More

    ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನರ…?

    ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನರ...?ಮೊನ್ನೆ ಮೇ ತಿಂಗಳದಾಗ ಒಂದ ದಿವಸ ಮುಂಜ ಮುಂಜಾನೆ ಎಸ್​ಎಂಎಸ್ ಬಂತ. ಇತ್ತೀಚೆಗೆ ವಾಟ್ಸ್​ಆಪ್ ಬಂದಮ್ಯಾಲೆ ಎಸ್​ಎಂಎಸ್ ಬರೋದ ಕಡಮಿ ಆಗ್ಯಾವ. ಹಂಗೇನರ ಎಸ್​ಎಂಎಸ್ ಬಂದರ ಅದ ಎಮರ್ಜೆನ್ಸಿ ಅಂತ ಗ್ಯಾರಂಟೀ ಇರ್ತದ. ಹಿಂಗಾಗಿ ಯಾರದ ಅಂತ ನೋಡಿದರ ಅದ ಎಲ್​ಐಸಿ ಮೆಸೆಜ್ ಇತ್ತ. ಏ ಇದ ಪ್ರಿಮಿಯಮ್ ರಿಮೈಂಡರ್ ಇರಬೇಕ, ಮೊದ್ಲ ಲಾಕ್​ಡೌನ್ ಆಗಿ ಕೆಲಸ ಇಲ್ಲಾ, ಪಗಾರ ಇಲ್ಲಾ. ಇನ್ನ ಹಂತಾದರಾಗ ಪಾಲಿಸಿ ಡ್ಯೂ ಆಗ್ತಾವ ಅಂತ ತಲಿ ಕೆಟ್ಟ ಮೆಸೆಜ್ ಓದಿದರ, ‘ನಿಮ್ಮ ಸೊ-ಸೊ ನಂಬರ್ ಪಾಲಿಸಿ ಹಿಂತಾ ತಾರೀಖಿಗೆ ಮ್ಯಾಚುರ್ ಆಗ್ತದ. ನಮ್ಮ ದಾಖಲೆ ಪ್ರಕಾರ ಇದ ನಿಮ್ಮ ಬ್ಯಾಂಕ್ ಅಕೌಂಟ್. ಹಂಗೇನರ ಚೇಂಜ್ ಇದ್ದರ ತಿಳಸರಿ’ ಅಂತ ಇತ್ತ. ನನ್ನ ಎದಿ ಧಸಕ್ಕ ಅಂತ. ಹಂಗ ಖರೇ ಹೇಳ್ಬೇಕಂದರ ಇಪ್ಪತೆôದ ಸಾವಿರದ್ದ ಪಾಲಿಸಿ ಮ್ಯಾಚುರ್ ಆಗಿ ರೊಕ್ಕ ಬರತದಲಪಾ ಅದು ಅಗದಿ ಆಪದ್ಭಾಂಧವನಗತೆ ಲಾಕ್​ಡೌನ್ ಟೈಮ್ ಒಳಗ ಅಂತ ಖುಶಿ ಆಗ್ಬೇಕಿತ್ತ ಆದರ ಹಂಗ ಆಗಲಿಲ್ಲಾ. ಉಲ್ಟಾ ನಂಗ ನನ್ನ ಫಸ್ಟ್ ಪಾಲಿಸಿ ಮ್ಯಾಚುರ್ ಆಗೋ ಅಷ್ಟ ವಯಸ್ಸ ಆತಲಾ ಅಂತ ದುಃಖ ಆತ.

    ನನ್ನ ಹೆಂಡ್ತಿಗೆ ಕರದ, ‘ನೋಡಿಲ್ಲೇ ನನ್ನ ಒಂದನೇ ಪಾಲಿಸಿ ಮ್ಯಾಚುರ್ ಆತ’ ಅಂತ ಅಗದಿ excite & sad ಆಗಿ ಹೇಳಿದರ ಅಕಿ, ‘ನೋಡ್ರಿ, ತಿರಗಿ ನಿಮ್ಮ ಪಾಲಿಸಿ ಮ್ಯಾಚುರ್ ಆದ್ರೂ ನೀವೇನ್ ಮ್ಯಾಚುರ್ ಆಗಲಿಲ್ಲಾ’ ಅಂತ ಟಾಂಟ್ ಹೊಡದ್ಲು. ‘ಲೇ..ಹುಚ್ಚಿ ನನ್ನ ಮ್ಯಾಚುರಿಟಿ ನಿಂಗೇನ್ ತಿಳಿತದ ತೊಗೊ. ನೀ ಅದನ್ನ ತಿಳ್ಕೊಳೊ ಅಷ್ಟ ಮ್ಯಾಚುರ್ ಇಲ್ಲಾ. ನಾ ಹೇಳಲಿಕತ್ತಿದ್ದ ನಂಗ ಪಾಲಿಸಿ ಮ್ಯಾಚುರ್ ಆಗೊ ಅಷ್ಟ ವಯಸ್ಸಾತು’ ಅಂತ ನಾ ಅಂದರ, ‘ಅಯ್ಯ..ಮತ್ತ ಬರಬರತ ವಯಸ್ಸ ಹೋಗಲಾರದ ಏನ ಬರ್ತಾವೇನ. ನೀವು ಟಿ.ವಿ. ಮುಂದ ಬಾಯಿ ತಕ್ಕೊಂಡ ಇನ್ನೂ ಸನಿ ಲಿಯೊನ್, ಜ್ಯಾಕಲಿನ್ ಫರ್ನಾಂಡೀಸ್ ನೋಡ್ಕೊತ ಕೂತರ ವಯಸ್ಸೇನ ನಿಂತಿರ್ತದ ಅಂತ ತಿಳ್ಕೊಂಡಿರೇನ’ ಅಂತ ನಂಗ ಜೋರ ಮಾಡಿದ್ಲು. ಏ ಹೋಗ್ಲಿ ಬಿಡ ಇನ್ನ ಮತ್ತ ನಾ ಏನರ ಅನ್ನೋದು ಅಕಿ ಅದಕ್ಕೊಂದ ಏನರ ಅನ್ನೋದ, ಎಲ್ಲಿದ..ಅದರಾಗ ಲಾಕ್​ಡೌನ್ ಆಗಿ ಮನ್ಯಾಗ ಬ್ಯಾರೆ ಇದ್ದೇನಿ, ಎಲ್ಲೆ ಇದ್ದ ಒಂದ ಹೆಂಡ್ತಿನ ವಿರೋಧ ಕಟ್ಗೋಳೊದ ಅಂತ ಸುಮ್ಮನಾದೆ.

    ಆದರೂ ಏನ ಅನ್ನರಿ ಹಿಂಗ ನನ್ನ ಒಂದನೇ ಪಾಲಿಸಿ ಮ್ಯಾಚುರ್ ಆತಲಾ ಅಂತ ಇಡಿ ದಿವಸ ಹ್ಯಾಂಗ್​ಒವರ್ ಇತ್ತ. ಒಂದ ಕಡೆ ಇಪ್ಪತ್ತೈದು ಸಾವಿರ ಪಾಲಿಸಿಗೆ ಒಂದ ಅರವತ್ತ ಸಾವಿರ ಬರ್ತದ ಅಂತ ಖುಶಿ ಆದರ ಅತ್ತಲಾಗ ನನ್ನ ಕರಿಯರ್ ಶುರು ಆಗಿ ಇಪ್ಪತ್ತೈದು ವರ್ಷ ಆತಲಾ, ನಂಗ ಅಷ್ಟ ವಯಸ್ಸ ಆತಲಾ ಅಂತ ಮಾನಸಿಕನೂ ಆದೆ ಅನ್ನರಿ.

    ಹಂಗ ನಾ 1995 ಮಾರ್ಚ್ ಒಳಗ ಕೆ.ಇ.ಸಿ. ನೌಕರಿಗೆ ಹೊಂಟ ಎರಡ ತಿಂಗಳಕ್ಕ ನಮ್ಮ ಕೆ.ಇ.ಸಿ ದೋಸ್ತ್ ಕುಂಬಾರ ಮನಿಗೆ ಬಂದ ನಾ ಒಲ್ಲೇ ಅಂದರು ನಮ್ಮವ್ವಗ ಗಂಟ ಬಿದ್ದ ಬಿದ್ದ ‘ಮಗಗ ದೊಡ್ಡ ನೌಕರಿ ಸಿಕ್ಕದ, ಇನ್ನೂ ಸಣ್ಣ ಹುಡುಗ ಇದ್ದಾನ. ಹಿಂಗ ರೊಕ್ಕ ಜಾಸ್ತಿ ಬಂದರ ಅಡ್ಡದಾರಿ ಹಿಡಿತಾನ, ಒಂದ ಪಾಲಿಸಿ ಮಾಡಿಸಿ ಬಿಡ್ರಿ. ಮ್ಯಾಲೆ ಇನ್ನೂ ಲಗ್ನ ಆಗಿಲ್ಲಾ, ಹಿಂಗಾಗಿ ನೀವ ನಾಮಿನೀ ಆಗ್ತೀರಿ. ನಾಳೆ ಲಗ್ನ ಆತ ಅಂದರ ಅವ್ವನ್ನ ಮರತ ಬರೇ ಹೆಂಡ್ತಿನ್ನ ನಾಮೀನೀ ಮಾಡ್ತಾರ’ ಅಂತ ಕನ್ವಿನ್ಸ್ ಮಾಡಿ ಒಂದನೇ ಪಾಲಿಸಿ ಮಾಡಿಸಿದ್ದಾ. ಅದು ತಿಂಗಳಿಗೆ ನೂರಾ ಹತ್ತ ರೂಪಾಯಿದ್ದ. ಇದನ್ನೂ ಓದಿ: ಮುಂಬೈ ಸ್ಫೋಟಕ್ಕೆ 12 ವರ್ಷ- ಪಾಕ್​ಗೆ ಭಾರತ, ಅಮೆರಿಕದಿಂದ ಸವಾಲು-ಪೇಚಲ್ಲಿ ಇಮ್ರಾನ್​

    ಹಂಗ ಅಂವಾ ನಮ್ಮ ಕಂಪನಿ ಒಳಗ ಮೇಲ್ ನರ್ಸ್ ಅಂತ ಇದ್ದಾ. ಅಂವಾ ಕಂಪನಿಗೆ ಯಾರ ಹೊಸ್ದಾಗಿ ಸೇರಿದ್ರೂ ಒಂದನೇ ತಿಂಗಳದ್ದ ಪಗಾರ ಆಗೋದ ತಡಾ ಎಲ್​ಐಸಿ ಮಾಡಸ ಅಂತ ಮನಿಗೆ ಬಂದ ಬಿಡ್ತಿದ್ದಾ. ಇನ್ನ ನಾವು ಕೆಇಸಿ ಹಂತಾ ದೊಡ್ಡ ಕಂಪನಿ ಒಳಗ ಜಾಬ್ ಸಿಕ್ಕದ್ದ ಖುಶಿ ಒಳಗ ಇರ್ತಿದ್ವಿ, ಪರ್ಸನಲ್ ಡಿಪಾರ್ಟ್​ವೆುಂಟ್ ಮನಷ್ಯಾನ ಬಂದ ಪಾಲಿಸಿ ಕೇಳಲಿಕತ್ತಾನ ಇಲ್ಲಾ ಅಂದರ ಹೆಂಗ ಅಂತ ಹೆದರಿ ಒಂದರ ಪಾಲಿಸಿ ಮಾಡಸ್ತಿದ್ವಿ ಅನ್ನರಿ. ಹಿಂಗ ನನ್ನ ಒಂದನೇ ಪಾಲಿಸಿ ಹುಟ್ಟತ..ಹುಟ್ಟಿ ತಿರಗಿ ಇಪ್ಪತ್ತೈದು ವರ್ಷ ಆಗಿ ಮ್ಯಾಚುರನೂ ಆತ ಅನ್ನರಿ.

    ಮುಂದ ಪಗಾರ ಜಾಸ್ತಿ ಆದಾಗೊಮ್ಮೆ ಹೊಸಾ ಪಾಲಿಸಿ ಕೇಳ್ತಿದ್ದಾ. ಅದರಾಗ ನಮ್ಮವ್ವ ‘ಕುಂಬಾರವರು ಪಾಲಿಸಿ ಕೇಳಿದರ ಇಲ್ಲಾ ಅನಬ್ಯಾಡಾ’ ಅಂತ “standing instruction’ ಕೊಟ್ಟಿದ್ಲು. ಅಲ್ಲಾ, ನಮ್ಮವ್ವಗ ನಾ ಲಗ್ನ ಆದ ಮ್ಯಾಲೆ ಬರೇ ಹೆಂಡ್ತಿಗೆ ನಾಮಿನೀ ಮಾಡ್ತೇನಿ ಅಂತ ಗ್ಯಾರಂಟಿ ಇತ್ತ ಕಾಣ್ತದ ಅದಕ್ಕ ಈಗ ಪಾಲಿಸಿ ಮಾಡಿಸಿದರ ತಾ ನಾಮಿನೀ ಆಗ್ತೇನಿ ಅಂತ ಅಕಿ ವಿಚಾರ ಇತ್ತ. ಹಂಗ ಪಾಪ ನಮ್ಮವ್ವಗ ನಾಮಿನೀ ಅಂದರ ಏನು, ಅದರ ಫಾಯದೇ ಏನೂ ಅಂತ ಒಂದ ಚೂರು ಗೊತ್ತ ಇರಲಿಲ್ಲ ಬಿಡ್ರಿ, ಒಟ್ಟ ಎಲ್​ಐಸಿ ಬಾಂಡ್ ಒಳಗ ಅಕಿ ಹೆಸರ ಟೈಪ್ಡ್ ಬರ್ತದ ಅಂತ ನಂಗ ಪಾಲಿಸಿ ಮಾಡಸ ಅಂತ ಗಂಟ ಬಿಳ್ತಿದ್ಲು. ಅದರಾಗ ನಮ್ಮ ದೋಸ್ತ್ ಕುಂಬಾರ ಏನ ಇದ್ದನಲಾ ಅಂವಾ ಅಗದಿ ದೇವರ ಹಂತಾ ಮನಷ್ಯಾ. ವರ್ಷಕ್ಕ ಜೀವಾ ತಿಂದ ಮೂರ ನಾಲ್ಕ ಪಾಲಿಸಿ ಕೇಳ್ತಿದ್ದಾ ಅನ್ನೋದ ಬಿಟ್ಟರ ಬ್ಯಾರೆ ನಮಗ ಏನ ಪ್ರಾಬ್ಲೇಮ್ ಇದ್ದರು ಅಗದಿ ಆಪದ್ಭಾಂಧವ ಇದ್ದಂಗ ಇದ್ದಾ. true friend in all sense. ಅಗದಿ ಮನಿ ಮಂದಿಕಿಂತಾ ಜಾಸ್ತಿ ಹಚಗೊಂಡ ಹೆಲ್ಪ್ ಮಾಡ್ತಿದ್ದಾ. ಯಾರಿಗೆ ಏನ ಕ್ರೖೆಸಿಸ್ ಬಂದ್ರೂ ಫಸ್ಟ್ ನೆನಪ ಆಗೋದ ಕುಂಬಾರಂದ.

    ಹಿಂಗ ಅಂವಾ ಮಂದಿಗೆ ಹಚಗೊಂಡಿದ್ದಾ ಅಂತ ವರ್ಷಾ ಕೋಟ್ಯಧೀಶ ಆಗ್ತಿದ್ದ. ಪಾಲಿಸಿ ಒಳಗ ಕೋಟ್ಯಧೀಶ ಆಗ್ತಿದ್ದನ ಮತ್ತ. ಅರ್ಧಕ್ಕಾ ಅರ್ಧಾ ಮಂದಿ ಅವನ ಸರ್ವೀಸ್ ನೋಡಿನ ಪಾಲಿಸಿ ಕೊಡ್ತಿದ್ದರು. ಆವಾಗ ಈಗಿನಗತೆ ಪ್ರೖೆವೇಟ್ ಇನ್ಸುರೇನ್ಸ್ ಇರಲಿಲ್ಲಾ. ಎಲ್​ಐಸಿ ಅಂದರ ನಮಗ not only insurance but also savings ಇದ್ದಂಗ ಇತ್ತ. ನಮ್ಮಂತಾ ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಎಲ್​ಐಸಿ ಬ್ಯಾಕ್ ಬೋನ್ ಇದ್ದಂಗ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.

    ನೋಡ್ರಿ ಅವತ್ತ ಅವನ ಕಾಟಕ್ಕ ಮಾಡಿಸಿದ್ದ ಪಾಲಿಸಿ ಇವತ್ತ ಹೆಂತಾ ಹೊತ್ತಿನಾಗ ಕೈಹಿಡಿತ ಅಂತೇನಿ. ಮುಂದ ನನ್ನ ಮದ್ವಿ ಆದಮ್ಯಾಲೆ ನನ್ನ ಹೆಂಡ್ತಿ ಪಾಲಿಸಿಗೆ ಗಂಟ ಬಿದ್ದಾ. ಎಷ್ಟ ಒಲ್ಲೇ ಅಂದರೂ, ‘ಲೇ…ಈ ಸರತೆ ನೀನ ನಾಮಿನೀ ಮಗನ’ ಅಂತ ನಂಗ ಆಶಾ ಹಚ್ಚಿ ಹಚ್ಚಿ ಪಾಲಿಸಿ ಮಾಡಸ್ತಿದ್ದಾ. ಹಂಗ ಖರೇ ಅಂದರ ಅವಂಗ ಯಾರ ನಾಮಿನೀ ಆದರೂ ಫರಕ್ ಬಿಳ್ತಿದ್ದಿಲ್ಲಾ, ಅವಂಗ ಒಂದ ಪಾಲಿಸಿ ಸಿಗ್ತಿತ್ತ ಇಷ್ಟ. ಇದನ್ನೂ ಓದಿ: ಗಿರ್​ಮಿಟ್​- ಮನೆ ‘ಕ್ವಾರೆಂಟೈನ’ಗೆ ಕೊಡುವುದಿದೆ…

    ಮೊನ್ನೆ ‘ನಂದ ಒಂದನೇ ಪಾಲಿಸಿ, ನೀ ನಾಮಿನೀ ಇದ್ದದ್ದ ಮ್ಯಾಚುರ್ ಆತ’ ಅಂತ ನಮ್ಮವ್ವಗ ಅಂದಾಗ ಅಕಿ ಫಸ್ಟ್ ನೆನಿಸಿದ್ದ ನಮ್ಮ ದೋಸ್ತ್ ಕುಂಬಾರನ್ನ. ಪಾಪ ಇವತ್ತ ಅಂವಾ ಇಲ್ಲಾ ಖರೆ ಆದರ ಅಗದಿ ಪ್ರಾತಃಸ್ಮರಣೀಯ ಮನಷ್ಯಾ ಬಿಡ್ರಿ.

    ಇನ್ನ ಯಾವಾಗ ನನ್ನ ಪಾಲಿಸಿ ಮ್ಯಾಚುರ್ ಆಗಿ ಅರವತ್ತ ಸಾವಿರ ಬಂತಲಾ ಆವಾಗ ನನ್ನ ಹೆಂಡ್ತಿಗೆ ತಡ್ಕೊಳಿಕ್ಕೆ ಆಗಲಿಲ್ಲಾ, ತನ್ನ ಪಾಲಿಸಿದು ನೆನಪಾಗಿ ಒಮ್ಮಿಂದೊಮ್ಮಿಲೇ, ‘ಅನ್ನಂಗ ನನ್ನ ಪಾಲಿಸಿ ಯಾವಾಗ ಮ್ಯಾಚುರ್ ಆಗ್ತದ ನೋಡ್ರಿ’ ಅಂತ ಕೇಳಿದ್ಲು. ನನಗ ಒಮ್ಮಿಕ್ಕಲೇ ಅಕಿ ನನ್ನ ಪಾಲಿಸಿ ಮ್ಯಾಚುರ್ ಆಗೇದ ಅಂದಾಗ, ‘ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನ ನೀವ ಯಾವಾಗ ಮ್ಯಾಚುರ್ ಆಗ್ತೀರಿ’ ಅಂದದ್ದ ನೆನಪಾತ ಅದಕ್ಕ ನಾ ಅಕಿಗೆ.. ‘ಏ ಹಲೋ ನಿನ್ನ ಪಾಲಿಸಿನೂ ನಿನ್ನಂಗ… ಅದ ಈ ಜನ್ಮದಾಗ ಮ್ಯಾಚುರ್ ಆಗಂಗಿಲ್ಲಾ ತೊಗೊ’ ಅಂತ ಅಂದ ಸೇಡ ತಿರಿಸ್ಕೊಂಡೆ. ಅಕಿ ಯಾಕ ಅಂತ ಕೇಳಿದ್ದಕ್ಕ ನಾ ‘ಲೇ ನಿನ್ನ ಪಾಲಿಸಿ ಎಲ್ಲಾ ಟಮ್ರ್ ಇನ್ಸುರೆನ್ಸ್ ಅವ ತೊಗೊ, ಅವ ಡೈರೆಕ್ಟ್ ನಾಮಿನೀಗೆ ಬರೋವ ಹೊರತು ಪಾಲಿಸಿ ಯಾರ ಹೆಸರಲೇ ಅದ ಅವರಿಗೇನ ಅಲ್ಲಾ’ ಅಂತ ಹೇಳಿ ಟಾಪಿಕ್ ಕ್ಲೋಸ್ ಮಾಡಿದೆ. ಇದನ್ನೂ ಓದಿ: ಗಿರ್​ಮಿಟ್​| ಒಗ್ಗರಣಿಗೆ ಸಾಸ್ವಿ ಜಾಸ್ತಿ ಹಾಕಿದರ ಆಡಿಟ್ ಆಬ್ಜೆಕ್ಶನ್ ಆಗ್ತದ

    ಹಂಗ ಇವತ್ತ ಎಲ್ಲಾ ಬಿಟ್ಟ ಎಲ್​ಐಸಿ ಬಗ್ಗೆ ಯಾಕ ವಿಷಯ ಬಂತಪಾ ಅಂದರ ಸೆಪ್ಟೆಂಬರ್ ಒಂದನೇ ತಾರೀಕಿಗೆ ಎಲ್​ಐಸಿ ಡೇ ಇತ್ತ. ಇನ್ನ ಹಿಂತಾ ಕರೊನಾ ಕಷ್ಟ ಕಾಲದಾಗ ಆಪದ್ಭಾಂಧವ ಆಗಿ ಅಗದಿ ರೈಟ್ ಟೈಮ್ ಒಳಗ ಪಾಲಿಸಿ ಮ್ಯಾಚುರ್ ಆಗಿದ್ದಕ್ಕ ಇಷ್ಟ ಬರಿಬೇಕಾತ.

    ಜೀವನದಾಗ ನಾವ ಮ್ಯಾಚುರ್ ಆಗಲಿ ಬಿಡಲಿ, ಪಾಲಿಸಿ ನಾವ ಇದ್ದಾಗ ಮ್ಯಾಚುರ್ ಆಗೋದ ಇಂಪಾರ್ಟೇಂಟ್… ಹೌದಲ್ಲ ಮತ್ತ?

    (ಲೇಖಕರು ಹಾಸ್ಯ ಬರಹಗಾರರು)

    ಗಣಪತಿ ನೋಡ್ಲಿಕ್ಕೆ ಹೋದಾಗ ಗೌರಿ ಕಳ್ಕೊಂಡ್ಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts