More

    ಜಗತ್ತು ಕರೊನಾ ವಿರುದ್ಧ ಹೋರಾಡ್ತಿದ್ರೆ ‘ಕೆಲವರು’ ಭಯೋತ್ಪಾದನೆ ಹರಡುತ್ತಿದ್ದಾರೆ: ಪಾಕ್‌ಗೆ ಮೋದಿ ಚಾಟಿ

    ನವದೆಹಲಿ: ಇಡೀ ಜಗತ್ತಿನಲ್ಲಿ ಎಲ್ಲ ದೇಶಗಳು ಕರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದರೆ ‘ಕೆಲವರು’ ಭಯೋತ್ಪಾದನೆಯ ವೈರಸ್ ಹರಡಿಸುವಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇದನ್ನೂ ಓದಿ: ಕಡುಬಡವರಿಗೆ ದಿನಸಿ ಕಿಟ್ ವಿತರಣೆ

    ಅಲಿಪ್ತ ರಾಷ್ಟ್ರಗಳ ಕೂಟ (ನ್ಯಾಮ್) ಶೃಂಗಸಭೆಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಾಕಿಸ್ತಾನದ ಹೆಸರು ಹೇಳದೆ ಈ ರೀತಿ ಪರೋಕ್ಷವಾಗಿ ಕಟುಟೀಕೆ ಮಾಡಿದರು.

    ಇದನ್ನೂ ಓದಿ: ಲಾಕ್‌ಡೌನ್ ಸಡಿಲಿಸಿದರೂ ನಿಯಮ ಪಾಲಿಸಿ

    ‘ನಾವು ನಮ್ಮ ದೇಶದ ಅಗತ್ಯಗಳನ್ನೆಲ್ಲ ಪೂರೈಸಿಕೊಂಡು ಇತರ ದೇಶಗಳಿಗೂ ನೆರವಾಗುತ್ತಿದ್ದರೆ, ಕೆಲವರು ನಕಲಿ ವಿಡಿಯೋಗಳನ್ನು ಹರಿಬಿಡುವುದರಲ್ಲಿ ನಿರತರಾಗಿದ್ದಾರೆ. ಫೇಕ್ ನ್ಯೂಸ್ ಹಬ್ಬಿಸುವುದರಲ್ಲಿ ತತ್ಪರರಾಗಿದ್ದಾರೆ’ ಎಂದು ಟೀಕಿಸಿದರು.

    ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಸೈನ್ಯದ ಕಡೆಯಿಂದ ಕದನ ವಿರಾಮ ಉಲ್ಲಂಘನೆಯ ಘಟನೆಗಳು ಹೆಚ್ಚಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಅದಲ್ಲದೆ, ಕಳೆದ 2 ದಿನಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದಿದ್ದು ಅನೇಕ ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಕೆಲವು ಸೈನಿಕರೂ ಹುತಾತ್ಮರಾಗಿದ್ದಾರೆ. ಈ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ಅಲಿಪ್ತ ರಾಷ್ಟ್ರಗಳ ನಾಯಕರ ಎದುರು ಪಾಕಿಸ್ತಾನಕ್ಕೆ ಮಾತಿನ ಚಾಟಿ ಬೀಸಿದರು.

    ನ್ಯಾಮ್ ಈ ಹಿಂದೆಯೂ ಸದಾ ಜಗತ್ತಿನ ನೈತಿಕ ಧ್ವನಿಯಾಗಿ ಕಾರ್ಯ ನಿರ್ವಹಿಸಿದೆ. ಈ ಪಾತ್ರವನ್ನು ಮುಂದುವರಿಸಬೇಕಾದರೆ ನ್ಯಾಮ್ ಎಲ್ಲರನ್ನೂ ಒಳಗೊಳ್ಳಬೇಕು. ಮನುಕುಲವು ಈಗ ಅತ್ಯಂತ ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದನ್ನು ಎದುರಿಸುವಲ್ಲಿ ಜಾಗತಿಕ ಸೌಹಾರ್ದ ರೂಪಿಸಲು ನ್ಯಾಮ್ ನೆರವಾಗಬಲ್ಲದು ಎಂದು ಮೋದಿ ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಹೋಟೆಲ್ ಮಾಲೀಕರ ಸಹಕಾರ ಕೋರಿದ ಡಿಸಿ

    ಮೋದಿ ಪ್ರಧಾನಿಯಾದ ನಂತರ ನ್ಯಾಮ್ ಸಭೆಯಲ್ಲಿ ಭಾಗವಹಿಸಿರುವುದು ಇದೇ ಮೊದಲು. 2016 ಮತ್ತು 2019ರ ಶೃಂಗ ಸಭೆಗಳಲ್ಲಿ ಉಪರಾಷ್ಟ್ರಪತಿ ಭಾರತವನ್ನು ಪ್ರತಿನಿಧಿಸಿದ್ದರು. 2012ರ ಶೃಂಗಸಭೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಂಡಿದ್ದರು.

    ವಿಶ್ವ ಸಂಸ್ಥೆಯ ನಂತರ ನ್ಯಾಮ್, ವಿಶ್ವದ ರಾಷ್ಟ್ರಗಳ ಅತಿ ದೊಡ್ಡ ಕೂಟವಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ 120 ಅಭಿವೃದ್ಧಿಶೀಲ ದೇಶಗಳು ಅಲಿಪ್ತ ಒಕೂಟದ ಸದಸ್ಯತ್ವ ಹೊಂದಿವೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆಸಕ್ತಿಯೊಂದಿಗೆ 1961ರಲ್ಲಿ ಇದು ಸ್ಥಾಪನೆಗೊಂಡಿದೆ.

    ಈ ಸಲದ ಸಭೆಯ ಧ್ಯೇಯವಾಕ್ಯ ‘ಕೋವಿಡ್-19 ವಿರುದ್ಧ ಒಗ್ಗಟ್ಟು’ ಎಂಬುದಾಗಿತ್ತು. ನ್ಯಾಮ್‌ನ ಹಾಲಿ ಅಧ್ಯಕ್ಷ ದೇಶವಾದ ಅಜರ್‌ಬೈಜಾನ್ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅಧ್ಯಕ್ಷತೆ ವಹಿಸಿದ್ದರು.

    ಇದನ್ನೂ ಓದಿ: ಉಚಿತರ ಪಡಿತರಕ್ಕೆ ಅಂಗವಿಕಲರ ಒತ್ತಾಯ, ಮಿನಿವಿಧಾನ ಸೌಧದ ಮುಂದೆ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಮೌನ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts