More

    ಮಾವಿನ ಸೀಸನ್‌ನಲ್ಲೇ ಹಣ್ಣಿಗೆ ಬರ!

    *ಪಾತಾಳಕ್ಕೀಳಿದ ಇಳುವರಿ, ಗಗನಕ್ಕೇರಿದ ದರ
    *ಜಿಲ್ಲೆಯ ಮಾರುಕಟ್ಟೆಯಲ್ಲಿ ದುಬಾರಿ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಮಾವಿನ ಸೀನಸ್‌ನಲ್ಲೇ ಮಾವಿಗೆ ಬರ ಎದುರಾಗಿರುವುದು ಮಾವು ಹಣ್ಣಿನ ಪ್ರಿಯರಿಗೆ ಭಾರಿ ನಿರಾಸೆ ಮೂಡಿಸಿದೆ. ಮಾರುಕಟ್ಟೆಗಳಲ್ಲಿ ಘಮಘಮಿಸಬೇಕಿದ್ದ ಮಾವು ಸೊರಗಿದಂತೆ ಕಂಡುಬರುತ್ತಿದೆ. ಈ ವೇಳೆಗೆ ರಾಶಿ ರಾಶಿಯಾಗಿ ಕಂಡುಬರುತ್ತಿದ್ದ ಮಾವಿನ ದಾಸ್ತಾನು ಕಾಣಸಿಗದಂತಾಗಿದೆ.
    ಹೌದು! ಮಳೆಯ ತೀವ್ರ ಕೊರತೆ, ಮಿತಿಮೀರಿದ ಉಷ್ಣಾಂಶ ಹಾಗೂ ರೋಗಬಾಧೆಯಿಂದಾಗಿ ಹಣ್ಣಿನ ರಾಜ ಎನಿಸಿಕೊಂಡಿರುವ ಮಾವಿನ ಲಸಿಗೆ ಈ ಭಾರಿ ತೀವ್ರ ಹೊಡೆತ ಬಿದ್ದಿದೆ. ಏಪ್ರಿಲ್ ಅರಂಭದಲ್ಲೇ ಕಂಡುಬರುತ್ತಿದ್ದ ರಾಶಿ ರಾಶಿ ಮಾವಿನ ಹಣ್ಣು ಕಾಣಸಿಗದಂತಾಗಿದೆ. ಪ್ರತೀ ವರ್ಷ ರೈತರಿಂದ ನೇರಮಾರಾಟ ಎಂಬ ನಾಮಲಕದಡಿ ಆರಂಭಿಸುತ್ತಿದ್ದ ಮಾವಿನ ಮೇಳಗಳ ಸದ್ದು ಅಡಗಿದೆ.
    ಇದು ಮಾವಿನ ಕಾಲ: ಏಪ್ರಿಲ್ ಹಾಗೂ ಮೇ ತಿಂಗಳು ಬಂತೆಂದರೆ ಸಾಮಾನ್ಯವಾಗಿ ಮಾವಿನ ಹಣ್ಣಿನ ಅಬ್ಬರ ಕಂಡುಬರುತ್ತಿತ್ತು. ಮಾರುಕಟ್ಟೆಗಳಲ್ಲಿ ಎಲ್ಲೆಂದರಲ್ಲಿ ಮಾವಿನ ರಾಶಿ ಗ್ರಾಹಕರನ್ನು ಕೈಬೀಸಿ ಕರೆಯುತ್ತಿತ್ತು. ರಸ್ತೆ ಬದಿ, ತಳ್ಳುವ ಗಾಡಿಯಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಇವೆಲ್ಲ ದೃಶ್ಯಗಳಿಗೆ ಮುಸುಕು ಕವಿದಿದೆ.
    ಗಗನಕ್ಕೇರಿದ ದರ: ಸಾಮಾನ್ಯವಾಗಿ ಪ್ರತಿ ವರ್ಷ ಮಾವಿ ಸೀಸನ್‌ನಲ್ಲಿ ಕೆಜಿಗೆ 70 ರಿಂದ 100 ರೂ. ಇರುತ್ತಿತ್ತು. ಆದರೆ ಈ ಬಾರಿ ಗುಣಮಟ್ಟದ ಹಣ್ಣು 200 ರೂಪಾಯಿ ದಾಟಿದೆ. ಏತನ್ಮಧ್ಯೆ ದೊಡ್ಡ ಗಾತ್ರ ರುಚಿಕಟ್ಟಿದ ಹಣ್ಣುಗಳು ಸಿಗುತ್ತಿಲ್ಲ. ದುಬಾರಿ ಹಣ ತೆತ್ತರೂ ಗ್ರಾಹಕರ ಅಪೇಕ್ಷೆಯಂತೆ ಹಣ್ಣು ರುಚಿಸುತ್ತಿಲ್ಲ. ನೈಸರ್ಗಿಕವಾಗಿ ಹಣ್ಣಾದ ಮಾವು ಸಿಗುವುದು ಅಪರೂಪ ಎನ್ನುವಂತಾಗಿದೆ. ಇನ್ನೂ ತೀವ್ರ ಬಿಸಿಲಿನಿಂದಾಗಿ ಹಣ್ಣುಗಳು ಬಾಡಿ ಹೋಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವುದು ವ್ಯಾಪಾರಿಗಳಿಗೆ ಸವಾಲಿನ ಕೆಲಸವಾಗಿದೆ. ಜಿಲ್ಲೆಯ ಮಾರುಕಟ್ಟೆಗಳಲ್ಲಿ ಅಲ್ಲಲ್ಲಿ ಮಾವಿನ ಮಾರಾಟ ಕಂಡುಬರುತ್ತಿದ್ದರೂ ಗ್ರಾಹಕರ ಕೈಗೆಟುಕದಂತಿದೆ. ಮಲಗೋಬ 150 ರಿಂದ 200, ಬಾದಾಮಿ 180, ಸೇಂದೂರ 150 ರಿಂದ 1180, ರಸಪೂರಿ 200ರ ಗಡಿಯಲ್ಲಿ ಮಾರಾಟವಾಗುತ್ತಿದೆ. ಕೆಜಿಗಟ್ಟಲೆ ಹಣ್ಣು ಖರೀದಿ ಮಾಡುತ್ತಿದ್ದ ಗ್ರಾಹಕರು ಸ್ಯಾಂಪಲ್ ಎನ್ನುವಂತೆ ಒಂದೆರೆಡು ಹಣ್ಣು ಕೊಳ್ಳುವಂತಾಗಿದೆ.

    ಜಿಲ್ಲೆಯಲ್ಲಿ ನೆರೆರಾಜ್ಯದ ಹಣ್ಣು ಮಳೆರಾಯ ಕೈ ಕೊಟ್ಟಿರುವುದರಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಹಣ್ಣಿನ ಇಳುವರಿಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದ್ದರಿಂದ ನೆರೆಯ ಆಂಧ್ರ ಹಾಗೂ ತಮಿಳುನಾಡು ಕಡೆಯಿಂದ ಹಣ್ಣು ಬರುತ್ತಿದೆ. ಜಿಲ್ಲೆಯಲ್ಲಿನ ಹಣ್ಣುಗಳಿಗೆ ಹೋಲಿಸಿದರೆ ಅವು ಗುಣಮಟ್ಟದಿಂದ ಕೂಡಿಲ್ಲ ಎಂಬುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.

    ಮಾರುಕಟ್ಟೆಲ್ಲಿ ಮಾವಿಲ್ಲ ಜಿಲ್ಲೆಯಿಂದ ಬಾದಾಮಿ, ಸೇಂದೂರಾ, ರಸಪುರಿ, ಬೈಗಂಪಲ್ಲಿ ತಳಿಯ ಹಣ್ಣುಗಳು ಮಾರ್ಚ್ ಆರಂಭದಲ್ಲಿಯೇ ಮಾರುಕಟ್ಟೆ ಪ್ರವೇಶ ಮಾಡಿ, ಪಲ್ಪ್ ಕಾರ್ಖಾನೆಗಳಿಗೆ ರವಾನೆ ಆಗುತ್ತವೆ. ಆದರೆ, ಈ ಸಲ ಅಷ್ಟಾಗಿ ಮಾವಿನ ಅಬ್ಬರವಿಲ್ಲ. ಸ್ವಲ್ಪ ಪ್ರಮಾಣದ ಬೆಳೆಯಷ್ಟೇ ಮಾರುಕಟ್ಟೆಗೆ ಬಂದಿದೆ. ಸಾಮಾನ್ಯವಾಗಿ ನವೆಂಬರ್ – ಡಿಸೆಂಬರ್‌ನಲ್ಲಿ ಮಾವು ಹೂವು ಕಚ್ಚಿ, ಕಾಯಾಗಿ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುತ್ತವೆ. ಆದರೆ, ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆ ಕಾರಣ ನಿರೀಕ್ಷಿತ ಸಲು ಕೈ ಸೇರಿಲ್ಲ.

    ಕೀಟಬಾಧೆ ಇರುವ ಕಾಯಿಗೂ ಜಿಗಿ ಹುಳು, ವೈಟ್ ಫ್ಲೈಸ್, ಜೋನಿ, ನುಸಿ ಕೀಟಬಾಧೆ ಹಾಗೂ ಬೂದು ರೋಗ ಕಾಣಿಸಿಕೊಳ್ಳಲಾರಂಭಿಸಿದ್ದು, ರೋಗ ಮತ್ತು ಕೀಟ ನಿಯಂತ್ರಣಕ್ಕೆ ಇಲಾಖೆಯು ಬೆಳೆಗಾರರಿಗೆ ಸಲಹೆಸೂಚನೆ ನೀಡುತ್ತಾ ಬಂದಿದೆಯಾದರೂ, ನಿರೀಕ್ಷೆಯಷ್ಟು ಸಲತೆ ಕಂಡುಬರುತ್ತಿಲ್ಲ.

    ಬೆಳೆಗಾರರು ಕಂಗಾಲು ಪ್ರಸಕ್ತ ಸಾಲಿನಲ್ಲಿ ಹೊಸಕೋಟೆ ತಾಲೂಕಿನಲ್ಲಿ 2066 ಹೆಕ್ಟೇರ್, ನೆಲಮಂಗಲ 1399 ಹೆಕ್ಟೇರ್, ದೊಡ್ಡಬಳ್ಳಾಪುರ 1038 ಹೆಕ್ಟೇರ್ ಹಾಗೂ ದೇವನಹಳ್ಳಿಯಲ್ಲಿ 729 ಹೆಕ್ಟೇರ್ ಸೇರಿ ಜಿಲ್ಲೆಯಲ್ಲಿ 5233 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಕಳೆದ ನಾಲ್ಕೈದು ವರ್ಷದಿಂದ ಅತಿವೃಷ್ಟಿ, ಅನಾವೃಷ್ಟಿಯಂತಹ ಹವಾಮಾನ ವೈಪರೀತ್ಯದಿಂದರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

    ಈ ಬಾರಿ ಮಳೆಯ ತೀವ್ರ ಕೊರತೆ, ಅಧಿಕ ಉಷ್ಣಾಂಶದ ಕಾರಣ ಮಾವಿನ ಇಳುವರಿಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಹೂವು ಕಚ್ಚುವ ಮೊದಲೇ ಉದುರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಕೊಳವೆಬಾವಿ ಆಶ್ರಿತ ತೋಟಗಳಲ್ಲಿ ರೈತರು ಸಲು ಉಳಿಸಿಕೊಳ್ಳುವಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇರುವ ಪರಿಸ್ಥಿಯಲ್ಲೇ ಗುಣಮಟ್ಟದ ಹಣ್ಣುಗಳನ್ನು ಉಳಿಸಿಕೊಳ್ಳಲು ಪ್ರೋಟ್‌ಬ್ಯಾಗ್ ತಂತ್ರಾಂಶ ಪರಿಚಯಿಸಿದ್ದು ಮಾವು ಬೆಳೆಗಾರರಿಗೆ ಇದರ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತಿದೆ.

    ಗುಣವಂತ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

    ಪ್ರತೀ ವರ್ಷ ಒಂದಿಲ್ಲೊಂದು ಕಾರಣದಿಂದ ನಿರೀಕ್ಷಿತ ಸಲು ಪಡೆಯುವುದು ಕಷ್ಟವಾಗಿದೆ, ಆದರೆ ಈ ಬಾರಿ ದೊಡ್ಡಮಟ್ಟದಲ್ಲಿ ಪೆಟ್ಟು ಬಿದ್ದಿದೆ. ವರ್ಷಪೂರ್ತಿ ಆರೈಕೆ ಮಾಡಿ ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದ ನಮಗೆ ಬಿಸಿಲ ತಾಪ ದೊಡ್ಡ ಪೆಟ್ಟು ನೀಡಿದೆ. ಉಳಿದ ಸಲು ಗುಣಮಟ್ಟದಿಂದಿಲ್ಲ. ಇದರಿಂದ ಮಾರುಕಟ್ಟೆಗಳಲ್ಲಿ ಕೇಳುವವರಿಲ್ಲದಂತಾಗಿದೆ.
    ಉಮೇಶ್, ಮಾವು ಬೆಳೆಗಾರ ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts