More

    ಕಂಗ್ರಾಟ್ಸ್ ಅಂತಾರೆ ಕನ್ನ ಹಾಕ್ತಾರೆ…!

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಮಾಹಿತಿ ಪ್ರಕಾರ, ಇಂಟರ್​ನೆಟ್ ಬಳಸುವ 71 ಕೋಟಿ ಜನರ ಪೈಕಿ 25 ಕೋಟಿ ಮಹಿಳೆಯರು. ಆ 71 ಕೋಟಿ ಜನರ ಪೈಕಿ ಶೇ. 80ರಷ್ಟು ಜನರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದು ಅವರಲ್ಲಿ ನಂ.1 ಸ್ಥಾನದಲ್ಲಿ ಇರುವವರು ಮಹಿಳೆಯರು! ಏಕೆ ಹೀಗೆ?

    | ಸುಚೇತನಾ ನಾಯ್ಕ

    ‘‘ಅಭಿನಂದನೆಗಳು. ನಮ್ಮ ಕಂಪನಿಯಿಂದ ಆಯ್ಕೆ ಮಾಡಿರುವ ಅದೃಷ್ಟಶಾಲಿ ಗ್ರಾಹಕರಲ್ಲಿ ನೀವೂ ಒಬ್ಬರು. ನಿಮ್ಮ ಮೊಬೈಲ್ ನಂಬರ್ ಆಯ್ಕೆಯಾಗಿದೆ. ಇಂಥ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ. ನಮ್ಮ ಒಂದು ಲಕ್ಷ ಗ್ರಾಹಕರಲ್ಲಿ ನಿಮ್ಮ ಹೆಸರು ಬಂದಿದೆ. ದುಬಾರಿ ಉಡುಗೊರೆಯನ್ನು ನಿಮ್ಮದಾಗಿಸಿಕೊಳ್ಳಲು ಇದು ಸದವಕಾಶ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…’’

    ‘‘ಹಲೋ ಮೇಡಂ ಇದರ ಮೇಲೆ ಹೂಡಿಕೆ ಮಾಡಿದರೆ ಒಂದೇ ವಾರದಲ್ಲಿ ನಿಮ್ಮ ಹಣ 4 ಪಟ್ಟು ಆಗುತ್ತೆ… ಈ ಛಾನ್ಸ್ ಮಿಸ್ ಮಾಡ್ಕೋಬೇಡಿ…’’

    ‘‘ಇಪ್ಪತೆôದು ಸಾವಿರ ರೂ.ಗಳ ಈ ಮೊಬೈಲ್ ಫೋನನ್ನು ನೀವು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದರೆ ಅದೇ ಬೆಲೆಯ ಇನ್ನೊಂದು ಫೋನ್ ನಿಮಗೆ ಉಚಿತ. ನೀವು ನಮ್ಮ ಅದೃಷ್ಟಶಾಲಿ ಕಸ್ಟಮರ್…’’

    ‘‘ಹಾಯ್ ಸ್ನೇಹಾ… ಕೋಟ್ಯಂತರ ಮಂದಿಯಲ್ಲಿ ನೀವು ಅದೃಷ್ಟಶಾಲಿ ಆಗಿದ್ದೀರಿ, ನಿಮಗೆ ನಮ್ಮ ಕಡೆಯಿಂದ ಈ ಗಿಫ್ಟ್. ಅದಕ್ಕಾಗಿ ನೀವು ಆರಂಭದಲ್ಲಿ ಇಷ್ಟು ಹಣ ಪಾವತಿ ಮಾಡಬೇಕಾಗುತ್ತದೆ…’’

    ಅಬ್ಬಬ್ಬಾ… ಒಂದೇ… ಎರಡೇ… ಇಂತಹ ಕರೆಗಳಿಗೆ, ಮೆಸೇಜ್​ಗಳಿಗೆ ಲೆಕ್ಕವೇ ಇಲ್ಲ. ಇವುಗಳಿಗೆ ಮರುಳಾಗಿ ನಿತ್ಯವೂ ಅದೆಷ್ಟೋ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೋಸದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದ್ದರೂ ಮೋಸ ಹೋಗುವವರೇನೂ ಕಡಿಮೆಯಾಗಿಲ್ಲ. ಅದರಲ್ಲೂ ಕರೊನಾ ಸಂದರ್ಭದಲ್ಲಿ ಮನೆಯಿಂದಲೇ ಆನ್​ಲೈನ್ ವಹಿವಾಟು ಹೆಚ್ಚಾಗಿರುವ ಕಾರಣ ಸೈಬರ್ ವಂಚಕರು ಹೆಚ್ಚಾಗಿದ್ದಾರೆ.

    ಕಳೆದ ಒಂದೇ ವರ್ಷದಲ್ಲಿ ಭಾರತದಾದ್ಯಂತ ಈ ವಂಚಕರು ವಂಚಿಸಿದ ಮೊತ್ತ 3.31 ಲಕ್ಷ ಕೋಟಿ ರೂ. ಎಂದರೆ ಅದರ ಅಗಾಧತೆ ಎಷ್ಟು ಎಂಬುದನ್ನು ನೀವೇ ಲೆಕ್ಕ ಹಾಕಿ. ಅದರಲ್ಲೂ ಇದು ಕೇಸ್ ದಾಖಲಿಸಿರುವವರು ಕಳೆದುಕೊಂಡಿರುವ ಮೊತ್ತ. ಕೇಸ್ ದಾಖಲಿಸದೇ ಇರುವವರದು ಇದರಲ್ಲಿ ಸೇರಿಲ್ಲ. ಬಹುತೇಕ ಜನ ಮರ್ಯಾದೆಗೆ ಅಂಜಿ ಕೇಸ್ ದಾಖಲಿಸುವುದೇ ಇಲ್ಲ.

    ನಿಮ್ ನಂಬರ್ ಹೇಗೆ ಸಿಕ್ತು ಗೊತ್ತಾ?

    ಯಾವುದೋ ಒಬ್ಬ ಅಪರಿಚಿತ ಪುರುಷ ಬಂದು ‘‘ಮೇಡಂ ನಿಮ್ಮ ಮೊಬೈಲ್ ನಂಬರ್ ಕೊಡಿ’’ ಎಂದರೆ ನೀವು ಕೊಡುತ್ತೀರಾ? ಕೊಡುವುದಿಲ್ಲ ಅಲ್ವಾ? ಹಾಗಿದ್ದ ಮೇಲೆ ಮಾಲ್, ಸೂಪರ್​ವಾರ್ಕೆಟ್ ಸೇರಿದಂತೆ ಎಲ್ಲಾ ಕಡೆ ಬಿಲ್ಲಿಂಗ್ ಕೌಂಟರ್​ನವರು ‘ಫೋನ್ ನಂಬರ್ ಪ್ಲೀಸ್’ ಎಂದಾಗ ಏಕೆ ಕೊಟ್ಟುಬಿಡುತ್ತೀರಿ? ಕೆಲವು ಪಾಯಿಂಟ್ಸ್ ಆಸೆಗೆ, 20-30 ರೂ. ರಿಯಾಯ್ತಿಯ ಆಮಿಷಕ್ಕೆ ಬಲಿಯಾಗಿ ಮೊಬೈಲ್ ನಂಬರ್ ಕೊಡುತ್ತೀರಲ್ಲವೇ? ಆದರೆ ನಿಮಗೆ ಗೊತ್ತಾ? ಹೀಗೆ ಮಾಡುವುದು ನಿಮ್ಮ ಜುಟ್ಟನ್ನು ನೀವೇ ಬೇರೆಯವರ ಕೈಯಲ್ಲಿ ಕೊಟ್ಟಂತೆ, ಮಾತ್ರವಲ್ಲ, ಸೈಬರ್ ವಂಚನೆಗೆ ಇದೇ ಮೊಬೈಲ್ ನಂಬರ್, ಇಮೇಲ್ ಐಡಿಗಳೇ ಬಳಕೆ ಆಗುತ್ತವೆ!

    ಯಾಕೋ ಕಾಡ್ತಿದೆ ಒಂಟಿತನ…

    ಬಹಳಷ್ಟು ಜನರಿಗೆ ತಮ್ಮ ಮನದಾಳದ ನೋವನ್ನು ತೋಡಿಕೊಳ್ಳಲು ಫೇಸ್​ಬುಕ್ ವೇದಿಕೆಯಾಗಿದೆ. ಅದರಲ್ಲಿಯೂ ಕೆಲವು ಯುವತಿಯರು, ಮಹಿಳೆಯರು ತಮಗಾಗುವ ಚಿಕ್ಕಪುಟ್ಟ ವೇದನೆಗಳನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡುತ್ತಾರೆ. ‘ಒಂಟಿತನ ಕಾಡುತ್ತಿದೆ, ಬಾಯ್ಫ್ರೆಂಡ್ ಕೈಕೊಟ್ಟಿದ್ದಾನೆ’ ಹೀಗೆ… ಇಂಥ ದುರ್ಬಲ ಮನಸ್ಥಿತಿಯ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿಕೊಳ್ಳುವ ಸೈಬರ್ ವಂಚಕರು ಅವರ ಪೂರ್ವಾಪರ ತಿಳಿದುಕೊಂಡು ಮೋಸ ಮಾಡುತ್ತಾರೆ. ಇಂತಹ ಘಟನೆಗಳು ಹೆಚ್ಚಾಗಿವೆ.

    ಮೆಸೇಜ್-ಕರೆಗಳ ಮೂಲಕ ಮೋಡಿ

    ಫೋನ್​ಗಳಲ್ಲಿ ಬರುವ ಆಮಿಷದ ಮೆಸೇಜ್​ಗಳಲ್ಲಿ ಇರುವ ಲಿಂಕ್​ಗಳ ಮೂಲಕವೇ ಸೈಬರ್ ಅಪರಾಧಿಗಳು ಗಾಳ ಹಾಕುತ್ತಾರೆ. ಮಹಿಳೆಯರು ಇಂತಹ ಮೆಸೇಜ್​ಗಳಿಗೆ ಸುಲಭದಲ್ಲಿ ಮರುಳಾಗುತ್ತಾರೆ ಎನ್ನುವುದು ಕ್ರಿಮಿನಲ್​ಗಳಿಗೆ ಚೆನ್ನಾಗಿ ಗೊತ್ತು. ‘ಇದನ್ನು ಕ್ಲಿಕ್ ಮಾಡಿ, ಮಾಲಾಮಾಲ್ ಆಗಿ’ ಎನ್ನುವ ಮೆಸೇಜ್ ನೋಡಿ ಲಿಂಕ್ ಕ್ಲಿಕ್ ಮಾಡಿದಿರೋ ಮುಗೀತು ಕಥೆ. ವೈಯಕ್ತಿಕ ಮಾಹಿತಿ ಜತೆ ಬ್ಯಾಂಕ್ ಖಾತೆಯನ್ನೂ ಹ್ಯಾಕ್ ಮಾಡಿ ಲಕ್ಷಾಂತರ ರೂ. ಎಗರಿಸುತ್ತಾರೆ. ಇನ್ನು ಫೋನ್ ಕರೆಗಳು… ‘‘ಕಂಗ್ರಾಟ್ಸ್ ಮೇಡಂ.. ನಮ್ಮ ಕಂಪೆನಿಯ ಲಕ್ಕಿ ಗ್ರಾಹಕರು ನೀವು’’ ಎಂದೇ ಮಾತು ಶುರು ಮಾಡಿ ಬಣ್ಣದ ಬಣ್ಣದ ಕನಸುಗಳನ್ನು ಬಿತ್ತಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಾರೆ. ಇಲ್ಲವೇ ನಿಮಗೆ ಇಂಥದ್ದೊಂದು ಗಿಫ್ಟ್ ಬಂದಿದೆ ಎಂದು ಹೇಳಿ ಫೋನ್​ನಲ್ಲಿ ಬಂದಿರುವ ಓಟಿಪಿ ಕೊಡಿ ಎನ್ನುತ್ತಾರೆ. ಗಿಫ್ಟ್ ಎಂದಾಕ್ಷಣ ಖುಷಿಯಿಂದ ಕೆಲವು ಮಹಿಳೆಯರು ಓಟಿಪಿ ಕೊಟ್ಟು ಟೋಪಿ ಹಾಕಿಸಿಕೊಂಡಿದ್ದಾರೆ. ಇನ್ನು, ಶಾಪಿಂಗ್ ವೆಬ್​ಸೈಟ್​ಗಳನ್ನು ಬ್ರೌಸ್ ಮಾಡುವಾಗ ಯಾವುದೋ ಒಂದು ಮೆಸೇಜ್ ಟಪಕ್ ಎಂದು ಅವತರಿಸುತ್ತದೆ. ‘ಇಲ್ಲಿ ಕ್ಲಿಕ್ ಮಾಡಿದರೆ ಸರ್​ಪ್ರೖೆಸ್ ಗಿಫ್ಟ್ ಇದೆ’ ಎನ್ನುತ್ತದೆ. ಅದನ್ನು ಕ್ಲಿಕ್ ಮಾಡಿ ಪೇಚಿಗೆ ಸಿಲುಕಿದವರು ಅದೆಷ್ಟೋ ಮಂದಿ. ಬಹುಮುಖ್ಯ ವಿಚಾರ ಎಂದರೆ, ಶಾಪಿಂಗ್ ವೆಬ್​ಸೈಟ್​ಗಳಲ್ಲಿ ಖಾತೆ ತೆರೆದಾಗ ಪಾಸ್​ವರ್ಡ್ ನೀಡುವ ಸಂದರ್ಭದಲ್ಲಿ ಅದೆಲ್ಲಿ ಮುಂದಿನ ಬಾರಿ ಮರೆತು ಹೋಗುತ್ತದೋ ಎನ್ನುವ ಕಾರಣಕ್ಕೆ ಹಲವರು ತಮ್ಮ ಫೇಸ್​ಬುಕ್, ಇಮೇಲ್ ಅಥವಾ ಬ್ಯಾಂಕ್ ಖಾತೆಗಳಿಗೆ ನೀಡಿರುವ ಪಾಸ್​ವರ್ಡ್​ಅನ್ನೇ ಕೊಟ್ಟುಬಿಡುತ್ತಾರೆ. ಆದರೆ ಇದು ಬಹುದೊಡ್ಡ ಪ್ರಮಾದ. ಇದರಿಂದ ಬ್ಯಾಂಕ್​ನಲ್ಲಿದ್ದ ಹಣವನ್ನೂ ಕೆಲವರು ಕಳೆದುಕೊಂಡಿದ್ದಾರೆ.

    ದೂರು ಸಲ್ಲಿಸುವುದು ಹೇಗೆ?

    ಏನೋ ಆಮಿಷಕ್ಕೆ ಬಲಿಯಾಗಿ ಮೋಸ ಹೋಗಿಬಿಟ್ಟಿದ್ದೀರಿ ಎಂದುಕೊಳ್ಳೋಣ. ಮುಂದೇನು? ಸೈಬರ್ ಅಪರಾಧದ ಯಾವುದೇ ಪ್ರಕರಣ ಅಂದರೆ ಬಹುಮಾನದ ಆಮಿಷ ಮಾತ್ರವಲ್ಲದೆ ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆಯಾದರೆ ಕೂಡಲೇ ಸೈಕಾರ್ಡ್ ಡಾಟ್ ಜಿಒವಿ ಡಾಟ್ ಇನ್ (cycord.gov.in) ಕ್ಲಿಕ್ಕಿಸಿ. ಅಲ್ಲಿ Report Incident ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಕೊಟ್ಟು, ಯಾವ ರೀತಿಯ ವಂಚನೆ ಎಂದು ತಿಳಿಸಿ ಸಬ್ಮಿಟ್ ಬಟನ್ ಒತ್ತಿದರೆ ಸೈಬರ್ ತನಿಖಾ ತಂಡ ನೆರವಿಗೆ ಬರುತ್ತದೆ.

    ಗೃಹಿಣಿಯರೇ ಹೆಚ್ಚು ಟಾರ್ಗೆಟ್

    ಸೈಬರ್ ಅಪರಾಧಗಳಿಗೆ ಹೆಚ್ಚಾಗಿ ಗೃಹಿಣಿಯರೇ ಟಾರ್ಗೆಟ್ ಆಗುತ್ತಾರೆ. ಎಷ್ಟೋ ಗೃಹಿಣಿಯರಿಗೆ ನಾನಾ ಕಾರಣಗಳಿಂದ ಮನೆಯಿಂದ ಹೊರಕ್ಕೆ ಹೋಗಿ ದುಡಿಯುವ ಅವಕಾಶ ಇರುವುದಿಲ್ಲ. ‘‘ಗಂಡನ ದುಡಿಮೆಯಲ್ಲಿಯೇ ಇರಬೇಕಲ್ಲ, ನಾನೂ ಏನಾದರೂ ಚೂರು ಪಾರು ಸಂಪಾದನೆ ಮಾಡಬಹುದಲ್ಲ’’ ಎಂದು ಮನದ ಮೂಲೆಯಲ್ಲಿ ಕಾಡುತ್ತಿರುತ್ತದೆ. ಅಂಥ ಸಂದರ್ಭಗಳಲ್ಲಿ ಉಡುಗೊರೆ ನೀಡುತ್ತೇವೆ, ಹಣ ದುಪ್ಪಟ್ಟು ಮಾಡುತ್ತೇವೆ, ನೀವು ಇಷ್ಟು ಹಣ ಅಡ್ವಾನ್ಸ್ ನೀಡಿದರೆ ಮನೆಯಲ್ಲಿಯೇ ಕುಳಿತು ಸಂಪಾದನೆ ಮಾಡಬಹುದು… ಇಂಥ ಆಮಿಷಗಳಿಗೆ ಅವರು ಬಹುಬೇಗನೆ ಬಲಿಯಾಗಿಬಿಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಜಾಲತಾಣಗಳಲ್ಲಿ ಹಾಕುವ ಫೋಟೋಗಳನ್ನು ತಿರುಚಿ ಇನ್ನಾವುದೋ ರೀತಿಯಲ್ಲಿ ಅವುಗಳನ್ನು ಸೃಷ್ಟಿಸಿ ಬ್ಲಾ್ಯಕ್​ವೆುೕಲ್ ಮಾಡುವುದು, ಗಂಡನಿಗೆ, ಕುಟುಂಬದವರಿಗೆ ತೋರಿಸುತ್ತೇನೆ ಎಂದು ಹೆದರಿಸುವುದು, ಕಾಲೇಜಿಗೆ ಹೋಗುವ ಯುವತಿಯರಾದರೆ ಯಾರದ್ದೋ ಜತೆಯಲ್ಲಿರುವ ನಿಮ್ಮ ಫೋಟೋ ಇದೆ ಎಂದು ಬೆದರಿಕೆ ಹಾಕುವುದು… ಹೀಗೆಲ್ಲಾ ಮಾಡುವ ಮೂಲಕವೂ ವಂಚನೆ ನಡೆಯುತ್ತಿದ್ದು, ಇವುಗಳ ಕುರಿತು ಮಹಿಳೆಯರು ಎಚ್ಚರ ವಹಿಸಬೇಕಿದೆ.

    | ಡಾ. ಕೆ.ಆರ್. ಶ್ರೀಧರ್ ಮಮನೋವೈದ್ಯರು, ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts