More

    ಅಂತರಿಕ್ಷ ಪ್ರವಾಸೋದ್ಯಮ; ಇನ್ನು ಗಗನಕುಸುಮವಲ್ಲ..

    ಮುಂದಿನ ಒಂದು ದಶಕದಲ್ಲಿ ಮಾನವರು ಬಾಹ್ಯಾಕಾಶದಲ್ಲಿ ವಾಸಿಸುತ್ತಾರೆ, ಕೆಲಸ ಮಾಡುತ್ತಾರೆ ಮತ್ತು ರಜಾ ದಿನಗಳನ್ನು ಕಳೆಯುತ್ತಾರೆ. ಬಾಹ್ಯಾಕಾಶ ಯಾನ ಕ್ಷೇತ್ರದ ಬೆಳವಣಿಗೆಗಳನ್ನು ನೋಡಿದಾಗ ಅದೊಂದು ಪ್ರವಾಸೋದ್ಯಮವಾಗಿ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದುಡ್ಡು ಪಾವತಿಸಿದರೆ ಸಾಕು, ಯಾರು ಬೇಕಾದರೂ ಅಂತರಿಕ್ಷಕ್ಕೆ ನೆಗೆಯಬಹುದು. ರಾಕೆಟ್ ಅಲ್ಲದೆ, ಪ್ರೆಶರ್ ಕ್ಯಾಪ್ಸೂಲ್​ಗಳ ಮೂಲಕವೂ ಅಂತರಿಕ್ಷ ಯಾನ ಕೈಗೊಳ್ಳಬಹುದಾಗಿದೆ. ತಂಗಲು ಹೋಟೆಲ್​ಗಳೂ ನಿರ್ಮಾಣಗೊಳ್ಳುತ್ತಿವೆ.

    | ಜೆ.ಬಿ.

    ಅಮೆರಿಕದ ಇಲಿಡಾ ಅಲ್ವಾರೆಜ್ ಅವರು ಬಾಲ್ಯದಿಂದಲೂ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಕನಸು ಕಂಡಿದ್ದರು. ಆದರೆ, ಕಾನೂನು ಮಧ್ಯಸ್ಥಿಕೆ ಸಂಸ್ಥೆಯ ಮಾಲೀಕರಾದ ಅವರಿಗೆ ಹಾರಾಟದ ಬಗೆಗೆ ಭೀತಿ. ಹೀಗಾಗಿ, ಕನಸು ನನಸಾಗುವ ನಂಬಿಕೆ ಅವರಿಗಿರಲಿಲ್ಲ. ಆದರೀಗ, ಅವರ ಕನಸು ನನಸಾಗುವ ಕಾಲ ಸಮೀಪಿಸಿದೆ. 46 ವರ್ಷದ ಅಲ್ವಾರೆಜ್ ಮತ್ತು ಪತಿ ರಾಫೆಲ್ ಲ್ಯಾಂಡೆಸ್ಟಾಯ್ ಅವರು ಇತ್ತೀಚೆಗೆ ಗಗನಯಾನದ ಪ್ರಯಾಣಕ್ಕೆ ಬುಕಿಂಗ್ ಮಾಡಿದ್ದಾರೆ. ಹತ್ತು ಜನರು ಪ್ರಯಾಣಿಸಬಹುದಾದ ಪ್ರೆಶರ್ ಕ್ಯಾಪ್ಸೂಲ್​ನಲ್ಲಿ ಅವರು ಅಂತರಿಕ್ಷಕ್ಕೆ ಹಾರಲಿದ್ದಾರೆ. ಹೀಲಿಯಂ ತುಂಬಿದ ಬಲೂನ್​ಗೆ ಈ ಕ್ಯಾಪ್ಸೂಲನ್ನು ಲಗತ್ತಿಸಲಾಗುತ್ತದೆ. ಇದು ನಿಧಾನವಾಗಿ 100,000 ಅಡಿ ಎತ್ತರದವರೆಗೆ ತೇಲುತ್ತದೆ. ಇದರಲ್ಲಿನ ಪ್ರಯಾಣಿಕರು ಶಾಂಪೇನ್ ಸವಿಯುತ್ತ, ಆರಾಮದಾಯಕ ಕುರ್ಚಿಗಳಲ್ಲಿ ಕುಳಿತು ಪ್ರಯಾಣಿಸಬಹುದು. ಈ ಪ್ರಯಾಣ ಬುಕ್ ಮಾಡಲು 500 ಡಾಲರ್ ಬೇಕಾಗುತ್ತದೆ. ಪ್ರಯಾಣದ ಒಟ್ಟು ವೆಚ್ಚ 50 ಸಾವಿರ ಡಾಲರ್ (ಸರಿಸುಮಾರು 40 ಲಕ್ಷ ರೂಪಾಯಿ). ಪ್ರಯಾಣದ ಅವಧಿ 6ರಿಂದ 12 ಗಂಟೆ. ಈ ಯಾನವನ್ನು ವರ್ಲ್ಡ್ ವ್ಯೂವ್ ಎಂಬ ಕಂಪನಿ ಆಯೋಜಿಸಿದೆ, 2024ರಲ್ಲಿ ಗ್ರಾ್ಯಂಡ್ ಕ್ಯಾನ್ಯನ್​ನಿಂದ ಈ ಪ್ರಯಾಣ ಶುರುವಾಗಲಿದೆ. ‘ನಾವು ಗಂಟೆಗೆ 12 ಮೈಲಿ ವೇಗದಲ್ಲಿ ಬಾಹ್ಯಾಕಾಶಕ್ಕೆ ಹೋಗುತ್ತೇವೆ. ಭೂಮಿಯಿಂದ ರಾಕೆಟ್​ನಲ್ಲಿ ಉಡಾವಣೆ ಮಾಡುವುದಿಲ್ಲ’ ಎನ್ನುತ್ತಾರೆ ಸ್ಪೇಸ್ ಪರ್ಸ್ಪೆಕ್ಟಿವ್ ಸಹ-ಸಂಸ್ಥಾಪಕ ಮತ್ತು ಸಹ-ಮುಖ್ಯ ಕಾರ್ಯನಿರ್ವಾಹಕ ಜೇನ್ ಪೊಯಂಟರ್.

    ಈ ಸಂಸ್ಥೆಯು ತನ್ನದೇ ಆದ ಪ್ರವಾಸಿ ಬಲೂನ್ ಅಂತರಿಕ್ಷ ನೌಕೆ ಹಾಗೂ ಸ್ಪೇಸ್​ಶಿಪ್ ನೆಪ್ಚೂನ್ ಅನ್ನು ಸಿದ್ಧಪಡಿಸುತ್ತಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಪ್ರತಿ ವ್ಯಕ್ತಿಗೆ 1,25,000 ಡಾಲರ್ (1 ಕೋಟಿ ರೂಪಾಯಿ) ವೆಚ್ಚದಲ್ಲಿ 2024ರಲ್ಲಿ ಫ್ಲೋರಿಡಾದಿಂದ ಪ್ರಯಾಣ ಆರಂಭಿಸಲು ಉದ್ದೇಶಿಸಲಾಗಿದೆ. ಆದರೆ, ವಾಯುಮಂಡಲದ ಈ ಬಲೂನ್ ರೈಡ್​ಗಳಿಗೆ ಅಗತ್ಯವಿರುವ ಅನುಮೋದನೆಯನ್ನು ಸ್ಪೇಸ್ ಪರ್ಸ್ಪೆಕ್ಟಿವ್ ಹಾಗೂ ವರ್ಲ್ಡ್ ವ್ಯೂವ್- ಈ ಎರಡೂ ಕಂಪನಿಗಳು ಅಮೆರಿಕದ ಫೆಡರೇಷನ್ ಎವಿಯೇಷನ್ ಅಡ್ಮಿನಿಸ್ಟ್ರೇಶನ್​ನಿಂದ (ಎಫ್​ಎಎ) ಇನ್ನೂ ಪಡೆದುಕೊಂಡಿಲ್ಲ. ವರ್ಲ್ಡ್ ವ್ಯೂವ್ ರೀತಿಯ ಕಂಪನಿಗಳು ಪ್ರಯಾಣಕ್ಕಾಗಿ ಬಳಸುವ ಪ್ರೆಶರ್ ಬಲೂನ್​ಗಳು ಹೆಚ್ಚು ಎತ್ತರಕ್ಕೆ ತಲುಪುವುದಿಲ್ಲ. 18 – 19 ಮೈಲಿಗಳ ಗರಿಷ್ಠ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಗಗನಯಾತ್ರಿಗಳು ವೀಕ್ಷಿಸುವ ಭೂಮಿಯ ವಕ್ರತೆಯ ಅನುಭವವನ್ನು ಪಡೆಯಲು ಇಷ್ಟು ಎತ್ತರದ ಹಾರಾಟ ಸಾಕಾಗುತ್ತದೆ ಎಂದು ಪ್ರವಾಸದ ಆಯೋಜಕರು ಹೇಳುತ್ತಾರೆ.

    ತರಬೇತಿ: ಸ್ಪೇಸ್​ಎಕ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಆಕ್ಸಿಯಮ್ ಸ್ಪೇಸ್ ಕಂಪನಿ ತನ್ನ ಗ್ರಾಹಕರಿಗೆ ಪ್ರಸ್ತುತ ಹ್ಯೂಸ್ಟನ್​ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ನಾಸಾ ಸಹಭಾಗಿತ್ವದಲ್ಲಿ ತರಬೇತಿ ನೀಡುತ್ತಿದೆ. ವರ್ಜಿನ್ ಗ್ಯಾಲಾಕ್ಟಿಕ್ ನ್ಯೂ ಮೆಕ್ಸಿಕೊದಲ್ಲಿರುವ ತನ್ನ ಸ್ಪೇಸ್​ಪೋರ್ಟ್​ನಲ್ಲಿ ಭವಿಷ್ಯದ ಗಗನಯಾನಿಗಳ ಸಿದ್ಧತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಖಾಸಗಿ ಗಗನಯಾತ್ರಿಗಳಿಗೆ ತರಬೇತಿ ಕಾರ್ಯಕ್ರಮ ರೂಪಿಸಲು ನಾಸಾ ಜೊತೆಗೆ ಸಹಭಾಗಿತ್ವವನ್ನು ಕೂಡ ಹೊಂದಿದೆ.

    ಪರಿಸರಕ್ಕೆ ಹಾನಿಯೇ?: ಬಾಹ್ಯಾಕಾಶ ಪ್ರವಾಸೋದ್ಯ ಮವು ಬೆಳೆದಂತೆ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕ ಇದ್ದೇ ಇದೆ. ರಾಕೆಟ್ ಉಡಾವಣೆಗಳು ಅಪಾರವಾದ ಇಂಗಾಲವನ್ನು ಹೊರ ಸೂಸುತ್ತವೆ. ಅಲ್ಲದೆ, ವಾಯುಮಂಡಲದ ಬಲೂನ್ ಹಾರಾಟಗಳು ಸಹ ಗಂಭೀರ ಪರಿಣಾಮ ಬೀರಲಿವೆ.

    ವರ್ಲ್ಡ್ ವ್ಯೂವ್​ನ ಬಲೂನ್​ಗಳು ಸಾವಿರಾರು ಘನ ಮೀಟರ್ ಹೀಲಿಯಂನಿಂದ ಚಲಿಸುತ್ತವೆ. ಹೀಲಿಯಂ ಸೀಮಿತ ಸಂಪನ್ಮೂಲವಾಗಿದೆ. ಬಾಹ್ಯಾಕಾಶ ಯಾನ ಅತಿ ಶ್ರೀಮಂತ ವ್ಯಕ್ತಿಗಳು ಜೀವಿತಾವಧಿಯಲ್ಲಿ ಒಮ್ಮೆ ಕೈಗೊಳ್ಳಬಹುದಾದ ಪ್ರವಾಸವಾಗಿರುತ್ತದೆ. ಹಾಗಾಗಿ, ಈ ಪ್ರವಾಸೋದ್ಯಮವು ಸೀಮಿತವಾಗಿ ಉಳಿಯಲಿದ್ದು, ಪರಿಸರದ ಮೇಲೆ ಹೆಚ್ಚಿನ ಹೊರೆಯಾಗದು ಎಂದು ಅಭಿಪ್ರಾಯವನ್ನೂ ಕೆಲ ತಜ್ಞರು ವ್ಯಕ್ತಪಡಿಸುತ್ತಾರೆ.

    ಆಗಸದಲ್ಲೆರಡು ಹೋಟೆಲ್: ಭವಿಷ್ಯದಲ್ಲಿ ಅಂತರಿಕ್ಷ ಉತ್ಸಾಹಿಗಳು ಬಾಹ್ಯಾಕಾಶ ಯಾನ ಜತೆಗೆ ಬಯಸಿದಲ್ಲಿ ಸ್ವಲ್ಪ ಅಲ್ಲಿ ಉಳಿಯಲೂಬಹುದು. ಆರ್ಬಿಟಲ್ ಅಸೆಂಬ್ಲಿ ಕಾರ್ಪೆರೇಷನ್ ಎಂಬ ಸಂಸ್ಥೆಯು ವಿಶ್ವದ ಮೊದಲ ಬಾಹ್ಯಾಕಾಶ ಹೋಟೆಲ್​ಗಳನ್ನು ನಿರ್ವಿುಸುತ್ತಿದೆ. ಪಯೋನೀರ್ ಸ್ಟೇಷನ್ ಮತ್ತು ವಾಯೇಜರ್ ಸ್ಟೇಷನ್ ಎಂಬ ಎರಡು ರಿಂಗ್ ಆಕಾರದ ಹೋಟೆಲ್​ಗಳು ಮುಂಬರುವ ದಿನಗಳಲ್ಲಿ ಭೂಮಿಯನ್ನು ಸುತ್ತಲಿವೆ. 28 ಅತಿಥಿಗಳ ಸಾಮರ್ಥ್ಯ ಹೊಂದಿರುವ ಪಯೋನೀರ್ ನಿಲ್ದಾಣವನ್ನು 2025ರಲ್ಲಿ ಕಾಯಾರಂಭ ಮಾಡಲು ಉದ್ದೇಶಿಸಲಾಗಿದೆ. 2027ರಲ್ಲಿ ತೆರೆಯಲು ಉದ್ದೇಶಿಸಲಾಗಿರುವ ವಾಯೇಜರ್ ನಿಲ್ದಾಣದ ವಿನ್ಯಾಸವು ವಿಲ್ಲಾ, ಸೂಟ್, ಜೊತೆಗೆ ಜಿಮ್ ರೆಸ್ಟೋರೆಂಟ್ ಮತ್ತು ಬಾರ್ ಒಳಗೊಂಡಿರುತ್ತದೆ.

    ವಿಮೆ ಸವಲತ್ತು: ‘ಬ್ಯಾಟಲ್​ಫೇಸ್’ ಎಂಬ ಟ್ರಾವೆಲ್ ಇನ್ಶೂರೆನ್ಸ್ ಕಂಪನಿಯು 2021ರಲ್ಲಿಯೇ ನಾಗರಿಕ ಬಾಹ್ಯಾಕಾಶ ವಿಮೆ ಯೋಜನೆ ಪ್ರಾರಂಭಿಸಿದೆ. ಸ್ಪೇಸ್​ಎಕ್ಸ್, ಬ್ಲೂ ಒರಿಜಿನ್ ಮತ್ತು ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಗಳು ಆಯೋಜಿಸುವ ರಾಕೆಟ್ ಬಾಹ್ಯಾಕಾಶ ಪ್ರವಾಸ ಮತ್ತು ವಾಯುಮಂಡಲದ ಬಲೂನ್ ರೈಡ್​ಗಳಿಗೆ ವಿಮೆ ಒದಗಿಸಲಾಗುತ್ತಿದ್ದು, ಬಾಹ್ಯಾಕಾಶದಲ್ಲಿ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ ಪರಿಹಾರ ನೀಡಲಾಗುತ್ತದೆ. ಆದರೆ, ಇದುವರೆಗೆ ಯಾರೂ ಇಂತಹ ವಿಮೆ ಖರೀದಿಸಿಲ್ಲ. ‘ಸದ್ಯ ಬಾಹ್ಯಾಕಾಶಕ್ಕೆ ಪ್ರಯಾಣ ಕೈಗೊಳ್ಳುತ್ತಿರುವವರು ಅತಿಹೆಚ್ಚು ಆದಾಯ ಇರುವವರಾಗಿದ್ದು, ಅವರಿಗೆ ವಿಮೆಯ ಅಗತ್ಯ ಇಲ್ಲದಿರಬಹುದು’ ಎನ್ನುತ್ತಾರೆ ‘ಬ್ಯಾಟಲ್​ಫೇಸ್’ನ ಮುಖ್ಯ ಕಾರ್ಯನಿರ್ವಾಹಕ ಶಶಾ ಗೈನುಲ್ಲಿನ್.

    ವಿಮಾನಯಾನದಂತೆ ಬೆಳೆಯಬಹುದು: ಕಳೆದ ಬೇಸಿಗೆಯಲ್ಲಿ ಜೆಫ್ ಬೆಜೋಸ್ ಮತ್ತು ರಿಚರ್ಡ್ ಬ್ರಾನ್ಸನ್ ಅವರು ಬಾಹ್ಯಾಕಾಶಕ್ಕೆ ಪ್ರೆಶರ್ ಕ್ಯಾಪ್ಸೂಲ್​ಗಳನ್ನು ರವಾನಿಸುವ ಕಾರ್ಯಕ್ಕೆ ಕೈಹಾಕುವ ಮೂಲಕ ಅಂತರಿಕ್ಷ ಕ್ಷೇತ್ರದಲ್ಲಿ ವ್ಯಾಪಾರದ ಓಟ ಪ್ರಾರಂಭಿಸಿದ ನಂತರ ಬಾಹ್ಯಾಕಾಶ ಪ್ರವಾಸೋದ್ಯಮ ಮಾರುಕಟ್ಟೆ ಗಗನಮುಖಿಯಾಗಿದೆ. ಡಜನ್​ಗಟ್ಟಲೆ ಕಂಪನಿಗಳು ಈಗ ಜಿರೋ ಪ್ರೆಶರ್ ಬಲೂನ್ ಟ್ರಿಪ್, ಜನಸಾಮಾನ್ಯರಿಗೆ ತರಬೇತಿ, ಶೂನ್ಯ-ಗುರುತ್ವಾಕರ್ಷಣೆಯ ವಿಮಾನ ಪಯಣಗಳಿಗೆ ಬುಕಿಂಗ್ ಆರಂಭಿಸಿವೆ. ಟ್ರಾವೆಲ್ ಏಜೆನ್ಸಿ ‘ಅವೆನ್ಯೂ ಟೂ ಟ್ರಾವೆಲ್’ನ ಮುಖ್ಯ ಕಾರ್ಯನಿರ್ವಾಹಕ ಜೋಶುವಾ ಬುಷ್, ಬಾಹ್ಯಾಕಾಶ ಪ್ರಯಾಣದ ಮಾರುಕಟ್ಟೆಯು ನಾಗರಿಕ ವಿಮಾನಯಾನದಂತೆಯೇ ವಿಕಸನಗೊಳ್ಳುತ್ತದೆ ಎಂದು ನಂಬುತ್ತಾರೆ.

    ಮೂರು ಕಂಪನಿಗಳ ಮೇಲಾಟ: ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಪ್ರಮುಖವಾಗಿ ಮೂರು ಕಂಪನಿಗಳು ತೊಡಗಿಕೊಂಡಿವೆ. ಬಿಲಿಯನೇರ್​ಗಳಾದ ಎಲನ್ ಮಸ್ಕ್ ಅವರ ‘ಸ್ಪೇಸ್​ಎಕ್ಸ್’, ಜೆಫ್ ಬೆಜೋಸ್ ಅವರ ‘ಬ್ಲೂ ಒರಿಜಿನ್’ ಹಾಗೂ ರಿಚರ್ಡ್ ಬ್ರಾನ್ಸನ್ ಅವರ ‘ವರ್ಜಿನ್ ಗ್ಯಾಲಾಕ್ಟಿಕ್’- ಈ ಮೂರು ಕಂಪನಿಗಳ ನಡುವೆ ಪೈಪೋಟಿ ಇದೆ. ವರ್ಜಿನ್ ಗ್ಯಾಲಾಕ್ಟಿಕ್ ವಿಮಾನವು 2021ರಲ್ಲಿ 53 ಮೈಲುಗಳ ಎತ್ತರ ತಲುಪಿತ್ತು. ಬ್ಲೂ ಒರಿಜಿನ್ ವಿಮಾನವು 62 ಮೈಲುಗಳ ಎತ್ತರದಲ್ಲಿ ಹಾರಾಟ ನಡೆಸಿತ್ತು. ಇವನ್ನು ಮೀರಿ ಸ್ಪೇಸ್ ಎಕ್ಸ್ ರಾಕೆಟ್​ಗಳು ಭೂಮಿಯಿಂದ 120 ಮೈಲುಗಳವರೆಗೆ ತಲುಪಿ ದಾಖಲೆ ಬರೆದಿವೆ. ತರಬೇತಿ ಪಡೆಯದ, ಯಾವುದೇ ಗಗನಯಾನಿ ಇಲ್ಲದ, ಕೇವಲ ಸಾಮಾನ್ಯ ನಾಗರಿಕರನ್ನು ಒಳಗೊಂಡ ಬಾಹ್ಯಾಕಾಶ ಯಾನವನ್ನು ಮಸ್ಕ್ ಅವರ ಕಂಪನಿ ಕಳೆದ ಸೆಪ್ಟೆಂಬರ್​ನಲ್ಲಿ ಕೈಗೊಂಡು ಯಶಸ್ಸು ಗಳಿಸಿದೆ. ಬ್ಲೂ ಒರಿಜಿನ್ ಕಂಪನಿಯು ಬಾಹ್ಯಾಕಾಶ ಪ್ರವಾಸಕ್ಕಾಗಿ ಕೈಗೊಂಡ ಉಡಾವಣೆಗಳ ಸಂಖ್ಯೆ ನಾಲ್ಕು ಆಗಿದ್ದರೆ, ಸ್ಪೇಸ್​ಎಕ್ಸ್ ಕಂಪನಿ ಎರಡು ಬಾರಿ ಉಡಾವಣೆ ಪೂರೈಸಿದೆ. ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯ ಉಡಾವಣೆ ವಿಳಂಬವಾಗಿದ್ದು, 2023ರಲ್ಲಿ ನಿಗದಿಯಾಗಿರುವ ಈ ಪ್ರಯಾಣಕ್ಕಾಗಿ ಹಲವರು ಬುಕಿಂಗ್ ಮಾಡಿಕೊಂಡು ಕಾಯುತ್ತಿದ್ದಾರೆ.

    ಯಾವುದು ಬಾಹ್ಯಾಕಾಶ?: ನಮ್ಮ ತಲೆಯ ಮೇಲೆ 60 ಮೈಲುಗಳ (ಸುಮಾರು 100 ಕಿಲೋಮೀಟರ್) ಅಂತರದಲ್ಲಿ ಕರ್ಮನ್ ರೇಖೆಯನ್ನು ಗುರುತಿಸಲಾಗಿದೆ. ಇದು ಭೂಮಿಯ ವಾತಾವರಣ ಹಾಗೂ ಅಂತರಿಕ್ಷದ ನಡುವಿನ ಗಡಿ ರೇಖೆ. ಜಾಗತಿಕ ಗಗನಯಾತ್ರೆಯ ದಾಖಲೆಗಳನ್ನು ಪ್ರಮಾಣೀಕರಿಸುವ ಮತ್ತು ನಿಯಂತ್ರಿಸುವ ಫೆಡರೇಶನ್ ಏರೋನಾಟಿಕ್ ಇಂಟರ್​ನ್ಯಾಷನಲ್ ಬಳಸುವ ಗಡಿಯಾಗಿದೆ. ಆದರೆ, ಫೆಡರೇಷನ್ ಎವಿಯೇಷನ್ ಅಡ್ಮಿನಿಸ್ಟ್ರೇಶನ್ (ಎಫ್​ಎಎ) ಮತ್ತು ನಾಸಾ ಸೇರಿದಂತೆ ಅಮೆರಿಕದ ಅನೇಕ ಸಂಸ್ಥೆಗಳು 50 ಮೈಲುಗಳ ಮೇಲಿನ ಎಲ್ಲವನ್ನೂ ಬಾಹ್ಯಾಕಾಶ ಎಂದು ವ್ಯಾಖ್ಯಾನಿಸುತ್ತವೆ.

    ಖಾಸಗಿ ಬಾಹ್ಯಾಕಾಶ ನಿಲ್ದಾಣ: ‘ಆಕ್ಸಿಯಮ್ ಸ್ಪೇಸ್’ ಕಂಪನಿಯು ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ವಿುಸುತ್ತಿದೆ. ಬಾಹ್ಯಾಕಾಶ ಪ್ರಯಾಣಿಕರು ರಾತ್ರಿ ತಂಗಲು ವಸತಿ ಸೌಕರ್ಯಗಳನ್ನು ಇದು ರೂಪಿಸುತ್ತಿದೆ.

    ಭಾರತೀಯನ ಬುಕಿಂಗ್: ಕೇರಳದ ಸಂತೋಷ ಜಾರ್ಜ್ ಕುಲಂಗರಾ ಅವರು ಅಂತರಿಕ್ಷಕ್ಕೆ ಪ್ರವಾಸ ಕೈಗೊಳ್ಳಲಿರುವ ಮೊದಲ ಭಾರತೀಯ ಆಗಬಹುದಾಗಿದೆ. ಬಾಹ್ಯಾಕಾಶಯಾನ ಕೈಗೊಳ್ಳಲು 2007ರಲ್ಲಿಯೇ ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಗೆ 2.5 ಲಕ್ಷ ಡಾಲರ್ (2 ಕೋಟಿ ರೂಪಾಯಿ) ಪಾವತಿಸಿ ಬುಕಿಂಗ್ ಮಾಡಿದ್ದಾರೆ. ಟಿವಿ ಧಾರಾವಾಹಿಗಳ ನಿರ್ವಪಕರಾಗಿರುವ 50 ವರ್ಷ ವಯಸ್ಸಿನ ಸಂತೋಷ ಅವರು 130ಕ್ಕೂ ಅಧಿಕ ದೇಶಗಳಿಗೆ ಪ್ರಯಾಣ ಕೈಗೊಂಡಿದ್ದಾರೆ. 1997ರಲ್ಲಿ ಜಗತ್ತಿನಾದ್ಯಂತ ಪ್ರವಾಸ ಆರಂಭಿಸಿದ ಅವರು, ತಾವು ಕೈಗೊಂಡ ಪ್ರವಾಸದ ವಿಡಿಯೋಗಳನ್ನು ಸೆರೆಹಿಡಿದು, ಸಾಕ್ಷ್ಯಚಿತ್ರಗಳನ್ನು ತಯಾರಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಂತರಿಕ್ಷ ಯಾನದಲ್ಲೂ ವಿಡಿಯೋ ಕ್ಯಾಮರಾ ಅವರ ಜತೆಗಿರಲಿದೆ.

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಮದ್ವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ಆ ವಿಷ್ಯ!; ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ 52 ವರ್ಷದ ವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts