More

    ಮನಸ್ಸಿನ ಆನಂದಕ್ಕೆ ಕ್ರೀಡೆ ಸಹಕಾರಿ: ಶ್ರೀ ಮಾರುತಿ ಗುರೂಜಿ

    ತೀರ್ಥಹಳ್ಳಿ: ಅಪ್ಪಟ ದೇಶೀಯ ಕ್ರೀಡೆಗಳಾದ ಖೋ-ಖೋ, ಕಬಡ್ಡಿ ಮುಂತಾದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಈ ದಿನಗಳಲ್ಲಿ ರಾಷ್ಟ್ರ ಮಟ್ಟದ ಖೋ-ಖೋ ಪಂದ್ಯಾವಳಿ ಆಯೋಜಿಸಿರುವುದು ಪ್ರಶಂಸನೀಯ ಎಂದು ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಹೇಳಿದರು.
    ಏಕಲವ್ಯ ಸ್ಪೋರ್ಟ್ಸ್ ಕ್ಲಬ್, ಶ್ರೀ ಮಾರಿಕಾಂಬಾ ದೇವಸ್ಥಾನದ ಆಶ್ರಯದಲ್ಲಿ ಗುರುವಾರ ಪಟ್ಟಣದಲ್ಲಿ ಆರಂಭವಾದ ನಾಲ್ಕು ದಿನಗಳ ರಾಷ್ಟ್ರ ಮಟ್ಟದ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾರಿ ಜಾತ್ರೆ ಪ್ರಯುಕ್ತ ಕ್ರೀಡಾ ಹಬ್ಬ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.
    ಕ್ರೀಡೆಗೆ ನಾಟ್ಯರಾಜ ಪರಶಿವನೇ ಪ್ರೇರಣೆಯಾಗಿದ್ದಾನೆ. ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಪೂರಕ. ಕ್ರೀಡೆಯನ್ನು ಪ್ರಶಸ್ತಿಗಿಂತ ಮುಖ್ಯವಾಗಿ ಆನಂದಕ್ಕೆ ಆಡಬೇಕು ಎಂದು ಸಲಹೆ ನೀಡಿದರು.
    ಶಾಂತವೇರಿ ಗೋಪಾಲ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ರೀಡಾಕೂಟ ಉದ್ಘಾಟಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಈ ಕ್ಷೇತ್ರದ ಅನುಕರಣೀಯ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲ ಗೌಡರ ಜನ್ಮದಿನದಂದು ಪಂದ್ಯಾವಳಿ ಉದ್ಘಾಟನೆ ಆಗುತ್ತಿರುವುದು ಒಳ್ಳೆಯ ಸಂಗತಿ. ಯುವ ಪೀಳಿಗೆ ಈ ಮಹನೀಯರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಣ ಗಳಿಕೆಯೇ ಪ್ರಮುಖ ಆಗಬಾರದು. ಬದುಕಿಗೆ ಹಣ ಒಂದು ಸಾಧನ ಎಂಬ ಮನೋಭಾವ ಯುವಕರಿಗೆ ಇರಬೇಕು ಎಂದರು.
    ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ಮಾತನಾಡಿ, ಮಾರಿ ಜಾತ್ರೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಾಂಸ್ಕೃತಿಕ ಮತ್ತು ಕ್ರೀಡಾ ಹಬ್ಬ ಆಗಬೇಕೆಂಬ ದೃಷ್ಟಿಯಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
    ಪಟ್ಟಣದ ಕುಶಾವತಿಯಿಂದ ಕಲಾತಂಡಗಳ ಜತೆ ಕ್ರೀಡಾಪಟುಗಳನ್ನು ಮೆರವಣಿಗೆಯಲ್ಲಿ ಕ್ರೀಡಾಂಗಣಕ್ಕೆ ಕರೆತರಲಾಯಿತು. ಮಾರಿಕಾಂಬ ದೇವಸ್ಥಾನದಿಂದ ಕ್ರೀಡಾ ಜ್ಯೋತಿ ತಂದು ಬೆಳಗಿಸಲಾಯಿತು.

    ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ್‌ಕುಮಾರ್, ಸುಧೀರ್ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮದ್ ಉಲ್ಲಾ ಅಸಾದಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ, ಕರ್ನಾಟಕ ಸೌಹಾರ್ದ ಸಹಕಾರ ಉಪಾಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಖೋ-ಖೋ ಅಸೋಸಿಯೇಷನ್ ಅಧ್ಯಕ್ಷ ಪುರುಷೋತ್ತಮ್, ಎಚ್.ಪಾಂಡುರಂಗಪ್ಪ, ಟಿ.ಕೆ.ರಮೇಶ್ ಶೆಟ್ಟಿ, ಅನಿತಾ ನಾಗರಾಜ್, ಸುಧೀಂದ್ರ ಶೆಟ್ಟಿ, ಮೋಹನ್ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts