More

    ಮೆಸ್ಕಾಂ ವಿರುದ್ಧ ಬೀದಿಗಿಳಿದ ಚಂದ್ರಾಪುರ ಗ್ರಾಮಸ್ಥರು

    ಮೂಡಿಗೆರೆ: ತಾಲೂಕಿನ ಚಂದ್ರಾಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇದರಿಂದ ಕುಡಿಯುವ ನೀರು ಪೂರೈಕೆಗೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಚಂದ್ರಾಪುರ ಗ್ರಾಮಸ್ಥರು ಜನ್ನಾಪುರ ಪಟ್ಟಣದ ಮೆಸ್ಕಾಂ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

    ಚಿನ್ನಿಗ ಗ್ರಾಪಂ ಸದಸ್ಯ ಸಮಂತ್ ಮಾತನಾಡಿ, ನಿರಂತರವಾದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇದೀಗ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಪಂನಿಂದ ನಲ್ಲಿ ಮೂಲಕ ಬರುವ ನೀರು ಬಿಟ್ಟರೆ ಬೇರೆ ಜಲಮೂಲವಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹರಸಾಹಸ ಪಡಬೇಕಾಗಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದು ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಇಲ್ಲದಿದ್ದರೂ ನಮ್ಮ ಸಮಸ್ಯೆಯನ್ನು ಆಲಿಸುವವರೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕಳೆದ ಒಂದು ವಾರದಿಂದ ಸಂಜೆ ವೇಳೆ ಮಳೆಯಾಗುತ್ತಿದೆ. ಮಳೆ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಮಳೆಗಾಲದಲ್ಲಿ ಮೆಸ್ಕಾಂನಿಂದ ಗ್ಯಾಂಗ್‌ಮ್ಯಾನ್‌ಗಳನ್ನು ನೇಮಿಸಿಕೊಂಡು ವಿದ್ಯುತ್ ತಂತಿಗೆ ತಾಗಿರುವ ಮರದ ರೆಂಬೆ, ಕೊಂಬೆ ಹಾಗೂ ಲೈನಿಗೆ ಆವರಿಸಿಕೊಂಡಿರುವ ಪೂದೆಗಳನ್ನು ಕತ್ತರಿಸುತ್ತಾರೆ. ಇದರ ಬದಲು ಮಳೆಗಾಲ ಆರಂಭ ಆಗುವುದಕ್ಕಿಂತ ಮೊದಲೇ ಕೆಲಸ ಮಾಡಿದರೆ ಉತ್ತಮ. ನಿರಂತರವಾಗಿ ಈ ಕೆಲಸ ಮಾಡಿದರೆ ಇನ್ನೂ ಉತ್ತಮ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಈ ಸಂಬಂಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
    ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮೆಸ್ಕಾಂ ಅಧಿಕಾರಿಗಳು ಮಾರ್ಗೋಪಾಯ ಕಂಡುಕೊಳ್ಳಬೇಕು. ಮೆಸ್ಕಾಂ ಗೋಣಿಬೀಡು ಉಪಕೇಂದ್ರ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣ ತ್ವರಿತವಾಗಿ ವಿದ್ಯುತ್ ಲೈನ್ ದುರಸ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಮಳೆಗಾಲದಲ್ಲಿ ನೇಮಿಸಿಕೊಂಡಂತೆ ಬೇಸಿಗೆಯಲ್ಲೂ ಗ್ಯಾಂಗ್‌ಮ್ಯಾನ್‌ಗಳನ್ನು ನೇಮಿಸಿಕೊಂಡು ವಿದ್ಯುತ್ ಮಾರ್ಗವನ್ನು ಸರಿಪಡಿಸಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಗ್ರಾಮಸ್ಥ ಶ್ರೀಧರ್ ಮಾತನಾಡಿ, ಹಲವಾರು ವರ್ಷದಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮಿತಿ ಮೀರಿದೆ. ಹೊಯ್ಸಳಲು, ನಿಡಗೋಡು, ಚಂದ್ರಾಪುರ, ಗಾಡಿಚೌಕ, ಕಮ್ಮರಗೋಡು, ಕಸ್ಕಿಬೈಲ್, ಕಲ್ಲು ಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಇದೆ. ಗ್ರಾಪಂನಿಂದ ಎರಡು ದಿನಕ್ಕೊಮ್ಮೆ ನಮ್ಮ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದರು. ಈಗ ವಿದ್ಯುತ್ ಸಮಸ್ಯೆ ನೆಪವೂಡ್ಡಿ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ನೀರಿಲ್ಲದೆ ಕಂಗಲಾಗಿರುವ ಗ್ರಾಮಸ್ಥರು 1300 ರೂ. ನೀಡಿ ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಮದುವೆ ಮತ್ತಿತರೆ ಶುಭ ಕಾರ್ಯವಿದ್ದರೆ ವಾರಗಟ್ಟಲೆ ಕೈ ಕೊಡುವ ವಿದ್ಯುತ್ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ದುಬಾರಿ ಬೆಲೆ ನೀಡಿ ಬಾಡಿಗೆ ಜನರೇಟರ್ ತಂದುಕೊಳ್ಳಬೇಕಾಗಿದೆ. ಜನ್ನಾಪುರಕ್ಕೆ ವಿದ್ಯುತ್ ಉಪಕೇಂದ್ರ 2016ರಲ್ಲಿ ಮಂಜೂರಾಗಿದೆ. ಇದುವರೆಗೂ ಕಾಮಗಾರಿ ನಡೆದಿಲ್ಲ. ಮೂಡಿಗೆರೆ ಪಟ್ಟಣದ ವಿದ್ಯುತ್ ಮುಖ್ಯಕೇಂದ್ರದಿಂದ ಕಾಫಿ ತೋಟದೊಳಗಿನ ಲೈನ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕಾಫಿ ತೋಟದೊಳಗೆ ಲೈನಿಗೆ ಪೊದೆಗಳು ಆವರಿಸಿಕೊಂಡಿವೆ. ಮರದ ರೆಂಬೆಗಳ ಮಧ್ಯೆ ಲೈನ್ ಹಾದುಹೋಗಿದೆ. ಇದರಿಂದಾಗಿ ಆಗಾಗ ವಿದ್ಯುತ್ ಕೈ ಕೊಡುತ್ತಿದೆ. ವಾರಗಟ್ಟಲೆ ಪೂರೈಕೆ ಇರುವುದಿಲ್ಲ. ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಕಾರಣ. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಮತ್ತು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿಗೂ ದೂರು ನೀಡಲಾಗಿದೆ ಎಂದು ತಿಳಿಸಿದರು.
    ಮೆಸ್ಕಾಂ ಕಿರಿಯ ಅಭಿಯಂತ ರವಿಕುಮಾರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಚಿನ್ನಿಗ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ, ಗ್ರಾಮಸ್ಥರಾದ ಚಂದ್ರಶೇಖರ್, ರಘು, ಜಯಾನಂದ, ಸಂಜೀವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts