More

    ಪೆನ್‌ಡ್ರೈವ್ ಪ್ರಕರಣ ಸಿಬಿಐಗೆ ವಹಿಸಿ

    ವಿಜಯವಾಣಿ ಸುದ್ದಿಜಾಲ ರಾಮನಗರ
    ಹಾಸನದಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿ, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ರಾಮನಗರ ಐಜೂರು ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.


    ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಎರಡೂ ಪಕ್ಷಗಳ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.


    ಈ ವೇಳೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿ ಬದಲಾಗಿದ್ದಾರೆ, ಅವರಲ್ಲಿ ಒಳ್ಳೆಯತನ ಕಾಣುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಹಾಗೂ ಒಂದು ಕುಟುಂಬವನ್ನು ಹಣಿಯುವ ಸಲುವಾಗಿ ಹಲವು ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಮೂಲಕ ಪೆನ್‌ಡ್ರೈವ್ ಪ್ರಕರಣದ ಹಿಂದೆ ಇರುವುದು ಡಿ.ಕೆ.ಶಿವಕುಮಾರ್ ಎನ್ನುವುದು ಬಹಿರಂಗಗೊಂಡಿದೆ. ಇನ್ನು ಅಧಿಕಾರದಲ್ಲಿ ಉಳಿಯುವ ಅರ್ಹತೆಯನ್ನು ಅವರು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.


    ವಕೀಲ ದೇವರಾಜೇಗೌಡ ಅವರೊಟ್ಟಿಗೆ ಸುಮಾರು 2 ಗಂಟೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಇದನ್ನು ಉನ್ನತ ಮಟ್ಟದ ತನಿಖೆ ಮಾಡಿದರೆ ಮಾಹಿತಿ ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಒಂದು ವೇಳೆ ಇದನ್ನು ಈಗಲೇ ಆಚೆ ಬಿಟ್ಟರೆ ಡಿ.ಕೆ.ಶಿವಕುಮಾರ್ ಅವರ ಮಾನ ಹರಾಜಾಗಲಿದೆ ಎಂದರು.


    ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಹಾಸನ ಮತ್ತು ರಾಜ್ಯದಲ್ಲಿ ನಡೆದ ರಾಜಕೀಯ ಧ್ರುವೀಕರಣದ ಹಿನ್ನೆಲೆಯಲ್ಲಿ ನಮಗೆ ಅಸ್ತಿತ್ವ ಇಲ್ಲ ಎಂದು ಕಂಗೆಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪೆನ್ನು ಪೇಪರ್ ಕೊಡಿ, ಒಕ್ಕಲಿಗ ಸಮುದಾಯಕ್ಕೆ ಒಳ್ಳೇದು ಮಾಡುತ್ತೇನೆ ಎಂದು ಹೇಳಿದ್ದ ಡಿ.ಕೆ.ಶಿವಕುಮಾರ್ ಅವರು, ಈಗ ಪೆನ್‌ಡ್ರೈವ್ ಮೂಲಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.


    ಹಾಸನ ಪ್ರಕರಣದಲ್ಲಿ ನೇಮಕ ಮಾಡಿರುವ ಎಸ್‌ಐಟಿ ಏನು ಮಾಡುತ್ತಿದೆ? ಅವರು ರೇವಣ್ಣ ಅವರನ್ನು ಬಂಧಿಸಿದ್ದಾರೆ. ಆದರೆ, ಬೇರೆ ಯಾರ ಮೇಲೆ ದೂರು ದಾಖಲಾಗಿದೆಯೋ ಅಂತಹವರನ್ನು ಬಂಧಿಸಿಲ್ಲ. ಪ್ರಜ್ವಲ್ ಕಾರು ಚಾಲಕ ಪೊಲೀಸರಿಗೆ ಸಿಗುವುದಿಲ್ಲ, ಆದರೆ ಖಾಸಗಿ ವಾಹಿನಿ ಸಂದರ್ಶನಕ್ಕೆ ಸಿಗುತ್ತಾರೆ. ಇಂತಹ ಎಸ್‌ಐಟಿಯಿಂದ ನ್ಯಾಯಯುತ ತನಿಖೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪೆನ್‌ಡ್ರೈವ್ ಹಂಚುವ ಮೂಲಕ ನೀಚ ಕೃತ್ಯ ಮಾಡಿರುವ ಡಿ.ಕೆ.ಶಿವಕುಮಾರ್ ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕು. ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಇಲ್ಲವೇ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.


    ಪ್ರತಿಭಟನೆಯಲ್ಲಿ ಎಚ್.ಸಿ.ಜಯಮುತ್ತು, ಕನಕಪುರದ ನಾಗರಾಜು, ಸ್ಟುಡಿಯೋ ಚಂದ್ರು, ಆನಂದ ಸ್ವಾಮಿ, ಗೌತಮ್‌ಗೌಡ, ಪ್ರಸಾದ್‌ಗೌಡ, ಮುರಳೀಧರ್ ಮುಂತಾದವರು ಇದ್ದರು.

    ತಪ್ಪನ್ನು ಸಮರ್ಥಿಸುವುದು ಸಾಧ್ಯವೇ ಇಲ್ಲ
    ಹಾಸನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ಮಾತುಗಳನ್ನು ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡರ ಕುಟುಂಬ ಮತ್ತು ಪ್ರಾದೇಶಿಕ ಪಕ್ಷವನ್ನು ಹಣಿಯುವ ಸಲುವಾಗಿ ಈ ಪ್ರಕರಣವನ್ನು ಡಿ.ಕೆ.ಶಿವಕುಮಾರ್ ಬಳಕೆ ಮಾಡಿಕೊಂಡಿರುವುದು ವಕೀಲ ದೇವರಾಜೇಗೌಡ ಅವರೊಟ್ಟಿಗೆ ಆಡಿರುವ ಸಂಭಾಷಣೆಯಿಂದ ಗೊತ್ತಾಗಿದೆ. ಅವರು ರಾಜಕಾರಣಕ್ಕೆ ಬರುವ ಮೊದಲು ಸಾತನೂರಿನಲ್ಲಿ ಏನು ಮಾಡುತ್ತಿದ್ದರೊ ಅದೇ ಕಸುಬನ್ನು ಈಗ ಮುಂದುವರಿಸಿದ್ದಾರೆ. ಹಿಂದೆ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಅವರ ಪ್ರಕರಣದಲ್ಲಿಯೂ ಇವರೇ ಇದ್ದರು, ಈಗಲೂ ಇವರ ಹೆಸರು ಇದ್ದು, ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts