More

    ಪಾಲಿಕೆಗೆ ಸೋಲಾರ್ ವಿದ್ಯುತ್

    ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಫ್‌ಟಾಪ್ ಸೋಲಾರ್ ಪರಿಕಲ್ಪನೆಯಲ್ಲಿ ಸರ್ಕಾರಿ ಕಟ್ಟಡಗಳಿಗೆ ಪಿಪಿಪಿ ಮಾದರಿಯಲ್ಲಿ ಸೋಲಾರ್ ಅಳವಡಿಕೆ ಮಾಡಲು ಉದ್ದೇಶಿಸಲಾಗಿದ್ದು, ಅದರಂತೆ ಲಾಲ್‌ಭಾಗ್‌ನಲ್ಲಿರುವ ಪಾಲಿಕೆ ಕಟ್ಟಡಕ್ಕೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

    ಒಟ್ಟು 7.08 ಕೋಟಿ ರೂ. ವೆಚ್ಚದಲ್ಲಿ 1220 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಯೋಜನೆಗೆ ಸ್ಮಾರ್ಟ್‌ಸಿಟಿಯಿಂದ ಅಂಗೀಕಾರ ದೊರಕಿದೆ. ಪ್ರಸ್ತುತ ಅದರಲ್ಲಿ 123 ಕಿ.ವ್ಯಾ.ವಿದ್ಯುತ್ ಪಾಲಿಕೆಯಲ್ಲಿ ಉತ್ಪಾದನೆಯಾಗುವ ಮೂಲಕ ಪಾಲಿಕೆ ವಿದ್ಯುತ್ ಉತ್ಪಾದಿಸಲಿದೆ. ಅದಕ್ಕಾಗಿ ಪಾಲಿಕೆ ಕಟ್ಟಡದ ಛಾವಣಿಗೆ ಸುಮಾರು 380 ಪ್ಯಾನಲ್‌ಗಳ ಅಳವಡಿಕೆಗೆ ಉದ್ದೇಶಿಸಲಾಗಿದ್ದು, ಕಾಂಕ್ರೀಟ್ ಛಾವಣಿ ಮತ್ತು ಶೀಟ್ ಛಾವಣಿಗೆ ಈಗಾಲೇ 100ರಷ್ಟು ಪ್ಯಾನಲ್ ಹಾಕಲಾಗಿದೆ. ನೋಯ್ಡದ ಸಂಸ್ಥೆಯೊಂದು ಇದರ ಗುತ್ತಿಗೆ ಪಡೆದಿದ್ದು, ಮಂಗಳೂರಿನ ಎಸ್.ಜಿ.ರಿನಿವೆಬಲ್ ಎನರ್ಜಿ ಸಂಸ್ಥೆ ಅಳವಡಿಕೆ ಕೆಲಸ ನಿರ್ವಹಿಸುತ್ತಿದೆ.

    ಉಳಿಕೆ ವಿದ್ಯುತ್ ಮೆಸ್ಕಾಂ ಗ್ರಿಡ್‌ಗೆ: ಸೋಲಾರ್ ಮೂಲಕ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ನೇರವಾಗಿ ಮೆಸ್ಕಾಂ ಗ್ರಿಡ್‌ಗೆ ಹೋಗಲಿದೆ. ರಜಾದಿನಗಳಲ್ಲಿ ವಿದ್ಯುತ್ ಬಳಕೆ ಕಡಿಮೆಯಿರುವುದರಿಂದ ಅಂದು ಉತ್ಪತ್ತಿಯಾಗುವ ಸಂಪೂರ್ಣ ವಿದ್ಯುತ್ ಮೆಸ್ಕಾಂ ಪಡೆಯಲಿದೆ. ಪಿಪಿಪಿ ಮಾದರಿಯಾಗಿರುವುದರಿಂದ ಪಾಲಿಕೆ ಅಥವಾ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹಣ ವ್ಯಯಿಸುವುದಿಲ್ಲ. ಒಪ್ಪಂದದ ಪ್ರಕಾರ ಮುಂದಿನ 25 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಪಾಲಿಕೆ ತಿಂಗಳಲ್ಲಿ ಬಳಸಿದ ವಿದ್ಯುತ್‌ಗೆ ನಿರ್ವಹಣಾ ಸಂಸ್ಥೆ ಬಿಲ್ ನೀಡುತ್ತದೆ. ಅದರಲ್ಲಿ ಶೇ.60ರಷ್ಟು ಮಾತ್ರ ಪಾಲಿಕೆ ಪಾವತಿಸಬೇಕು. ಇದರಿಂದ ಪಾಲಿಕೆಗೆ ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾದಂತಾಗುತ್ತದೆ.

    ಹಲವು ಕಟ್ಟಡಗಳಿಗೆ ಸೋಲಾರ್: ರೂಫ್‌ಟಾಪ್ ಸೋಲಾರ್ ಪರಿಕಲ್ಪನೆಯಲ್ಲಿ ನಗರದ ಹಲವು ಕಟ್ಟಡಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದ್ದು, ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಹೊಗೆ ಬಜಾರ್‌ನ ಕೆಎಫ್‌ಡಿಸಿ ಕಚೇರಿ, ಪುರಭವನ ಮಿನಿಸಭಾಂಗಣ, ಇಎಸ್‌ಐ ಆಸ್ಪತ್ರೆಗೆ ಈಗಾಗಲೇ ಅಳವಡಿಕೆ ಪೂರ್ಣಗೊಂಡಿದೆ. ಪ್ರಸ್ತುತ ಪಾಲಿಕೆ ಹಾಗೂ ಪಾಲಿಕೆಯ ವಾಣಿಜ್ಯ ಸಂಕೀರ್ಣದ ಛಾವಣಿಗೆ ಅಳವಡಿಕೆ ನಡೆಯುತ್ತಿದೆ. ಮುಂದಿನ ಭಾಗದಲ್ಲಿ ಪಿಲಿಕುಳ, ಜಿಪಂ ಕಟ್ಟಡ, ಮಲ್ಲಿಕಟ್ಟೆ ಪಾಲಿಕೆ ಉಪಕಟ್ಟಡಗಳಿಗೂ ಸೋಲಾರ್ ಅಳವಡಿಕೆಯಾಗಲಿದೆ.

    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರ್ಕಾರಿ ಕಟ್ಟಡಗಳಿಗೆ ರೂಫ್‌ಟಾಪ್ ಸೋಲಾರ್ ಅಳವಡಿಕೆ ಕಾರ್ಯಕ್ರಮದ ಭಾಗವಾಗಿ ಪಾಲಿಕೆ ಆಡಳಿತ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ ಸೋಲಾರ್ ಪ್ಯಾನಲ್ ಅಳವಡಿಕೆ ನಡೆಯುತ್ತಿದೆ. ಸುಮಾರು 7.08 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಪ್ರಗತಿಯಲ್ಲಿದೆ.
    ಮಹಮ್ಮದ್ ನಝೀರ್, ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಸ್ಮಾಟ್‌ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts