More

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

    ಅರಕಲಗೂಡು: ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ನರೇಗಾ ಯೋಜನೆ ಕಾಮಗಾರಿಗಳನ್ನು ಜೆಸಿಬಿ ಮೂಲಕ ನಡೆಸಿ ಬಿಲ್ ಮಾಡಿಕೊಳ್ಳಲಾಗುತ್ತಿದೆ. ಇ-ಸ್ವತ್ತು ಮಾಡಿಸಲು ಪಂಚಾಯಿತಿಯಲ್ಲಿ ಲಂಚದ ಹಾವಳಿ ಮಿತಿ ಮೀರಿದೆ…

    ಇದು ತಾಲೂಕಿನ ಬಸವಾಪಟ್ಟಣದಲ್ಲಿ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ಅವ್ಯವಸ್ಥೆಗಳನ್ನು ಬಿಚ್ಚಿಟ್ಟರು. ಗ್ರಾಮದ ಗೋವಿಂದ ಮಾತನಾಡಿ, ಬಸವಾಪಟ್ಟಣದಲ್ಲಿ ಹಲವು ಮನೆಗಳಿಗೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ. ಪಂಚಾಯಿತಿ ಗಮನಕ್ಕೆ ತಂದರೆ ಯಾರೂ ಗಮನ ನೀಡುತ್ತಿಲ್ಲ ಎಂದು ದೂರಿದರು. ಕಾನನಕೊಪ್ಪಲು ಗ್ರಾಮದ ಮಂಜು ಮಾತನಾಡಿ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಪೈಪ್ ಅಳವಡಿಸಲು ಹಳೆಯ ಪೈಪ್‌ಗಳನ್ನು ಬಗೆದು ಹಾಳು ಮಾಡಲಾಗಿದೆ. ಹೀಗಾಗಿ ಗ್ರಾಮಕ್ಕೆ ಕುಡಿಯುವ ನೀರಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ಬೆಟ್ಟಸೋಗೆ ಗ್ರಾಮದ ರಾಜಶೇಖರ್ ಮಾತನಾಡಿ, ನರೇಗಾ ಯೋಜನೆ ಕಾಮಗಾರಿಗಳನ್ನು ಜೆಸಿಬಿ ಮೂಲಕ ಮಾಡಿ ಅಕ್ರಮವಾಗಿ ಬಿಲ್ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಯೋಜನೆ ಉದ್ದೇಶ ವಿಫಲವಾಗುತ್ತಿದೆ. ಪಂಚಾಯಿತಿಯಲ್ಲಿ ಲಂಚ ನೀಡದ ಹೊರತು ಇ-ಸ್ವತ್ತು ಮಾಡಿಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಸವಾಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ನೀರು ಸರಬರಾಜಿಗೆ ತೊಂದರೆಯಾಗಿದೆ ಎಂದು ಪಿಡಿಒ ವೀರಭದ್ರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮೊದಲು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ಹಳ್ಳಿಗಳಲ್ಲಿ ಕೂಲಿ ಹಣ ಏರಿಕೆಯಾಗಿರುವ ಕಾರಣ ನರೇಗಾ ಯೋಜನೆ ಕಾಮಗಾರಿಗಳ ಕೆಲಸಕ್ಕೆ ಕಾರ್ಮಿಕರ ಕೊರತೆ ಉಂಟಾಗಿದೆ. ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಪೀಡಿಸಿದರೆ ಮಾಹಿತಿ ನೀಡಿ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಶೇ.100 ಇ-ಸ್ವತ್ತು ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕವಿತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಉಪ ತಹಸೀಲ್ದಾರ್ ರವಿ, ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಕುಮಾರ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ಅಶೋಕ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts