More

    ಬಿತ್ತನೆ ಮಾಡಿದ ರೈತಗೆ ಮತ್ತೆ ಸಂಕಷ್ಟ

    ಬೆಳಗಾವಿ: ಲಾಕ್‌ಡೌನ್‌ನಿಂದ ಆದಾಯವಿಲ್ಲದೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಮಳೆಯಾಶ್ರಿತ ಪ್ರದೇಶದ ರೈತರು ಇದೀಗ ಧಾರಾಕಾರವಾಗಿ ಸುರಿಯುತ್ತರುವ ಮಳೆಯಿಂದಾಗಿ ಮತ್ತೆ ಬೆಳೆಹಾನಿ ಅನುಭವಿಸುವ ಆತಂಕದಲ್ಲಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ಮಳೆಯಿಂದಾಗಿ ಜಲಾವೃತಗೊಳ್ಳುತ್ತಲಿದ್ದು, ಕೆಲವು ಕಡೆ ಮೊಳಕೆ ಒಡೆಯುವ ಹಂತದಲ್ಲಿರುವ ಬೆಳೆಗಳು ನಾಶವಾಗುತ್ತಲಿದೆ.

    ಜಿಲ್ಲೆಯ 35 ಹೋಬಳಿ ವ್ಯಾಪ್ತಿಯ 5.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಶೇಂಗಾ, ಹೆಸರು, ಸೂರ್ಯಕಾಂತಿ, ಸಜ್ಜೆ ಇನ್ನಿತರ ಬೆಳೆಗಳ ಬಿತ್ತನೆಯಾಗಿವೆ. ಕೆಲವು ಕಡೆ ಬಿತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಆದರೆ, ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆಗೊಂಡ ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯುವ ನಿರ‌್ಷೀಕೆಯಲ್ಲಿದ್ದ ರೈತಾಪಿ ವರ್ಗ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಲಕ್ಷಣ ಗೋಚರಿಸುತ್ತಿದೆ.

    ಬಿತ್ತನೆ ಮಾಹಿತಿ: ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ಮಳೆ ಆರಂಭವಾಗಿದ್ದರಿಂದ ಕೃಷಿ ಇಲಾಖೆ 52 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 31.4 ಸಾವಿರ ಹೆಕ್ಟೇರ್‌ನಲ್ಲಿ ಹೆಸರು, 34.07 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ, 36.25 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 94 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 50 ಸಾವಿರ ಹೆಕ್ಟೇರ್ ಸಜ್ಜೆ ಹಾಗೂ 98.99 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, ಅವರೆ ಸೇರಿದಂತೆ 6.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಅದರಲ್ಲಿ 5.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

    ರೈತರ ಅಸಮಾಧಾನ: ಕಳೆದ ವರ್ಷ ಮುಂಗಾರು ಹಂಗಾಮಿನ ಪೂರ್ವದ ಮೇ ಮೊದಲ ವಾರದಲ್ಲಿ ಮಳೆ ಸುರಿದಿದ್ದರಿಂದ ಬಿತ್ತನೆ ಮಾಡಲಾಗಿತ್ತು. ಅಲ್ಲದೆ, ಕೆಲ ಪ್ರದೇಶದಲ್ಲಿ ತೇವಾಂಶ ಇಲ್ಲದಿರುವ ಕಾರಣ ಬಿತ್ತನೆ ಆಗಿರಲಿಲ್ಲ. ಬಳಿಕ ಅತಿವೃಷ್ಟಿ ಸಂಭವಿಸಿದ್ದರಿಂದ ಬಿತ್ತನೆ ಮಾಡಿದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಈ ವರ್ಷವೂ ಅದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮಳೆಯಿಂದಾಗಿ ಎಲ್ಲೆಲ್ಲಿ ಬೆಳೆಗಳು ಹಾನಿಯಾಗಿವೆ ಎಂಬುದರ ಕುರಿತು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ಅಗತ್ಯ ಪರಿಹಾರ ಸಿಗಲಿದೆ.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    ಕೆಲ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಸರು, ಶೇಂಗಾ, ಸೂರ್ಯಕಾಂತಿ ಇನ್ನಿತರ ಬೆಳೆಗಳು ಜಲಾವೃತಗೊಂಡಿವೆ. ಮೊಳಕೆ ಹಂತದಲ್ಲಿರುವ ಮತ್ತು ಬೆಳೆದು 20 ದಿನ ಕಳೆದಿರುವ ಬೆಳೆಗಳು ಮಳೆಯಿಂದ ಹಾನಿಯಾಗಿರುವ ಕುರಿತು ಮಾಹಿತಿ ಬಂದಿದೆ.
    | ಜಿಲಾನಿ ಮೊಖಾಶಿ ಜಿಲ್ಲಾ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts