ವಿಜಯವಾಣಿ ಸುದ್ದಿಜಾಲ ಕೋಟ
ಇಲ್ಲಿನ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಕಾವಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಡಿಲು ಭೂಮಿ ಹಸಿರಾಗಿಸಲು ಪಣ ತೊಟ್ಟ ಗ್ರಾಮಸ್ಥರು ಈಗಾಗಲೇ ಉಳುಮೆ ಕಾರ್ಯದತ್ತ ಸಿದ್ಧತೆ ನಡೆಸಿದ್ದಾರೆ.
ಸಾಕಷ್ಟು ವರ್ಷಗಳಿಂದ ಹೊಳೆ ಹೂಳೆತ್ತದೆ ನೆರೆ ಹಾವಳಿಯಿಂದ ಕಂಗೆಟ್ಟ ಆ ಭಾಗದ ಕೃಷಿಕರು ಇದೀಗ ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದ್ದು, ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಹೊಳೆ ಹೂಳೆತ್ತಿದ ಪರಿಣಾಮ ಹಡಿಲು ಭೂಮಿಯ ಉಳುಮೆ ಕಾರ್ಯಕ್ಕೆ ವೇಗ ನೀಡಿದ್ದಾರೆ.
ನೂರಾರು ಎಕರೆ ಕೃಷಿ ಭೂಮಿ ಹೊಂದಿದ ಇಲ್ಲಿನ ಪರಿಸರ ಕೃಷಿಕರು ಭತ್ತ ಸೇರಿದಂತೆ ವಿವಿಧ ಧಾನ್ಯಗಳನ್ನು ಬೆಳೆಸುತ್ತಾರೆ. ಆದರೆ ಇತ್ತೀಚೆಗೆ ಕೆಲ ವರ್ಷಗಳಿಂದ ಮಳೆಗಾಲದ ಕೃತಕ ನೆರೆಯಿಂದ ಪೂರ್ಣಪ್ರಮಾಣದಲ್ಲಿ ಹಾನಿಗೊಂಡು ಕೃಷಿ ಕಾರ್ಯದಿಂದ ಹಿಮ್ಮುಖರಾಗಿದ್ದಾರೆ. ಆದರೆ ಇದೀಗ ಮತ್ತೆ ರೈತ ಸಮುದಾಯ ಮೊಗದಲ್ಲಿ ಕೃಷಿ ಹಸನಾಗಿಸುವ ಯೋಜನೆ ರೂಪಿಸುತ್ತಿದ್ದು, ಯಾಂತ್ರಿಕ ಉಳುಮೆಯತ್ತ ಮುಖ ಮಾಡಿದ್ದಾರೆ.
ಸ್ವಂತ ಬಲದಲ್ಲಿ ಹೂಳು ತೆಗೆದ ಗ್ರಾಮಸ್ಥರು
ಹೊಳೆಯಲ್ಲಿ ಹೂಳು ತುಂಬಿದ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿಯಲಾಗದೆ ಕೃತಕ ನೆರೆ ಸೃಷ್ಟಿಗೊಂಡು ಸಾಕಷ್ಟು ಭತ್ತದ ಕೃಷಿ ಹಾನಿಗೊಳ್ಳುತ್ತಿತ್ತು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜ ಶೂನ್ಯವಾಗಿತ್ತು. ಇದರಿಂದ ಮನನೊಂದ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದರು. ಆದರೆ ಈ ಬಾರಿ ದೃಢ ನಿರ್ಧಾರದಿಂದ ಗ್ರಾಮಸ್ಥರೇ ಸ್ವಂತ ಬಲದೊಂದಿಗೆ ಹೊಳೆ ಹೂಳೆತ್ತಲು ಮುಂದಾಗಿ ಇದೀಗ ಹೂಳು ಮುಕ್ತ ಹೊಳೆಯಾಗಿಸಿದ್ದಾರೆ ಅಲ್ಲದೆ ಕೃಷಿ ಕಾರ್ಯಕ್ಕೂ ವೇಗ ನೀಡಿದ್ದಾರೆ.
ವಡ್ಡರ್ಸೆ ಹಾಗೂ ಕಾವಡಿ ಭಾಗದ ಗ್ರಾಮಸ್ಥರ ಒಗ್ಗಟ್ಟಿನ ಫಲದಿಂದ ಹೊಳೆ ಸುಭಿಕ್ಷೆಯಾಗಿದೆ. ಕೆಸರಿನಿಂದ ಮುಕ್ತಿ ದೊರಕಿದೆ ಅದೆಷ್ಟೊ ವರ್ಷಗಳಿಂದ ಹಡಿಲು ಬಿದ್ದ ಭೂಮಿ ಇದೀಗ ಹಸಿರಾಗಿಸಲು ಮುಂದಾಗಿದ್ದಾರೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
– ಅನಿಲ್ ಕುಮಾರ್ ಶೆಟ್ಟಿ ಕಾವಡಿ ರೈತರು