More

    ಲೋಕಸಭೆಯಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

    ನವದೆಹಲಿ: ‘ಕಾಸಿಗಾಗಿ ಪ್ರಶ್ನೆ’ ಪ್ರಕರಣದಲ್ಲಿ ತಮ್ಮನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

    ಸಂಸತ್​ನಿಂದ ತಮ್ಮನ್ನು ಹೊರಹಾಕುವ ನಿರ್ಧಾರ “ಕಾನೂನುಬಾಹಿರ” ಎಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಅವರು ಹೇಳಿದ್ದಾರೆ.

    ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಮತ್ತು ನಗದನ್ನು ಸ್ವೀಕರಿಸಿದ ಪ್ರಕರಣದಲ್ಲಿ ಮಹುವಾ ತಪ್ಪಿತಸ್ಥರೆಂಬ ಲೋಕಸಭೆ ನೈತಿಕ ಸಮಿತಿ ಮಂಡಿಸಿದ ವರದಿಯನ್ನು ಲೋಕಸಭೆಯು ಅಂಗೀಕರಿಸಿದ ಹಿನ್ನೆಲೆಯಲ್ಲಿ ಮಹುವಾ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಡಿಸೆಂಬರ್ 8 ರಂದು
    ಉಚ್ಚಾಟಿಸಲಾಗಿದೆ.

    ನೈತಿಕ ಸಮಿತಿಯು ಯಾವುದೇ ಸಾಕ್ಷ್ಯವಿಲ್ಲದೆ ಕ್ರಮ ಕೈಗೊಂಡಿದೆ. ವಿರೋಧ ಪಕ್ಷದವರನ್ನು ಹತ್ತಿಕ್ಕುವ ಅಸ್ತ್ರ ಇದಾಗಿದೆ. ನೈತಿಕ ಸಮಿತಿಯು ತನ್ನ ವರದಿಯಲ್ಲಿ “ಪುಸ್ತಕದಲ್ಲಿನ ಪ್ರತಿಯೊಂದು ನಿಯಮವನ್ನು ಮುರಿದಿದೆ” ಎಂದು ತಮ್ಮ ಉಚ್ಚಾಟನೆಯ ನಂತರ ಮೊಯಿತ್ರಾ ಆರೋಪಿಸಿದ್ದರು.

    ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಈ ಟಿಎಂಸಿ ನಾಯಕಿಯು ನೈತಿಕ ಸಮಿತಿಯ ವರದಿಯನ್ನು ಕೈಗೆತ್ತಿಕೊಂಡಾಗ ಸದನದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಆಪಾದಿಸಿದ್ದಾರೆ.

    ತಮ್ಮ ವಿರುದ್ಧ ಕಾಸಿಗಾಗಿ ಪ್ರಶ್ನೆ’ ಆರೋಪಗಳನ್ನು ಮಾಡಿದ ತಮ್ಮ ವಿಚ್ಛೇದಿತ ಪಾಲುದಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರನ್ನು ತಾವು ಕ್ರಾಸ್​ ಎಕ್ಸಾಮಿನ್​ ಕೂಡ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

    ಏನಿದು ಕಾಸಿಗಾಗಿ ಪ್ರಶ್ನೆ ಪ್ರಕರಣ?:

    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಅವರು ಉದ್ಯಮಿ ಹೀರಾನಂದನಿ ಅವರಿಂದ “ನಗದು ಮತ್ತು ಉಡುಗೊರೆ” ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ದುಬೆ ಆರೋಪಿಸಿದ್ದರು. ಮೊಯಿತ್ರಾ ಮತ್ತು ಹಿರಾನಂದನಿ ನಡುವಿನ ವ್ಯವಹಾರದ ಕುರಿತು “ನಿರಾಕರಿಸಲಾಗದ ಪುರಾವೆ” ಇದೆ ಎಂದು ವಕೀಲ ದೆಹದ್ರಾಯ್ ಅವರು ಪತ್ರ ಬರೆದಿರುವುದನ್ನು ದುಬೆ ಉಲ್ಲೇಖಿಸಿದ್ದರು.

    ನಂತರ ಹೀರಾನಂದನಿ ಅವರು ನೈತಿಕ ಸಮಿತಿಯ ಮುಂದೆ ಪತ್ರವನ್ನು ಸಲ್ಲಿಸಿ, ಮೊಯಿತ್ರಾ ಅವರು ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತಮ್ಮ ಸಂಸದೀಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಹೀರಾನಂದನಿ ಅವರಿಗೆ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ್ದೇನೆ ಎಂದು ಮೊಯಿತ್ರಾ ಕೂಡ ಒಪ್ಪಿಕೊಂಡಿದ್ದರು. ನಂತರ ನೈತಿಕ ಸಮಿತಿಯು ಮೊಯಿತ್ರಾ ವಿರುದ್ಧದ ವರದಿ ಅಂಗೀಕರಿಸಿತು. ಈ ವರದಿಯು ಅಂತಿಮವಾಗಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟಿಸಲು ಕಾರಣವಾಯಿತು.

    f

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts