More

    ಬೆಳಗಾವಿ ಅಧಿವೇಶನ ವೆಚ್ಚದ ಮೇಲೆ ವಿಶೇಷ ನಿಗಾ!; ಖರ್ಚಿನ ಮೊತ್ತ 20 ಕೋಟಿ ರೂ. ಗಡಿ ದಾಟುವ ಸಾಧ್ಯತೆ..

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ವಿಧಾನಮಂಡಲ ಅಧಿವೇಶನದಲ್ಲಿ ವಸತಿ, ಊಟೋಪಚಾರ ಖರ್ಚು ವೆಚ್ಚದ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಲಿದೆ. ಎಲ್ಲ ರೀತಿಯ ಬೆಲೆಗಳ ಏರಿಕೆಯಿಂದಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಸಮಿತಿ ರಚಿಸಿ ಕಠಿಣ ನಿಯಮ ರೂಪಿಸಲು ಮುಂದಾಗಿದೆ.

    ಡಿ.19ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿ ಜಿಲ್ಲೆಗೆ 224 ಕ್ಷೇತ್ರಗಳ ಶಾಸಕರು, 75 ವಿಧಾನ ಪರಿಷತ್ತಿನ ಸದಸ್ಯರು, ಮಾಧ್ಯಮದವರು, ವಿವಿಧ ಇಲಾಖೆ ಹಿರಿಯ, ಕಿರಿಯ ಅಧಿಕಾರಿಗಳು, ವಿಧಾನಸಭೆ, ವಿಧಾನಪರಿಷತ್ ಅಧಿಕಾರಿಗಳು, ಸಿಬ್ಬಂದಿ, ವಾಹನ ಚಾಲಕರು ಸೇರಿ ಸುಮಾರು 6 ಸಾವಿರಕ್ಕೂ ಅಧಿಕ ಜನರು ಆಗಮಿಸುತ್ತಿದ್ದಾರೆ. ಇವರಿಗಾಗಿಯೇ 75 ಲಾಡ್ಜ್​ಗಳಲ್ಲಿನ ಸುಮಾರು 2 ಸಾವಿರ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದೆ.

    ಈ ಬಾರಿ ಪೆಟ್ರೋಲ್, ಡೀಸೆಲ್, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್​ಗಳಲ್ಲಿ ಉಪಾಹಾರ, ಊಟ, ಲಾಡ್ಜ್​ಗಳಲ್ಲಿನ ಕೊಠಡಿಗಳ ದಿನದ ಬಾಡಿಗೆ ಹಾಗೂ ಖಾಸಗಿ ವಾಹನಗಳ ಬಾಡಿಗೆ ಕೂಡ ಹೆಚ್ಚಾಗಿದೆ. ಇದರಿಂದಾಗಿ ಈ ವರ್ಷ ಚಳಿಗಾಲ ಅಧಿವೇಶನ ವೆಚ್ಚ 20 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ.

    ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೋಟೆಲ್​ಗಳಲ್ಲಿ ರೂಂ ಬಾಡಿಗೆ ದರ, ಊಟೋಪಚಾರ ದರಗಳನ್ನು ನಿಗದಿ ಮಾಡಲು, ದುಂದು ವೆಚ್ಚಗಳ ಮೇಲೆ ನಿಗಾ ವಹಿಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ಸಮಿತಿ ರಚನೆ ಮಾಡಲು ನಿರ್ಧರಿಸಿದೆ.

    ಚಳಿಗಾಲದ ಅಧಿವೇಶನ ವೇಳೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ವಿವಿಧ ಸಮಿತಿ ರಚಿಸಲಾಗುತ್ತಿದೆ. ವಾಹನಗಳ ಬಾಡಿಗೆ, ವಸತಿ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ವಸತಿ, ಊಟಕ್ಕೆ ನಿಯಮ ಮೀರಿ ಖರ್ಚು ಮಾಡಿದರೆ ಸಂಬಂಧಿಸಿದವರಿಂದಲೇ ಭರಿಸಲಾಗುವುದು. ಕಡಿಮೆ ಖರ್ಚಿನಲ್ಲಿ ಅಧಿವೇಶನ ನಡೆಸಲು ಎಲ್ಲ ಕ್ರಮ ವಹಿಸಲಾಗಿದೆ.

    | ನಿತೇಶ ಪಾಟೀಲ್ ಜಿಲ್ಲಾಧಿಕಾರಿ

    ನೂರಾರು ಕೋಟಿ ಖರ್ಚು

    2006ರಲ್ಲಿ ನಡೆದ ಮೊದಲ ಅಧಿವೇಶನಕ್ಕಾಗಿ (5 ದಿನ) ಸರ್ಕಾರವು 5 ಕೋಟಿ ರೂ. ವೆಚ್ಚ ಮಾಡಿತ್ತು. 2009ರಲ್ಲಿ (8ದಿನ) ಚಳಿಗಾಲ ಅಧಿವೇಶನಕ್ಕಾಗಿ 14 ಕೋಟಿ ರೂ. ಹೀಗೆ ಪ್ರತಿ ಚಳಿಗಾಲ ಅಧಿವೇಶನದಲ್ಲಿ ಖರ್ಚು-ವೆಚ್ಚ ಹೆಚ್ಚಾಗುತ್ತಿದೆ. ಬೆಳಗಾವಿಯಲ್ಲಿ 2006ರಿಂದ 2021ರವರೆಗೆ ನಡೆದ ಅಧಿವೇಶನದ ಖರ್ಚಿಗಾಗಿ ಸರ್ಕಾರವು ಸುಮಾರು 130 ಕೋಟಿ ರೂ. ವೆಚ್ಚ ಮಾಡಿದೆ.

    ಯಾವ್ಯಾವ ಖರ್ಚುಗಳ ಮೇಲೆ ನಿಗಾ?

    • ಸುವರ್ಣಸೌಧ ಒಳಾಂಗಣ ಮತ್ತು ಹೊರಾಂಗಣದಲ್ಲಿನ ಊಟ.
    • ಲಾಡ್ಜ್​ಗಳಲ್ಲಿ ಮೀಸಲಿಟ್ಟಿರುವ ಕೊಠಡಿಗಳಲ್ಲಿ ಇರುವವರ ಸಂಖ್ಯೆ.
    • ಸಚಿವರು, ಶಾಸಕರು, ಪತ್ರಕರ್ತರ, ಅಧಿಕಾರಿಗಳ ಹೆಸರಿನಲ್ಲಿ ಅನ್ಯ ವ್ಯಕ್ತಿಗಳಿಗೆ ಕೊಠಡಿ ನೀಡಿದರೆ ಬಾಡಿಗೆ ಕಟ್.
    • ಇಲಾಖೆ ವಾಹನ ಹೊರತುಪಡಿಸಿ ಬಾಡಿಗೆ ವಾಹನಗಳ ಬಳಕೆ ಮೇಲೆ ನಿಯಂತ್ರಣ.
    • ಸಚಿವರ ಪಿಎ, ಸಲಹೆಗಾರರು, ಗನ್​ವ್ಯಾನ್ ಪ್ರತ್ಯೇಕ ಖರ್ಚಿಗೆ ಕಡಿವಾಣ.
    • ಅಧಿವೇಶನದ ಪಾಸ್​ಗಳನ್ನು ಬೇಕಾಬಿಟ್ಟಿ ನೀಡುವಂತಿಲ್ಲ.
    • ಭದ್ರತಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪ್ರತ್ಯೇಕ ವಸತಿ, ಊಟದ ವ್ಯವಸ್ಥೆ ಇಲ್ಲ.
    • ಲಾಡ್ಜ್​ಗಳಲ್ಲಿ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದಲ್ಲಿ ಎಷ್ಟು ಜನ ಭಾಗಿ.
    • ಪತ್ರಕರ್ತರ ವಸತಿ, ಊಟದ ಹೆಸರಿನಲ್ಲಿ ದುಂದು ವೆಚ್ಚ.

    ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..

    ಭೀಕರ ಅಪಘಾತ: ಕರ್ನಾಟಕ-ತಮಿಳುನಾಡು ಗಡಿಗೋಪುರಕ್ಕೇ ಡಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts