More

    Xಟ್ರೀಮ್​ ಮಸ್ಕ್​ ಎಲಾ ಇವ್ನಾ! ಈತನ ಸಾಧನೆ ಹಿಂದಿದೆ ಮಾಯೆ…

    ವಿಶ್ವದಲ್ಲಿ ತಂತ್ರಜ್ಞಾನ ಕ್ಷೇತ್ರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಟೆಕ್ ಸಾಮ್ರಾಜ್ಯದಲ್ಲಿ ಆಗುವ ಬದಲಾವಣೆಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಹವಾ ಹೆಚ್ಚಾಗುತ್ತಿದೆ. ಮೈಕ್ರೋಸಾಫ್ಟ್, ಓಪನ್ ಎಐ, ಗೂಗಲ್ ಮುಂತಾದ ದಿಗ್ಗಜ ಕಂಪನಿಗಳಲ್ಲಿ ನಡೆಯುತ್ತಿರುವ ಹೈಡ್ರಾಮಾಗಳನ್ನು ನೋಡುತ್ತಿದ್ದೇವೆ. ಇವುಗಳ ಮಧ್ಯೆ ತನ್ನದೇ ಆದ ವಿಶಿಷ್ಟ, ವಿಭಿನ್ನ, ವಿನೂತನ ದಾರಿ ಮಾಡಿಕೊಂಡ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಒಂಥರಾ ಎಕ್ಸ್​ಟ್ರೀಮ್ ವ್ಯಕ್ತಿತ್ವದ ಎಲಾನ್ ರೀವ್ ಮಸ್ಕ್ ಕುರಿತ ಸಮಗ್ರ ಚಿತ್ರಣ ನಿಮ್ಮ ಮುಂದಿಡುವ ಪ್ರಯತ್ನವೇ ಈ ಲೇಖನ.

    | ಎನ್. ಗುರುನಾಗನಂದನ

    ಮಸ್ಕ್ ಸದ್ದು ನಾನ್ ಸ್ಟಾಪ್!
    ಎಲಾನ್ ಮಸ್ಕ್ ಇತ್ತೀಚಿನ ದಿನಗಳಲ್ಲಿ ಬಹಳ ಟ್ರೆಂಡ್ ಆಗುತ್ತಿರುವ ಹೆಸರು. ಯಾವುದಾದರೂ ಒಂದು ವಿಷಯಕ್ಕೆ ಸದ್ದು ಮಾಡುತ್ತಿರುತ್ತದೆ. ಎಲಾನ್ ಮಸ್ಕ್ ದಕ್ಷಿಣ ಆಫ್ರಿಕ ಮೂಲದ ಅಮೆರಿಕನ್ ವಾಣಿಜ್ಯೋದ್ಯಮಿ. ಇ-ಪೇಮೆಂಟ್ ಪ್ಲಾ್ಯಟ್​ಫಾರ್ಮ ಪೇಪಾಲ್ ಸ್ಥಾಪಿಸಿದವರಲ್ಲಿ ಮಸ್ಕ್ ಕೂಡ ಒಬ್ಬರು. ಜತೆಗೆ ಬಾಹ್ಯಾಕಾಶ ಕಂಪನಿ

    ಸ್ಪೇಸ್​ಎಕ್ಸ್ ಹಾಗೂ ಎಲೆಕ್ಟ್ರಿಕ್ ಕಾರು ತಯಾರಿಸುವ ಟೆಸ್ಲಾ ಸಂಸ್ಥೆಯ ಸಿಇಒ. ಓಪನ್ ಎಐ ಸಂಸ್ಥೆಯ ಮೂಲ ಹೂಡಿಕೆದಾರರಲ್ಲಿ ಮಸ್ಕ್ ಕೂಡ ಒಬ್ಬರು. ಇಷ್ಟೇ ಅಲ್ಲದೆ ಮಸ್ಕ್ 2022ರಲ್ಲಿ 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಖರೀದಿಸಿದ್ದರು. ಆ ಬಳಿಕ ಅದರಲ್ಲಿ ಹಲವಾರು ವಿವಾದಾತ್ಮಕ ಬದಲಾವಣೆಗಳನ್ನು ತರುತ್ತಾರೆ. ನಾಯಿಯನ್ನೇ ಸಿಇಒ ಎಂದು ಕೂರಿಸುತ್ತಾರೆ. ನಂತರ ಟ್ವಿಟರ್ ಹೆಸರನ್ನು ಎಕ್ಸ್ ಎಂದು ಬದಲಿಸಿದರು. ಏನಪ್ಪ ಇದು ಎಕ್ಸ್ ಎಂದು ಆಶ್ಚರ್ಯವಾಗಿತ್ತು. ಆಗ, ಇದು ಕೇವಲ ಒಂದು ಹೆಸರಲ್ಲ, ನನ್ನ ಮುಂದಿನ ಎವೆರಿಥಿಂಗ್ ಆಪ್ ಯೋಜನೆ ಎಂದು ಮಸ್ಕ್ ಸ್ಪಷ್ಟನೆ ನೀಡುತ್ತಾರೆ. ಈಗ ಎಕ್ಸ್ ಮೂಲಕ ಗೂಗಲ್​ನ ಎಐ ಚಾಟ್ ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಗೋರ್ಕ್ ಬರುತ್ತಿದೆ. ಇದನ್ನು ಬಳಸಲು ಟೆಕ್ ಜಗತ್ತು ಕಾಯುತ್ತಿದೆ.

    ಮಸ್ಕ್ ಪಾಸಿಟಿವೂ ಅಲ್ಲ, ನೆಗೆಟಿವೂ ಅಲ್ಲ!
    ಕೈ ತುಂಬ ಹಣ, ದೊಡ್ಡ ದೊಡ್ಡ ಕಂಪನಿಗಳ ಒಡೆತನ, ವೈಭವದ ಜೀವನಶೈಲಿ. ಮೇಲ್ನೋಟಕ್ಕೆ ಇವೆಲ್ಲವನ್ನು ನೋಡಿದರೆ ಎಲಾನ್ ಮಸ್ಕ್ ಬಹಳ ಆಶಾವಾದಿ, ಸಕಾರಾತ್ಮಕ ವ್ಯಕ್ತಿತ್ವ ಹೊಂದಿರುವವರು ಎಂದು ಅನಿಸುತ್ತದೆ. ಅದು ನಿಜ, ಆದರೆ ಸಂಪೂರ್ಣವಾಗಿ ಅಲ್ಲ. ಮಸ್ಕ್​ಗೆ ಕೆಲವು ವಿಷಯಗಳ ಬಗ್ಗೆ ಪಾಸಿಟಿವ್ ಚಿಂತನೆ ಇಲ್ಲ. ಹಾಗಂತ ನೆಗೆಟಿವ್ ಕೂಡ ಅಲ್ಲ. ವಾಸ್ತವಾಂಶದ ನಿಲುವುಗಳು ಹೆಚ್ಚಿವೆ. ಅವರ ಕೆಲವು ಮಾತುಗಳೇ ಇದಕ್ಕೆ ನಿದರ್ಶನ. ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ವಿಫಲವಾಗುತ್ತದೆ ಎಂದುಕೊಂಡಿದ್ದೆ, ನಾನು ಪೇಪಾಲ್ ಮಾರಾಟ ಮಾಡಿದ್ದರಿಂದ ಬಂದ ಅರ್ಧ ಹಣ ಕಳೆದುಕೊಂಡರೂ ಚಿಂತೆ ಇಲ್ಲ ಎಂಬ ಅವರ ಮಾತುಗಳು ಅಚ್ಚರಿ ಅನಿಸಬಹುದು. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುವಾಗ ಈ ಯೋಜನೆ ವಿಫಲವಾಗುತ್ತದೆ ಎಂದು ಯಾರು ಯೋಚಿಸುತ್ತಾರೆ? ಆದರೆ ರಿಸ್ಕ್​ಗಳ ಬಗ್ಗೆ ಗಮನ ಹರಿಸಬೇಕು ಎಂಬುದು ತಿಳಿಯುತ್ತದೆ. ಮಸ್ಕ್ ಅವರೇ ಹೇಳಿದಂತೆ ಧನಾತ್ಮಕ ವ್ಯಕ್ತಿತ್ವ ಕಾರಣವಲ್ಲ, ಕೆಲಸವನ್ನು ಮಾಡುವ ಉತ್ಸಾಹವೇ ಅವರ ಸಾಧನೆಗೆ ಕಾರಣ. ಆರಂಭದಲ್ಲಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಬಹಳ ಕೆಟ್ಟ ಸ್ಥಿತಿಯಲ್ಲಿ ಇತ್ತು. ಅರ್ಧದಷ್ಟಲ್ಲ ಪೂರ್ತಿ ಹಣವನ್ನು ಕಂಪನಿಯ ಮೇಲೆ ಮಸ್ಕ್ ಹೂಡಿಕೆ ಮಾಡಿದ್ದರು. ಮಸ್ಕ್ ಸಾಮ್ರಾಜ್ಯ ಪತನವಾಗುತ್ತದೆ ಎಂಬ ಮಾತುಗಳು ಶುರುವಾಗಿದ್ದವು. 2008ರಲ್ಲಿ ಸ್ಪೇಸ್ ಎಕ್ಸ್​ನ ನಾಲ್ಕನೇ ರಾಕೆಟ್ ಉಡಾವಣೆ ಯಶಸ್ವಿಯಾಗುತ್ತದೆ. ಆಗ ನಾಸಾ 45 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಜತೆ ಮಾಡಿಕೊಳ್ಳುತ್ತದೆ. ಇಂತಹ ಅನಿರೀಕ್ಷಿತ ರಿಸ್ಕ್​ಗಳಿಗೆ ಮಸ್ಕ್ ಹೆದರಲಿಲ್ಲ, ಮಾನಸಿಕವಾಗಿ ತಯಾರಾಗಿದ್ದರು. ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡರೆ ಶ್ರೀಮಂತನಾಗುವುದು ಕಷ್ಟ ಇಲ್ಲ ಎಂಬುದಕ್ಕೆ ಮಸ್ಕ್ ಉದಾಹರಣೆ.

    ಬ್ಯಾಂಕ್ ಖಾತೆ ಇರದೇ ವಹಿವಾಟು
    ಎವೆರಿಥಿಂಗ್ ಆಪ್ ಎಕ್ಸ್​ನಲ್ಲಿ ಪೇಮೆಂಟ್ ಫೀಚರ್ ತರಬೇಕು ಎಂಬುದು ಮಸ್ಕ್ ಮುಂದಿನ ಯೋಜನೆ. ಎಕ್ಸ್ ಪೇಮೆಂಟ್ ಎಂದರೆ ಬರೀ ಹಣ ಸ್ವೀಕೃತಿ ಪಾವತಿಯಷ್ಟೇ ಅಲ್ಲ, ಅದು ಬ್ಯಾಂಕ್ ಖಾತೆಯೇ ಇರದೆ ವ್ಯವಹರಿಸುವ ವ್ಯವಸ್ಥೆ ಆಗಿರಲಿದೆ. ಆನ್​ಲೈನ್ ಹಣಕಾಸು ವಹಿವಾಟಿಗೆ, ಹಣ ರವಾನಿಸಲು-ಸ್ವೀಕರಿಸಲು ಬ್ಯಾಂಕ್ ಖಾತೆ ಅಗತ್ಯ. ಆದರೆ ಬ್ಯಾಂಕ್ ಖಾತೆ ಅಗತ್ಯವಿರದೇ ಹಣಕಾಸು ವಹಿವಾಟು ನಡೆಸುವುದನ್ನು ಎಕ್ಸ್ ಮೂಲಕ ಮಸ್ಕ್ ಸಾಧ್ಯವಾಗಿಸಲಿದ್ದಾರಂತೆ.

    ರಾತ್ರಿ ಬೆಳಗಾಗುವುದರಲ್ಲಿ ಶ್ರೀಮಂತ
    3 ವರ್ಷಗಳ ಹಿಂದೆ 24.6 ಬಿಲಿಯನ್ ಡಾಲರ್ ಸಿರಿವಂತಿಕೆ ಹೊಂದಿದ್ದ ಎಲಾನ್, ಇತ್ತೀಚಿನ ಮಾಹಿತಿ ಪ್ರಕಾರ ಬರೋಬ್ಬರಿ 250 ಬಿಲಿಯನ್ ಡಾಲರ್ ಶ್ರೀಮಂತ. ಅಂದರೆ ಕಳೆದ 3 ವರ್ಷಗಳಲ್ಲಿ ಎಲಾನ್ ನೆಟ್ ವರ್ಥ್ ಸೆಕೆಂಡ್​ಗೆ ಸರಾಸರಿ 2,378 ಡಾಲರ್ ಹೆಚ್ಚಾಗಿದೆ. ಅಂದರೆ ನಿಮಿಷಕ್ಕೆ 1,42,680 ಡಾಲರ್​ನಂತೆ ಗಂಟೆಗೆ 85,60,800 ಡಾಲರ್. ಮಸ್ಕ್ ರಾತ್ರಿ 8 ಗಂಟೆ ನಿದ್ರೆ ಮಾಡುತ್ತಿದ್ದರೆ ಬೆಳಗ್ಗೆ ಏಳುವಷ್ಟರಲ್ಲಿ 6,84,86,400 ಡಾಲರ್​ನಷ್ಟು ಶ್ರೀಮಂತರಾಗಿರುಗುತ್ತಾರೆ.

    ಮಕ್ಕಳಾಗದಿದ್ದರೆ ನಾಗರಿಕತೆಗೆ ಅಪಾಯ!
    ಎಲಾನ್ ಮಸ್ಕ್ ಹಾಲಿವುಡ್ ನಟಿ ತಾಲುಲಾ ರಿಲೆ, ಅಂಬರ್ ಹರ್ಡ್, ಕೆನೆಡಾ ಸಿಂಗರ್ ಗ್ರಿಮ್ ಮುಂತಾದ ಹಲವಾರು ಸೆಲಿಬ್ರಿಟಿಗಳನ್ನು ಡೇಟ್ ಮಾಡಿದ್ದಾರೆ. ಮೂವರನ್ನು ಮದುವೆ ಆಗಿದ್ದಾರೆ ಮತ್ತು ಮೂರು ಬಾರಿ ವಿಚ್ಛೇದನ ಕೂಡ ಆಗಿದೆ. ಮಸ್ಕ್​ಗೆ ಅವಳಿ ಮತ್ತು ತ್ರಿವಳಿಗಳು ಸೇರಿ ಒಟ್ಟು 11 ಮಕ್ಕಳಿದ್ದಾರೆ. ಜನನ ಪ್ರಮಾಣ ಹೆಚ್ಚಾಗಬೇಕು ಇಲ್ಲದಿದ್ದರೆ ನಾಗರಿಕತೆ ಕುಸಿಯುತ್ತದೆ ಎಂದು ಮಸ್ಕ್ ಹೇಳುತ್ತಾರೆ. ಜನಸಂಖ್ಯಾ ಸ್ಪೋಟವಾಗುತ್ತಿದೆ, ಜನನ ಪ್ರಮಾಣದ ಮಟ್ಟ ಕಡಿಮೆ ಮಾಡಬೇಕು ಎಂದು ಬಹಳಷ್ಟು ದೇಶಗಳು ಹೇಳುತ್ತ ಬಂದಿವೆ. ಜನನ ಪ್ರಮಾಣದ ಬಗ್ಗೆ ಮಸ್ಕ್ ನಿಲುವು ಬಹಳ ಟೀಕೆಗಳನ್ನು ಸೃಷ್ಟಿಸಿತ್ತು. ಅವರ ಪ್ರಕಾರ ಜನಸಂಖ್ಯೆ ಕುಸಿತ ಹವಾಮಾನ ವೈಪರೀತ್ಯಕ್ಕಿಂತ ಘೊರವಾದದ್ದು. ಮೂಲಭೂತವಾಗಿ ಕಾರ್ವಿುಕರ ಸಂಖ್ಯೆ ಕಡಿಮೆ ಇರುವುದು ಬಹಳ ದುಃಖಕರ ಸಂಗತಿ. ಹೆಚ್ಚು ಮಕ್ಕಳಾಗಬೇಕು, ಇಲ್ಲದಿದ್ದರೆ ನಾಗರಿಕತೆಗೆ ಅಪಾಯವಾಗುತ್ತದೆ ಎಂಬ ಅವರ ಮಾತು ಟ್ರೋಲ್​ಗೆ ಗುರಿಯಾದವು. ಬಹಳಷ್ಟು ಜನ ಮಸ್ಕ್ ಮಾತಿನ ಆಧಾರದ ಮೇಲೆ ಸಂಶೋಧನೆಗಳನ್ನು ಕೂಡ ನಡೆಸಿದರು. ಜನನ ಪ್ರಮಾಣ ಕಡಿಮೆಯಾದ ತಕ್ಷಣ ನಾಗರಿಕತೆಗೆ ಅಪಾಯವಾಗುವುದಿಲ್ಲ, ಆದರೆ ಅದು ಮುಂದುವರಿದರೆ ತೊಂದರೆಯಾಗುತ್ತದೆ. ಇರುವ ಜನರನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪೊ›ಫೆಸರ್ ಮತ್ತು ಸಸ್ಟೇನೆಬಿಲಿಟಿಯ ವಿಜ್ಞಾನಿ ಡೇನಿಯಲ್ ಕಮ್ಮೆನ್ ಮಸ್ಕ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾರೆ. ಎಲಾನ್ ಮಾತುಗಳನ್ನು ಪೂರ್ಣವಾಗಿ ಒಪ್ಪಲು ಕಷ್ಟವಾದರೂ ನಿರಾಕರಿಸಲು ಕೂಡ ಸಾಧ್ಯವಿಲ್ಲ. ಮಸ್ಕ್ ನಿಲುವುಗಳು ಎಲ್ಲರಂತೆ ಇರುವುದಿಲ್ಲ. ಮನುಷ್ಯ ದೀರ್ಘವಾಗಿ ಬದುಕುವ ಅವಶ್ಯಕತೆ ಇಲ್ಲ. ವಯಸ್ಸಾಗುತ್ತ ಕಾಯಿಲೆ ಮುಂತಾದವುಗಳು ಶುರುವಾಗುತ್ತವೆ. ಹಾಗಾಗಿ ಹೊಸದನ್ನು ಮಾಡಲು ಸಾಧ್ಯವಾಗದಿದ್ದರೆ ಚಿಂತೆ ಇಲ್ಲ, ವಿಭಿನ್ನವಾಗಿ ಕೆಲಸ ಮಾಡಿದರೆ ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು ನಾಲ್ಕೇ ತಿಂಗಳಲ್ಲಿ ಮುಗಿಸಬಹುದು ಎಂಬುದು ಮಸ್ಕ್ ಸಿದ್ಧಾಂತ. ವಿದ್ಯಾರ್ಥಿಗಳು ಒಂದರಿಂದ ಮತ್ತೊಂದು ತರಗತಿಗೆ ಹೋಗುವುದು ತಮಾಷೆಯಾಗಿ ಕಾಣಿಸುತ್ತದೆ ಎಂಬ ಮಸ್ಕ್ ಮಾತನ್ನು ಕೇಳಿದರೆ ಏನಪ್ಪ ಹುಚ್ಚುತನದಿಂದ ಮಾತಾಡುತ್ತಿದ್ದಾರೆ ಅನಿಸಬಹುದು. ಆದರೆ ಅದನ್ನು ಗಾಢವಾಗಿ ಯೋಚಿಸಿದರೆ ಕೆಲವೊಮ್ಮೆ ಮಾತಿನ ಒಳ ಅರ್ಥ ತಿಳಿಯುತ್ತದೆ.

    ಗುಟ್ಟಾಗಿತ್ತು ಮೂರನೇ ಮಗುವಿನ ವಿಷಯ
    ಮಸ್ಕ್ ಮಾಜಿ ಗೆಳತಿ ಗ್ರೖೆಮ್ಸ್ ದಾಂಪತ್ಯದಲ್ಲಿ ಹುಟ್ಟಿದ್ದು ಇಬ್ಬರಲ್ಲ ಮೂವರು, ಆ ಮೂರನೇ ಮಗುವಿನ ವಿಷಯ ಗುಟ್ಟಾಗಿ ಇಡಲಾಗಿತ್ತು. ಆ ಮೂರನೇ ಮಗನ ಹೆಸರು ಟೆಕ್ನೊ ಮೆಕಾನಿಕಸ್. ಈ ವಿಷಯ ಮಸ್ಕ್ ಮತ್ತು ಆತನ ಸಹೋದ್ಯೋಗಿಗಳ ಸಂದರ್ಶನ ಹಾಗೂ ಕಳೆದ ಎರಡು ವರ್ಷಗಳ ಅಧ್ಯಯನದ ಮೂಲಕ ಪತ್ರಕರ್ತ ವಾಲ್ಟರ್ ಐಸಾಕ್​ಸನ್ ರಚಿಸಿರುವ ಮಸ್ಕ್ ಜೀವನಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ.

    ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯವಾಗಿ ಬದುಕುವ ಆಯ್ಕೆ
    ಎಲಾನ್ ಮಸ್ಕ್ ಸ್ಪೂರ್ತಿದಾಯಕ ಶ್ರಮ, ಹುಚ್ಚು ನಿರ್ಧಾರ, ಸಾಧಿಸಲೇಬೇಕು ಎಂಬ ಛಲ ಇವುಗಳಿಗೆಲ್ಲ ಕಾರಣ ಏನೆಂದು ಹುಡುಕುತ್ತ ಹೋದರೆ ಅವರ ಬಾಲ್ಯ ಎಂಬುದು ತಿಳಿಯುತ್ತದೆ. ಮಸ್ಕ್ ತಾಯಿಯ ಹೆಸರು ಮಾಯೆ ಮಸ್ಕ್. ಇವರು ಮಾಡೆಲ್, ವಾಣಿಜ್ಯೋದ್ಯಮಿ ಮತ್ತು ಡಯೆಟಿಷಿಯನ್. ಅವರು ಆಫ್ರಿಕದಲ್ಲಿ ಬಿಜಿನೆಸ್ ನಡೆಸುತ್ತಿರುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಿಂದಲೇ ಅವರ ಮೂವರು ಮಕ್ಕಳಿಗೆ ವ್ಯಾಪಾರ ವಹಿವಾಟಿನ ಜ್ಞಾನ ಬರುತ್ತದೆ. ಎಲಾನ್ ಮಸ್ಕ್​ಗೆ ಕಂಪ್ಯೂಟರ್ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಹನ್ನೆರಡು ವರ್ಷದವನಿರುವಾಗಲೇ ಬ್ಲಾಸ್ಟರ್ ಎಂಬ ಸಾಫ್ಟ್​ವೇರ್ ಗೇಮ್ ಮಾರಿ 500 ಡಾಲರ್ ಗಳಿಸುತ್ತಾರೆ. ಮಸ್ಕ್​ಗೆ ಬೇರೆ ಹುಡುಗರು ಹೊಡೆಯುತ್ತಿದ್ದರು. ಆಗ ರಕ್ಷಣೆಗಾಗಿ ಕರಾಟೆ ಮತ್ತು ಕುಸ್ತಿ ಕಲಿಯುತ್ತಾರೆ. ಮಸ್ಕ್​ಗೆ ತಂದೆಯ ಜತೆ ಒಳ್ಳೆಯ ಸಂಬಂಧ ಇಲ್ಲ, ನನ್ನ ತಂದೆ ಭಯಾನಕ ವ್ಯಕ್ತಿ ಎಂದು ಮಸ್ಕ್

    ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ವಿಚ್ಛೇದನ, ಒಂಟಿಯಾಗಿ ಎಲ್ಲ ಕೆಲಸವನ್ನು ಮಾಡುತ್ತ, ಪುಸ್ತಕಗಳನ್ನು ಹೆಚ್ಚಾಗಿ ಓದುತ್ತ ಸದೃಢ ಮತ್ತು ಯಾವುದಕ್ಕೂ ಎದೆಗುಂದದ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಮಸ್ಕ್ ಬಾಲ್ಯದಲ್ಲಿ ನಡೆದ ಘಟನೆಗಳು ಯಾರು ಏನೇ ಹೇಳಿದರೂ ತಮ್ಮ ನಿಲುವನ್ನು ತಿಳಿಸುವ ಆತ್ಮವಿಶ್ವಾಸದ ಬೆಳವಣಿಗೆಗೆ ಕಾರಣವಾಗುತ್ತದೆ. ಇಂತಹ ಹಿನ್ನೆಲೆಯಿಂದ ಬಂದು ಟೆಕ್ ಜಗತ್ತಿನ ದಿಗ್ಗಜ, ವಿಶ್ವದ ಶ್ರೀಮಂತ ವ್ಯಕ್ತಿ ಆಗುತ್ತಾರೆ. ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯವಾಗಿ ಬದುಕುವ ಆಯ್ಕೆ ಇದೆ ಎಂಬ ಮಸ್ಕ್ ಹೇಳಿಕೆ ಎಷ್ಟು ನಿಜ ಎಂಬುದು ತಿಳಿಯುತ್ತದೆ.

    ಮಿಚೆಲ್​ ಸ್ಟಾರ್ಕ್​ಗೆ KKR​ ಅಷ್ಟೊಂದು ದುಡ್ಡು ಸುರಿದಿದ್ದೇಕೆ? 24.75 ಕೋಟಿ ರೂ. ಬಗ್ಗೆ ಸ್ಟಾರ್ಕ್​ ಹೇಳಿದ್ದು ಹೀಗೆ…

    ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts