More

    ಅಂಗನವಾಡಿಗೆ ಕಾಯಂ ಶಿಕ್ಷಕರಿಲ್ಲ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸಮೀಪದ ಭಗತ್ ನಗರದಲ್ಲಿರುವ ಅಂಗನವಾಡಿಯಲ್ಲಿ ಮಕ್ಕಳಿದ್ದರೂ ಕಾಯಂ ಶಿಕ್ಷಕಿ ಹಾಗೂ ಸಹಾಯಕಿಯರ ನೇಮಕಾತಿ ಮಾತ್ರ ನಡೆದಿಲ್ಲ.

    ಬಹು ವರ್ಷದ ಬೇಡಿಕೆ ಬಳಿಕ ಕಂಚುಗೋಡು ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳ ಹೋರಾಟದಿಂದ 2018ರಲ್ಲಿ ಅಂಗನವಾಡಿ ವಿಸ್ತರಣಾ ಕೇಂದ್ರ ಆರಂಭಕ್ಕೆ ಅನುಮತಿ ಸಿಕ್ಕಿದೆ. ಕಳೆದ ವರ್ಷ ಈ ವಿಸ್ತರಣಾ ಕೇಂದ್ರವನ್ನೇ ಅಂಗನವಾಡಿಯಾಗಿ ಮುನ್ನಡೆಸಲು ಅವಕಾಶ ಕಲ್ಪಿಸಲಾಯಿತು. ಆಗಿನ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಉದ್ಘಾಟಿಸಿದ್ದರು.

    ಕಂಚುಗೋಡು ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಕಳೆದ 5-6 ವರ್ಷಗಳಿಂದ ಈ ಅಂಗನವಾಡಿ ನಡೆಯುತ್ತಿದೆ. ಶಿಕ್ಷಕರು ಮತ್ತು ಸಹಾಯಕಿಯರ ವೇತನ ಸಹಿತ ಎಲ್ಲ ಖರ್ಚು-ವೆಚ್ಚಗಳನ್ನು ಹಳೇ ವಿದ್ಯಾರ್ಥಿಗಳೇ ಭರಿಸುತ್ತಿದ್ದರು. ಇಲಾಖೆ ಹಾಗೂ ಜನಪ್ರತಿನಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ಅಂಗನವಾಡಿಯಾಗಿ ಮೇಲ್ದರ್ಜೆಗೇರಿತ್ತು. ಅದಾಗಿಯೂ ಸರ್ಕಾರದಿಂದ ಆಹಾರ ಸಾಮಗ್ರಿ ಪೂರೈಕೆಯಾಯಿತೇ ಹೊರತು ಶಿಕ್ಷಕರ ನೇಮಕಾತಿ ನಡೆದಿಲ್ಲ. ಸಂಬಂಧಿಸಿದ ಇಲಾಖೆಯೂ ಇದನ್ನು ಸಂಪೂರ್ಣ ನಿರ್ಲಕ್ಷಿಸಿದೆ.

    ಪುಟಾಣಿಗಳ ಭವಿಷ್ಯ ಅತಂತ್ರ

    ಕಳೆದ ವರ್ಷದ ಡಿಸೆಂಬರ್‌ನಿಂದ ಕಂಚುಗೋಡು, ಕೊಡಪಾಡಿ, ಮೊವಾಡಿ ಅಂಗನವಾಡಿ ಕೇಂದ್ರಗಳಿಂದ ದಿನಕ್ಕೊಬ್ಬರಂತೆ ಅಂಗನವಾಡಿ ಕಾರ‌್ಯಕರ್ತೆಯರನ್ನು ಇಲ್ಲಿಗೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಕಾಯಂ ಶಿಕ್ಷಕಿ ಯಾರು ಎಂಬ ಪ್ರಶ್ನೆ ಪುಟಾಣಿ ಮಕ್ಕಳ ಮನಸ್ಸಿನಲ್ಲಿ ಮನೆ ಮಾಡಿದೆ. ಈಗ ಬೇರೊಂದು ಅಂಗನವಾಡಿ ಕೇಂದ್ರದ ಶಿಕ್ಷಕಿಯನ್ನು 3 ದಿನಕ್ಕೊಮ್ಮೆ ಇಲ್ಲಿಗೆ ನಿಯೋಜಿಸಲಾಗಿದೆ.

    22 ಮಕ್ಕಳಿಂದ ಕಲಿಕೆ

    ಪ್ರಸ್ತುತ ಇಲ್ಲಿ 22 ಮಕ್ಕಳಿದ್ದು, ಬಡಮಕ್ಕಳ ಭವಿಷ್ಯದ ಬಗ್ಗೆ ಇಲಾಖೆಯ ನಿರ್ಲಕ್ಷ್ಯಕ್ಕೆ ಪಾಲಕರು ಆಕ್ರೋಶಗೊಂಡಿದ್ದಾರೆ. ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯಲು ಅಂಗನವಾಡಿಗಳ ಅವ್ಯವಸ್ಥೆಯೂ ಕಾರಣ. ಕಾರಣಾಂತರಗಳಿಂದ ಹೊಸಾಡು ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯುದಿಲ್ಲವಾದ್ದರಿಂದ ಅವ್ಯವಸ್ಥೆಯ ಕುರಿತು ಮುತುವರ್ಜಿ ವಹಿಸುವವರು ಯಾರೂ ಇಲ್ಲ ಎಂಬುದು ಊರವರ ಅಳಲು.

    ಕಳೆದ 5 ವರ್ಷಗಳಿಂದ ಕಂಚುಗೋಡು ಅಂಗನವಾಡಿ ಕೇಂದ್ರಕ್ಕೆ ಕಾಯಂ ಶಿಕ್ಷಕಿ ಹಾಗೂ ಸಹಾಯಕಿಯರ ನೇಮಕವಾಗಿಲ್ಲ. ಬಹುಕಾಲದ ಬೇಡಿಕೆ ಇದಾಗಿದ್ದು, ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

    -ಚೌಕಿ ಅಶೋಕ ಖಾರ್ವಿ, ಅಧ್ಯಕ್ಷ, ಹಳೇವಿದ್ಯಾರ್ಥಿ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts