More

    ತ್ಯಾಜ್ಯ ನಿರ್ವಹಣೆಗೆ ವಿಶೇಷ ಕಾರ್ಯಪಡೆ

    ಮಂಗಳೂರು: ಕರಾವಳಿಯ ಗಂಭೀರ ಸಮಸ್ಯೆಯಾಗಿರುವ ರಸ್ತೆ ಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕರು ತ್ಯಾಜ್ಯ ತಂದು ಹಾಕುವ ಸಮಸ್ಯೆಗೆ ದಕ್ಷಿಣ ಕನ್ನಡ ಪಂಚಾಯತ್‌ರಾಜ್ ವ್ಯವಸ್ಥೆ ಕೊನೆಗೂ ಪರಿಣಾಮಕಾರಿ ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿದೆ.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ರಸ್ತೆಗಳ ಅಂಚಿನಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ರಾಶಿ ಹಾಕುವುದನ್ನು ತಡೆಯಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾರ್ಯಪಡೆ ರಚಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

    ಕಾರ್ಯಪಡೆ ಪರಿಕಲ್ಪನೆ: ರಸ್ತೆ ಬದಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಮತ್ತು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ರಚಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ, ಗ್ರಾಮದ ಬೀಟ್ ಪೊಲೀಸ್, ಆಶಾ ಕಾರ್ಯಕರ್ತೆಯರು, ಸ್ವಚ್ಛಾಗ್ರಹಿಗಳು, ಕರ ವಸೂಲಿಗಾರರು ಮತ್ತು ಪಂಪ್ ಚಾಲಕರು ಈ ಕಾರ್ಯಪಡೆಯಲ್ಲಿ ಇರುತ್ತಾರೆ.

    ಜವಾಬ್ದಾರಿ ಏನು?: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಕ್ರಮ ವಹಿಸುವುದು. ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ರಸ್ತೆಗಳ ಅಂಚು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಹಾಕುವುದನ್ನು ಪತ್ತೆ ಹಚ್ಚಲು ಅಗತ್ಯ ಇರುವ ಕಡೆ ಸಿಸಿ ಕ್ಯಾಮರಾ ಅಳವಡಿಸುವುದು. ನಿರ್ದಿಷ್ಟ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಗಸ್ತು ತಿರುಗಿ ಕಸ ತಂದು ಹಾಕುವ ವ್ಯಕ್ತಿಗಳು ಹಾಗೂ ವಾಹನಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದು. ಅಪರಾಧ ಕೃತ್ಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು. ತಪ್ಪಿತಸ್ಥರ ಮೇಲೆ ಗ್ರಾಪಂ ದಂಡ ವಿಧಿಸುವುದು. ವಾಹನದ ನೋಂದಣಿ ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ದಾಖಲಿಸುವುದು. ಕಸ ರಾಶಿ ಹಾಕುತ್ತಿದ್ದ ಪ್ರದೇಶವನ್ನು ಶುಚಿಗೊಳಿಸಿ ಉದ್ಯಾನವನ ನಿರ್ಮಿಸುವುದು. ಬೃಹತ್ ತ್ಯಾಜ್ಯ ಉತ್ಪಾದಕರು(50 ಕೆಜಿಗಿಂತ ಅಧಿಕ) ತಮ್ಮ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ನಿರ್ದೇಶನ ನೀಡುವುದು ಇವರ ಜವಾಬ್ದಾರಿ.

    ಅಪರಾಧ- ಕನಿಷ್ಠ ದಂಡ: 

    *ತೆರೆದ ಪ್ರದೇಶ ಕಸ ಸುರಿಯುವುದು, ಉಗಿಯುವುದು ಮತ್ತು ಮೂತ್ರ ವಿಸರ್ಜನೆ- 1 ಸಾವಿರ ರೂ.
    *ಬೃಹತ್ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡಣೆಯಲ್ಲಿ ವೈಫಲ್ಯ- 5 ಸಾವಿರ ರೂ.
    *ಇತರ ತ್ಯಾಜ್ಯ ಉತ್ಪಾದಕರು ಘನ ತ್ಯಾಜ್ಯ ವಿಂಗಡಣೆ ಮತ್ತು ಬಟವಾಡೆ- 1 ಸಾವಿರ ರೂ.
    *ಬೃಹತ್ ತ್ಯಾಜ್ಯ ಉತ್ಪಾದಕರಿಂದ ಘನ ತ್ಯಾಜ್ಯ ಸುಡುವುದು,ರಾಶಿ ಹಾಕುವುದು ಮತ್ತು ಹೂಳುವ ಮೂಲಕ ವಿಲೇವಾರಿ- 5 ಸಾವಿರ ರೂ.
    *ಇತರ ತ್ಯಾಜ್ಯ ಉತ್ಪಾದಕರಿಂದ ಘನ ತ್ಯಾಜ್ಯ ಸುಡುವುದು, ರಾಶಿ ಹಾಕುವುದು ಮತ್ತು ಹೂಳುವ ಮೂಲಕ ವಿಲೇವಾರಿ- 1 ಸಾವಿರ ರೂ.

    ಈ ಅಸ್ತ್ರವನ್ನು ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಬಳಸಿದರೆ ಬಯಲು ಕಸ ನಿಯಂತ್ರಣ ಹಾಗೂ ನಿರ್ಮೂಲನೆ ಸಾಧ್ಯ. ಈ ವಿಷಯದಲ್ಲಿ ಗ್ರಾಮ ಪಂಚಾಯಿತಿಗಳ ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿ ತುಂಬಾ ಮುಖ್ಯ. ಪಂಚಾಯಿತಿಯ ಓರ್ವ ಸಾಮಾನ್ಯ ನೌಕರನಿಗೂ ಇದರಲ್ಲಿ ತನ್ನದೇ ಆದ ಕೊಡುಗೆ ನೀಡಲು ಅವಕಾಶವಿದೆ. ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಈ ಸೂತ್ರ ಸೂಕ್ತವಾಗಿದೆ.

    ಶೀನ ಶೆಟ್ಟಿ, ಜಿಲ್ಲಾ ಸ್ವಚ್ಛತಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts