More

    ಮಹಿಳಾ ತಾರತಮ್ಯ ಕೊನೆಗಾಣಲಿ

    ವಿರಾಜಪೇಟೆ: ಸಮಾಜದಲ್ಲಿ ಮಹಿಳೆಯರ ಮೇಲಿನ ತಾರತಮ್ಯ ನಿಲ್ಲಬೇಕು ಎಂದು ಅರಮೇರಿಯ ಎಸ್.ಎಂ.ಎಸ್. ವಿದ್ಯಾಪೀಠದ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಅಭಿಪ್ರಾಯಪಟ್ಟರು.

    ವಿರಾಜಪೇಟೆ ಕಾವೇರಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಮಹಿಳಾ ಸಬಲೀಕರಣದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಮತ್ತು ಪುರುಷರಲ್ಲಿ ದೈಹಿಕ ಮತ್ತು ಜೈವಿಕ ವ್ಯತ್ಯಾಸವಿದೆ. ಆದರೆ ಬೌದ್ಧಿಕ ವ್ಯತ್ಯಾಸವಿಲ್ಲ. ಪುರುಷರು ಯಾವಾಗ ಬೌದ್ಧಿಕವಾಗಿ ಮುಂದುವರಿಯುತ್ತಾರೋ ಅಥವಾ ಸ್ತ್ರೀಯರಿಗೆ ಬೌದ್ಧಿಕತೆಗೆ ಸಂಭಂದಿಸಿದ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದಾಗ ಅಸಮಾನತೆ, ತಾರತಮ್ಯ ಎಂದು ಹೋರಾಟ ನಡೆಸುವುದು ಸರಿಯಲ್ಲ. ಹೀಗಾಗಿ ಬೌದ್ಧಿಕ ಅಭಿವೃದ್ಧಿಯ ಕಡೆ ಮಹಿಳೆಯರು ಹೆಚ್ಚಿನ ಗಮನ ನೀಡಬೇಕು. ಮಹಿಳೆಯರು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಶಿಕ್ಷಣ, ಉದ್ಯೋಗವನ್ನು ಪಡೆಯಬೇಕೇ ಹೊರತು ಪುರುಷರಿಗೆ ಸವಾಲು ಹಾಕುವ ಉದ್ದೇಶದಿಂದ ಅಲ್ಲ ಎಂದರು.

    ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಣಯ್ಯ ಮಾತನಾಡಿ, ಮಹಿಳಾ ಸಬಲೀಕರಣ ಪ್ರಸ್ತುತವಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

    ಪದವಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಬೆನೆಡಿಕ್ಟ್ ಸಲ್ಡಾನ ಮಾತನಾಡಿ, ಮನೆ ಹಾಗೂ ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಮಾನಸಿಕವಾಗಿ ಸದೃಢರು ಎಂದರು.

    ಪದವಿ ಕಾಲೇಜು ಪ್ರಾಂಶುಪಾಲ ಡಾ.ಆನಂದ್ ಕಾರ್ಲ ಮಾತನಾಡಿ, ಭಾರತವು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದ್ದು, ತಾಯಿಗೆ ಪ್ರಾಧಾನ್ಯತೆ ನೀಡಲಾಗಿದೆ. ಸಂಸಾರವು ರಥದಂತೆ, ಗಂಡ ಮತ್ತು ಹೆಂಡತಿ ರಥದ ಚಕ್ರದಂತೆ ಇದ್ದು ಸಂಸಾರ ಸಾಗಿಸಲು ಎರಡು ಚಕ್ರಗಳು ಬೇಕು. ಸಂಸಾರದಲ್ಲಿ ಗಂಡ-ಹೆಂಡತಿ ಇಬ್ಬರೂ ಪ್ರಮುಖರಾಗಿದ್ದಾರೆ ಎಂದರು.

    ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts