More

    2 ತಿಂಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕ ಸೇವೆಗೆ: ದಶಕದ ಕನಸು ನನಸಾಗುವ ಕಾಲ ಸನಿಹ 

    ರಾಮನಗರ: ಒಂದು ದಶಕದ ಕನಸು ನನಸಾಗುವ ಕಾಲ ಹತ್ತಿರ ಬಂದಿದ್ದು, ಜಿಲ್ಲೆಗೆ ಅಗತ್ಯವಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆಯಲಿದೆ.

    ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರದ ವೇಳೆ ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಸ್ಥಳ ಗುರ್ತಿಸಲಾಗಿತ್ತು. ಅಂದಿನಿಂದಲೂ ಹಲವಾರು ಅಡೆತಡೆಗಳ ನಡುವೆ ಕಾಮಗಾರಿ ಮರೀಚಿಕೆ ಆಗಿತ್ತು. ಆದರೆ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಆಸ್ಪತ್ರೆ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇನ್ನು ಎರಡು ತಿಂಗಳಲ್ಲಿ ಆಸ್ಪತ್ರೆ ಸಾರ್ವಜನಿಕ ಸೇವೆ ಆರಂಭಿಸಲಿದೆ.

    ಜಿಲ್ಲಾಸ್ಪತ್ರೆಯೂ ಸರಿ ಇರಲಿಲ್ಲ: ರಾಮನಗರ ಜಿಲ್ಲಾ ಕೇಂದ್ರವಾದಾಗ ನಗರದ ತಾಲೂಕು ಆಸ್ಪತ್ರೆಯನ್ನೇ ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಇದರಿಂದಾಗಿ ಸೂಕ್ತ ಸೌಲಭ್ಯಗಳನ್ನು ಅಳವಡಿಸಲಾಗದೆ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಇಲ್ಲವೇ ಪಕ್ಕದ ಮಂಡ್ಯಕ್ಕೆ ಕಳುಹಿಸಿಕೊಡಬೇಕಿತ್ತು. ಆದರೆ ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಿದರೆ, ಜಿಲ್ಲೆಯ ಜನತೆಯ ತುರ್ತು ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ. ಹೃದ್ರೋಗ ತಜ್ಞರಿಂದ ಹಿಡಿದು, ಚರ್ಮ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸಾ ಸೌಲಭ್ಯಗಳು ಇಲ್ಲಿಯೇ ದೊರಕಲಿದೆ. ಇನ್ನು ಬೆಂಗಳೂರು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅವಶ್ಯಕತೆ ಇರುವುದಿಲ್ಲ.

    ಬೆಂಗಳೂರು – ಮೈಸೂರು ನಡುವೆ ಮಂಡ್ಯ ಹೊರತುಪಡಿಸಿದರೆ ಸುಸಜ್ಜಿತ ಆಸ್ಪತ್ರೆ ನಿರ್ವಣವಾಗುತ್ತಿರುವುದು ರಾಮನಗರದಲ್ಲಿಯೇ. ಹಾಗಾಗಿ, ಈ ಎರಡು ಜಿಲ್ಲೆಗಳ ನಡುವೆ ವಾಸಿಸುತ್ತಿರುವ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದೇ ಹೇಳಲಾಗುತ್ತಿದೆ. 250 ಬೆಡ್ ಸಾಮರ್ಥ್ಯದ ಈ ಆಸ್ಪತ್ರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

    ವಿಳಂಬವಾಗಿತ್ತು: 2008-09ರ ಅವಧಿಯಲ್ಲಿಯೇ ಜಿಲ್ಲಾಸ್ಪತ್ರೆಗೆ ಜಾಗ ಮಂಜೂರಾದರೂ ಕಾಮಗಾರಿ ಆರಂಭಕ್ಕೆ ಸಮಸ್ಯೆಗಳು ಎದುರಾಗಿದ್ದವು. ಆದರೂ 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಹೊರತಾಗಿಯೂ ಎಲ್ಲವೂ ಅಂದುಕೊಂಡತೆ ಆಗಿದ್ದರೆ 2020ರ ಮಾರ್ಚ್​ನಲ್ಲಿಯೇ ಆಸ್ಪತ್ರೆ ಉದ್ಘಾಟನೆಗೊಳ್ಳಬೇಕಿತ್ತು. ಕರೊನಾ ಇದಕ್ಕೆ ಅಡ್ಡಿಯಾಯಿತು.

    ಹಳೇ ಆಸ್ಪತ್ರೆಯಲ್ಲಿ ಸ್ತ್ರೀರೋಗ, ಮಕ್ಕಳ ವಿಭಾಗ

    ನೂತನ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳ ಒಟ್ಟು 31 ತಜ್ಞ ವೈದ್ಯರು, 200ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿ ಆಗಬೇಕಿದೆ. ಇದರೊಟ್ಟಿಗೆ 7 ವಿಭಾಗದ ಸರ್ಜನ್​ಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆ ಜಾಗದಲ್ಲಿ ಸ್ತ್ರೀ ರೋಗ ಮತ್ತು ಮಕ್ಕಳ ವಿಭಾಗವನ್ನು ತೆರೆದು, ನೂತನ ಆಸ್ಪತ್ರೆಗೆ ಬೇಕಾಗಿರುವ ಸೌಲಭ್ಯವನ್ನು ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಣಕಾಸು ಇಲಾಖೆಯಲ್ಲಿ ಪತ್ರವಿದ್ದು ಡಿಸಿಎಂ ಅಶ್ವತ್ಥನಾರಾಯಣ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದ್ದಾರೆ.

    ಜಿಲ್ಲಾಸ್ಪತ್ರೆಯ ವಿಶೇಷ

    ಹೃದ್ರೋಗ ವಿಭಾಗ, ಉದರ ಸಂಬಂಧಿ ಕಾಯಿಲೆಗಳು, ನರ ರೋಗ, ಸ್ತ್ರೀ ರೋಗ, ಐಸಿಯು ತಜ್ಞರು ಸೇರಿದಂತೆ 7 ಪ್ರತ್ಯೇಕ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಪ್ರತಿನಿತ್ಯ ಸುಮಾರು 4ರಿಂದ 5 ಸಾವಿರ ಮಂದಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ವೇಗ ಪಡೆದುಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಅಗತ್ಯ ಸೌಲಭ್ಯಗಳೊಂದಿಗೆ ತೆರೆಯಲಿದೆ.

    | ಡಾ. ಬಿ.ಎಸ್. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts