳ್

    ಅಡಕೆ ಬೆಳೆಯ ಕೊಳೆ, ಅಣಬೆ ರೋಗ ವಿವಿಧ ಕೀಟಬಾಧೆ ತಡೆಗಟ್ಟಲು ಇಲಾಖೆ ಔಷಧಿ, ಕೀಟನಾಶಕ, ಮಾರ್ಗೋಪಾಯಗಳನ್ನು ಬೆಳೆಗಾರರಿಗೆ ನೀಡುತ್ತಾ ಬಂದಿದೆ. ಆದರೆ, ಅಳಿಲು, ಹಿರೇಹಕ್ಕಿ ಕಾಟಕ್ಕೆ ನಮ್ಮಲ್ಲಿ ಯಾವುದೇ ಪರಿಹಾರ ಇಲ್ಲ. ರೈತರೇ ಇದಕ್ಕೆ ಉಪಾಯ ಕಂಡುಕೊಳ್ಳಬೇಕಿದೆ.
    ಬಿ.ರಘು ಉಪನಿರ್ದೇಶಕ, ಜಿಲ್ಲಾ ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts