More

    ತೂಕ ಕಮ್ಮಿ ಮಾಡ್ಕೋಬೇಕೇ? ಮಧುಮೇಹ ನಿಯಂತ್ರಣಕ್ಕೆ ಬರಬೇಕೇ? ಈ ಪಾನೀಯ ಸೇವಿಸಿ!

    ನಾವೆಲ್ಲ ಬಾಲ್ಯದ ದಿನಗಳಲ್ಲಿ ಅದೆಷ್ಟು ಪೇರಲೆ (ಸೀಬೆಕಾಯಿ) ತಿನ್ನುತ್ತಿದ್ದೆವು. ಆಗ ನಮ್ಮ ಮನೆಯ ಹಿತ್ತಲಲ್ಲೆ ಇದರ ಗಿಡ ಮರಗಳಿರುತ್ತಿದ್ದವು. ಹೋಗ್ತಾ ಬರ‌್ತಾ ಪೀಚು, ಕಾಯಿ, ಹಣ್ಣು ಅನ್ನದೆ ಕೈಗೆ ಸಿಗುವುದನ್ನೆಲ್ಲ ಗುಳುಂ ಮಾಡುತ್ತಿದ್ದೆವು. ಆ ಕಾಯಿಯಿಂದಾಗುವ ಪ್ರಯೋಜನದ ಅರಿವಿಲ್ಲದೆ ಸುಮ್ಮನೆ ತಿನ್ನುತ್ತಿದ್ದೆವು. ಸೀಬೆಕಾಯಿ ಹಲವು ಪೌಷ್ಟಿಕಾಂಶಗಳ ಆಗರ ಎಂಬುದು ಗೊತ್ತೇ ಇರಲಿಲ್ಲ. ಪರೋಕ್ಷವಾಗಿ ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳೆಲ್ಲವೂ ಸೇರುತ್ತಿದ್ದವು. ಈಗ ಕಾಲ ಬದಲಾಗಿದೆ. ಪೇರಲೆ ಕೂಡ ಸೇಬಿನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗತೊಡಗಿದೆ.

    ಪೇರಲೆ ಹಣ್ಣು ಮಾತ್ರವಲ್ಲ ಇದರ ಎಲೆಯೂ ಆರೋಗ್ಯಕ್ಕೆ ಬಹು ಪ್ರಯೋಜನಕಾರಿ. ಪೇರಲೆ ಎಲೆಗಳಿಂದ ಮಾಡಿದ ಚಹಾ ಕೂಡ ತೂಕ ನಷ್ಟ, ಮಧುಮೇಹ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಪೇರಲೆ ಹಣ್ಣು ತಿನ್ನಲು, ಅದರ ಬೀಜಗಳನ್ನು ಅಗಿಯಲು ಸಾಧ್ಯವಿಲ್ಲ ಎನ್ನುವ ಹಿರಿಯ ನಾಗರಿಕರು ಚಿಂತಿಸಬೇಕಿಲ್ಲ. ಅಂಥವರು ಪೇರಲೆ ಗಿಡದ ಎಲೆಗಳ ಚಹಾ ಕುಡಿಯಬಹುದು.

    ಪೌಷ್ಟಿಕಾಂಶಗಳ ಆಗರ:
    ಪೇರಲೆ ಉಷ್ಣವಲಯದ ಹಣ್ಣಾಗಿದ್ದು, ಇದರ ಮೂಲ ಮಧ್ಯ ಅಮೆರಿಕ. ಇದನ್ನು 17ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರು ಭಾರತಕ್ಕೆ ತಂದರು ಎನ್ನಲಾಗಿದೆ. ಹಲವಾರು ವಿಧಗಳಲ್ಲಿ ಕಾಣಸಿಗುವ ಈ ಹಣ್ಣುಗಳು ಪೌಷ್ಟಿಕಾಂಶಗಳ ಗಣಿಯೇ ಹೌದು. ಪೇರಲೆ ಹಣ್ಣುಗಳು ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ, ಮ್ಯಾಂಗನೀಸ್ ಮುಂತಾದವುಗಳ ಸಮೃದ್ಧ ಮೂಲ. ಇವು ಕಡಿಮೆ ಕ್ಯಾಲೋರಿ ಉತ್ಪಾದಿಸುತ್ತವೆ. ಇವುಗಳಲ್ಲಿ ಪ್ರೊಟೀನ್, ಫೈಬರ್ ಅಂಶಗಳು ಹೇರಳವಾಗಿರುತ್ತವೆ. ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣದಂತಹ ಖನಿಜಗಳನ್ನು ಸಹ ಸಣ್ಣ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಇದರಿಂದಾಗಿ ದೈನಂದಿನ ಆಹಾರ ಕ್ರಮಕ್ಕೆ ಪರಿಪೂರ್ಣ ಆರೋಗ್ಯಕರ ಸೇರ್ಪಡೆ ಈ ಸೀಬೆಕಾಯಿ.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪೇರಲೆ ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಧುಮೇಹ ನಿಯಂತ್ರಿಸುವುದಲ್ಲದೆ, ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತವೆ. ಇದರೊಂದಿಗೆ ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ಯೌವನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಪೇರಲೆ ಹಣ್ಣಿನ ತಿರುಳು ಮಾತ್ರವಲ್ಲದೆ, ಇದರ ಬೀಜ, ತೊಗಟೆ ಮತ್ತು ಎಲೆಗಳೂ ಆರೋಗ್ಯಕ್ಕೆ ಬಹುಪ್ರಯೋಜನಕಾರಿಯಾಗಿವೆ.

    ಪೇರಲೆ ಎಲೆಗಳ ಸಾರವು ಪ್ರಪಂಚದ ವಿವಿಧ ಭಾಗಗಳಲ್ಲಿ ಸಾಂಪ್ರದಾಯಿಕ ಔಷಧಗಳ ಭಾಗವಾಗಿದೆ. ಉದಾಹರಣೆಗೆ, ಜಪಾನ್‌ನಲ್ಲಿ ಹರ್ಬಲ್ ಟೀ ತಯಾರಿಸಲು ಔಷಧೀಯ ಗುಣಗಳನ್ನು ಹೊಂದಿರುವ ಪೇರಲೆ ಎಲೆಗಳನ್ನೂ ಸೇರಿಸಲು ಶಿಫಾರಸು ಮಾಡುತ್ತಾರೆ. ಈ ಎಲೆಗಳು ವಿಟಮಿನ್ ಸಿಯ ಶಕ್ತಿ ಕೇಂದ್ರವಾಗಿದೆ ಎನ್ನುತ್ತವೆ ಸಂಶೋಧನೆಗಳು.

    ಪೇರಲೆ ಎಲೆಗಳ ಚಹಾ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು
    1. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ: ಪೇರಲೆ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುವುದಲ್ಲದೆ, ಧೀರ್ಘಾವಧಿಯ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ನೆರವಾಗಲಿದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ. ಊಟದ ನಂತರ ಸೀಬೆ ಎಲೆಯ ಚಹಾವನ್ನು ಕುಡಿಯುವುದರಿಂದ ಗ್ಲೂಕೋಸ್‌ನ ಹೀರಿಕೊಳ್ಳುವಿಕೆಯನ್ನು ತಡೆಯುವ ಮೂಲಕ (ಸುಕ್ರೋಸ್ ಮತ್ತು ಮಾಲ್ಟೋಸ್ ಎಂಬ ಎರಡು ವಿಧದ ಸಕ್ಕರೆಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ) ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಬಂದಿದೆ. ಇದರ ಎಲೆಗಳು ಜೀರ್ಣಕ್ರಿಯೆಯ ಸಮಯದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುವ ಹಲವಾರಿ ಕಿಣ್ವಗಳನ್ನು ನಿಯಂತ್ರಿಸುತ್ತದೆ.

    2. ತೂಕ ನಷ್ಟಕ್ಕೆ ನೆರವು: ಪೇರಲೆ ಎಲೆಯ ಸಾರವು ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುವ ವಿವಿಧ ಕಿಣ್ವಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿರುವುದರಿಂದ ಇದು ತೂಕ ನಷ್ಟಕ್ಕೆ ಉತ್ತೇಜನ ನೀಡುತ್ತದೆ. ಇದಲ್ಲದೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಸಕ್ಕರೆ ಪಾನೀಯಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ.

    3. ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ಪೇರಲೆ ಎಲೆಯ ಸಾರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಎಲೆಯಲ್ಲಿರುವ ಹಲವು ಸಂಯುಕ್ತಗಳಾದ, ಫ್ಲೇವನಾಯ್ಡಗಳು, ಟ್ಯಾನಿನ್ ಮತ್ತು ಆಮ್ಲಗಳು ಸೂಕ್ಷ್ಮಜೀವಿ ಪ್ರತಿಬಂಧಕ ಗುಣಲಕ್ಷಣಗಳಿಗೆ ಕೊಡುಗೆ ನೀಡುತ್ತವೆ. ಇದರೊಂದಿಗೆ ಜಠರ ಕರುಳಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಪೇರಲೆ ಎಲೆಯನ್ನು ಬಳಸಲಾಗುತ್ತದೆ.

    4. ಅತಿಸಾರಕ್ಕೆ ಚಿಕಿತ್ಸೆ: ಪ್ರಪಂಚದ ವಿವಿಧ ಭಾಗಗಳಲ್ಲಿ ಅತಿಸಾರದಂತಹ ಸಮಸ್ಯೆ ನಿರ್ವಹಿಸಲು ಪೇರಲೆ ಎಲೆಯ ಚಹಾವನ್ನು ಸಾಂಪ್ರ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ, ಪೇರಲೆ ಎಲೆಯ ಚಹಾ ಸೇವಿಸಿದ ನಂತರ ಅತಿಸಾರವು ತ್ವರಿತವಾಗಿ ನಿಯಂತ್ರಣಕ್ಕೆ ಬರುತ್ತದೆ. ಇದು ಅತಿಸಾರಕ್ಕೆ ಕಾರಣವಾದ ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.

    5. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಕೆಲ ಪ್ರಯೋಗಾಲಯ ಅಧ್ಯಯನಗಳ ಪ್ರಕಾರ, ಪೇರಲೆ ಎಲೆಯ ಚಹಾವು ಎಲ್ಡಿಎಲ್ (ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್) ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಎಂದು ಕರೆಯಲಾಗುತ್ತದೆ. ಜತೆಗೆ ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತದೆ.

    6. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಹೇರಳವಾಗಿರುವ ಪೇರಲೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನೂ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇವುಗಳ ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ವಿವಿಧ ರೀತಿಯ ಸೋಂಕನ್ನು ತಡೆಯುತ್ತದೆ.

    7. ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ: ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಪೇರಲೆ ಎಲೆಯ ಚಹಾ ಕುಡಿಯುವುದರಿಂದ ಸೊಂಟದ ನೋವಿನ ಸೆಳೆತವನ್ನು ಕಡಿಮೆ ಮಾಡಬಹುದು. ಪೇರಲೆಯು ಕೆಲವು ನೋವು ನಿವಾರಕ ಮಾತ್ರೆಗಳಿಗಿಂತ ಪರಿಣಾಮಕಾರಿಯಾಗಿ ನೋವು ಕಡಿಮೆ ಮಾಡುತ್ತದೆ ಎನ್ನುತ್ತವೆ ಅಧ್ಯಯನಗಳು.

    ಆರೋಗ್ಯಕರ ಪೇರಲೆ ಚಹಾ ತಯಾರಿಸುವ ವಿಧಾನ:
    ನಾಲ್ಕು ದೊಡ್ಡ ತಾಜಾ ಪೇರಲೆ ಎಲೆಗಳನ್ನು ತೊಳೆದುಕೊಳ್ಳಿ. ಬಾಣಲೆಯಲ್ಲಿ ಒಂದು ಕಪ್ ನೀರನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಪೇರಲೆ ಎಲೆಗಳನ್ನು ಹಾಕಿ. ಇದನ್ನು ಐದು ನಿಮಿಷಗಳ ಕಾಲ ಕುದಿಸಿ. ಎಲೆಗಳನ್ನು ಶೋಧಿಸಿ, ಪಾನೀಯಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ರುಚಿಗೆ ತಕ್ಕಂತೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟು ಮಾಡಿದರೆ ಪೇರಲೆ ಎಲೆಯ ಚಹಾ ರೆಡಿ ಟು ಸರ್ವ್.

    ಪ್ರತ್ಯಾಹಾರದಿಂದ ಜ್ಞಾನೇಂದ್ರಿಯಗಳ ನಿಯಂತ್ರಣ ಸಾಧ್ಯ

    ಯೋಗಕ್ಷೇಮ| ರಂಗೋಲಿಯಿಂದ ಎಡ-ಬಲ ಮಿದುಳಿನ ಸಂತುಲನ ಸಾಧ್ಯ

    ದೇಹವನ್ನು ತಂಪಾಗಿಸುವ ಶೀತಲೀ ಪ್ರಾಣಾಯಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts