More

    ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೇಗೆ, ಎತ್ತ…?

    ಅಮೆರಿಕದಲ್ಲಿ ಈಗ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. 2020ರಿಂದ ನಾಲ್ಕು ವರ್ಷ ಬಲಾಢ್ಯ ಅಮೆರಿಕದ ಶಕ್ತಿಕೇಂದ್ರದಲ್ಲಿ ಯಾರಿರುತ್ತಾರೆ ಎಂಬ ಕಾತರ ಆ ದೇಶದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಇದೆ. ಈ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತದೆ? ಇದರ ಸ್ವರೂಪ ಏನು- ಎತ್ತ ಎಂಬುದರ ಸ್ಥೂಲ ನೋಟ ಇಲ್ಲಿದೆ.

    ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕೂಡ ಭಾರತದ ರಾಷ್ಟ್ರಪತಿ ಚುನಾವಣೆಯಂತೆ ಪರೋಕ್ಷ ಆಯ್ಕೆ ಪ್ರಕ್ರಿಯೆ. ಆದರೆ, ಭಾರತದಷ್ಟು ಸರಳ ಅಲ್ಲ. ಹಲವು ಹಂತದಲ್ಲಿ ನಡೆಯುವ ಕ್ಲಿಷ್ಟ ಪ್ರಕ್ರಿಯೆ. ಪ್ರೖೆಮರಿ ಮತ್ತು ಕಾಕಸ್ ಚುನಾವಣೆಗಳು ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ವೇದಿಕೆಗಳು. ಪ್ರೖೆಮರಿ ಚುನಾವಣೆಯಲ್ಲಿ ಪ್ರಮುಖವಾಗಿ ಸಾರ್ವಜನಿಕರನ್ನು ‘ಓಪನ್ ಪ್ರೖೆಮರಿ’ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳನ್ನು ‘ಕ್ಲೋಸ್ ಪ್ರೖೆಮರಿ’ ಎಂದು ಗುರುತಿಸಲಾಗಿದೆ. ಇದರ ಹೊರತಾಗಿ ಇನ್ನೂ ಕೆಲವು ಪ್ರೖೆಮರಿಗಳ ವಿಂಗಡಣೆ ಇದೆ. ಕಾಕಸ್ ಚುನಾವಣೆಯ ಮತದಾರರು ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಬೆಂಬಲಿಗರಾಗಿರುತ್ತಾರೆ.

    ವಿವಿಧ ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಅಮೆರಿಕ ವ್ಯಾಪ್ತಿಯ ಇನ್ನಿತರ ಪ್ರದೇಶಗಳಲ್ಲಿ ಪ್ರೖೆಮರಿ ಮತ್ತು ಕಾಕಸ್ ಚುನಾವಣೆ ನಡೆಯುತ್ತದೆ. ಈ ಹಂತದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ನಾಮನಿರ್ದೇಶನವಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದನ್ನು ಅಮೆರಿಕದ ಸಂವಿಧಾನ ವಿಶದ ಪಡಿಸಿಲ್ಲ. ಆದರೆ, ರಾಜಕೀಯ ಪಕ್ಷಗಳು ತಮ್ಮದೇ ನೀತಿ- ನಿಯಮದ ಪ್ರಕ್ರಿಯೆ ರೂಪಿಸಿಕೊಂಡಿವೆ. ಪ್ರೖೆಮರಿ ಚುನಾವಣೆಯನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ನಡೆಸುತ್ತವೆ. ಕಾಕಸ್ ಎಂಬುದು ರಾಜಕೀಯ ಪಕ್ಷಗಳೇ ನೇರವಾಗಿ ನಡೆಸುವ ಚುನಾವಣೆ. ಇವೆರಡೂ ಚುನಾವಣೆಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಗುಂಪನ್ನು ಆಯ್ಕೆ ಮಾಡಲಾಗುತ್ತದೆ.

    ಕೆಲವು ರಾಜ್ಯಗಳಲ್ಲಿ ಪ್ರೖೆಮರಿ ಚುನಾವಣೆ ನಡೆದರೆ ಇನ್ನು ಕೆಲವು ರಾಜ್ಯಗಳಲ್ಲಿ ಕಾಕಸ್ ಮಾತ್ರ ಜರುಗುತ್ತದೆ. ಮತ್ತೆ ಕೆಲವು ರಾಜ್ಯಗಳು ಈ ಎರಡೂ ಹಂತವನ್ನು ಅಳವಡಿಸಿಕೊಂಡಿವೆ. ಈ ಪ್ರಕ್ರಿಯೆ ಒಂದೇ ಕಾಲದಲ್ಲಿ ನಡೆಯುವುದಿಲ್ಲ. ಅಂದರೆ ಅಧ್ಯಕ್ಷೀಯ ಚುನಾವಣೆ ನಡೆಯುವ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಶುರುವಾಗಿ ಜೂನ್ ಮಧ್ಯಭಾಗದ ಹೊತ್ತಿಗೆ ಮುಗಿಯುತ್ತದೆ. ಈ ಚುನಾವಣೆಯ ದಿನಾಂಕವನ್ನು ಆಯಾ ರಾಜ್ಯಗಳ ಶಾಸನಸಭೆಗಳು ನಿಗದಿ ಮಾಡುತ್ತವೆ. ಈ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಭಾವ್ಯರು ಯಾರು ಎಂಬ ಸ್ಥೂಲ ಚಿತ್ರಣ ದೊರೆಯುತ್ತದೆ.

    ನ್ಯಾಷನಲ್ ಕನ್ವೆನ್ಷನ್: ಮುಂದಿನ ಹಂತ ‘ನ್ಯಾಷನಲ್ ಕನ್ವೆನ್ಷನ್’. ಅಂದರೆ ಪ್ರೖೆಮರಿ ಹಾಗೂ ಕಾಕಸ್ ಮೂಲಕ ನಾಮನಿರ್ದೇಶಿತರಾದ ಹಲವು ಆಕಾಂಕ್ಷಿಗಳ ಪೈಕಿ ಓರ್ವ ಸಮರ್ಥರನ್ನು ರಾಜಕೀಯ ಪಕ್ಷಗಳು ಅಖೈರು ಮಾಡುವ ಪ್ರಕ್ರಿಯೆ. ಈ ಹಂತದಲ್ಲಿ ಆಕಾಂಕ್ಷಿಗಳ ಸಾಮರ್ಥ್ಯ, ಪಕ್ಷನಿಷ್ಠೆ, ತತ್ತ್ವ-ಸಿದ್ಧಾಂತದ ಬಗ್ಗೆ ಇರುವ ಬದ್ಧತೆ, ಪಕ್ಷದ ಕಾರ್ಯಕ್ರಮಗಳಲ್ಲಿ ಎಷ್ಟರ ಮಟ್ಟಿಗೆ ಸಕ್ರಿಯರಾಗಿದ್ದಾರೆ ಎಂಬುದನ್ನು ಒರೆಗೆ ಹಚ್ಚಿ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಪಕ್ಷಗಳ ‘ಡೆಲಿಗೇಟ್ಸ್’ (ಪಕ್ಷಗಳ ಗಣ್ಯರು ಅಥವಾ ಪದಾಧಿಕಾರಿಗಳು) ಎಂಬ ಗುಂಪು ನಡೆಸುತ್ತದೆ. ಇದರಲ್ಲಿ ಎರಡು ವಿಧವಿದೆ. ‘ಪ್ಲೆಡ್ಜ್ಡ್​​​  ಮತ್ತು ‘ಅನ್​ಪ್ಲೆಡ್ಜ್ಡ್, ಡೆಲಿಗೇಟ್ಸ್ ಎಂದರೆ ಪ್ರೖೆಮರಿ ಮತ್ತು ಕಾಕಸ್ ಮೂಲಕ ಆಯ್ಕೆಯಾದವರ ಗುಂಪು, ‘ಅನ್​ಪ್ಲೆಡ್ಜ್ಡ್ ಡೆಲಿಗೇಟ್ಸ್ ಎಂದರೆ ಸ್ವಯಂಪ್ರೇರಿತವಾಗಿ ಸಂಭಾವ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಗುಂಪು. ರಿಪಬ್ಲಿಕನ್ ಪಕ್ಷದಲ್ಲಿ ‘ಅನ್​ಪ್ಲೆಡ್ಜ್  ಡೆಲಿಗೇಟ್ಸ್’ಗಳ ಸಂಖ್ಯೆ ಪ್ರತಿ ರಾಜ್ಯಕ್ಕೆ ಮೂರು ಇರುತ್ತದೆ. ಡೆಮಾಕ್ರಟಿಕ್ ಪಕ್ಷದಲ್ಲಿ ಹಿರಿಯ ನಾಯಕರು ಮತ್ತು ಸ್ಥಳೀಯ ಘಟಕಗಳಿಂದ ಆಯ್ಕೆಯಾದ ಪದಾಧಿಕಾರಿಗಳು ಇರುತ್ತಾರೆ. ಇವರನ್ನು ‘ಸೂಪರ್ ಡೆಲಿಗೇಟ್ಸ್’ ಎಂದೂ ಕರೆಯುತ್ತಾರೆ. ಪ್ರಮುಖ ಎರಡು ಪಕ್ಷಗಳ ಹೊರತಾಗಿ ಕೆಲವು ಸಣ್ಣಪುಟ್ಟ ಪಕ್ಷಗಳು ತಮ್ಮ ಸಂಭಾವ್ಯರನ್ನು ಈ ರೀತಿಯ ಪ್ರಕ್ರಿಯೆ ಮೂಲಕ ಆಯ್ಕೆ ಮಾಡುತ್ತವೆ. ಈ ಹಂತದಲ್ಲಿ ಏಕ ಅಭ್ಯರ್ಥಿ ಬಗ್ಗೆ ಒಮ್ಮತ ಮೂಡದಿದ್ದರೆ ಮತ್ತೆ ಮತ್ತೆ ಪ್ರಕ್ರಿಯೆ ನಡೆದು ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಪ್ರಕ್ರಿಯೆ ಅಧ್ಯಕ್ಷೀಯ ಚುನಾವಣೆ ದಿನಾಂಕಕ್ಕಿಂತ 90 ದಿನ ಮೊದಲು ಪೂರ್ಣಗೊಂಡಿರಬೇಕು.ಈ ರೀತಿ ಆಯ್ಕೆಯಾದ ಅಭ್ಯರ್ಥಿಗಳು ನವೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣಾ ವೆಚ್ಚಕ್ಕೆ ದೇಣಿಗೆ ಸಂಗ್ರಹಿಸಲು ಆರಂಭಿಸುತ್ತಾರೆ. ಪ್ರತಿ ರಾಜ್ಯದಲ್ಲೂ ಪ್ರಚಾರ ಮಾಡಿ ಚಂದಾ ಸಂಗ್ರಹಿಸುತ್ತಾರೆ. ಇವರ ಪರವಾಗಿ ‘ಸೂಪರ್​ಪ್ಯಾಕ್’ಗಳೆಂಬ ದೇಣಿಗೆ ಸಂಗ್ರಹದ ಗುಂಪುಗಳು ಇರುತ್ತವೆ. ಇದರ ಹೊರತಾಗಿ ವೈಯಕ್ತಿಕವಾಗಿಯೂ ದೇಣಿಗೆ ಸಂಗ್ರಹ ನಡೆಯುತ್ತದೆ. ಅಧ್ಯಕ್ಷೀಯ ಅಭ್ಯರ್ಥಿಗಳ ಮಧ್ಯೆ ಚರ್ಚೆ ನಡೆಯುತ್ತವೆ.

    ಸಂವಿಧಾನ ಏನು ಹೇಳುತ್ತದೆ?
    • ಅಮೆರಿಕದ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷ.
    • ಒಬ್ಬ ವ್ಯಕ್ತಿ ಗರಿಷ್ಠ ಎರಡು ಸಾರಿ ಮಾತ್ರ ಅಧ್ಯಕ್ಷರಾಗಬಹುದು.
    • ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವ ವ್ಯಕ್ತಿ ಅಮೆರಿಕದಲ್ಲೇ ಜನಿಸಿರಬೇಕು ಮತ್ತು ಕನಿಷ್ಠ 14 ವರ್ಷ ಅಮೆರಿಕದಲ್ಲಿ ವಾಸವಾಗಿರಬೇಕು.
    • ಕನಿಷ್ಠ 35 ವಯೋಮಿತಿ
    • ಅಭ್ಯರ್ಥಿಯು ಪ್ರಚಾರಕ್ಕೆ 5 ಸಾವಿರ ಡಾಲರ್​ಗಿಂತ ಹೆಚ್ಚು ವೆಚ್ಚ ಅಥವಾ ನಿಧಿ ಸಂಗ್ರಹಿಸಿದರೆ ಅದನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಬೇಕು.
    • ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭ ಜನವರಿ 20ಕ್ಕೆ ನಡೆಯುತ್ತದೆ. ಇದು 1937ರಿಂದಲೂ ರೂಢಿಯಲ್ಲಿದೆ.
    • ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧೆಗೆ 35 ವರ್ಷ. ಕನಿಷ್ಠ 14 ವರ್ಷ ಅಮೆರಿಕದಲ್ಲಿ ವಾಸವಾಗಿರಬೇಕು. ಅಧಿಕಾರಾವಧಿಗೆ ಮಿತಿಯಿಲ್ಲ.
    ಅಧ್ಯಕ್ಷರ ಆಯ್ಕೆಯ ಅಂತಿಮ ಹಂತ

    ಅಧ್ಯಕ್ಷೀಯ ಚುನಾವಣೆಯ ಮತದಾರರ ಸಮೂಹವನ್ನು ‘ಎಲೆಕ್ಟೋರಲ್ ಕಾಲೇಜ್’ ಎಂದು ಕರೆಯಲಾಗುತ್ತದೆ. ಈ ರೀತಿಯ 538 ‘ಎಲೆಕ್ಟೋರಲ್ ಕಾಲೇಜ್’ಗಳು ಅಮೆರಿಕದ 50 ರಾಜ್ಯಗಳಲ್ಲಿ ಹಂಚಿಹೋಗಿವೆ. ಹೀಗೆ ‘ಎಲೆಕ್ಟೋರಲ್ ಕಾಲೇಜ್’ಗೆ ಆಯ್ಕೆಯಾಗುವರ ಅರ್ಹತೆ ಬಗ್ಗೆ ಅಮೆರಿಕ ಸಂವಿಧಾನ ವಿವರವಾಗಿಯೇನೂ ಹೇಳಿಲ್ಲ. 1789ರಿಂದ ಇದೇ ಪದ್ಧತಿಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಸೆನೆಟರ್ ಅಥವಾ ಹೌಸ್ ಆಫ್ ರೆಪ್ರಸಂಟಟಿವ್ ಸದಸ್ಯರು, ಅಮೆರಿಕದಲ್ಲಿ ಲಾಭದಾಯಕ ಹುದ್ದೆ ಹೊಂದಿರುವವರು ಈ ಹುದ್ದೆಗೆ ಆಯ್ಕೆಯಾಗುವಂತಿಲ್ಲ ಎಂದು ಸಂವಿಧಾನದ ಅನುಚ್ಛೇದ 2, ಸೆಕ್ಷನ್ 1, ಉಪಬಂಧ 2 ಸ್ಪಷ್ಟಪಡಿಸುತ್ತದೆ. ವಿಶೇಷ ಎಂದರೆ, ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಮಾತ್ರ ಇವರ ಪಾತ್ರ ಸೀಮಿತ. ಉಳಿದಂತೆ ಶಾಸನಸಭೆಯಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ. ಇಂಥ 538ರ ಪೈಕಿ ಕನಿಷ್ಠ 270 ‘ಎಲೆಕ್ಟೋರಲ್ ಕಾಲೇಜ್’ಗಳ ಬೆಂಬಲ ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ. ಕೆಲವು ರಾಜ್ಯಗಳು ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಪಕ್ಷದ ಪರ ಇದ್ದರೆ, ಇನ್ನೂ ಕೆಲವು ಡೆಮಾಕ್ರಟಿಕ್ ಪಕ್ಷದ ಕಟ್ಟಾ ಮತಬ್ಯಾಂಕ್ ಆಗಿವೆ. ಈ ‘ಎಲೆಕ್ಟೋರಲ್ ಕಾಲೇಜ್’ಗಳ ರಾಜ್ಯವಾರು ಹಂಚಿಕೆಯು ಸಂಸತ್​ನಲ್ಲಿ ರಾಜ್ಯಗಳು ಹೊಂದಿರುವ ಕ್ಷೇತ್ರದ ಸಂಖ್ಯೆಗೆ ಅನುಗುಣವಾಗಿರುತ್ತದೆ. ಈ ಸಂಸದೀಯ ಕ್ಷೇತ್ರಗಳನ್ನು ಜನಸಂಖ್ಯೆ ಮತ್ತು ಉತ್ತರ ಹಾಗೂ ದಕ್ಷಿಣ ಅಮೆರಿಕದಲ್ಲಿನ ಜನಾಂಗೀಯ ಸಮತೋಲನವನ್ನು ಕಾಯ್ದಕೊಳ್ಳುವ ರೀತಿ ಗುರುತಿಸಲಾಗಿದೆ. ‘ಎಲೆಕ್ಟೋರಲ್ ಕಾಲೇಜ್’ಗಳ ಮತ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಸಮವಾಗಿ ದಾಖಲಾದರೆ ಹೌಸ್ ಆಫ್ ರೆಪ್ರಸೆಂಟಟೀವ್ಸ್ (ಸಂಸತ್​ನ ಕೆಳಮನೆ) ಟೈ ಬ್ರೇಕರ್ ಮತದಾನ ಮಾಡುತ್ತದೆ. ಇಂಥ ಸನ್ನಿವೇಶ 1800ನೇ ಇಸ್ವಿಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಡೆದಿತ್ತು. ಒಂದೇ ಮತಪತ್ರದಲ್ಲಿ ನಡೆಯುತ್ತಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯನ್ನು ಈ ಘಟನೆಯ ನಂತರ ಅಂದರೆ 1804ರ ಚುನಾವಣೆಯಲ್ಲಿ ಪ್ರತ್ಯೇಕಗೊಳಿಸಲಾಯಿತು.

    1. ಜನರಿಂದ ನೇರವಾಗಿ ಅಧ್ಯಕ್ಷ್ಷ ಆಯ್ಕೆ ನಡೆಯುವುದಿಲ್ಲ. ಜನರು ತಂತಮ್ಮ ರಾಜ್ಯದಲ್ಲಿ ‘ಎಲೆಕ್ಟೋರಲ್ ಕಾಲೇಜ್’ ಸದಸ್ಯ ರನ್ನು ಆಯ್ಕೆ ಮಾಡುತ್ತಾರೆ. ಇವರು ಅಧ್ಯಕ್ಷರನ್ನು ಆರಿಸುತ್ತಾರೆ.
    2. ಈ ಸಾರಿ ಕರೊನಾದಿಂದ ಪ್ರೖೆಮರಿ, ಕಾಕಸ್ ಚುನಾವಣೆ ವಿಳಂಬ. ಪಕ್ಷಗಳ ರಾಷ್ಟ್ರೀಯ ಸಮಾವೇಶ ಮುಗಿದದ್ದು ಆಗಸ್ಟ್ 11 ರಂದು.
    3. ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೊದಲ ವಾರದಲ್ಲಿ ನಡೆಯುತ್ತದೆ. ಈ ಸಾರಿ ನ. 3ನೇ ತಾರೀಖು ಮತದಾನ ಇದೆ. ನವೆಂಬರ್ 4ಕ್ಕೆ ಮತ ಎಣಿಕೆ.
    4. ಡಿಸೆಂಬರ್ 2ನೇ ವಾರದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಖಚಿತ ಪಡಿಸುವಿಕೆ ನಡೆಯುತ್ತದೆ. ಅಂದರೆ, ಅಭ್ಯರ್ಥಿಗಳಿಗೆ ರಾಜ್ಯವಾರು ದೊರಕಿರುವ ಮತವನ್ನು ಪ್ರಮಾಣೀಕರಿಸಲಾಗುತ್ತದೆ. ಇದನ್ನು ರಾಜ್ಯಗಳ ಗವರ್ನರ್ ದೃಢೀಕರಿಸುತ್ತಾರೆ. ಈ ಸಾರಿ ಡಿಸೆಂಬರ್ 14ಕ್ಕೆ ಈ ಪ್ರಕ್ರಿಯೆ ನಡೆಯುತ್ತದೆ.
    5. ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಉಪಾಧ್ಯಕ್ಷ ಹುದ್ದೆಗೂ ಚುನಾವಣೆ ನಡೆಯುತ್ತದೆ. ಎರಡೂ ಸ್ಥಾನಗಳಿಗೆ ಬೇರೆ ಬೇರೆ ಪತ್ರ ಇರುತ್ತದೆ. ಆದರೆ, ಮತದಾನ ಏಕಕಾಲದಲ್ಲಿ ನಡೆಯುತ್ತದೆ.
    6. ನಾಲ್ಕು ವರ್ಷದ ಹಿಂದೆ ಟ್ರಂಪ್ 304 ‘ಎಲೆಕ್ಟೋರಲ್ ಕಾಲೇಜ್’ಗಳ ಬೆಂಬಲ ಪಡೆಯುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್​ರನ್ನು (227 ಮತ) ದೊಡ್ಡ ಅಂತರದಿಂದ ಪರಾಭವಗೊಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts