More

    ಸ್ಟಿಕ್ ಮ್ಯಾಜಿಕ್ ನಿಲ್ಲಿಸಿದ ಬಲ್ಬೀರ್ ಸಿಂಗ್

    ಚಂಡೀಗಢ: ಸ್ವತಂತ್ರ ಭಾರತದ ಮೊಟ್ಟಮೊದಲ ಕ್ರೀಡಾತಾರೆ ಹಾಗೂ ಮೂರು ಒಲಿಂಪಿಕ್ಸ್ ಸ್ವರ್ಣ ಪದಕಗಳ ಒಡೆಯರಾದ ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಸೀನಿಯರ್ ಸೋಮವಾರ ಬೆಳಗ್ಗೆ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 96 ವರ್ಷದ ಅವರು ಕಳೆದ ಎರಡು ವಾರಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.

    ಬಲ್ಜೀರ್ ಬೆಳಗ್ಗೆ 6.17ಕ್ಕೆ ನಿಧನ ಹೊಂದಿದರು ಎಂದು ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಅಭಿಜಿತ್ ಸಿಂಗ್ ತಿಳಿಸಿದ್ದಾರೆ. ಬಲ್ಬೀರ್ ಮೇ 8ರಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 18ರಿಂದ ಅವರು ಅರೆ-ಕೋಮಾ ಸ್ಥಿತಿಯಲ್ಲಿದ್ದರು. ಅವರಿಗೆ ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಚಿಕಿತ್ಸೆಯ ವೇಳೆ ಅವರು ಮೂರು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದರು. ಅವರು ಪುತ್ರಿ ಸುಶ್ಬೀರ್ ಮತ್ತು ಮೂವರು ಪುತ್ರರಾದ ಕನ್ವಲ್ಬೀರ್, ಕರಣ್​ಬೀರ್ ಮತ್ತು ಗುಲ್ಬೀರ್​ರನ್ನು ಅಗಲಿದ್ದಾರೆ. ಅವರ ಪುತ್ರರು ಕೆನಡದಲ್ಲಿ ನೆಲೆಸಿದ್ದು, ಚಂಡೀಗಢದಲ್ಲಿ ಅವರು ಪುತ್ರಿ ಮತ್ತು ಮೊಮ್ಮಗ ಕಬೀರ್ ಜತೆಗೆ ನೆಲೆಸಿದ್ದರು. ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ ಅಂತ್ಯ ಸಂಸ್ಕಾರ ನಡೆಯಿತು. ಮೊಮ್ಮಗ ಕಬೀರ್ ಅಂತಿಮ ವಿಧಿವಿಧಾನ ನೆರವೇರಿಸಿದರು.

    ಇದನ್ನೂ ಓದಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

    ಎಲ್ಲರಿಗಿಂತ ‘ಸೀನಿಯರ್’: 1923ರ ಡಿಸೆಂಬರ್ 31ರಂದು ಪಂಜಾಬ್​ನ ಹರಿಪುರ ಖಲ್ಸಾ ಗ್ರಾಮದಲ್ಲಿ ಜನಿಸಿದ್ದ ಬಲ್ಜೀರ್ ಅವರ ಹಾಕಿ ಪ್ರತಿಭೆಯನ್ನು ಕಾಲೇಜು ಕೋಚ್ ಹರ್​ಬೈಲ್ ಸಿಂಗ್ ಮೊದಲಿಗೆ ಗುರುತಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ದಲೀಪ್ ಸಿಂಗ್ ಪುತ್ರರಾದ ಬಲ್ಬೀರ್, ಪಂಜಾಬ್ ಪೊಲೀಸ್ ಇಲಾಖೆಯಲ್ಲೂ ಅಧಿಕಾರಿಯಾಗಿದ್ದರು. ಸಣಕಲು ದೇಹದ ಬಲ್ಬೀರ್ ಆಗಿನ ಕಾಲದಲ್ಲಿ ಭಾರತದ ಅತ್ಯಂತ ಫಿಟ್ ಆದ ಕ್ರೀಡಾಪಟು ಎನಿಸಿದ್ದರು. ಅವರ ಸ್ಪೂರ್ತಿಯಿಂದ ಹಲವಾರು ‘ಬಲ್ಬೀರ್ ಸಿಂಗ್’ ಹೆಸರಿನ ಆಟಗಾರರು ಹಾಕಿಗೆ ಪ್ರವೇಶ ಪಡೆದಿದ್ದ ಕಾರಣ ಅವರ ಹೆಸರಿಗೆ ‘ಸೀನಿಯರ್’ ಎಂಬ ವಿಶೇಷತೆ ಸೇರ್ಪಡೆಗೊಂಡಿತ್ತು. ಬೇರೆ ಯಾವ ಬಲ್ಬೀರ್ ಸಿಂಗ್ ಕೂಡ ಯಾರೂ ಸೀನಿಯರ್ ಬಲ್ಬೀರ್ ಸಾಧನೆಯ ಸನಿಹ ಬರಲಿಲ್ಲ ಎಂಬುದು ವಿಪರ್ಯಾಸ. ಅವರ ಆತ್ಮಕತೆ ‘ದಿ ಗೋಲ್ಡನ್ ಹ್ಯಾಟ್ರಿಕ್, ಮೈ ಹಾಕಿ ಡೇಸ್’ 1977ರಲ್ಲಿ ಬಿಡುಗಡೆಯಾಗಿತ್ತು. ‘ಹಾಕಿ ಮೇಲಿನ ಪ್ರೀತಿ ಚಿರಂತನವಾದುದು. ಲಂಡನ್​ನಲ್ಲಿ ಅದು ಅರಳಿತು. ಹೆಲ್ಸಿಂಕಿಯಲ್ಲಿ ಮದುವೆಯಾಯಿತು. ಮೆಲ್ಬೋರ್ನ್​ನಲ್ಲಿ ಹನಿಮೂನ್​ಗೆ ಹೋದೆವು’ ಎಂದು ಅವರು ಈ ಪುಸ್ತಕದಲ್ಲಿ ಬಣ್ಣಿಸಿದ್ದಾರೆ. ಬಲ್ಬೀರ್​ಗೆ ಭಾರತರತ್ನ ಗೌರವ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೆಲವರ್ಷಗಳ ಹಿಂದೆ ಪ್ರಧಾನಿ ಮೋದಿಗೆ ಮನವಿ ಪತ್ರ ಸಲ್ಲಿಸಿದ್ದರು. ಕಳೆದ ವರ್ಷ ಪಂಜಾಬ್ ಸರ್ಕಾರದಿಂದ ಅವರಿಗೆ ಮಹಾರಾಜಾ ರಂಜಿತ್ ಸಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    ಸ್ವತಂತ್ರ ಭಾರತದ ಮೊದಲ ಕ್ರೀಡಾತಾರೆ

    ಸ್ವಾತಂತ್ರ್ಯದ ಬಳಿಕ ಭಾರತ ತಂಡ ಆಡಿದ ಮೊಟ್ಟಮೊದಲ ಒಲಿಂಪಿಕ್ಸ್​ನಲ್ಲಿ (1948) ಬಲ್ಬೀರ್ ಸ್ವರ್ಣ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬ್ರಿಟನ್ ವಿರುದ್ಧದ ಫೈನಲ್​ನಲ್ಲಿ 4-0 ಗೆಲುವಿನ ವೇಳೆ 2 ಗೋಲು ಬಲ್ಬೀರ್ ಸ್ಟಿಕ್​ನಿಂದಲೇ ಸಿಡಿದಿದ್ದವು. ಹೀಗಾಗಿ ಅವರು ಸ್ವಾತಂತ್ರ್ಯದ ಬಳಿಕ ಭಾರತೀಯ ಕ್ರೀಡೆಯಲ್ಲಿ ಮೊದಲ ಹೀರೋ ಆಗಿದ್ದರು. 1956ರ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಜಯಿಸಿದ ಭಾರತ ತಂಡಕ್ಕೆ ನಾಯಕರೂ ಆಗಿದ್ದರು. ಭಾರತ ಪರ 61 ಪಂದ್ಯಗಳಲ್ಲಿ 246 ಗೋಲು ಸಿಡಿಸಿದ್ದರು.

    ಇದನ್ನೂ ಓದಿ  ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

    ನೆರವೇರಲಿಲ್ಲ ಅಂತಿಮ ಇಚ್ಛೆ

    1985ರಲ್ಲಿ ಸಾಯ್ನಿಂದ ರಾಷ್ಟ್ರೀಯ ಕ್ರೀಡಾ ಮ್ಯೂಸಿಯಂ ಸ್ಥಾಪಿಸುವ ಪ್ರಯತ್ನ ನಡೆದಾಗ ಬಲ್ಬೀರ್ ಸಿಂಗ್, 3 ಒಲಿಂಪಿಕ್ಸ್ ಸ್ವರ್ಣ ಪದಕ ಮತ್ತು ಪದ್ಮಶ್ರೀ ಪ್ರಶಸ್ತಿ ಹೊರತಾಗಿ ತಮ್ಮಲ್ಲಿದ್ದ ಎಲ್ಲ ಸ್ಮರಣಿಕೆಗಳನ್ನು ಅದಕ್ಕೆ ನೀಡಿದ್ದರು. ಒಲಿಂಪಿಕ್ಸ್ ಬ್ಲೇಜರ್ಸ್, 36 ಪದಕಗಳು, 100 ಅಪರೂಪದ ಚಿತ್ರಗಳು ಅದರಲ್ಲಿ ಸೇರಿದ್ದವು. ಆದರೆ ಈ ಮ್ಯೂಸಿಯಂ ಆರಂಭವಾಗಲೇ ಇಲ್ಲ ಮತ್ತು ಅವರ ಸ್ಮರಣಿಕೆಗಳೂ ಕಾಣೆಯಾಗಿಬಿಟ್ಟವು. ಅವುಗಳನ್ನು ಹುಡುಕಿಕೊಡುವಂತೆ 2015ರಿಂದಲೂ ಅವರು ಸರ್ಕಾರ ಬೆನ್ನುಹತ್ತಿದ್ದರು. ಇದಕ್ಕಾಗಿ ಹಲವಾರು ಬಾರಿ ದೆಹಲಿಗೆ ಅಲೆದಾಡಿದರೂ ಈ ಸ್ಮರಣಿಕೆಗಳನ್ನು ಮತ್ತೆ ನೋಡುವ ಅವರ ಆಸೆ ಕೈಗೂಡಲೇ ಇಲ್ಲ.

    ಮೋದಿ ಸಂತಾಪ

    ಪದ್ಮಶ್ರೀ ಬಲ್ಬೀರ್ ಸಿಂಗ್ ಸೀನಿಯರ್ ಅವರನ್ನು ಸ್ಮರಣೀಯ ಕ್ರೀಡಾ ಸಾಧನೆಗಳಿಗಾಗಿ ನೆನೆಯಲಾಗುತ್ತದೆ. ಅವರು ಅಪಾರ ಗೌರವ ಮತ್ತು ಕೀತಿ ತಂದಿದ್ದಾರೆ. ನಿಸ್ಸಂಶಯವಾಗಿ ಅಮೋಘ ಹಾಕಿ ಆಟಗಾರ. ಅವರ ನಿಧನದಿಂದ ದುಃಖ ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

    ಕ್ರೀಡಾ ಜಗತ್ತು ಕಂಬನಿ

    ಬಲ್ಬೀರ್ ನಿಧನಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಒಲಿಂಪಿಕ್ಸ್ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ಸಹಿತ ಹಲವು ಕ್ರೀಡಾತಾರೆಯರು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಕಂಬನಿ ಮಿಡಿದಿದ್ದಾರೆ. ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ, ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ.

    ಇಂದಿಗೂ ಅಳಿಯದ ಒಲಿಂಪಿಕ್ಸ್ ದಾಖಲೆ

    ಒಲಿಂಪಿಕ್ಸ್ ಹಾಕಿ ಪಂದ್ಯದ ಫೈನಲ್​ನಲ್ಲಿ ಗರಿಷ್ಠ ಗೋಲು ದಾಖಲಿಸಿದ ದಾಖಲೆ ಈಗಲೂ ಬಲ್ಬೀರ್ ಸಿಂಗ್ ಹೆಸರಿನಲ್ಲಿದೆ. ಅವರು 1952ರಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ತಂಡದ 6-1 ಗೆಲುವಿನ ವೇಳೆ 5 ಗೋಲು ಸಿಡಿಸಿದ್ದರು. ಕಳೆದ 68 ವರ್ಷಗಳಿಂದ ಅವರೇ ಈ ದಾಖಲೆಯ ಒಡೆಯರಾಗಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ದೀರ್ಘಕಾಲದಿಂದ ಇರುವ ದಾಖಲೆಗಳಲ್ಲಿ ಇದೂ ಒಂದಾಗಿದೆ.

    ಧ್ಯಾನ್​ಚಂದ್ ಬಳಿಕ ಶ್ರೇಷ್ಠ ಆಟಗಾರ

    ಹಾಕಿ ಮಾಂತ್ರಿಕ ಮೇಜರ್ ಧ್ಯಾನ್​ಚಂದ್ ಬಳಿಕ ಹಾಕಿ ಕ್ರೀಡೆಯ ಅತಿಶ್ರೇಷ್ಠ ಆಟಗಾರ ಹಾಗೂ ಶ್ರೇಷ್ಠ ಸೆಂಟರ್-ಫಾರ್ವರ್ಡ್ ಆಟಗಾರ ರಾಗಿ ಬಲ್ಬೀರ್ ಸಿಂಗ್ ಪರಿಗಣಿಸಲ್ಪಡುತ್ತಾರೆ. ಧ್ಯಾನ್​ಚಂದ್ ಆಟ ಮಾಯಾಜಾಲದಂತೆ ಕಂಡರೆ, ಬಲ್ಬೀರ್ ಅವರದು ಕಲಾತ್ಮಕತೆಯಿಂದಾಗಿ ಗಮನಸೆಳೆಯುತ್ತಿತ್ತು. ಧ್ಯಾನ್​ಚಂದ್-ಬಲ್ಬೀರ್ ಎಂದೂ ಜತೆಯಾಗಿ ಆಡಿದವರಲ್ಲ. ಆದರೆ ಇಬ್ಬರ ನಡುವೆ ಸದಾ ಹೋಲಿಕೆಗಳು ನಡೆಯುತ್ತಿದ್ದವು. ಬಲ್ಬೀರ್ ಅವರೇ ಹೇಳಿರುವ ಪ್ರಕಾರ, ಬಾಲ್ಯದಲ್ಲಿ ಅವರ ಆಟಕ್ಕೆ ಧ್ಯಾನ್​ಚಂದ್ ಅವರೇ ಸ್ಪೂರ್ತಿಯಾಗಿದ್ದರು.

    ವಿಶ್ವಕಪ್ ಗೆಲುವಿನಲ್ಲೂ ಪ್ರಮುಖ ಪಾತ್ರ

    ನಿವೃತ್ತಿಯ ನಂತರ ಕೋಚ್ ಆಗಿದ್ದ ಬಲ್ಬೀರ್, 1971ರ ಹಾಕಿ ವಿಶ್ವಕಪ್​ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿದ್ದರು. 4 ವರ್ಷಗಳ ಬಳಿಕ 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಹಾಕಿ ವಿಶ್ವಕಪ್ ಜಯಿಸಿದ ಭಾರತ ತಂಡಕ್ಕೆ ಅವರು ಮ್ಯಾನೇಜರ್ ಆಗಿದ್ದರು. ಧ್ಯಾನ್​ಚಂದ್ ಪುತ್ರ ಅಶೋಕ್​ಕುಮಾರ್ ಒಳಗೊಂಡ ಅಜಿತ್ ಪಾಲ್ ಸಿಂಗ್ ಸಾರಥ್ಯದ ತಂಡಕ್ಕೆ ಅಮೂಲ್ಯ ಸಲಹೆಗಳನ್ನು ನೀಡಿದ್ದ ಬಲ್ಬೀರ್, ಹಾಕಿಯಲ್ಲಿ ಮ್ಯಾಜಿಕ್ ಮಾಡಲು ತನಗೆ ಸ್ಟಿಕ್ ಕೂಡ ಅಗತ್ಯವಿಲ್ಲ ಎಂದು ನಿರೂಪಿಸಿದ್ದರು. ಲೀಗ್ ಹಂತದಲ್ಲಿ ಅರ್ಜೆಂಟೀನಾ ವಿರುದ್ಧ ಸೋತಿದ್ದ ತಂಡಕ್ಕೆ ಬಲ್ಬೀರ್ ಸ್ಪೂರ್ತಿ ತುಂಬಿ ಪ್ರಶಸ್ತಿ ಗೆಲುವಿನ ರೂವಾರಿಯಾಗಿದ್ದರು.

    ತಬ್ಲಿಘಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲು ಪೊಲೀಸರ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts