More

    ಗಾಂಧಿನಗರದಲ್ಲಿ ಮೂಲ ಸೌಕರ್ಯದ್ದೇ ಚಿಂತೆ

    ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ವಾರ್ಡ್ 23 ರ ಗಾಂಧಿನಗರದಲ್ಲಿ 2 ಸಾವಿರ ಜನರು ವಾಸವಿದ್ದಾರೆ. ಇಲ್ಲಿ ಎಸ್ಸಿ-ಎಸ್ಟಿ, ಮುಸ್ಲಿಂ, ವಿಶ್ವಕರ್ಮ ಸೇರಿ ಇತರೆ ಸಮುದಾಯದವರು ವಾಸವಿದ್ದು, ಶೇ.70 ರಷ್ಟು ಮಂದಿ ಜೀವನೋಪಾಯಕ್ಕೆ ದಿನಗೂಲಿಯನ್ನೇ ನೆಚ್ಚಿಕೊಂಡಿದ್ದಾರೆ.

    ಮಳೆಯ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯಿಂದ ಶೇಂಗಾ ಮಿಲ್‌ಗಳು ಮುಚ್ಚಿದ್ದು, ಇಲ್ಲಿನ ಜನಜೀವನ ದುಸ್ತರವಾಗಿದೆ.

    ವಿಸ್ತೀರ್ಣ: ಎರಡು ಸಾವಿರ ಜನಸಂಖ್ಯೆ ಇರುವ ವಾರ್ಡ್ ಸಂಪಿಗೆ ಬೀದಿಯಿಂದ ಗಾಂಧಿನಗರ ಕೊನೆ ಭಾಗದವರೆಗೆ ಮತ್ತು ಕೊರಚರ ಹಟ್ಟಿಯಿಂದ ಮಸೀದಿವರೆಗೆ ವಿಸ್ತೀರ್ಣ ಹೊಂದಿದೆ.

    ಸರಿಯಾದ ರಸ್ತೆ ಮತ್ತು ಚರಂಡಿಗಳ ವ್ಯವಸ್ಥೆ ಇಲ್ಲದೆ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಮಳೆ ಬಂದರೆ ಇಲ್ಲಿನ ಜನಜೀವನ ಗಂಡಾಂತರದಲ್ಲಿ ಸಿಲುಕಲಿದೆ.

    ಅನಧಿಕೃತ: ವಾರ್ಡ್ 23ರ ಕುಟುಂಬಗಳು ಸೇರಿ ಅಕ್ಕ-ಪಕ್ಕದ 5 ಸಾವಿರ ಕುಟುಂಬಗಳು ಸರ್ವೇ ನಂಬರ್ 179 ಮತ್ತು 280ರಲ್ಲಿ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.

    50 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದುವರೆಗೂ ನ್ಯಾಯ ಸಿಕ್ಕಿಲ್ಲ. ವಾಸದ ಮನೆಗಳಿಗೆ ದಾಖಲಾತಿಗಳಿಲ್ಲದ ಕಾರಣ, ಮಳೆಗಾಲದಲ್ಲಿ ಅನಾಹುತಗಳಾದಾಗಲೂ ಸಣ್ಣ ಪರಿಹಾರವೂ ದಕ್ಕುತ್ತಿಲ್ಲ.

    ಕಳೆದ ಮಳೆಗಾಲದಲ್ಲಿ 7 ಗುಡಿಸಲು ಕುಸಿದು ಬಿದ್ದಿವೆ. ಸರಿಯಾದ ದಾಖಲೆ ಇಲ್ಲದ ಕಾರಣ ಪರಿಹಾರ ಸಿಕ್ಕಿಲ್ಲ.

    ಆಚರಣೆ: ಹಿಂದೂ ಮತ್ತು ಮುಸ್ಲಿಮರ ಸಹಬಾಳ್ವೆ ಇರುವ ವಾರ್ಡ್‌ನಲ್ಲಿ ಮಲಿಯಮ್ಮ ದೇವಸ್ಥಾನ ಮತ್ತು ಮಸೀದಿಗಳಿವೆ. ಯುಗಾದಿ ಮತ್ತು ಮಾರಮ್ಮ ಸೇರಿ ರಂಜಾನ್ ಜತೆಗೆ ವಿಶೇಷವಾಗಿ ಹೋಳಿಗೆಮ್ಮ ಹಬ್ಬ ಆಚರಿಸುತ್ತಾರೆ.

    ಬೇಡಿಕೆಗಳು: ವಾರ್ಡ್‌ನಲ್ಲಿ ಸಮರ್ಪಕ ವಿದ್ಯುತ್ ಕಂಬಗಳ ವ್ಯವಸ್ಥೆ ಇಲ್ಲ. ಅಂಗನವಾಡಿ ನಿರ್ವಹಣೆಗೆ ಕಟ್ಟಡವಿಲ್ಲ. ವಾಲ್ಮೀಕಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

    ಕೆಲವೆಡೆ ರಸ್ತೆ, ಚರಂಡಿಗಳ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಕೆರೆಯಂತಾಗುತ್ತದೆ. ಅಗತ್ಯ ಸೌಕರ್ಯಗಳಿಗೂ ಇಲಾಖೆಗಳಿಂದ ಸ್ಪಂದನೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

    ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವ್ಯವಸ್ಥೆ ಇಲ್ಲದೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಕೋರ್ಟ್‌ನಲ್ಲಿ ಪ್ರಕರಣವಿದ್ದು, ಹಕ್ಕುಪತ್ರಗಳ ವಿತರಣೆ ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳ ವಾದವಾಗಿದೆ.
    ಎಚ್.ಪಿ.ವಿರೂಪಾಕ್ಷಪ್ಪ, ವಾರ್ಡ್ ಸದಸ್ಯ


    ನಗರದ 31 ವಾರ್ಡ್‌ಗಳ ಮೂಲ ಸೌಕರ್ಯಗಳಿಗೆ ತಲಾ 17.5 ಲಕ್ಷ ರೂ. ಅನುದಾನ ನೀಡಲು ಜಿಲ್ಲಾಧಿಕಾರಿ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕಾಮಗಾರಿ ಆರಂಭಿಸುತ್ತೇವೆ.
    ಲೋಕೇಶ್, ನಗರಸಭೆ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts