More

    ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಬೆಂಗಳೂರು: ಸೌರವ್ ಗಂಗೂಲಿ ಈಗ ಬಿಸಿಸಿಐ ಅಧ್ಯಕ್ಷರಾಗಿದ್ದರೆ, ರಾಹುಲ್ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರಾಗಿದ್ದಾರೆ. ಈ ಮೂಲಕ ಇವರಿಬ್ಬರೂ ಮೈದಾನದ ಹೊರಗೆ ಭರ್ಜರಿ ಜತೆಯಾಟದ ಮೂಲಕ ಕ್ರಿಕೆಟ್ ಬೆಳವಣಿಗೆಗೆ ಅಮೋಘ ಕೊಡುಗೆ ನೀಡುತ್ತಿದ್ದಾರೆ. ಇದೇ ಗಂಗೂಲಿ-ದ್ರಾವಿಡ್ ಜೋಡಿ ಕ್ರಿಕೆಟ್ ಮೈದಾನದಲ್ಲೂ ಆಡಿದ್ದ ಅದ್ಭುತ ಜತೆಯಾಟವೊಂದಕ್ಕೆ ಮಂಗಳವಾರ 21 ವರ್ಷ ಪೂರ್ಣಗೊಂಡಿದೆ.

    ಇದನ್ನೂ ಓದಿ: ಸ್ಟಿಕ್ ಮ್ಯಾಜಿಕ್ ನಿಲ್ಲಿಸಿದ ಬಲ್ಬೀರ್ ಸಿಂಗ್

    1999ರ ಏಕದಿನ ವಿಶ್ವಕಪ್‌ನಲ್ಲಿ ಮೇ 26ರಂದು ಟೌಂಟನ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಎಡಗೈ-ಬಲಗೈ ಜೋಡಿಯಾದ ಗಂಗೂಲಿ-ದ್ರಾವಿಡ್ 318 ರನ್‌ಗಳ ಭರ್ಜರಿ ಜತೆಯಾಟವಾಡಿ ಭಾರತಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟಿದ್ದರು. ಗಂಗೂಲಿ 158 ಎಸೆತಗಳಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ ಜೀವನಶ್ರೇಷ್ಠ 183 ರನ್ ಬಾರಿಸಿದ್ದರೆ, ಅವರಿಗೆ ಸಮರ್ಥ ಸಾಥ್ ನೀಡಿದ್ದ ದ್ರಾವಿಡ್ 129 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 145 ರನ್ ಸಿಡಿಸಿದ್ದರು. 1996ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಜತೆಯಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಗಂಗೂಲಿ-ದ್ರಾವಿಡ್ ಜೋಡಿ ಮತ್ತೊಮ್ಮೆ ಸಾಮರ್ಥ್ಯ ನಿರೂಪಿಸಿದ್ದ ಅಪೂರ್ವ ದಿನ ಅದಾಗಿತ್ತು.

    ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಇದನ್ನೂ ಓದಿ: ಜಾಂಟಿ ರೋಡ್ಸ್ ಮನಗೆದ್ದ ಭಾರತೀಯ ಫೀಲ್ಡರ್

    ಈಗಲೂ ಏಕದಿನ ಕ್ರಿಕೆಟ್ ಚರಿತ್ರೆಯ 4ನೇ ಗರಿಷ್ಠ ಜತೆಯಾಟ ಇದಾಗಿದೆ. ಅಲ್ಲದೆ ಗಂಗೂಲಿ ಗಳಿಸಿದ 183 ರನ್ ಈಗಲೂ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನ ಗರಿಷ್ಠ ಗಳಿಕೆಯಾಗಿದೆ. ಭಾರತ ತಂಡವೆಂದರೆ ಸಚಿನ್ ತೆಂಡುಲ್ಕರ್ ಎಂಬಂತಿದ್ದ ಕಾಲದಲ್ಲಿ ಗಂಗೂಲಿ-ದ್ರಾವಿಡ್ ಜೋಡಿ, ಸಚಿನ್ ಕಣಕ್ಕಿಳಿಯುವ ಮೊದಲೇ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತ್ತು. ಈ ಪಂದ್ಯದಲ್ಲಿ ಸಚಿನ್ ಕೇವಲ 2 ರನ್‌ಗೆ ಔಟಾಗಿದ್ದರು. ಕೊನೆಯ 20 ಓವರ್‌ಗಳಲ್ಲಿ ಭಾರತ ತಂಡ 201 ರನ್ ಕಸಿಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಅಚ್ಚರಿ ಮೂಡಿಸಿತ್ತು. ಆಗಿನ್ನೂ ಟಿ20 ಕ್ರಿಕೆಟ್ ಶುರುವಾಗಿರದ ಕಾರಣ ಈ ಸಾಧನೆ ಅಪೂರ್ವವೆನಿಸಿತ್ತು. ಗಂಗೂಲಿ ಏಕದಿನ ಕ್ರಿಕೆಟ್ ಇತಿಹಾಸದ ಚೊಚ್ಚಲ ದ್ವಿಶತಕವನ್ನು ದಾಖಲಿಸಲು ಸಾಧ್ಯವಾಗದಿದ್ದುದು ಈ ಪಂದ್ಯದಲ್ಲಿ ಭಾರತ ಎದುರಿಸಿದ ಏಕೈಕ ನಿರಾಸೆ.

    ಹೇಗಿತ್ತು ಆ ಪಂದ್ಯ?

    ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಭಾರತ ತಂಡ ಆರಂಭಿಕ ಸಡಗೋಪನ್ ರಮೇಶ್ (5) ವಿಕೆಟ್‌ಅನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತ್ತು. ಆಗ ಜತೆಗೂಡಿದ ಗಂಗೂಲಿ-ದ್ರಾವಿಡ್ ಜೋಡಿ ಶ್ರೀಲಂಕಾ ಬೌಲರ್‌ಗಳಾದ ಚಮಿಂಡಾ ವಾಸ್, ಮುತ್ತಯ್ಯ ಮುರಳೀಧರನ್, ವಿಕ್ರಮಸಿಂಘೆ, ಉಪಶಾಂತಾ ಮತ್ತು ಜಯಸೂರ್ಯ ದಾಳಿಯನ್ನು ಸಮರ್ಥವಾಗಿ ಎದುರಿಸಿ 46ನೇ ಓವರ್‌ವರೆಗೂ ಭಾರತ ತಂಡಕ್ಕೆ ಆಸರೆಯಾಗಿತ್ತು. ಈ ಮೂಲಕ ಭಾರತ ತಂಡ 6 ವಿಕೆಟ್‌ಗೆ 373 ರನ್‌ಗಳ ಭರ್ಜರಿ ಮೊತ್ತ ಕೂಡಿ ಹಾಕಿತ್ತು. ಪ್ರತಿಯಾಗಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ತಂಡ ರಾಬಿನ್ ಸಿಂಗ್ (31ಕ್ಕೆ 5) ದಾಳಿಗೆ ಕುಸಿದು 42.3 ಓವರ್‌ಗಳಲ್ಲಿ 216 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಮೂಲಕ ಮೊಹಮ್ಮದ್ ಅಜರುದ್ದೀನ್ ಸಾರಥ್ಯದ ಭಾರತ ತಂಡ 157 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಟೂರ್ನಿಯ ನಾಕೌಟ್ ಪ್ರವೇಶದ ಆಸೆಯನ್ನು ಜೀವಂತ ಉಳಿಸಿಕೊಂಡಿತ್ತು. ಗಂಗೂಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts