More

    ಪಿಂಜಾರ್ ರಂಜಾನ್ ಸಾಬ್ ಹೆಸರು ಚಿರಸ್ಥಾಯಿಯಾಗಲಿ

    ಬಳ್ಳಾರಿ: ಕರ್ನಾಟಕ ಏಕೀಕರಣ ಕೋರಾಟದಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿ ಪೈಲ್ವಾನ್ ಪಿಂಜಾರ್ ರಂಜಾನ್‌ಸಾಬ್ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ ಸಾಮರಸ್ಯ ಹೇಳಿದರು.

    ನಗರದ ರಾಘವ ಕಲಾಮಂದಿರದಲ್ಲಿ ರಂಗತೋರಣ ಸಂಸ್ಥೆ ಸಿದ್ಧರಾಮ ಕಲ್ಮಠ ವಿರಚಿತ ‘ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

    1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ನಂತರ ಪ್ರಾಂತ್ಯಗಳ ರಚನೆ ಮಾಡಲಾಯಿತು. ಅದರಲ್ಲಿ ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಹತ್ವದ ಸ್ಥಾನವಿದೆ. ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಕೆಲಸ ಮಾಡಬೇಕಿತ್ತು. ಈ ವೇಳೆ ನಾಡಿಗೋಸ್ಕರ ಪ್ರಾಣದ ಹಂಗು ತೊರೆದು ಪಿಂಜಾರ್ ರಂಜಾನ್ ಸಾಬ್ ಸೇವೆ ಸಲ್ಲಿಸಿದ್ದಾರೆ ಎಂದರು.

    ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ಕಲಾ ಅಭಿವ್ಯಕ್ತಿಗೆ, ಸಾಮರಸ್ಯಕ್ಕೆ ಬಳ್ಳಾರಿ ಜಿಲ್ಲೆ ಪ್ರಸಿದ್ಧಿಯಾಗಿದೆ. ರಂಜಾನ್ ಸಾಬ್ ಕನ್ನಡಕ್ಕಾಗಿ ಮಡಿದ ಅಪರೂಪದ ವ್ಯಕ್ತಿ. ಭಾಷಾವಾರು ಪ್ರದೇಶಗಳ ರಚನೆ ಕನ್ನಡನಾಡಿಗೆ ಬಂದ ಬಿಕ್ಕಟ್ಟು. ಆಗ ನಡೆದ ಅನೇಕ ತ್ಯಾಗ, ಬಲಿದಾನ ಸ್ಮರಣೀಯ ಎಂದರು.
    ಬಳ್ಳಾರಿ ಕಲೆಗಳ ತೊಟ್ಟಿಲು. ಪಿಂಜಾರ್ ಸಮುದಾಯ ಲಡಾಖ್ ಪ್ರದೇಶದಿಂದ ಬಂದವರು. ಸೂಫಿ ಸಂಪ್ರದಾಯ ಹೊಂದಿರುವ ಇವರು ಕಲೆ, ನೃತ್ಯ, ಗಾಯನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬಹುಮನಿ ಸಾಮ್ರಾಜ್ಯದಲ್ಲಿ 500 ವರ್ಷ ಮುಸ್ಲಿಮರು ನೀಡಿದ ಕೊಡುಗೆ ಅಪಾರ ಎಂದರು.

    ಲೇಖಕ ಸಿದ್ದರಾಮ ಕಲ್ಮಠ ಮಾತನಾಡಿ, ನಾಡಿನಲ್ಲಿ ಮನೆ ಮಾತಾಗಬೇಕಿದ್ದ ರಂಜಾನ್‌ಸಾಬ್ ಬಗ್ಗೆ ಜನರಲ್ಲಿ ಮಾಹಿತಿ ಇಲ್ಲ. ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಗಡಿಭಾಗದ ನೆಲ ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿರುವುದಕ್ಕೆ ರಂಜಾನ್ ಸಾಬ್ ಕೊಡುಗೆ ಇದೆ. 1956ರಲ್ಲಿ ಮೈಸೂರು ರಾಜ್ಯಕ್ಕೆ ಬಳ್ಳಾರಿ ಸೇರಲು ಅವರೂ ಕಾರಣಿಕರ್ತರು. ಅವರನ್ನು ಸ್ಮರಿಸುವ ಕೆಲಸ ಮಾಡಬೇಕಿದೆ ಎಂದರು.

    ರಂಗತೋರಣದ ಅಧ್ಯಕ್ಷ ಆರ್. ಭೀಮಸೇನ್, ಕಾರ್ಯದರ್ಶಿ ಪ್ರಭು ಕಪ್ಪಗಲ್ಲು, ಬಾಬಣ್ಣ , ಪಿ.ಅಬ್ದುಲ್ ಸಾಬ್, ಡಿ.ಹುಸೇನ್, ಎಚ್.ಎಂ.ಗುರುಸಿದ್ದಸ್ವಾಮಿ, ದಾದಾ ಖಲಂದರ, ಶರ್ಮಾಸ್ ವಲಿ ಮತ್ತಿತರರಿದ್ದರು. ಇದೇ ವೇಳೆ ದಿವಂಗತ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts