More

    ಅಧ್ಯಾತ್ಮ ಅನುಸಂಧಾನದತ್ತ ಸಾಗಿದರೆ ಬದುಕು ಉಜ್ವಲ – ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರ ಅಭಿಮತ

    ಲಿಂಗಸುಗೂರು: ಮನುಷ್ಯ ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಸಮರ್ಪಿಸಿ ಮುನ್ನಡೆದರೆ ಜೀವನ ಪಾವನವಾಗಲಿದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ತಾಲೂಕಿನ ಯರಡೋಣ ಸಿದ್ಧರಾಮೇಶ್ವರ ಗುರುಮಠದ ದಶಮಾನೋತ್ಸವ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅಧ್ಯಾತ್ಮ ಒಂದು ಧರ್ಮಕ್ಕೆ ಸೀಮಿತವಲ್ಲ. ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಶಿವಜ್ಞಾನ, ಗುರುಕಾರುಣ್ಯ, ಅಧ್ಯಾತ್ಮದ ಅನುಸಂಧಾನದತ್ತ ಹೆಜ್ಜೆ ಹಾಕಿದರೆ ಬದುಕು ಉಜ್ವಲಗೊಳ್ಳಲಿದೆ ಎಂದರು.

    ಮಾನವನು ನಿತ್ಯ ಕಾಯಕ ಜೀವಿಯಾಗಿ ಬದುಕಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶಿಕ್ಷಣ, ಆರೋಗ್ಯ, ಅಧ್ಯಾತ್ಮ ರೂಢಿಸಿಕೊಳ್ಳಬೇಕು. ಶಿಕ್ಷಣದಿಂದ ಮನುಷ್ಯನ ಬುದ್ಧಿಶಕ್ತಿ ಬೆಳೆಯುತ್ತದೆ. ಧರ್ಮದಿಂದ ಮನುಷ್ಯನ ಭಾವನೆಗಳು ಬೆಳೆಯುತ್ತವೆ. ಬುದ್ಧಿಶಕ್ತಿ ಮತ್ತು ಭಾವನೆಗಳನ್ನು ಬೆಳೆಸುವುದು ಮಠ-ಮಾನ್ಯಗಳ, ಧರ್ಮಪೀಠಗಳ ಮೂಲ ಗುರಿಯಾಗಿದೆ ಎಂದು ಹೇಳಿದರು.

    ಇತ್ತೀಚೆಗೆ ಸಮಾಜದ ಎಲ್ಲ ರಂಗಗಳಲ್ಲಿ ಅತೃಪ್ತಿ, ಅಸಮಾಧಾನ, ಒಂದಿಲ್ಲೊಂದು ಸಮಸ್ಯೆ, ಸವಾಲುಗಳಾಗಿ ಕಾಡುತ್ತಿದ್ದು, ಧರ್ಮ, ಜಾತಿ, ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಅನೇಕ ಕಡೆಗಳಲ್ಲಿ ಸಂಘರ್ಷ ಕಾಣಿಸುತ್ತಿದೆ. ಮಾನವೀಯ ಮೌಲ್ಯಗಳಿಂದ ಬದುಕಿದರೆ ಉತ್ತಮ ಸಮಾಜ, ನಾಡು ಕಟ್ಟಲು ಸಾಧ್ಯ ಎಂಬುದನ್ನು ಪಂಚಪೀಠಗಳು ಜಾತಿ, ಮತ, ಪಂಥವೆನ್ನದೇ ಎಲ್ಲ ಭಕ್ತರಿಗೆ ಕರುಣಿಸುತ್ತ ಸಾಗಿವೆ ಎಂದರು.

    ಸಿದ್ಧರಾಮೇಶ್ವರ ಗುರುಮಠ ಮತ್ತು ದೇವರಭೂಪುರ ಬೃಹನ್ಮಠದ ಉಭಯ ಮಠಾಧೀಶರು ಈ ಭಾಗದಲ್ಲಿ ಜಾತಿ, ಮತ, ಪಂಥ-ಭೇದವಿಲ್ಲದೆ ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಬೆಳಕನ್ನು ದಯಪಾಲಿಸಿ, ಜನರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸಿ ಸನ್ಮಾರ್ಗದತ್ತ ತರುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

    ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶ್ರೀಗಳು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಅಭಿನವ ಸೋಮನಾಥ ಶಿವಾಚಾರ್ಯರು, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಪ್ರಶಾಂತ ಸಾಗರ ಶಿವಾಚಾರ್ಯರು, ಬಸಯ್ಯಸ್ವಾಮಿ ಹಿರೇಮಠ ಬಲ್ಲಟಗಿ, ಅಮರಗುಂಡ ಶಿವಾಚಾರ್ಯರು, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಪುರ, ಡಿ.ಎಸ್.ಹೂಲಗೇರಿ, ವೆಂಕಟರಾವ್ ನಾಡಗೌಡ, ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಮಾನಪ್ಪ ವಜ್ಜಲ್, ಹಿಂದುಸ್ತಾನ ಶ್ರೀರಾಮಸೇನೆಯ ರಮಾಕಾಂತ ಬಾಬಾ ಇತರರಿದ್ದರು.

    ಪುಷ್ಪವೃಷ್ಟಿ
    ಧರ್ಮಸಭೆಗೂ ಮುನ್ನ ಯರಡೋಣದ ಶ್ರೀಚೌಡೇಶ್ವರಿ ದೇವಸ್ಥಾನದಿಂದ ಗುರುಮಠದವರೆಗೆ ಆನೆ ಅಂಬಾರಿ ಮೇಲೆ ಶ್ರೀದೇವಿ ಮೆರವಣಿಗೆ, ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನೂರಾರು ಕುಂಭ-ಕಳಸ, ಸಂಗೀತವಾದ್ಯಗಳೊಂದಿಗೆ ಅದ್ದ್ಧೂರಿಯಾಗಿ ಜರುಗಿತು. ಶ್ರೀ ಅಮರೇಶ್ವರ ಸುಕ್ಷೇತ್ರ, ಶ್ರೀ ಚೌಡೇಶ್ವರಿ ಹಾಗೂ ಗುರುಮಠದ ನೂತನ ದೇವಾಲಯಗಳ ಮೇಲೆ ಶ್ರೀಮಠದ ಮುರುಘೇಂದ್ರ ಶ್ರೀಗಳು ಮತ್ತು ಮಾಜಿ ಶಾಸಕ ಮಾನಪ್ಪ ವಜ್ಜಲರಿಂದ ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಟಿ ಸಮರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts