More

    ಮಾನವ ಇತಿಹಾಸದ ದಾರ್ಶನಿಕ ಪ್ರವಾದಿ: ಇಂದು ಶಂಕರ ಜಯಂತಿ

    ಅಧ್ಯಾತ್ಮದ ಶಕ್ತಿಯನ್ನು ಜನಸಾಮಾನ್ಯರಿಗೂ ಮನದಟ್ಟು ಮಾಡಿಸಿದ ಶ್ರೀಶಂಕರಾಚಾರ್ಯರು ಅಸಂಖ್ಯ ಜನರ ಆಂತರ್ಯದ ಅಂಧಕಾರವನ್ನು ಕಳೆದರು, ಧರ್ಮದ ಪ್ರಕಾಶ ಹರಡಿದರು. ತತ್ತ್ವಬೋಧನೆ, ಜ್ಞಾನಭಂಡಾರದಿಂದ ಸಾರ್ಥಕ ಜೀವನದ ಪರಿಯನ್ನು ಅನಾವರಣಗೊಳಿಸಿದರು. ನಿಜವಾದ ಅರಿವು ಬಿತ್ತಿ, ಭ್ರಮೆಗಳನ್ನು ತೊಲಗಿಸಿದರು. ಶಂಕರ ಜಯಂತಿ ಪ್ರಯುಕ್ತ ಅವರ ಅಮೋಘ ಬದುಕು, ನೀಡಿದ ಮೌಲ್ಯ, ಕೊಡುಗೆಗಳ ಕುರಿತಾದ ಅವಲೋಕನ ಇಲ್ಲಿದೆ. 

    ಮಾನವ ಇತಿಹಾಸದ ದಾರ್ಶನಿಕ ಪ್ರವಾದಿ: ಇಂದು ಶಂಕರ ಜಯಂತಿಸ್ವಾಮಿ ನಿರ್ಭಯಾನಂದ ಸರಸ್ವತೀ

    ಮನುಕುಲಕ್ಕೆ ಅತ್ಯುನ್ನತ ಜ್ಞಾನವನ್ನು ಹಂಚಿದ ಭಾರತ ‘ಧರ್ಮ’ ಎನ್ನುವ ಮೌಲ್ಯವನ್ನು ಕಂಡುಹಿಡಿದದ್ದು ಅದರ ಮೇರುಸಾಧನೆಗಳಲ್ಲೊಂದು. ಇದು ಇಂಗ್ಲಿಷಿನ Religion ಅಲ್ಲ. ಅದೊಂದು ಶಿಸ್ತು. ಅನಂತತೆಯನ್ನು, ಸರ್ವಶಕ್ತಿತ್ವವನ್ನು ಸಾಧಿಸುವ ತರಬೇತಿ. ಅದಕ್ಕೆ ಬೇಕಾದದ್ದು ಸತ್ಯಪ್ರಿಯತೆ; ಸತ್ಯದೆಡೆಗಿನ ನಿಷ್ಠೆ, ಸತ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗುವ ಗುಂಡಿಗೆ; ಭಾರತೀಯ ಸಂಹಿತೆಯಲ್ಲಿ ಧೀರ ಎಂದರೆ ಇದೇನೆ. ದೇಶಗಳನ್ನು ಗೆಲ್ಲುವುದು kindergarten ಬುದ್ಧಿ. ಭೋಗ-ಅಧಿಕಾರಗಳ ಪೊಳ್ಳುತನವನ್ನು ರಾಮ, ನಚಿಕೇತ, ಯಯಾತಿಗಳ ಮೂಲಕ ಹೇಳಿಸಿ ಅಲೆಗ್ಸಾಂಡರ್​ಗಳು, ಸೀಸರ್​ಗಳು, ಶಾರ್ಲ್​ವೆುನ್​ಗಳೂ ಕನ್ನಡಿ ಹುಡುಕುವಂತೆ ಮಾಡಿದೆ ಭಾರತ.

    ಏಕೆಂದರೆ ‘ಸತ್ಯಾನ್ವೇಷಣೆ’ ಒಂದರಿಂದಲೇ ವಿವೇಕಾನಂದರ ಪ್ರಕಾರ Power, purity, glory, goodness, everything that is excellent- ಇವೆಲ್ಲವೂ ಲಭ್ಯವಿರುವಾಗ ಒಂದೊಂದರ ಹಿಂದೆಯೂ ಹೋಗಿ ಕಾಲ, ಶಕ್ತಿ ವ್ಯರ್ಥಮಾಡುವುದರಲ್ಲಿ ಏನರ್ಥ ಇದೆ. ಆ ಸತ್ಯಾನ್ವೇಷಣೆಯ ಒಂದು ತುಣುಕು ಇಂದಿನ ವಿಜ್ಞಾನ.

    ಉಪನಿಷತ್ ಹೇಳುತ್ತದೆ: ‘ಎಲ್ಲೋ ಒಬ್ಬೊಬ್ಬರು ಇದರಲ್ಲಿ ಆಸಕ್ತಿ, ಬದ್ಧತೆಯನ್ನು ಉಳ್ಳವರಾಗಿರುತ್ತಾರೆ ಮತ್ತು ಕಟ್ಟುನಿಟ್ಟಾದ ತರಬೇತಿಯಿಂದ ಪರಿಸ್ಥಿತಿಯನ್ನು ಸುಧಾರಿಸಬಹುದು.’ ಆ ತರಬೇತಿಯೇ ಧರ್ಮ.

    ಸತ್ಯಾನ್ವೇಷಣೆ ಎಂಬ ಗುರಿ ಒಂದೇ ಆದರೂ, ಧರ್ಮ ಎನ್ನುವ ಶಿಸ್ತೇ ಇದಕ್ಕೆ ಉಪಕರಣವಾದರೂ ಭಿನ್ನ ರೀತಿಯ ಮನುಷ್ಯರ ವಿಭಿನ್ನ ಸಾಮರ್ಥ್ಯಗಳಿಂದಾಗಿ ಧರ್ಮವನ್ನು ಶ್ರೇಣೀಕೃತವಾಗಿಸಬೇಕಾದದ್ದು ಅನಿವಾರ್ಯವಾಯಿತು. ಈ ಸಂಕೀರ್ಣ ವ್ಯವಸ್ಥೆಯೇ ವೇದಗಳ ವಸ್ತು.

    ಚರಮಸತ್ಯವನ್ನು, ಅದರ ಅನ್ವೇಷಣೆಯ ಸ್ತರಗಳನ್ನು ಅರ್ಥಾತ್ ಧರ್ಮವನ್ನು ಶ್ರೇಣೀಕೃತ ವ್ಯವಸ್ಥೆಯಿಂದ ಬಿಡಿಸಿ ಅತ್ಯುನ್ನತ ತತ್ತ್ವವನ್ನ ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ಭಗವಾನ್ ಬುದ್ಧ ಒಂದು ವಿಶಿಷ್ಟಮಾರ್ಗವನ್ನವಲಂಬಿಸಿದ. ಉಪನಿಷತ್ ಚಿಂತನೆಗಳ ನೈತಿಕ ಆಯಾಮಗಳಿಗೆ ಹೆಚ್ಚು ಒತ್ತುಕೊಟ್ಟು ದಾರ್ಶನಿಕ, ತಾತ್ವಿಕ, ರ್ತಾಕ ನೆಲೆಗಟ್ಟುಗಳನ್ನು ಎರಡನೇ ಸ್ಥಾನಕ್ಕಿಳಿಸಿದ. ಈ ಪ್ರಕ್ರಿಯೆಯಲ್ಲಿ ಕೆಲ ಮುಖ್ಯ ತತ್ತ್ವಗಳ ಬಗ್ಗೆ ಮೌನವಾಗಿರಬೇಕಾದ್ದು ಅನಿವಾರ್ಯವಾಯ್ತು. ಈ ಮೌನಕ್ಕೆ ತೆತ್ತ ಬೆಲೆ ಬಹಳವಾಯ್ತು. ರಾಜಾಶ್ರಯ, ಸಂಖ್ಯಾಬಾಹುಳ್ಯಗಳು ಕೈವಶವಾದ ಮೇಲಂತೂ ಪ್ರಪಂಚದ ಮೊದಲ Imperialistic religious impulse ತನ್ನನ್ನು ಆವರಿಸಿಕೊಂಡಿದ್ದು ಅದಕ್ಕೆ ಗೊತ್ತೇ ಆಗಲಿಲ್ಲ. ಮೊಟ್ಟಮೊದಲ Proselytizing religion ಬೌದ್ಧ ಧರ್ಮವೇ. ಅಶೋಕನ ರಾಜಕೀಯ ಮಹತ್ವಾಕಾಂಕ್ಷೆ ಧಾರ್ವಿುಕ ಮಹತ್ವಾಕಾಂಕ್ಷೆಯಾಗಿ ಪರಿವರ್ತಿತವಾದದ್ದು ಇದಕ್ಕೆ ಇನ್ನಷ್ಟು ಇಂಬು ಕೊಟ್ಟಿತು. ಇದರ ಮೊದಲ ಬಲಿಯೇ ತನ್ನದೇ ಮಾತೃಧರ್ಮವಾದ ವೇದಧರ್ಮ. ಅಸಂಖ್ಯಾತ ಭಿಕ್ಷುಗಳು, ಜಾಗತಿಕ ವ್ಯಾಪ್ತಿ, ವಿಪುಲ ರಾಜಾಶ್ರಯಗಳಿಂದ ಮೆರೆಯುತ್ತಿದ್ದ ಈ ಸಾರ್ವಭೌಮ ಧರ್ಮಕ್ಕೆ ಎದ್ದಿದ್ದ ಒಂದೇ ಸವಾಲು ಎಂದರೆ ಆಂತರಿಕ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು, ಮೂಲ ತತ್ತ್ವವೇ ಚರ್ಚಾಸ್ಪದ ವಿಷಯವಾಗಿದ್ದು. ಈ ಸಂದರ್ಭವನ್ನು ಕುರಿತು ಸ್ವಾಮಿ ವಿವೇಕಾನಂದರು ಹೇಳುತ್ತಾರೆ-

    ‘ಬೌದ್ಧಧರ್ಮದ ಅವನತಿ ಸಮಯದಲ್ಲಿ ಇದ್ದ ಹೀನ ಆಚಾರ ವ್ಯವಹಾರಗಳ ವಿಷಯವನ್ನು ಕುರಿತು ಮಾತನಾಡುವುದಕ್ಕೆ ಇಚ್ಛೆಯಾಗಲಿ, ಸಮಯವಾಗಲಿ ಇಲ್ಲ. ಅತಿ ಕುತ್ಸಿತ ಅನುಷ್ಠಾನ ಪದ್ಧತಿ, ಭಯಾನಕ ಮತ್ತು ಅಶ್ಲೀಲ ಗ್ರಂಥಗಳು ಆ ಸಮಯದಲ್ಲಿ ಬಂದವು. ಮನುಷ್ಯ ಇದುವರೆಗೆ ಇಂತಹುದನ್ನು ಕಲ್ಪಿಸಿಕೊಂಡಿರಲಿಲ್ಲ. ಇಂತಹ ಭಯಾನಕ ಅನುಷ್ಠಾನ ಪದ್ಧತಿ ಧರ್ಮದ ಹೆಸರಿನಲ್ಲಿ ಪ್ರಚಲಿತವಾದದ್ದು ಬೌದ್ಧ ಧರ್ಮದ ಕೊಡುಗೆ.’

    ಆದರೆ ಭರತಖಂಡ ಬದುಕಬೇಕಾಗಿತ್ತು. ‘ಧರ್ಮಗ್ಲಾನಿಯಾದಾಗ ನಾನು ಬರುತ್ತೇನೆ’ ಎಂದ ಭಗವಂತನು ಈ ವೇಳೆ ದಕ್ಷಿಣದಲ್ಲಿ ಜನ್ಮಧಾರಣೆ ಮಾಡಿದನು. ಹದಿನಾರನೆಯ ವರುಷದ ಹೊತ್ತಿಗೆ ಗ್ರಂಥರಚನೆಯನ್ನೆಲ್ಲ ಪೂರೈಸಿದ್ದನು. ಇವರೇ ಅದ್ಭುತ ಶಂಕರಾಚಾರ್ಯರು. ಈ ಯುವಕ ಭರತಖಂಡವನ್ನು ಪ್ರಾಚೀನ ವಿಶುದ್ಧ ಮಾರ್ಗಕ್ಕೆ ತರಬೇಕೆಂದು ಸಂಕಲ್ಪ ಮಾಡಿದನು.

    ಮಾನವಕೋಟಿಯ ಭಯಾನಕ ಜನಾಂಗಗಳಾದ ಬಲೂಚಿ, ಟಾರ್ಟರ್ ಮುಂತಾದವರು ಭರತಖಂಡಕ್ಕೆ ತಮ್ಮ ದೇಶದ ಆಚಾರಗಳೊಂದಿಗೆ ಬಂದು ಬೌದ್ಧರಾಗಿ ನಮ್ಮೊಂದಿಗೆ ಬೆರೆತರು. ಪರಿಣಾಮವಾಗಿ ನಮ್ಮ ರಾಷ್ಟ್ರೀಯ ಜೀವನ ಪಾಶವಿಕ ಆಚಾರಗಳ ಕ್ಷೇತ್ರವಾಗಿ ಪರಿಣಮಿಸಿತು. ಶಂಕರರು ಬಂದು, ‘ಬೌದ್ಧ ಮತ್ತು ವೇದಾಂತ ಧರ್ಮಗಳಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ. ಆದರೆ ಬುದ್ಧನ ಶಿಷ್ಯರು ಗುರುವನ್ನು ಸರಿಯಾಗಿ ತಿಳಿದುಕೊಳ್ಳದೆ ಅವನತಿಗೆ ಇಳಿದು, ಆತ್ಮದ ಮತ್ತು ದೇವರ ಅಸ್ತಿತ್ವವನ್ನು ಅಲ್ಲಗಳೆದು ನಾಸ್ತಿಕರಾದರು’ ಎಂದು ತೋರಿಸಿದರು.

    ಹದಿನಾರು ವರ್ಷದ ಸಂನ್ಯಾಸಿ ಮಿಕ್ಕ ಅಷ್ಟೇ ವರ್ಷಗಳಲ್ಲಿ ಇಡೀ ಭಾರತವರ್ಷವನ್ನು ಧರ್ಮದ ರಾಜಮಾರ್ಗದಲ್ಲಿ ತಂದಿರಿಸಿದ. ಈ ವಿಷಯದಲ್ಲಿ ವಿವೇಕಾನಂದರು ಮಾತ್ರ ಶಂಕರರಿಗೆ ಸಾಟಿ. ಮೂಲೆಗುಂಪಾಗಿದ್ದ ವೇದಗಳು ಮತ್ತೊಮ್ಮೆ ಮೆರೆಯಬೇಕಾಗಿತ್ತು. ಇದಕ್ಕಾಗಿ ಶಂಕರರು ಆರಿಸಿಕೊಂಡಿದ್ದು ಉಪನಿಷತ್ ಭಾಷ್ಯವನ್ನು, ಕರ್ಮಕಾಂಡವನ್ನಲ್ಲ ಎನ್ನುವುದು ಗಮನೀಯ. ಈ ನಿಟ್ಟಿನಲ್ಲೇ ಬ್ರಹ್ಮಸೂತ್ರ ಭಾಷ್ಯ, ಪ್ರಕರಣ ಗ್ರಂಥಗಳು, ಸ್ತೋತ್ರ ಸಾಹಿತ್ಯ ಮತ್ತು ತತ್ತ ್ವ ರಾಶಿಯೇ ನಿರ್ವಣವಾದವು. ಭಾಷಾ ಪ್ರೌಢಿಮೆ ಮತ್ತು ತರ್ಕ, ವೇದಗಳ ಆಧಾರ, ವ್ಯಾಖ್ಯಾನ ಸಾಮರ್ಥ್ಯ, ಕೂದಲನ್ನೂ ಸೀಳುವ ವಿಶ್ಲೇಷಣಾಹರಿತ ಊಹೆಗೂ ನಿಲುಕದ ಎತ್ತರವನ್ನು ಮುಟ್ಟಿ ಇದೆಲ್ಲದರ ತತ್ತ ್ವವಾದ ಜೀವಾತ್ಮ, ಪರಮಾತ್ಮರ ಏಕತ್ವದ ಸಮರ್ಥನೆ ಪಾಶ್ಚಾತ್ಯ ಚಿಂತಕ ವಲಯವನ್ನು ನಿಬ್ಬೆರಗಾಗಿಸಿದೆ. ವಿಲ್​ಡ್ಯೂರಂಟ್, ಬರ್ಟ್ರೆಂಡ್​ ರಸೆಲ್, ಮ್ಯಾಕ್ಸ್ ಮುಲ್ಲರ್, ಪಾಲ್ ಡಾಯ್ಸನ್ ಮುಂತಾದ ಚಿಂತಕರಲ್ಲದೆ, ಐನ್​ಸ್ಟೀನ್​ರ ನಂತರದ ಇಡೀ ವಿಜ್ಞಾನಲೋಕವೇ ಅದ್ವೈತ ವೇದಾಂತ ಮತ್ತು ಮಾಯಾಸಿದ್ಧಾಂತಗಳ ಪ್ರತಿಧ್ವನಿತ ಪಲ್ಲವಿ ಎಂದು ಫ್ರಿಜೋಫ್ ಕ್ಯಾಪ್ರಾ, ಷ್ರೊಡಿಂಗರ್, ಓಪನೀಮರ್, ನೀಲ್​ಬೋರ್​ರ ಸಿದ್ಧಾಂತಗಳನ್ನು ಬಲ್ಲ ಯಾರೂ ಅರ್ಥೈಸಬಲ್ಲರು. ಕ್ವಾಂಟಾ ವಿಜ್ಞಾನಿ ಡೇವಿಡ್ ಬೋಮ್ ಅಯಮಾತ್ಮಾ ಬ್ರಹ್ಮದ ವ್ಯಾಖ್ಯಾನ ಮತ್ತು ಷ್ರೋಡಿಂಗರ್​ರ ‘There is no multiplicity of selves” ಎನ್ನುವ ವ್ಯಾಖ್ಯೆ ಇಲ್ಲಿ ಪ್ರಸ್ತುತ.

    ಇದೆಲ್ಲ ಸರಿ! ಶಂಕರರ ಸಾಮಾಜಿಕ ಕೊಡುಗೆ ಏನು? ಇದಕ್ಕೆ ಉತ್ತರಿಸುವುದಕ್ಕಿಂತ ಮುಂಚೆ ದುಃಸ್ಥಿತಿಯಿಂದ ಭಾರತವನ್ನು ಎತ್ತುವುದಕ್ಕೆ ವಿವೇಕಾನಂದರು ಯೋಚಿಸಿದ ಮಾರ್ಗ ಏನು ಎಂದು ತಿಳಿದರೆ ಶಂಕರರ ಮಾರ್ಗ ತಿಳಿದಂತೆಯೇ. ವಿವೇಕಾನಂದರು ಇದಕ್ಕೆ ಸೂಚಿಸಿದ ಪರಿಹಾರ ‘ಭಾರತೀಯರೇ ಉಪನಿಷತ್ ಚಿಂತನೆಗೆ ಮರಳಿ’ ಎಂದು. ಸರ್ವ ಸಮಸ್ಯೆಗಳಿಗೂ ಶಕ್ತಿಯೇ ಪರಿಹಾರ. ಉಪನಿಷತ್ ಚಿಂತನೆಯಲ್ಲಿ ಹುದುಗಿರುವ ಶಕ್ತಿ ಸಂದೇಶಗಳ ವಿಪುಲತೆ ಪ್ರಪಂಚದ ಯಾವ ಸಾಹಿತ್ಯರಾಶಿಯಲ್ಲೂ ಇಲ್ಲ. ಶಕ್ತಿಯುತ ಸಂದೇಶಗಳೇ ಕ್ರಾಂತಿಗಳನ್ನು ತಂದಿವೆ ಎಂಬುದನ್ನು ಫ್ರೆಂಚ್, ರಷ್ಯನ್, ಇತ್ಯಾದಿ ಕ್ರಾಂತಿಗಳ ಬಗ್ಗೆ ತಿಳಿದವರು ಅರಿಯಬಲ್ಲರು. ‘ಮೃತ್ಯು ಎಲ್ಲಿದೆ ನಿನಗೆ? ಬೆಂಕಿ ಸುಡಲಾರದು ನಿನ್ನನ್ನು; ಕತ್ತಿ ಕತ್ತರಿಸಲಾರದು; ಪ್ರಕೃತಿಯೇ ನಿನ್ನ ಅಡಿಯಾಳು; ಅಳುವೆ ಏಕೆ? ಎದ್ದು ನಿಲ್ಲು! ಉತ್ತಿಷ್ಟತಾ, ಜಾಗ್ರತಾ!’- ಇದೇ ಉಪನಿಷತ್ ವಾಣಿ.

    ‘ಆತ್ಮನಾ ವಿಂದತೇ ವೀರ್ಯಂ’ ಅರ್ಥಾತ್ ಆತ್ಮಚಿಂತನೆ ವೀರ್ಯ-ಧೈರ್ಯಗಳನ್ನು ಕೊಡುತ್ತದೆ. ಇಡೀ ಅದ್ವೈತ ವೇದಾಂತದ ಸಂದೇಶವೇ ತತ್ತ ್ವುಸಿ (ನೀನೇ ಅದು). ಇದನ್ನೇ ಗರ್ಜಿಸಿದರು ಶಂಕರರು ತಮ್ಮ ಭಾಷ್ಯಗಳಲ್ಲಿ. ‘ಆತ್ಮನಾಂ ವಿದ್ಧಿ’ (ನೀನು ಯಾರೆಂದು ತಿಳಿ), ‘ಅಹಂ ಬ್ರಹ್ಮಾಸ್ಮಿ ’ (ನಾನು ಬ್ರಹ್ಮವೇ)-ಇವು ಶಂಕರರ ಸಿದ್ಧಾಂತದ ಸಾರವಾಕ್ಯಗಳು.

    ವೇದಾಂತವೇ ಸಕಲ ದುರಿತಗಳಿಗೂ ಸಾರ್ವಕಾಲಿಕ ಪರಿಹಾರ ಎಂಬುದನ್ನು ಪ್ರಪ್ರಥಮ ಬಾರಿಗೆ ಬುದ್ಧೋತ್ತರ ಕಾಲದಲ್ಲಿ ಮೊಳಗಿದವರು ಶಂಕರರು. ಭಾರತೀಯ ಸಂಹಿತೆಯಲ್ಲಿ ಮನುಷ್ಯನ ಅಂತಃಸತ್ವವನ್ನು ಹೆಚ್ಚಿಸುವುದೇ ಅವರಿಗೆ ಮಾಡಬಹುದಾದ ದೊಡ್ಡ ಸೇವೆ.

    ಕೇವಲ ಮೂವತ್ತೆರಡು ವರ್ಷಗಳಲ್ಲಿ ದೇಶದ ಉದ್ದಗಲಕ್ಕೂ ಮೂರು ಬಾರಿ ಸಂಚರಿಸಿ, ನಾಲ್ಕು ಮೂಲೆಗಳಲ್ಲೂ ನಾಲ್ಕು ಆಮ್ನಾಯ ಪೀಠಗಳನ್ನು, ನಾಲ್ಕು ವೇದಗಳನ್ನು ಪುನಃ ಪ್ರತಿಷ್ಠಾಪಿಸಿ, ದಶನಾಮೀ ಸಂನ್ಯಾಸ ಸಂಪ್ರದಾಯ, ಬೃಹತ್ ದೇವಾಲಯಗಳಿಗೆ ಪ್ರೇರಣೆ, ಕಾಶೀ-ರಾಮೇಶ್ವರ, ಬದರೀ-ಕೇರಳ, ಗೋಕರ್ಣ-ನೇಪಾಳ- ಇವುಗಳ ಶಾಶ್ವತ ಸಾಂಸ್ಕೃತಿಕ ಸಂಬಂಧಗಳ ಮೂಲಕ ದೇಶದ ಭಾವೈಕ್ಯತಾ ಭದ್ರತೆಗೆ ಬುನಾದಿ – ಇವು ಅವರು ಸಾಧಿಸಿದ್ದರಲ್ಲಿ ಕೆಲವು ಮಾತ್ರ.

    ಇದರಿಂದ ಸತ್ಯಾನ್ವೇಷಣೆ ಮತ್ತು ಧರ್ಮಶ್ರದ್ಧೆ ಪುನಶ್ಚೇತನಗೊಂಡವು.

    ಸಂವಿಧಾನ ತಜ್ಞ ನಾನೀ ಫಾಲ್ಕೀವಾಲಾ ಹೇಳುತ್ತಾರೆ: ‘ಮಾನವ ಚರಿತ್ರೆಯಲ್ಲಿ ಐದು ಮಹಾನ್ ಸಾಧಕರನ್ನು ಹೆಸರಿಸಿದರೆ ಅದರಲ್ಲಿ ಶಂಕರರೂ ಒಬ್ಬರಾಗಿರುತ್ತಾರೆ.’ ಆದರೆ ನನಗೆ ಬಹಳ ಹಿಡಿಸಿದ್ದು ವಿವೇಕಾನಂದರು ಹೇಳಿದ “I am Shankara” ಎನ್ನುವ ವಾಕ್ಯವೇ!!

    (ಲೇಖಕರು ಗದಗ-ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts