More

    ವದಂತಿಗಳನ್ನು ತಡೆಯುವುದು ಹೇಗೆ? … ಮುಖ್ಯಮಂತ್ರಿ, ಪೊಲೀಸ್ ಇಲಾಖೆಗೆ ಸೋನಾಕ್ಷಿ ಪ್ರಶ್ನೆ

    ಅದ್ಯಾಕೋ ಸೋನಾಕ್ಷಿ ಸಿನ್ಹಾ ಹಣೆಬರಹವೇ ಸರಿ ಇದ್ದಂತಿಲ್ಲ. ಬೇಡದ ವಿಷಯಗಳೆಲ್ಲಾ ಅವರ ನೆಮ್ಮದಿ ಕೆಡಿಸುತ್ತಿವೆ. ಕಳೆದ ವರ್ಷ ರಾಮಾಯಣ ಕುರಿತ ಒಂದು ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಿಕ್ಕೆ ಸೋನಾಕ್ಷಿ ವಿಪರೀತ ಟ್ರೋಲ್‌ಗೊಳಗಾದರು. ಕೊನೆಗೆ ಅವರ ತಂದೆ ಶತ್ರುಘ್ನ ಸಿನ್ಹಾ ಬಂದು ಕಾಲೆಳೆಯುತ್ತಿರುವವರ ಬಾಯಿ ಮುಚ್ಚಿಸಬೇಕಾಯಿತು. ಈಗ ಮತ್ತೆ ಯಾವುದೋ ಹಳೆಯ ಪ್ರಸಂಗದಿಂದ, ಸೋನಾಕ್ಷಿ ಮುಜುಗರ ಅನುಭವಿಸವಂತಾಗಿದೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹೆಚ್ಚಾಗುತ್ತಿರುವುದರಿಂದ, ಆ ವದಂತಿಗಳನ್ನು ತಡೆಯುವುದು ಹೇಗೆ ಎಂದು ಸೋನಾಕ್ಷಿ, ಮುಖ್ಯಮಂತ್ರಿ ಮತ್ತು ಪೊಲೀಸ್ ಇಲಾಖೆಗೆ ಕೇಳುವಂತಹ ಪರಿಸ್ಥಿತಿ ಎದುರಾಗಿದೆ.

    ಇಷ್ಟಕ್ಕೂ ಆಗಿದ್ದೇನು? ಅದಕ್ಕೆ ಫ್ಲಾಶ್‌ಬ್ಯಾಕ್‌ಗೆ ಹೋಗಬೇಕು. ಕಳೆದ ವರ್ಷ, ಫರ್ಹಾ ಖಾನ್ ನಡೆಸಿಕೊಡುತ್ತಿದ್ದ ‘ಬ್ಯಾಕ್‌ಬೆಂಚರ್ಸ್‌’ ಎಂಬ ಕಾರ್ಯಕ್ರಮದಲ್ಲಿ ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದರು. ಶೂಟಿಂಗ್‌ಗೆ ಹೋಗುತ್ತಿರುವ ಫೋಟೋವೊಂದನ್ನು ಅದ್ಯಾರೋ, ಇದೀಗ ಮತ್ತೆ ಹೊರಬಿಟ್ಟಿದ್ದಾರಂತೆ. ಲಾಕ್‌ಡೌನ್ ಮಧ್ಯೆಯೂ ಸೋನಾಕ್ಷಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಬಿಂಬಿಸುತ್ತಿದ್ದಾರಂತೆ. ಇದರಿಂದ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಸೋನಾಕ್ಷಿ ಅವರನ್ನು ಪ್ರಶ್ನೆ ಕೇಳುತ್ತಿದ್ದಾರೆ. ಅದರಲ್ಲೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ‘ಇಂತಹ ಸಂದರ್ಭದಲ್ಲಿ ಯಾರು ಶೂಟಿಂಗ್ ಮಾಡುತ್ತಾರೆ?’ ಎಂದು ಕೇಳಿರುವುದು ಸೋನಾಕ್ಷಿಗೆ ಇನ್ನಷ್ಟು ಸಿಟ್ಟು ತರಿಸಿದೆ.

    ತಾನು ತನ್ನ ಪಾಡಿಗೆ ಮನೆಯಲ್ಲಿ ಕುಳಿತರೂ, ಸೋಷಿಯಲ್ ಡಿಸ್ಟೆನ್ಸಿಂಗ್ ಅನುಸರಿಸುತ್ತಿದ್ದರೂ, ಸುಮ್ಮನೆ ತಮ್ಮ ಮೇಲೆ ಅಪವಾದವೇಕೆ ಎಂದು ಸೋನಾಕ್ಷಿ ಸಿಟ್ಟಾಗಿದ್ದಾರೆ. ಇದೇ ಸಿಟ್ಟಿನಲ್ಲಿ, ವಿವೇಕ್ ಅಗ್ನಿಹೋತ್ರಿಗೆ ಇಷ್ಟುದ್ದ ಉತ್ತರ ಕೊಟ್ಟಿದ್ದಾರೆ. ಅಷ್ಟು ಸಾಲದೆಂಬಂತೆ, ಇಂತಹ ಸಂದರ್ಭಗಳಲ್ಲಿ ವದಂತಿ ಮತ್ತು ಸುಳ್ಳು ಸುದ್ದಿಗಳನ್ನು ತಡೆಯುವುದು ಹೇಗೆ ಎಂದು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಂಬೈ ಪೊಲೀಸ್‌ಗೂ ಟ್ಯಾಗ್ ಮಾಡಿದ್ದಾರೆ.

    ಎಲ್ಲಾ ಸರಿ, ಮುಖ್ಯಮಂತ್ರಿಗಳ ಕಾರ್ಯಾಲಯ ಅಥವಾ ಮುಂಬೈ ಪೊಲೀಸ್‌ನಿಂದ ಸೋನಾಕ್ಷಿಗೆ ಏನಾದರೂ ಪರಿಹಾರ ಅಥವಾ ಉತ್ತರ ಸಿಗುತ್ತದಾ? ಕಾದು ನೋಡಬೇಕಿದೆ.

    18 ಸಂಘಗಳಿಗೆ ನಾಲ್ಕೂವರೆ ಲಕ್ಷ ಕೊಟ್ಟ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts