More

    370ನೇ ವಿಧಿ ರದ್ದತಿ ಕುರಿತ ತೀರ್ಪಿನ ಮೊದಲೇ ಎಕ್ಸ್​ನಲ್ಲಿ ವಿವಾದಾತ್ಮಕ ಪೋಸ್ಟ್​: ಸೋಲುವುದಕ್ಕಾಗಿಯೇ ವಾದ ಮಂಡಿಸಿದ್ದರೆ ಕಪಿಲ್​ ಸಿಬಲ್​?

    ನವದೆಹಲಿ: “ಸೋಲುವುದಕ್ಕಾಗಿಯೇ ಕೆಲವು ಯುದ್ಧಗಳನ್ನು ಹೋರಾಡಲಾಗುತ್ತದೆ.”

    ಇಂತಹ ಹೇಳಿಕೆ ನೀಡಿರುವುದು ಹಿರಿಯ ವಕೀಲ ಹಾಗೂ ಕಾಂಗ್ರೆಸ್​ ನಾಯಕ ಕಪಿಲ್ ಸಿಬಲ್​. 370ನೇ ವಿಧಿ ರದ್ದತಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ಸೋಮವಾರ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡುವ ಸ್ವಲ್ಪ ಮುಂಚಿತವಾಗಿಯೇ ಸಿಬಲ್​ ಇಂತಹ ಹೇಳಿಕೆಯನ್ನು ಎಕ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ, ಸಿಬಲ್​ ಅವರ ವಕೀಲಿ ವೃತ್ತಿಯ ನೈತಿಕತೆ ಕುರಿತು ಅನೇಕ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರಾಗಿ ಸಿಬಲ್ ಅವರು ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ಈಗ ಅವರು ವಾದ ಮಂಡಿಸಿರುವುದರ ವಿರುದ್ಧ ಕೋರ್ಟ್​ ತೀರ್ಪು ಹೊರಬಿದ್ದಿದೆ.

    ಆದರೆ, ತೀರ್ಪು ಪ್ರಕಟವಾಗುವ ಮೊದಲೇ ಸೋಷಿಯಲ್​ ಮೀಡಿಯಾದಲ್ಲಿ ಅವರು ಪೋಸ್ಟ್​ ಮಾಡಿರುವುದನ್ನು ಗಮನಿಸಿದರೆ, ತೀರ್ಪು ಇದೇ ರೀತಿ ಬರುತ್ತದೆ ಎಂದು ಸಿಬಲ್​ ಅವರಿಗೆ ಮುಂಚಿತವಾಗಿಯೇ ಗೊತ್ತಿತ್ತೆ? ಅಥವಾ ಊಹಿಸಿದ್ದರೆ? ತೀರ್ಪು ಇದೇ ರೀತಿ ಬರುತ್ತದೆ ಎಂದು ಗೊತ್ತಿದ್ದರೂ ಅದರ ವಿರುದ್ಧವಾಗಿ ಅವರು ಏಕೆ ವಾದ ಮಂಡಿಸಿದರು? ಸೋಲುವುದು ಗೊತ್ತೇ ಇದ್ದರೆ ಅದನ್ನು ತಮ್ಮ ಕಕ್ಷಿದಾರರಿಗೆ ಮುಂಚಿತವಾಗಿಯೇ ತಿಳಿಸಿದ್ದರೆ? ಎಂಬಂತಹ ಪ್ರಶ್ನೆಗಳು ಈಗ ಸಿಬಲ್​ ಅವರು ಮಾಡಿದ ಪೋಸ್ಟ್​ನಿಂದಾಗಿ ಉದ್ಭವಿಸಿವೆ.

    ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ 2019ರಲ್ಲಿನ ರಾಷ್ಟ್ರಪತಿಗಳ ಆದೇಶದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಎತ್ತಿಹಿಡಿದಿದೆ. ಸೋಮವಾರದ ನೀಡಿದ ಈ ಸರ್ವಾನುಮತದ ತೀರ್ಪಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಕೇಂದ್ರದ ಕ್ರಮವನ್ನು ಐವರು ನ್ಯಾಯಮೂರ್ತಿಗಳ ಪೀಠವು ಎತ್ತಿಹಿಡಿದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಆದೇಶವನ್ನು ಪ್ರಕಟಿಸುವಾಗ, “ಆರ್ಟಿಕಲ್ 370ರ ಅಡಿಯಲ್ಲಿ ಒದಗಿಸಲಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವು ತಾತ್ಕಾಲಿಕವಾಗಿದೆ. ಅಲ್ಲದೆ, ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ರಾಷ್ಟ್ರಪತಿ ಆದೇಶ ಮಾನ್ಯವಾಗಿದೆ” ಎಂದು ಹೇಳಿದ್ದಾರೆ.

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಹಲವು ಅರ್ಜಿಗಳ ಕುರಿತು ಈ ತೀರ್ಪು ನೀಡಿದೆ.

    ರಾಷ್ಟ್ರಪತಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಈ ಅರ್ಜಿಗಳ ಕುರಿತ ಹಿಂದಿನ ವಿಚಾರಣೆಯ ವೇಳೆ ಸಿಬಲ್ ಅವರು, “ಭಾರತದ ಇತಿಹಾಸದಲ್ಲಿ ಎಂದಿಗೂ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾಗಿಲ್ಲ” ಎಂದು ಹೇಳಿದ್ದರು.

    “ನೀವು ಒಂದು ರಾಜ್ಯದ ಗಡಿಯನ್ನು ಬದಲಾಯಿಸಬಹುದು, ನೀವು ಸಣ್ಣ ರಾಜ್ಯಗಳನ್ನು ಮಾಡಲು ದೊಡ್ಡ ರಾಜ್ಯದ ಗಡಿಗಳನ್ನು ವಿಭಜಿಸಬಹುದು. ಆದರೆ, ಈ ದೇಶದ ಇತಿಹಾಸದಲ್ಲಿ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾಗಿಲ್ಲ. ನೀವು ರಚಿಸಬಹುದು. ಆದರೆ, ಒಂದೇ ದಿನದಲ್ಲಿ ಮಧ್ಯಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದೂ ಅವರು ವಾದ ಮುಂದಿಟ್ಟಿದ್ದರು.

    370ನೇ ವಿಧಿಯ ರದ್ದತಿಯು ರಾಜಕೀಯ ನಡೆಯೇ ಹೊರತು ಸಾಂವಿಧಾನಿಕ ಕ್ರಮವಲ್ಲ ಎಂದು ಸಿಬಲ್ ಈ ಪ್ರಕರಣದ ವಿಚಾರಣೆ ಉದ್ದಕ್ಕೂ ಪ್ರತಿಪಾದಿಸಿದ್ದರು.

    ಲೋಕಸಭೆಯಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts