More

    ಮೂಲ ಸೌಕರ್ಯವಿಲ್ಲದೆ ಶಿಕ್ಷಕರ ಪರದಾಟ

    ರಾಯಚೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನ್ನು ನಗರದ ಹೊರವಲಯದ ವಿಜ್ಞಾನ ಕೇಂದ್ರದಲ್ಲಿ ನಡೆಸುತ್ತಿರುವುದರಿಂದ ಕೌನ್ಸೆಲಿಂಗ್‌ಗೆ ಬಂದ ಶಿಕ್ಷಕರು ಸ್ಥಳದಲ್ಲಿ ಸಮರ್ಪಕ ಕುಡಿಯುವ ನೀರು, ಉಪಹಾರ ವ್ಯವಸ್ಥೆಯಿಲ್ಲದ ಕಾರಣ ಪರದಾಡುವಂತಾಗಿದೆ.

    ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ವೈದ್ಯಕೀಯ ಕಾಲೇಜು ಹಿಂಭಾಗದ ಗುಡ್ಡದಲ್ಲಿರುವ ವಿಜ್ಞಾನ ಕೇಂದ್ರಕ್ಕೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಆಟೋಗಳಿಗೆ ಬಸ್ ನಿಲ್ದಾಣದಿಂದ 200-300 ರೂ. ಕೊಟ್ಟು ವಿಜ್ಞಾನ ಕೇಂದ್ರಕ್ಕೆ ಬರಬೇಕಾಗಿದೆ.

    ಇದನ್ನೂ ಓದಿ: ಗಾಂಧಿನಗರದಲ್ಲಿ ಮೂಲ ಸೌಕರ್ಯದ್ದೇ ಚಿಂತೆ

    ಪ್ರತಿನಿತ್ಯ ಸಾವಿರಾರು ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗುತ್ತಿದ್ದು, ಬೆಳಗ್ಗೆ 9ಕ್ಕೆ ಕೇಂದ್ರಕ್ಕೆ ಆಗಮಿಸುವ ಶಿಕ್ಷಕರ ಕೌನ್ಸೆಲಿಂಗ್ ಸರದಿ ಬರುವವರೆಗೆ ಕಾದು ಕುಳಿತುಕೊಳ್ಳಬೇಕಾಗಿದೆ. ಮತ್ತೊಂದೆಡೆ ಕೆಲವೊಬ್ಬರ ಸರದಿ ಸಂಜೆಗೆ ಬರುತ್ತಿದ್ದು, ಉಪಾಹಾರ, ಊಟಕ್ಕಾಗಿ ಶಿಕ್ಷಕರು ದೂರದ ನವೋದಯ ಕಾಲೇಜು ಹತ್ತಿರ ಬರಬೇಕಾಗಿದೆ.

    ಕೆಲವು ಶಿಕ್ಷಕಿಯರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದವರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಎರಡ್ಮೂರು ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಅದು ಎಲ್ಲರಿಗೂ ಸಮರ್ಪಕವಾಗಿ ದೊರೆಯದಂತಾಗಿದೆ.

    ಈ ಹಿಂದೆ ಕೌನ್ಸೆಲಿಂಗ್‌ನ್ನು ಡಿಡಿಪಿಐ ಕಚೇರಿ ಅಥವಾ ನಗರದ ಮಧ್ಯಭಾಗದಲ್ಲಿರುವ ಶಾಲೆಗಳಲ್ಲಿ ನಡೆಸಲಾಗುತ್ತಿತ್ತು. ಡಿಡಿಪಿಐ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ ನಂತರ ಹೊಸ ಕಟ್ಟಡದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ವಿಜ್ಞಾನ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಅದರ ಬದಲು ನಗರದಲ್ಲಿನ ಯಾವುದಾದರೂ ಶಾಲೆಯಲ್ಲಿ ಕೌನ್ಸೆಲಿಂಗ್ ನಡೆಸಿದರೆ ಅನುಕೂಲವಾಗುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.


    ವರ್ಗಾವಣೆ ಕೌನ್ಸೆಲಿಂಗ್‌ನ್ನು ನಗರದಿಂದ ದೂರದಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ನಡೆಸುತ್ತಿರುವುದರಿಂದ ಶಿಕ್ಷಕಿಯರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಕೇಂದ್ರದ ಸುತ್ತ ಒಂದೂವರೆ ಕಿ.ಮೀ.ನಲ್ಲಿ ಯಾವುದೇ ಅಂಗಡಿ, ಹೋಟೆಲ್‌ಗಳಿಲ್ಲ. ಜತೆಗೆ ಸಾರಿಗೆ ವ್ಯವಸ್ಥೆಯೂ ಇಲ್ಲ. ನಗರದಲ್ಲಿನ ಯಾವುದಾದರೊಂದು ಶಾಲೆಯಲ್ಲಿ ಕೌನ್ಸೆಲಿಂಗ್ ನಡೆಸಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು.

    ಹೆಸರು ಹೇಳಲಿಚ್ಛಿಸದ ಶಿಕ್ಷಕಿ

    ರಾಯಚೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts