More

    ಮಂಡ್ಯ ಜಿಲ್ಲೆಯಲ್ಲಿ ಸಾಯಿಲ್ ಟು ಸಿಲ್ಕ್: ರೇಷ್ಮೆ ಕೃಷಿ ಅಭಿವೃದ್ಧಿಗೆ ಯೋಜನೆ

    ಮಂಡ್ಯ: ವರ್ಷ ಕಳೆದಂತೆ ರೇಷ್ಮೆ ಕೃಷಿ ಹೆಚ್ಚಾಗುತ್ತಿರುವ ಜಿಲ್ಲೆಯಲ್ಲಿ ‘ಸಾಯಿಲ್ ಟು ಸಿಲ್ಕ್’ ಎನ್ನುವ ಉತ್ತಮ ಯೋಜನೆಯೊಂದು ಅನುಷ್ಠಾನಗೊಳ್ಳುತ್ತಿದೆ. ರೇಷ್ಮೆ ಉತ್ಪಾದನೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಲು ಕೆ.ಆರ್. ಪೇಟೆ ಪಟ್ಟಣ ಹೊರವಲಯದಲ್ಲಿ ಕೇಂದ್ರವನ್ನು ತೆರೆಯಲಾಗುತ್ತಿದೆ.
    ಕಬ್ಬು, ಭತ್ತ ಸೇರಿದಂತೆ ಸಾಂಪ್ರದಾಯಿಕ ಕೃಷಿಯಿಂದ ಕೈ ಸುಟ್ಟುಕೊಂಡಿರುವ ರೈತರು ರೇಷ್ಮೆ ಉತ್ಪಾದನೆಯತ್ತ ಗಮನಹರಿಸಿದ್ದಾರೆ. ಯುವಕರು ಕೂಡ ಇದರತ್ತ ಆಕರ್ಷಿತರಾಗಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ, ರೇಷ್ಮೆ ಬೆಳೆಯುವ ರಾಜ್ಯದ ಇತರ ಜಿಲ್ಲೆಗಳಿಗೆ ಸ್ಪರ್ಧೆ ಕೊಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಮಾಡುವ ಉದ್ದೇಶದಿಂದ ಕೇಂದ್ರ ಪ್ರಾರಂಭಕ್ಕೆ ಯೋಜನೆ ಸಿದ್ಧವಾಗಿದೆ.
    ಏನಿದು ಸಾಯಿಲ್ ಟು ಸಿಲ್ಕ್?: ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ 31,565 ರೈತ ಕುಟುಂಬಕ್ಕೆ ರೇಷ್ಮೆ ಕೃಷಿ ಆಧಾರವಾಗಿದೆ. ಈ ವರ್ಷ ಇದರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಅಂತೆಯೆ, ಸಣ್ಣ ಪ್ರಮಾಣದಲ್ಲಿ ರೇಷ್ಮೆ ಬೆಳೆದುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅದರಲ್ಲಿಯೂ ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ರೇಷ್ಮೆ ಪ್ರಧಾನ ಬೆಳೆಯಾಗಿ ರೂಪುಗೊಂಡಿದೆ. ರೇಷ್ಮೆ ಇಲಾಖೆ ಮಾಹಿತಿ ಪ್ರಕಾರ ಮದ್ದೂರು ತಾಲೂಕಿನಲ್ಲಿ ಸುಮಾರು 16,542 ಎಕರೆ, ಮಳವಳ್ಳಿಯಲ್ಲಿ 15,514, ಮಂಡ್ಯದಲ್ಲಿ 6,517, ಕೆ.ಆರ್.ಪೇಟೆಯಲ್ಲಿ 1,199, ಶ್ರೀರಂಗಪಟ್ಟಣದಲ್ಲಿ 3,237, ನಾಗಮಂಗಲದಲ್ಲಿ 570 ಹಾಗೂ ಪಾಂಡವಪುರ ತಾಲೂಕಿನ 1,168 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ.
    ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಹಾಗೂ ಉತ್ಪಾದನೆಗೆ ಸಹಕಾರಿಯಾಗುವಂತೆ ಹುಳುವಿನ ಮನೆ, ಗೂಡು ಮಾರಾಟಕ್ಕೆ ಪ್ರೋತ್ಸಾಹಧನ, ಚಂದ್ರಿಕೆ, ಯಂತ್ರೋಪಕರಣ ಸೇರಿದಂತೆ ಹಲವು ಸೌಲಭ್ಯ ನೀಡಲಾಗುತ್ತಿದೆ. ಆದರೂ ಕೆಲವರಿಗೆ ಮಾಹಿತಿ ಕೊರತೆಯಿಂದಾಗಿ ಹಾಗೂ ಯಾವ ಸಮಯದಲ್ಲಿ ರೇಷ್ಮೆಯನ್ನು ಹೇಗೆಲ್ಲ ನಿರ್ವಹಣೆ ಮಾಡಬೇಕೆಂಬ ಗೊಂದಲವಿದೆ. ಈ ಹಿನ್ನೆಲೆಯಲ್ಲಿ ‘ಸಾಯಿಲ್ ಟು ಸಿಲ್ಕ್’ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೆಲವೆಡೆ ಮಾತ್ರ ಇಂತಹ ಕೇಂದ್ರವಿದೆ.
    ಇನ್ನು ಕೆ.ಆರ್. ಪೇಟೆಯಲ್ಲಿ ಈಗಾಗಲೇ ರೇಷ್ಮೆ ತರಬೇತಿ ಶಾಲೆ ಇದೆ. ಇದರಿಂದ ಮಂಡ್ಯ, ಚಿಕ್ಕಮಗಳೂರು, ಕುಣಿಗಲ್ ವ್ಯಾಪ್ತಿಯ ರೇಷ್ಮೆ ಬೆಳೆಗಾರರಿಗೆ ಹಾಗೂ ಸಿಬ್ಬಂದಿಗೆ ಪುನರ್ಮನನ ತರಬೇತಿ ನೀಡಲಾಗುತ್ತಿದೆ. ಮಾತ್ರವಲ್ಲದೆ, ರೇಷ್ಮೆ ಬಿತ್ತನೆ ಗೂಡು ಮತ್ತು ಬಿತ್ತನೆ ಮೊಟ್ಟೆ ಉತ್ಪಾದಿಸಿ ಮಂಡ್ಯ ಸೇರಿದಂತೆ ಹಲವೆಡೆ ವಿತರಣೆ ಮಾಡಲಾಗುತ್ತಿದೆ. ಇದೀಗ ಈ ಕೇಂದ್ರವನ್ನೇ ಮೇಲ್ದರ್ಜೆಗೇರಿಸಿ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಈ ಕೇಂದ್ರದಲ್ಲಿ ರೇಷ್ಮೆ ಕೃಷಿಯ ಪ್ರಾರಂಭದಿಂದ ಸಿಲ್ಕ್ ಉತ್ಪಾದನೆ ಮಾಡುವವರೆಗೂ ಏನೆಲ್ಲ ಕ್ರಮ ಅನುಸರಿಸಬೇಕೆಂದು ತರಬೇತಿ ನೀಡಲಾಗುವುದು. ರಾಜ್ಯವಲ್ಲದೆ, ಹೊರ ರಾಜ್ಯಗಳಿಂದ ಬಂದವರಿಗೂ ತರಬೇತಿ ನೀಡಲು ಚಿಂತಿಸಲಾಗಿದೆ.
    5 ಕೋಟಿ ರೂ. ಬಿಡುಗಡೆ: ಕೆ.ಆರ್. ಪೇಟೆಯಲ್ಲಿ ಸುಸಜ್ಜಿತ ರೇಷ್ಮೆ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸಾಯಿಲ್ ಟು ಸಿಲ್ಕ್ ಯೋಜನೆಗೆಂದು ರಾಜ್ಯ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ಎಲ್ಲ ರೀತಿಯ ರೇಷ್ಮೆ ಚಟುವಟಿಕೆ ಕೈಗೊಳ್ಳಲು ಈ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ ಸುಸಜ್ಜಿತ ರೇಷ್ಮೆ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ನೀಡಲಾಗಿದೆ. ಅಂತೆಯೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೆ ಯೋಜನೆಯ ಡಿಪಿಆರ್ ತಯಾರಿಸಿ ಕಾಮಗಾರಿ ಕೈಗೊಳ್ಳಲು ಜ.6ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ವಿಳಂಬವಿಲ್ಲದೆ ಟೆಂಡರ್ ಆಹ್ವಾನಿಸುವಂತೆ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts