More

    ವಾರಾಂತ್ಯ ಕರ್ಫ್ಯೂಗೆ ಕರಾವಳಿ ಸ್ತಬ್ಧ

    ಮಂಗಳೂರು/ಉಡುಪಿ: ಕೋವಿಡ್ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿದ್ದ ಮೊದಲ ವಾರಾಂತ್ಯ ಕರ್ಫ್ಯೂ ಶನಿವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಪೂರ್ಣ ಪ್ರಮಾಣದಲ್ಲಿ ಸ್ತಬ್ಧಗೊಂಡವು.

    ದ.ಕ.ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿಯೂ ಜನರು ಮನೆಯಿಂದ ಹೊರಗೆ ಅನವಶ್ಯಕವಾಗಿ ಓಡಾಡಲಿಲ್ಲ. ಶುಕ್ರವಾರ ರಾತ್ರಿಯಿಂದಲೇ ಮಂಗಳೂರು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಜನದಟ್ಟಣೆ ನಿಯಂತ್ರಣ ಆರಂಭಿಸಿದ್ದರು. ಶನಿವಾರ ಮುಂಜಾನೆ 6 ರಿಂದ 10 ಗಂಟೆ ತನಕ ಹಾಲು, ತರಕಾರಿ, ದಿನಸಿ ಸಾಮಗ್ರಿ ಖರೀದಿಸಲು ನಿಗದಿಪಡಿಸಿದ ಸಮಯವನ್ನು ನಗರದಲ್ಲಿ ವಾಸ್ತವ್ಯವಿದ್ದ ಹಾಗೂ ಆಸುಪಾಸಿನ ಗ್ರಾಮಗಳ ಜನರು ಉಪಯೋಗಿಸಿಕೊಂಡರು. ಈ ಸಂದರ್ಭ ನಗರದ ವಿವಿಧ ಮಾರುಕಟ್ಟೆ, ಸೂಪರ್ ಮಾರ್ಕೆಟ್‌ಗಳಲ್ಲಿ ಸ್ವಲ್ಪ ಹೆಚ್ಚಿನ ಜನರು ಕಾಣಿಸಿಕೊಂಡರು.

    ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ವತಃ ನಗರದ ವಿವಿಧೆಡೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಬೆಳಗ್ಗೆ 10 ಗಂಟೆಯ ಬಳಿಕ ನಗರ ಮತ್ತೆ ಸ್ತಬ್ಧಗೊಂಡಿತು. ಆಸ್ಪತ್ರೆ, ಮೆಡಿಕಲ್, ಮಾಧ್ಯಮ ಕಾರ‌್ಯಾಲಯಗಳು ತೆರೆದಿದ್ದವು. ಕೆಲವು ಹೊಟೇಲ್‌ಗಳಷ್ಟೇ ಆಹಾರ ವಿತರಣೆ ಸಂಸ್ಥೆಗಳ ಮೂಲಕ ಪಾರ್ಸೆಲ್ ಪೂರೈಕೆ ಮಾಡುತ್ತಿದ್ದವು. ಹೆಚ್ಚಿನ ಹೊಟೇಲ್‌ಗಳು ಮುಚ್ಚಿದ್ದವು.

    ರಸ್ತೆಗಿಳಿಯದ ಖಾಸಗಿ ಬಸ್ಸುಗಳು: ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಮತಿ ಇದ್ದರೂ ಪ್ರಯಾಣಿಕರ ಕೊರತೆ ನಿರೀಕ್ಷಿಸಿ ಖಾಸಗಿ ಸಿಟಿ ಹಾಗೂ ಎಕ್ಸ್‌ಪ್ರೆಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಕೆಲವು ಸಂಚರಿಸಿವೆ. ನಿಗಮದ ಆಂತಾರಾಜ್ಯ ಬಸ್‌ಗಳು ಕೂಡ ಕೆಲವು ಸಂಚರಿಸಿವೆ. ಆದರೆ ಸಂಚರಿದ ಬಸ್‌ಗಳಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ವಿರಳವಿತ್ತು. ಪ್ರಯಾಣಿಕರೇ ಇಲ್ಲದ ಕಾರಣ ಬೇಡಿಕೆಗೆ ತಕ್ಕಂತೆ ಶೇ.20ರಷ್ಟು ಬಸ್‌ಗಳನ್ನಷೇ ಓಡಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.

    ರಸ್ತೆ, ಮಾರುಕಟ್ಟೆಗಳು ಜನರಹಿತ
    ಉಡುಪಿ: ಜನರ ಓಡಾಟವಿಲ್ಲ, ಅಂಗಡಿ, ಮುಂಗಟ್ಟುಗಳು ಬಂದ್. ಮಾರುಕಟ್ಟೆ ವ್ಯವಹಾರವಿಲ್ಲ… ಕೋವಿಡ್ ತಡೆಗಟ್ಟಲು ಸರ್ಕಾರದ ಕಟ್ಟುನಿಟ್ಟಿನ ವಾರಾಂತ್ಯ ಕರ್ಫ್ಯೂ ಆದೇಶಕ್ಕೆ ಜನರು ಶನಿವಾರ ಜನರು ಸ್ಪಂದಿಸಿದ ರೀತಿಯಿದು.

    ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ, ಅಂಗಡಿಗಳಲ್ಲಿ ಜನರು ಸಾಲಲ್ಲಿ ನಿಂತು ತರಕಾರಿ, ರೇಶನ್ ಖರೀದಿಸಿದರು. ಉಡುಪಿ ನಗರದಲ್ಲಿ ಬೆಳಗ್ಗೆ 10ಕ್ಕೆ ನಗರಸಭೆ ಅಧಿಕಾರಿಗಳು ಮೈಕ್‌ನಲ್ಲಿ ಸೂಚನೆ ನೀಡುತ್ತಿದ್ದರು. 10 ಗಂಟೆ ಬಳಿಕ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್ ಆದವು.

    10 ಗಂಟೆ ನಂತರ ಉಡುಪಿ ನಗರ ವ್ಯಾಪ್ತಿ ಸೇರಿದಂತೆ ಕಾರ್ಕಳ, ಕುಂದಾಪುರ, ಹೆಬ್ರಿ ಬ್ರಹ್ಮಾವರ, ಪಡುಬಿದ್ರಿ, ಕಾಪು, ಶಿರ್ವ, ಬೈಂದೂರು, ಗಂಗೊಳ್ಳಿ ಭಾಗದಲ್ಲಿ ಜನಜೀವನ ಸ್ತಬ್ಧವಾಗಿತ್ತು. ನಗರ, ಗ್ರಾಮೀಣ ಭಾಗದಲ್ಲಿ ಜನರು ಮನೆಗಳಿಂದ ಆಚೆಗೆ ಬಾರದೆ ಸ್ವಯಂನಿರ್ಬಂಧ ಹಾಕಿಕೊಂಡಿದ್ದರು. ಜಿಲ್ಲೆಯ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಚಟುವಟಿಕೆಗಳು ಇರಲಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶವಿತ್ತು. ಆದರೆ, ಬೆರಳೆಣಿಕೆಯಷ್ಟು ಹೋಟೆಲ್‌ಗಳು ಮಾತ್ರ ಪಾರ್ಸೆಲ್ ಸೇವೆ ನೀಡಿದವು. ಮೆಡಿಕಲ್ ಶಾಪ್ ಎಂದಿನಂತೆ ಇಡೀ ದಿನ ತೆರೆದಿತ್ತು. ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ ಬಸ್ ನಿಲ್ದಾಣಗಳು ಪ್ರಯಾಣಿಕರು, ಬಸ್ಸಿಲ್ಲದೆ ಬಣಗುಡುತ್ತಿತ್ತು.

    ವಾರಾಂತ್ಯ ಕರ್ಫ್ಯೂಗೆ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇದೇ ರೀತಿ ಜನತೆಯ ಸಹಕಾರ ಮುಂದುವರಿದರೆ ಕರೊನಾವನ್ನು ಮಣಿಸಬಹುದು.
    ಜಿ.ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts