More

    ಗುಬ್ಬಿಯೇ ಬ್ರಹ್ಮಾಸ್ತ್ರ!; ಇಂದು ವಿಶ್ವ ಗುಬ್ಬಿ ದಿನ

    ಸುನೀಲ್ ಬಾರ್ಕೂರ್ (ಚಿತ್ರ: ರಾಜು ಹಿರೇಮಠ, ಹುಬ್ಬಳ್ಳಿ)

    ರೆನ್ ಡಿಂಗ್ ಶೆನ್ ಟಿಯಾನ್…

    ಚೀನಾದ ಸರ್ವಾಧಿಕಾರಿಯೊಬ್ಬ ತನ್ನ ನಾಗರಿಕರಿಗೆ ಹಿಂದೊಮ್ಮೆ ನೀಡಿದ್ದ ಕರೆ ಇದು. ಇಂದಿಗೂ ಈ ನುಡಿಗಟ್ಟನ್ನು ಕೇಳಿದರೆ ಚೀನಿಯರು ಹೌಹಾರುತ್ತಾರೆ. ನಿಸರ್ಗದ ವಿರುದ್ಧ ಮಾನವ ತನ್ನ ದರ್ಪ ತೋರ್ಪಡಿಸಿದಾಗಲೆಲ್ಲ ‘ಯಾರು ಯಾರ ಬಾಸ್’ ಎಂದು ನಿಸರ್ಗವೇ ತೋರಿಸಿಕೊಟ್ಟಿರುವ ಹಲವು ಉದಾಹರಣೆಗಳಿವೆ. ಅಂಥವುಗಳ ಪಟ್ಟಿಯಲ್ಲಿ ಮೊದಲನೆಯದಾಗಬಲ್ಲ ಪ್ರಸಂಗವಿದು. ಅಬಲ, ಅಶಕ್ತರ ಬಗ್ಗೆ ಹೇಳುವಾಗಲೆಲ್ಲ ನಾವು ಗುಬ್ಬಿಯನ್ನು ಉದಾಹರಿಸುವುದು ವಾಡಿಕೆ. ‘ಅಯ್ಯೋ ಗುಬ್ಬಿ ಮೇಲೆ ಯಾಕೆ ಬ್ರಹ್ಮಾಸ್ತ್ರ ಬಿಡ್ತೀರಿ’ ಎಂಬ ವಾಕ್ಯ ಅದರಿಂದಲೇ ಹುಟ್ಟಿದ್ದು. ಆದರೆ ಚೀನಾದ ಈ ಕಥಾನಕ ಅದಕ್ಕೆ ತದ್ವಿರುದ್ಧವಾದದ್ದು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೋಗಿ ತನ್ನ ಕೈಯನ್ನೇ ಸುಟ್ಟುಕೊಂಡವನ ಕಥೆ ಇದು.

    1949ರಿಂದ 1976ರವರೆಗೆ ಚೀನಾದ ಅಧ್ಯಕ್ಷನಾಗಿದ್ದ ಮಾವೋ ಝೆಡಾಂಗ್ ತನ್ನ ದೇಶದ ಕುಸಿಯುತ್ತಿದ್ದ ಆರ್ಥಿಕತೆಯನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳ್ಯಾವುವೂ ಫಲ ನೀಡದೆ 1958ರಲ್ಲಿ ‘ದಿ ಬಿಗ್ ಲೀಪ್ ಫಾರ್ವರ್ಡ್’ ಎಂಬ ಯೋಜನೆಗಳ ಸರಣಿಯನ್ನು ಘೊಷಿಸಿದ. ಚೀನಾದ ಮೂಲೆಮೂಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದು, ಅವುಗಳಲ್ಲಿ ಆದಷ್ಟೂ ಯಂತ್ರಗಳ ಬದಲಿಗೆ ಜನರನ್ನೇ ಬಳಸುವುದು, ಸಾಂಪ್ರದಾಯಿಕ ಕೃಷಿ ಪದ್ಧತಿ ಬಿಟ್ಟು ರಾಸಾಯನಿಕಯುಕ್ತ ಬೇಸಾಯ ಮಾಡಿ ಹೆಚ್ಚು ಬೆಳೆ ತೆಗೆಯುವುದು… ಮುಂತಾದವು ಅದರಲ್ಲಿದ್ದವು. ಯೋಜನೆಯ ಅನುಷ್ಠಾನದ ಸಮಯದಲ್ಲಿ ವಿವೇಚನೆ ಬಳಸದೆ ಇದ್ದುದರಿಂದ ಚೀನಾದ ಮೂಲೆಮೂಲೆಯಲ್ಲಿ ಕಾಡನ್ನು ಕಡಿದು ಉದ್ದಿಮೆಗಳನ್ನು ಸ್ಥಾಪಿಸಲಾಯಿತು. ಪರಿಸರ ತಜ್ಞರು ನೀಡಿದ ಎಚ್ಚರಿಕೆಯನ್ನು ಕೇಳುವ ಸ್ಥಿತಿಯಲ್ಲೂ ಆತ ಇರಲಿಲ್ಲ. ಅಷ್ಟೇ ಅಲ್ಲ, ತನ್ನ ನಿರ್ಧಾರಗಳನ್ನು ಪ್ರಶ್ನಿಸಿದ ಪರಿಸರವಾದಿಗಳನ್ನು ಜೈಲಿಗಟ್ಟಿದ! ಪರಿಸರದ ಹೆಸರನ್ನು ಕೇಳಿದರೇನೆ ಉರಿದುಬೀಳುತ್ತಿದ್ದ ಆತ ಚೀನೀಯರಿಗೆ ಆಗ ನೀಡಿದ ಕರೆಯೇ ‘ರೆನ್ ಡಿಂಗ್ ಶೆನ್ ಟಿಯಾನ್’. ಅಂದರೆ ‘ಮಾನವನು ನಿಸರ್ಗವನ್ನು ಆಕ್ರಮಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು’ ಎಂದರ್ಥ. ಆತನ ಆರ್ಭಟ ಅಷ್ಟಕ್ಕೇ ನಿಲ್ಲಲಿಲ್ಲ. ‘ಚೀನಾ ಇಟ್ಟ ಹೆಜ್ಜೆಯನ್ನು ನಿಸರ್ಗವೂ ತಡೆಯಲಾರದು; ನಾನು ಬೆಟ್ಟಗಳನ್ನು ಬಗ್ಗಿಸುತ್ತೇನೆ, ನದಿಗಳು ನನಗಾಗಿ ದಾರಿ ಬಿಡುವಂತೆ ಮಾಡುತ್ತೇನೆ’ ಎಂದೂ ಘೊಷಿಸಿದ!

    ಕೃಷಿ ಉತ್ಪನ್ನಗಳ ಪ್ರಮಾಣವನ್ನು ಶತಾಯಗತಾಯ ಹೆಚ್ಚಿಸಬೇಕೆಂದು ಹೆಣಗಾಡುತ್ತಿದ್ದ ಆತನಿಗೆ ಅವುಗಳ ಗಮನಾರ್ಹ ಪಾಲನ್ನು ಪ್ರಾಣಿಪಕ್ಷಿಗಳು ತಿಂದು ಹಾಕುತ್ತಿವೆ ಎಂಬ ವಿಷಯ ಗಮನಕ್ಕೆ ಬಂತು. ಆತ ಕೂಡಲೆ ನೊಣ, ಕೀಟ, ಹೆಗ್ಗಣ ಮತ್ತು ಗುಬ್ಬಿಗಳ ಮೇಲೆ ಯುದ್ಧ ಸಾರಿದ. ಅದರಲ್ಲೂ ವಿಶೇಷವಾಗಿ ಹೊಲದಲ್ಲಿ ಮತ್ತು ಗೋದಾಮುಗಳಲ್ಲಿ ದವಸಧಾನ್ಯಗಳನ್ನು ತಿನ್ನುತ್ತಿದ್ದ ಗುಬ್ಬಿಗಳ ಮೇಲೆ ಆತ ಕೆಂಗಣ್ಣು ಬೀರಿದ್ದ. ಈ ಗುಬ್ಬಿಗಳನ್ನು ಕಂಡಲ್ಲಿ ಸಾಯಿಸಬೇಕೆಂದೂ ಅವುಗಳ ಗೂಡುಗಳನ್ನು ಕಿತ್ತೆಸೆಯಬೇಕೆಂದೂ ಆದೇಶ ಹೊರಡಿಸಿದ. ಆತನ ‘ಗುಬ್ಬಿ ಹಟಾವೋ’ ಕಟ್ಟಾಜ್ಞೆ ಎಷ್ಟು ಕೆಟ್ಟದಾಗಿತ್ತೆಂದರೆ, ಹೊಲದಲ್ಲಿ ದೊಡ್ಡ ದೊಡ್ಡ ತಮಟೆ ಜಾಗಟೆಗಳನ್ನು ಬಾರಿಸುತ್ತ ಗುಬ್ಬಚ್ಚಿಗಳನ್ನು ಬೆದರಿಸಿ ಹಾರಿಸಿ ದಣಿಸಿ ಸಾಯಿಸಲಾಯಿತು! ಅವುಗಳ ಗೂಡುಗಳಿಗೆ ಬೆಂಕಿ ಇಟ್ಟು ಮರಿಗಳನ್ನು ಜೀವಂತ ಸುಡಲಾಯಿತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತುಹೋದವು. ಸರ್ಕಾರಿ ಬ್ರಹ್ಮಾಸ್ತ್ರಕ್ಕೆ ತತ್ತರಿಸಿದ ಈ ಪುಟ್ಟಹಕ್ಕಿಗಳ ಸಂತತಿ ಚೀನಾದಲ್ಲಿ ಸಂಪೂರ್ಣ ನಾಶವಾಯಿತು.

    ಈ ಅರ್ತಾಕ ನಿರ್ಧಾರದ ದುಷ್ಪರಿಣಾಮ ಕಾಣಿಸಲು ಬಹಳ ಸಮಯವೇನೂ ಹಿಡಿಯಲಿಲ್ಲ. ಗದ್ದೆಗಳಲ್ಲಿ ಓಡಾಡುತ್ತ ಕ್ರಿಮಿಕೀಟ, ಮಿಡತೆಗಳನ್ನು ತಿನ್ನುತ್ತ ಅವುಗಳ ನಿಯಂತ್ರಣದಲ್ಲಿ ಗುಬ್ಬಚ್ಚಿಗಳು ನೀಡುತ್ತಿದ್ದ ಕಾಣಿಕೆಯ ಬಗ್ಗೆ ಮಾವೋಗೆ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ಅಲ್ಲಿನ ಗದ್ದೆಗಳಿಗೆ ಮಿಡತೆಗಳು ಮತ್ತು ಕೀಟಗಳು ಯಾವ ಭಯವೂ ಇಲ್ಲದೆ ದಾಳಿ ಇಡತೊಡಗಿದವು. ಪರಿಣಾಮವಾಗಿ ಗದ್ದೆಗಳಲ್ಲಿ ಬೆಳೆದು ನಿಂತ ಪೈರು ಸರ್ವನಾಶವಾಗತೊಡಗಿತು.

    ಇದರ ಜತೆಗೆ, ಆಗಲೇ ನಡೆಯುತ್ತಿದ್ದ ಅರಣ್ಯನಾಶ, ಅವೈಜ್ಞಾನಿಕ ಕೃಷಿಪದ್ಧತಿ, ಅತಿಯಾದ ರಾಸಾಯನಿಕಗಳ ಬಳಕೆಯ ಪರಿಣಾಮ ಮಣ್ಣಿನ ಫಲವತ್ತತೆ ಕಳೆದು ನಾಡು ಬರಡಾಗತೊಡಗಿತು. ಕೃಷಿ ಉತ್ಪನ್ನಗಳ ಪ್ರಮಾಣ ಸಂಪೂರ್ಣ ನೆಲ ಕಚ್ಚಿ ಹೋಯಿತು. ಚೀನಾ ತನ್ನ ಇತಿಹಾಸದಲ್ಲೆಂದೂ ಕಾಣದ ಕೃತಕ ಬರಗಾಲವನ್ನು ಎದುರಿಸುವಂತಾಯಿತು. ಆಹಾರಕ್ಕೆ ಹಾಹಾಕಾರ ಉಂಟಾಯಿತು. ತಿನ್ನಲು ಏನೂ ಸಿಗದೆ ಜನರು ಬೀದಿಗಳಲ್ಲಿ ಹೊಡೆದಾಡಿಕೊಳ್ಳುವಂತಾಯಿತು. 1959ರಿಂದ 1962ರವರೆಗಿನ ಅವಧಿಯಲ್ಲಿ ಹೀಗೆ ಅಂತರ್ಯುದ್ಧದಲ್ಲಿ ಒಂದೂವರೆ ಕೋಟಿ ಜನ ಸತ್ತರಂತೆ! ಸರ್ಕಾರ ಅಧಿಕೃತವಾಗಿ ಹೇಳಿದ ಸಂಖ್ಯೆ ಅದು. ಆದರೆ ನಿಜವಾಗಿಯೂ ಸತ್ತವರ ಸಂಖ್ಯೆ ಇನ್ನೂ ಹೆಚ್ಚು. ಇದನ್ನು ಯಾನ್ ಜಿಶೆಂಗ್ ಎಂಬ ಲೇಖಕ ತನ್ನ ‘ಟಾಂಬ್ ಸ್ಟೋನ್’ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಆತನ ಪ್ರಕಾರ ಸತ್ತವರ ಸಂಖ್ಯೆ ಮೂರೂವರೆ ಕೋಟಿ! ನಂತರ ಆ ಪುಸ್ತಕವನ್ನು ಚೀನಾ ನಿಷೇಧಿಸಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಗುಬ್ಬಿ ಮೇಲೆ ಚಲಾಯಿಸಿದ ಬ್ರಹ್ಮಾಸ್ತ್ರ ತಿರುಗಿ ತನ್ನತ್ತಲೇ ಬರುತ್ತಿರುವುದನ್ನು ಮನಗಂಡ ಮಾವೋ, ತಕ್ಷಣವೇ ನಿಷೇಧವನ್ನು ಹಿಂಪಡೆದ. ಗುಬ್ಬಚ್ಚಿಗಳನ್ನು ಮತ್ತೆ ಚೀನಾಕ್ಕೆ ಕರೆತರುವ ಪ್ರಯತ್ನಕ್ಕೆ ಕೈಹಾಕಿದ. ಭಾರತ ಮತ್ತು ಇತರ ದೇಶಗಳಿಂದ ಅವುಗಳನ್ನು ತಂದು ಚೀನಾದಲ್ಲಿ ಬೆಳೆಸುವ ಪ್ರಯತ್ನ ನಡೆಯಿತು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ಗುಬ್ಬಚ್ಚಿ ಮತ್ತು ಕಾಡನ್ನು ಮಾತ್ರವಲ್ಲದೆ ಅಲ್ಲಿನ ಜನರ ಮನಸ್ಥಿತಿಯನ್ನೂ ಮಾವೋ ಹಾಳುಗೆಡವಿದ್ದ. ಪರಿಸರ ಸಮತೋಲನದ ನಿರ್ವಹಣೆಯಲ್ಲಿ ಅಂದು ಜಾರಿ ಬಿದ್ದ ಚೀನಾ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ಈಗಲೂ ಪದೇಪದೆ ಅಲ್ಲಿ ಹುಟ್ಟಿ್ಟೊಳ್ಳುವ ರೋಗರುಜಿನಗಳನ್ನು ಮಾವೋನ ವಿವೇಚನಾರಹಿತ ಕ್ರಮಗಳ ಜತೆಗೆ ಇಂದಿಗೂ ತಾಳೆ ಹಾಕಲಾಗುತ್ತದೆ. ಪರಿಸರದ ಮುಂದೆ ಮೆರೆದಾಡಲು ಹೋಗಿದ್ದ ಮಾನವನಿಗೆ ಆತ ಇರಬೇಕಾದ ಜಾಗವನ್ನು ಪ್ರಕೃತಿ ತೋರಿಸಿತ್ತು.

    ಮುಂದಿನ ಬಾರಿ ನಿಮ್ಮ ಮನೆಯಂಗಳದಲ್ಲಿ ಚಿಂವ್ ಚಿಂವ್ ಎಂದು ಕೂಗುತ್ತಿರುವ ಗುಬ್ಬಿಯನ್ನು ಬೆದರಿಸಿ ಓಡಿಸುವ ಮೊದಲು ಈ ನೈಜ ಕಥೆಯನ್ನೊಮ್ಮೆ ನೆನಪಿಸಿಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts