More

    ಜನಾಂದೋಲನದಿಂದ ಸಮಸ್ಯೆಗಳಿಗೆ ಪರಿಹಾರ

    ಹುಬ್ಬಳ್ಳಿ: ‘ಯಾವುದೇ ಸಮಸ್ಯೆಗೆ ಪರಿಹಾರ ಮತ್ತು ಅಭಿವೃದ್ಧಿಗೆ ಕೇವಲ ಹಣ, ಸಮಯ ವಿನಿಯೋಗ ಮಾತ್ರ ಸಾಕಾಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಮಸ್ಯೆಗಳಿಗೆ ಬಹುಬೇಗ ಪರಿಹಾರ ಕೈಗೊಂಡು, ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಸಾಧ್ಯ.’

    ಪಾನಿ ಫೌಂಡೇಷನ್ ಸಹಯೋಗದಲ್ಲಿ ಹುಬ್ಬಳ್ಳಿ ದೇಶಪಾಂಡೆ ಫೌಂಡೇಷನ್​ನಿಂದ ಗುರುವಾರ ಯೂ ಟ್ಯೂಬ್ ಹಾಗೂ ಜೂಮ್ ಆಪ್ ಮೂಲಕ ಆಯೋಜಿಸಿದ್ದ ‘ಗ್ರಾಮೀಣ ಭಾಗದಲ್ಲಿ ಪರಿವರ್ತನೆ ತರಲು ಜನಾಂದೋಲನದ ಸೃಷ್ಟಿ’ ಕುರಿತ ವೆಬಿನಾರ್​ನಲ್ಲಿ ವ್ಯಕ್ತವಾದ ಅಭಿಪ್ರಾಯ ಇದು.

    ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ನೇತೃತ್ವದಲ್ಲಿ ಆಯೋಜಿಸಿದ್ದ ವೆಬಿನಾರ್​ನಲ್ಲಿ ಪಾಲ್ಗೊಂಡಿದ್ದ ಪಾನಿ ಫೌಂಡೇಷನ್​ನ ಸಂಸ್ಥಾಪಕರಾದ ನಟ, ನಿರ್ದೇಶಕ ಅಮೀರ ಖಾನ್, ಕಿರಣ ರಾವ್, ಸಿಇಒ ಸತ್ಯಜೀತ ಭಟ್ಕಳ ಅವರು, ತಂತ್ರಜ್ಞಾನದ ಸಹಾಯದಿಂದ ಕಡಿಮೆ ಅವಧಿಯಲ್ಲಿ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮಹಾರಾಷ್ಟ್ರದ ಬರಪೀಡಿತ ಹಳ್ಳಿಗಳಲ್ಲಿ ಜನರ ಸಹಭಾಗಿತ್ವದೊಂದಿಗೆ ನಡೆಸಿದ ಆಂದೋಲನ ನಿರೀಕ್ಷೆ ಮೀರಿ ಯಶಸ್ಸು ಕಂಡಿತು ಎಂದ ಅಮೀರ ಖಾನ್, ಜನರು ತಮ್ಮ ಸಮಸ್ಯೆಗಳನ್ನು ತಾವೇ ನಿವಾರಿಸಿಕೊಳ್ಳಲು ಶಕ್ತರಿದ್ದಾರೆ. ಆದರೆ, ಅವರಿಗೆ ಅವಶ್ಯಕತೆ ಇರುವ ತಿಳಿವಳಿಕೆ ಹಾಗೂ ತಂತ್ರಜ್ಞಾನದ ತರಬೇತಿ ನೀಡಬೇಕಾಗಿದೆ ಎಂದರು.

    ಮಹಾರಾಷ್ಟ್ರದ ಬರಪೀಡಿತ ಗ್ರಾಮವೊಂದರ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿದ್ದ ಪಾನಿ ಫೌಂಡೇಷನ್, ಇಂದು ಜನರ ಸಹಭಾಗಿತ್ವದಿಂದಾಗಿ 4,100 ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಂತರ್ಜಲ ಶೋಧ ಜತೆಗೆ ಮಣ್ಣು ಪರೀಕ್ಷೆ ಹಾಗೂ ಮತ್ತಿತರ ಕಾರ್ಯಗಳನ್ನೂ ಫೌಂಡೇಶನ್ ಪ್ರಾರಂಭಿಸಿದೆ. ಇದರಿಂದಾಗಿ ಆಯಾ ಗ್ರಾಮಗಳಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದು, ಆಹಾರ ಧಾನ್ಯ ಖರೀದಿಗೆ ವ್ಯಾಪಾರಸ್ಥರು ಅಲ್ಲಿಗೆ ತೆರಳುತ್ತಿದ್ದಾರೆ. ಇದು ಗ್ರಾಮಸ್ಥರು ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗಿದೆ ಎಂದು ಹೇಳಿದರು.

    ಮಹಾರಾಷ್ಟ್ರದಲ್ಲಿ ಜನರ ಸಹಭಾಗಿತ್ವದೊಂದಿಗೆ ಕೈಗೊಂಡಿರುವ ಈ ಆಂದೋಲನಕ್ಕೆ ಇದೀಗ ಅಲ್ಲಿನ ಸರ್ಕಾರವೂ ಕೈಜೋಡಿಸಿದೆ ಎಂದು ತಿಳಿಸಿದರು.

    ನಗರ ಪ್ರದೇಶದಲ್ಲಿರುವ ತಂತ್ರಜ್ಞರು, ಸಂಪನ್ಮೂಲ ವ್ಯಕ್ತಿಗಳು ಸ್ವಪ್ರೇರಣೆಯಿಂದ ಹಳ್ಳಿಗಳಿಗೆ ತೆರಳಿ, ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು ಎಂದು ಪಾನಿ ಫೌಂಡೇಷನ್​ನ ಮತ್ತೊಬ್ಬ ಸಂಸ್ಥಾಪಕಿ ಕಿರಣ ರಾವ್ ಸಲಹೆ ನೀಡಿದರು.

    ಪಾನಿ ಫೌಂಡೇಷನ್​ನ ಸಿಇಒ ಸತ್ಯಜೀತ ಭಟ್ಕಳ, ಈ ಆಂದೋಲನ ಗ್ರಾಮೀಣ ಪ್ರದೇಶದಲ್ಲಿ ಹೊಸ ನಾಯಕತ್ವ ಹುಟ್ಟುಹಾಕಿತು ಎಂದು ಹೇಳಿದರು.

    ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಮಾತನಾಡಿ, ಉತ್ತರ ಕರ್ನಾಟಕದ ವಿವಿಧೆಡೆ ನಮ್ಮ ಫೌಂಡೇಶನ್​ನಿಂದ ಕೃಷಿ ಹೊಂಡ ಸೇರಿದಂತೆ ರೈತರಿಗೆ ಉಪಯೋಗವಾಗುವ ಹಲವಾರು ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇನ್ನು 6 ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಹಲವಾರು ರೈತರಿಗೆ ಬ್ಯಾಂಕಿಂಗ್ ಸೇವೆ ಸೇರಿ ಇತರ ಚಟುವಟಿಕೆಗಳ ಕುರಿತು ತರಬೇತಿ ನೀಡುವ ಉದ್ದೇಶ ಇದೆ ಎಂದು ಹೇಳಿದರು.

    ಜನರ ವಿಶ್ವಾಸ ಗಳಿಸಬೇಕು

    ಲಗಾನ್, ದಂಗಲ್ ಚಲನಚಿತ್ರಗಳ ಕಥೆಯಲ್ಲಿ ಜನರನ್ನು ಸಂಘಟಿಸಿರುವುದು ಮಹಾರಾಷ್ಟ್ರದಲ್ಲಿ ನಡೆಸಿರುವ ಜನಾಂದೋಲನಕ್ಕೆ ಸ್ಪೂರ್ತಿ ಆಯಿತೇ ಎಂದು ಗುರುರಾಜ ದೇಶಪಾಂಡೆ ಅವರು ಅಮೀರ ಖಾನ್​ರನ್ನು ಪ್ರಶ್ನಿಸಿದರು. ಚಲನಚಿತ್ರಗಳಿಗಿಂತ ನೈಜವಾಗಿ ಜನರನ್ನು ಸಂಘಟಿಸುವುದು ಕಷ್ಟಕರ. ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳುವುದು ಅಗತ್ಯ ಎಂದು ಅಮೀರ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts