More

    ಯುವಕರಿಗೆ ಜಾನಪದ ಕಲೆಯ ತರಬೇತಿ

    ದಾವಣಗೆರೆ: ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯದ 1800 ಯುವಕರಿಗೆ ತರಬೇತಿ ನೀಡಿದ್ದು, ಅವರಲ್ಲಿ 650 ಮಂದಿಯನ್ನು ‘ಕಲಾವಿದರು’ ಎಂದು ಸರ್ಕಾರ ಘೋಷಿಸಲಿದೆ ಎಂದು, ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

    ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ-2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತಲಾ 5 ಕಲಾ ಪ್ರಕಾರಗಳನ್ನು ಆಯ್ಕೆ ಮಾಡಿ, ಇಬ್ಬರು ಶಿಕ್ಷಕರನ್ನು ನೇಮಿಸಿ, 30 ವರ್ಷದೊಳಗಿನ ಯುವಕರಿಗೆ ತರಬೇತಿ ನೀಡುವ ಮೂಲಕ ನಶಿಸಿ ಹೋಗಿದ್ದ ಕಲಾ ಪ್ರಕಾರಗಳಿಗೆ ಮರುಜೀವ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಎರಡು ಕಲಾ ತಂಡಗಳನ್ನು ರಾಜ್ಯಮಟ್ಟದ ಉತ್ಸವಗಳಿಗೆ ಕಳುಹಿಸಲಿದ್ದು, ರಾಜ್ಯದ 62 ತಂಡಗಳ 650 ಕಲಾವಿದರ ಪ್ರದರ್ಶನವು ಮಾ.9 ಹಾಗೂ 10ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.

    ಜಾನಪದ ಕಲೆ ಮನಸ್ಸಿಗೆ ಸಕಾರಾತ್ಮಕ ಚೈತನ್ಯ ತುಂಬಲಿದ್ದು, ಧನಾತ್ಮಕ ಆಲೋಚನೆ, ಮನಸ್ಸು ಶುದ್ಧೀಕರಿಸುವ ತಾಕತ್ತು ಅದರಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿರುವುದು ಎಲ್ಲರ ಕರ್ತವ್ಯ ಎಂದರು.

    ಮನಸ್ಸು ಮತ್ತು ಶರೀರವನ್ನು ಶುದ್ಧಗೊಳಿಸುವ ಜಾನಪದ, ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಬೇರೆ ದೇಶಗಳಿಗಿಂತ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿರುವುದಕ್ಕೆ ಜಾನಪದ ಕಾರಣ ಎಂದು ಹೇಳಿದರು.

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಜಾನಪದ ಜೇನು ತುಪ್ಪವಿದ್ದಂತೆ. ಅದನ್ನು ಸವಿದಾಗ ಬಾಯಿ ಸಿಹಿಯಾಗುತ್ತದೆ. ಜಾನಪದ ಹಾಡುಗಳನ್ನು ಕೇಳಿದಾಗ ಚೈತನ್ಯ ಮೂಡುತ್ತದೆ ಎಂದರು.

    ಜಾನಪದ ಸಾಹಿತ್ಯದ ಪ್ರಾಮುಖ್ಯತೆ ಕುರಿತು ಈಗ ಸರ್ಕಾರ ಕಣ್ತೆರೆದಿದ್ದು, ಮುಂದೆ ಇದನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

    ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿದರು. ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್. ವಿಶ್ವನಾಥ್ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಸಹಾಯಕ ನಿರ್ದೇಶಕ ರವಿಚಂದ್ರ, ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ ಜಿಲ್ಲಾ ಸಂಚಾಲಕ ಆಲೂರು ನಿಂಗರಾಜ, ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಪ್ರಕಾರಗಳ ಕಲೆಯ ಅನಾವರಣಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts