More

    ಬಿಬಿಎಂಪಿಯಿಂದ ಮತದಾರರರ ಜಾಗೃತಿಗೆ ವಿಶೇಷ ವಾಕಾಥಾನ್

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ಭಾನುವಾರ ಮೊದಲ ಅರಿವಿನ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ‘ವೋಟ್-ಎ-ಥಾನ್’ ಯಶಸ್ವಿಗೊಳಿಸಿದರು.

    ಮಾರತ್‌ಹಳ್ಳಿಯಲ್ಲಿ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಕಾವೇರಿ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ನಡೆದ ಜಾಗೃತಿ ಕಾಯಕ್ರಮದಲ್ಲಿ 500 ಬೈಕ್ ಸವಾರರು, 1200ಕ್ಕೂ ಹೆಚ್ಚು ಸೈಕಲ್ ಸವಾರರು ಹಾಗೂ ನಾಗರಿಕರು ಭಾಗವಹಿಸಿದರು. ಇದೇ ವೇಳೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯು ಮತದಾರರ ಜಾಗೃತಿಯಾಗಿ ಮಾರ್ಪಟ್ಟಿತು.

    ನಟಿ ಪ್ರಣಿತ ಸುಭಾಷ್ ಅವರು ವಾಕಾಥಾನ್, ಬೈಕ್ ಮತ್ತು ಬೈಸಿಕಲ್ ರಾಲಿಗೆ ಚಾಲನೆ ನೀಡಿದರು. ಆ ಬಳಿಕ ಮಹಿಳಾ ದಿನ ಕಾರ್ಯಕ್ರಮಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಜತೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದಾಗಿ ಚುನಾವಣಾಧಿಕಾರಿಗಳು ವಿವರಿಸಿದರು.

    ಈ ವೇಳೆ ಮಾತನಾಡಿದ ನಟಿ ಪ್ರಣಿತ ಸುಭಾಷ್, ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾಗಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಈ ಮತದಾನ ಜಾಗೃತಿ ಕಾಯಕ್ರಮ ಆಯೋಜಿಸಿರುವುದು ಸ್ಪೂರ್ತಿದಾಯಕ. ನಾಗರಿಕರು ತಮಗೆ ಏನು ಬೇಕು? ಏನು ಬೇಡ? ಎನ್ನುವುದನ್ನು ಅಭಿವೃದ್ಧಿ ಕುರಿತಾದ ಪರಿಕಲ್ಪನೆ ಸಾಕಾರಗೊಳ್ಳಲು ಮತದಾನದ ಹಕ್ಕು ಚಲಾಯಿಸುವುದು ಅವಶ್ಯಕ ಎಂದು ಹೇಳಿದರು.

    ದೇಶದ ಐಟಿ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ನಾಗರಿಕರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಮ್ಮ ಪರಿಚಿತರಿಗೆ, ಸ್ನೇಹಿತರಿಗೆ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಪ್ರಜಾಪ್ರಭುತ್ವದ ಯಶಸ್ಸು ನಾಗರಿಕರು ಮತ ಚಲಾವಣೆಯಿಂದ ಮಾತ್ರ ನಿರ್ಧಾರವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
    – ಡಾ. ಆರ್. ಸೇಲ್ವಮಣಿ, ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts