More

    ಮಿಚೆಲ್​ ಸ್ಟಾರ್ಕ್​ಗೆ KKR​ ಅಷ್ಟೊಂದು ದುಡ್ಡು ಸುರಿದಿದ್ದೇಕೆ? 24.75 ಕೋಟಿ ರೂ. ಬಗ್ಗೆ ಸ್ಟಾರ್ಕ್​ ಹೇಳಿದ್ದು ಹೀಗೆ…

    ನವದೆಹಲಿ: ಇಂದು ದುಬೈನಲ್ಲಿ ನಡೆದ 17ನೇ ಆವೃತ್ತಿಯ ಮಿನಿ ಐಪಿಎಲ್​ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್​ ಬೌರಲ್ ಮಿಚೆಲ್​ ಸ್ಟಾರ್ಕ್​​ 24.75 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರನೆಂಬ ಹೊಸ ಇತಿಹಾಸವನ್ನು ಬರೆದಿದ್ದಾರೆ.

    33 ವರ್ಷದ ಮಿಚೆಲ್​ ಸ್ಟಾರ್ಕ್​ ಅವರ ಮೂಲ ಬೆಲೆ 2 ಕೋಟಿ ರೂಪಾಯಿ. ಆದರೆ, ಹರಾಜಿನ ಆರಂಭದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸ್ಟಾರ್ಕ್​ಗಾಗಿ ಭಾರಿ ಪೈಪೋಟಿ ನಡೆಸಿದವು. ಇದೇ ವೇಳೆ ಕೋಲ್ಕತ ಮತ್ತು ಗುಜರಾತ್​ ಟೈಟಾನ್ಸ್​ ಕೂಡ ಹರಾಜು ಕೂಗಿದವು. ತೀವ್ರ ಪೈಪೋಟಿಯಿಂದ ಸ್ಟಾರ್ಕ್​ನ ಬೆಲೆ 20 ಕೋಟಿ ರೂ.ವರೆಗೂ ಏರಿತು. ಅಂತಿಮವಾಗಿ ಕೆಕೆಆರ್​ ತಂಡ 24.75 ಕೋಟಿ ರೂ. ದಾಖಲೆ ಬೆಲೆಗೆ ಎಡಗೈ ವೇಗಿ ಸ್ಟಾರ್ಕ್​ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿತು.

    ಅಂದಹಾಗೆ ಆಸ್ಟ್ರೇಲಿಯಾದ ಪ್ರೀಮಿಯರ್​ ಬೌಲರ್​ ಸ್ಟಾರ್ಕ್​ ಬರೋಬ್ಬರಿ 8 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಭಾಗವಹಿಸುತ್ತಿದ್ದಾರೆ. ಆಸಿಸ್​ ತಂಡದ ಹಿರಿಯ ಬೌಲರ್​ ಆಗಿರುವ ಸ್ಟಾರ್ಕ್​, ತಮ್ಮ ರಾಷ್ಟ್ರೀಯ ತಂಡದ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ 2015ರಲ್ಲಿ ಐಪಿಎಲ್​ ತಂಡದಿಂದ ದೂರ ಉಳಿದರು. ಬಳಿಕ 2018ರಲ್ಲಿ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಿದರು. ಈ ವೇಳೆಯೂ ಕೆಕೆಆರ್​ ತಂಡ 9.4 ಕೋಟಿ ರೂ. ನೀಡಿ ಸ್ಟಾರ್ಕ್​ ಅವರನ್ನು ಖರೀದಿ ಮಾಡಿತ್ತು. ಆದಾಗ್ಯೂ ಗಾಯದ ಸಮಸ್ಯೆಯಿಂದಾಗಿ ಇಡೀ ಸೀಸನ್​ನಿಂದ ಹೊರಬಿದ್ದರು. ಇದಾದ ಬಳಿಕ ಮತ್ತೆ ಐಪಿಎಲ್​ನಿಂದ ಬಿಡುವು ಪಡೆದಿದ್ದ ಸ್ಟಾರ್ಕ್​ ಇದೀಗ ಮತ್ತೆ ಐಪಿಎಲ್​ಗೆ ಮರಳಿದ್ದು ಹುಬ್ಬೇರಿಸುವ ಬೆಲೆಗೆ ಮತ್ತೆ ಕೆಕೆಆರ್​ ಪಾಲಾಗಿದ್ದಾರೆ. ವಿಶ್ವಕಪ್​ನಲ್ಲಿ ಸ್ಟಾರ್ಕ್​ ಪ್ರದರ್ಶನ ಮತ್ತು ಲಿಮಿಟೆಡ್​ ಓವರ್​ ಪಂದ್ಯಗಳಲ್ಲಿ ಅವರ ಟ್ರ್ಯಾಕ್​ ರೆಕಾರ್ಡ್​ ನೋಡಿ ಕೆಕೆಆರ್​ ಸ್ಟಾರ್ಕ್​ಗೆ ಅಷ್ಟೊಂದು ದುಡ್ಡು ಸುರಿದಿದ್ದಾರೆ.

    ಸ್ಟಾರ್ಕ್​ ಅವರು ಎರಡು ಸೀಸನ್​ನಲ್ಲಿ ಐಪಿಎಲ್ ಟೂರ್ನಿ ಭಾಗವಾಗಿದ್ದರು. ಎರಡೂ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ತಂಡದ ಪರ ಆಡಿದರು. 2014ನೇ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 28.71ರ ಸರಾಸರಿಯಲ್ಲಿ 14 ವಿಕೆಟ್ ಪಡೆದು ಗಮನ ಸೆಳೆದರು. 2015ರ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ 20 ವಿಕೆಟ್​ ಪಡೆಯುವ ಮೂಲಕ ಅತ್ಯುತ್ತಮ ಬೌಲರ್​ ಎನಿಸಿಕೊಂಡರು. ಅಲ್ಲದೆ, ಪಂದ್ಯವೊಂದರಲ್ಲಿ 15 ರನ್​ 4 ವಿಕೆಟ್​ ಕಬಳಿಸಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದರು.​

    ಐಪಿಎಲ್​ನಿಂದಾಚೆಗೆ ಸ್ಟಾರ್ಕ್​ ಅವರು ತಮ್ಮ ಆಸ್ಟ್ರೇಲಿಯಾ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್​ ಟೂರ್ನಿಯಲ್ಲಿ ಸ್ಟಾರ್ಕ್​ ಸಾಧನೆ ಮರೆಯುವಂತಿಲ್ಲ. ಕೇವಲ 10 ಪಂದ್ಯಗಳಲ್ಲಿ 16 ವಿಕೆಟ್​ ಪಡೆದರು. ವಿಶ್ವಕಪ್​ ಟ್ರೋಫಿಯನ್ನು ಜಯಿಸಿದ ಆಸ್ಟ್ರೇಲಿಯಾ ತಂಡದ ಸಾಧನೆ ಹಿಂದೆ ಸ್ಟಾರ್ಕ್​ ಕಾಣಿಕೆಯೂ ಗಮನಾರ್ಹವಾಗಿದೆ. ಇದುವರೆಗೂ 121 ಏಕದಿನ ಪಂದ್ಯಗಳನ್ನು ಆಡಿರುವ ಸ್ಟಾರ್ಕ್​ 22.96 ಸರಾಸರಿಯೊಂದಿಗೆ 236 ವಿಕೆಟ್​ ಪಡೆದಿದ್ದಾರೆ. ಟಿ 20 ಮಾದರಿಯಲ್ಲಿ 58 ಪಂದ್ಯಗಳಲ್ಲಿ 22.91 ಸರಾಸರಿಯೊಂದಿಗೆ 73 ವಿಕೆಟ್​ ಕಬಳಿಸಿದ್ದು, ಬೌಲಿಂಗ್​ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

    ಸ್ಟಾರ್ಕ್​ ಪ್ರತಿಕ್ರಿಯೆ ಏನು?
    ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿರುವ ಬಗ್ಗೆ ಸ್ಟಾರ್ಕ್​ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಇದು ಅಚ್ಚರಿಯಾಗಿದೆ ಮತ್ತು ಕೆಕೆಆರ್​ ತಂಡಕ್ಕೆ ಮರಳುತ್ತಿರುವುದಕ್ಕೆ ಖುಷಿಯಾಗಿದೆ. ನನ್ನ ಪತ್ನಿ ಪ್ರಸ್ತುತ ಮಹಿಳಾ ತಂಡದೊಂದಿಗೆ ಭಾರತದಲ್ಲೇ ಇದ್ದಾರೆ ಮತ್ತು ಆಸ್ಟ್ರೇಲಿಯಾದಲ್ಲಿ ಅವರ ಕವರೇಜ್, ನಮಗಿಂತ ಸ್ವಲ್ಪ ಮುಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹರಾಜು ವಿರಾಮದ ವೇಳೆ ಜಿಯೋ ಸಿನಿಮಾ ಜತೆ ಸ್ಟಾರ್ಕ್​ ಮಾತನಾಡಿದರು.

    ಸಾಕಷ್ಟು ಉತ್ಸಾಹವಿದೆ. ನಾನು ಹಲವಾರು ವರ್ಷಗಳಿಂದ ಭಾಗಿಯಾಗದ ಪಂದ್ಯಾವಳಿ ಇದಾಗಿದೆ. ನಾನು ಐಪಿಎಲ್‌ಗೆ ಮರಳಲು ಮತ್ತು ಸಾಕಷ್ಟು ಅದ್ಭುತ ಆಟಗಾರರು ಇರುವ ಟೂರ್ನಿಯಲ್ಲಿ ಭಾಗವಾಗಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್​ನೊಂದಿಗೆ ಭಾರತದಲ್ಲಿ ಸಾಕಷ್ಟು ಸಮಯವನ್ನು ಕಳೆದಿದೆ. ಹೀಗಾಗಿ ಭಾರತದಲ್ಲಿ ಕೆಲವು ಅಚ್ಚುಮೆಚ್ಚಿನ ನೆನಪುಗಳನ್ನು ಹೊಂದಿದೆ. ಖಂಡಿತವಾಗಿ ನಾನು ಐಪಿಎಲ್​ಗೆ ಹಿಂತಿರುಗಲು ಕಾಯುತ್ತಿದ್ದೇನೆ ಎಂದಿದ್ದಾರೆ.

    ಉಳಿದಂತೆ ಡರೈಲ್​ ಮಿಚೆಲ್​ 14 ಕೋಟಿ ರೂ.ಗೆ ಸಿಎಸ್​ಕೆ ಪಾಲಾದರೆ, ಹರ್ಷಲ್​ ಪಟೇಲ್​ 11.7 ಕೋಟಿ ರೂ. ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡದ ಪಾಲಾದರು. ಶಾರ್ದೂಲ್ ಠಾಕೂರ್ (ರೂ. 4 ಕೋಟಿ) ಮತ್ತು ರಚಿನ್ ರವೀಂದ್ರ (ರೂ. 1.80 ಕೋಟಿ) ಅವರನ್ನು ಸಿಎಸ್‌ಕೆ ಖರೀದಿ ಮಾಡಿತು. ರೋವ್‌ಮನ್ ಪೊವೆಲ್ (ರಾಜಸ್ಥಾನ ರಾಯಲ್ಸ್​ 7.40 ಕೋಟಿ ರೂ.), ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್, 6.80 ಕೋಟಿ ರೂ.) ಹಾಗೂ ಹ್ಯಾರಿ ಬ್ರೂಕ್ (ಡೆಲ್ಲಿ ಕ್ಯಾಪಿಟಲ್​ 4 ಕೋಟಿ ರೂ.) ಉತ್ತಮ ಮೊತ್ತಕ್ಕೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್​)

    IPL​ ಇತಿಹಾಸದಲ್ಲೇ ಮಿಚೆಲ್​ ಸ್ಟಾರ್ಕ್​ ದುಬಾರಿ ಆಟಗಾರ: 24.75 ಕೋಟಿ ರೂ.ಗೆ KKR ಪಾಲು

    ಕೋವಿಡ್ ನಿಯಂತ್ರಿಸಲು ಆರೋಗ್ಯ ಇಲಾಖೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts