More

    ನಾಲ್ಕರ ಮಗುವಿಗೆ ಅಪರೂಪದ ಶಸ್ತ್ರಚಿಕಿತ್ಸೆ

    ಉಳ್ಳಾಲ: ಕಾಲಿನ ಎಲುಬು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಮಗುವಿನ ಕಾಲನ್ನು ಕತ್ತರಿಸದೆ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ಎಂ.ವಿಜಯ ಕುಮಾರ್ ಹೇಳಿದರು.

    ಭಟ್ಕಳದ ಶಿರಾ ನಿವಾಸಿ ಶಬ್ಬೀರ್ ಎಂಬುವರ ನಾಲ್ಕು ವರ್ಷದ ಪುತ್ರನಿಗೆ ಜುಲೈನಲ್ಲಿ ಕಾಲು ನೋವು ಆರಂಭಗೊಂಡು ನಡೆದಾಡಲು ಕಷ್ಟವಾದಾಗ ಬೆಂಗಳೂರು ಸಹಿತ ಹಲವು ಆಸ್ಪತ್ರೆಗಳಿಗೆ ಕರೆದೊಯ್ದು ಮೂರು ಬಾರಿ ಕಿಮೋಥೆರಪಿ ಮಾಡಲಾಗಿತ್ತು. ಕಾಲನ್ನು ಕತ್ತರಿಸಬೇಕು ಎಂದು ವೈದ್ಯರು ಹೇಳಿದ್ದರಿಂದ ಜುಲೈನಲ್ಲಿ ಯೇನೆಪೊಯ ಆಸ್ಪತ್ರೆಗೆ ಬಂದಿದ್ದರು. ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಜಲಾಲುದ್ದೀನ್ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಕಾಲು ಕತ್ತರಿಸದೆ ಚಿಕಿತ್ಸೆ ನೀಡಲು ಸಾಧ್ಯ ಎಂದು ಅರಿತು ಕಾಲಿಗೆ ಅಳವಡಿಸಬೇಕಾದ ಪರಿಕರ ತಯಾರಿಕಾ ಕಂಪನಿಗಳನ್ನು ಸಂಪರ್ಕಿಸಿದ್ದರು. ಜರ್ಮನಿಯ ಕಂಪನಿಯೊಂದು 30 ಲಕ್ಷ ರೂ. ದರ ತಿಳಿಸಿದರೆ ಚೆನ್ನೈಯ ಕಂಪನಿ ಕೇವಲ ಒಂದೂವರೆ ಲಕ್ಷ ರೂ.ನಲ್ಲಿ ತಯಾರಿಸಿಕೊಟ್ಟಿತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿಸ್ಟ್ಗಳಾದ ಡಾ.ಜಲಾಲುದ್ದೀನ್ ಅಕ್ಬರ್, ಡಾ.ರೋಹನ್ ಶೆಟ್ಟಿ, ಡಾ.ಅಮರ್ ರಾವ್, ಡಾ.ನೂರ್ ಮುಹಮ್ಮದ್, ಎಲುಬು ತಜ್ಞರಾದ ಡಾ.ಇಮ್ತಿಯಾಝ್ ಅಹ್ಮದ್, ಡಾ.ಅಭಿಷೇಕ್ ಶೆಟ್ಟಿ, ಅರಿವಳಿಕೆ ತಜ್ಞ ಡಾ.ಎಜಾಝ್ ಹಾಗೂ ಮಕ್ಕಳ ತಜ್ಞ ಡಾ.ಮಿಥುನ್ ಅವರನ್ನೊಳಗೊಂಡ ತಜ್ಞರ ತಂಡ ಸೆ.11ರಂದು ಸತತ ಆರು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಈಗ ಮಗು ನಡೆಯಲು ಆರಂಭಿಸಿದೆ. ಕಾಲಿಗೆ ಸ್ಕ್ರೂ ಬಳಸಲಾಗಿದ್ದು, ಮಗು ಬೆಳವಣಿಗೆ ಆಗುತ್ತಿದ್ದಂತೆ ಅದನ್ನು ವಿಸ್ತರಿಸಬೇಕಾಗುತ್ತದೆ ಎಂದರು.
    ವೈದ್ಯಕೀಯ ಅಧೀಕ್ಷಕ ಡಾ.ಎಸ್.ಪದ್ಮನಾಭ ಉಪಸ್ಥಿತರಿದ್ದರು.

    ಈ ಕಾಯಿಲೆ ಆರಂಭದಲ್ಲಿ ಕಾಲು ನೋವು ಶುರುವಾಗಿ ನಡೆದಾಡಲು ಕಷ್ಟವಾಗುವುದು ಇಲ್ಲವೇ ಗೆಡ್ಡೆ ಕಂಡು ಬರುತ್ತದೆ. ಯುರೋಪ್ ಮತ್ತು ಜರ್ಮನಿಯಲ್ಲಿ ಅಪರೂಪದ ಪ್ರಕರಣಗಳು ಪತ್ತೆಯಾದರೆ, ಭಾರತದಲ್ಲಿ ಇದು ಮೊದಲ ಪ್ರಕರಣ.
    – ಡಾ.ವಿಜಯ ಕುಮಾರ್, ಸರ್ಜಿಕಲ್ ಆಂಕಾಲಜಿಸ್ಟ್, ಯೇನೆಪೊಯ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts