More

    ಸ್ಮಾರ್ಟ್ ರೋಡ್ ಹಣ ಫ್ಲೈ ಓವರ್​ಗೆ

    ಹುಬ್ಬಳ್ಳಿ: ನಗರದ ಹೊಸೂರಿನಿಂದ ವಿಮಾನ ನಿಲ್ದಾಣ (ಗೋಕುಲ ರಸ್ತೆ)ದ ವರೆಗೆ ಸ್ಮಾರ್ಟ್ ರೋಡ್ ನಿರ್ವಣಕ್ಕೆ ನಿಗದಿಯಾಗಿದ್ದ 43 ಕೋಟಿ ರೂಪಾಯಿಗಳಲ್ಲಿ 20 ಕೋಟಿ ರೂ. ಹಣವನ್ನು ಹುಬ್ಬಳ್ಳಿಯ ಉದ್ದೇಶಿತ ಫ್ಲೈ ಓವರ್ (ಮೇಲ್ಸೇತುವೆ) ವಿಸ್ತರಣೆ ಕಾಮಗಾರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಫ್ಲೈ ಓವರ್ ನಿರ್ಮಾಣ ಕಾಮಗಾರಿಗಳ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

    ಹುಬ್ಬಳ್ಳಿಯ ಪ್ರಪ್ರಥಮ ಫ್ಲೈ ಓವರ್ ನಿರ್ವಣಕ್ಕೆ ಕೇಂದ್ರ ಸರ್ಕಾರ 300 ಕೋಟಿ ರೂ. ನೀಡಿದೆ. ಆದರೆ, ಉದ್ದೇಶಿತ ಫ್ಲೈ ಓವರ್​ನ್ನು ಕಿತ್ತೂರು ಚನ್ನಮ್ಮ ವೃತ್ತದಿಂದ ಬಂಕಾಪುರ ಚೌಕ ಅಥವಾ ಬಿಡ್ನಾಳ ಕ್ರಾಸ್​ವರೆಗೆ ವಿಸ್ತರಿಸಬೇಕೆಂಬ ಸಾರ್ವಜನಿಕರ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಈಗ ಹಂಚಿಕೆಯಾಗಿರುವ 300 ಕೋಟಿ ರೂ. ಸಾಲುವುದಿಲ್ಲ. ಕೊರತೆಯಾಗುವ ಹಣವನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಂತಿಗೆ, ಇನ್ನಿತರ ಮೂಲಗಳಿಂದ ಸರಿದೂಗಿಸಲು ಈಗಾಗಲೇ ಸೂಚಿಸಲಾಗಿದೆ.

    ಇದೀಗ ಹೊಸೂರಿನಿಂದ ವಿಮಾನ ನಿಲ್ದಾಣದವರೆಗೆ ಸ್ಮಾರ್ಟ್ ರೋಡ್ ನಿರ್ವಣಕ್ಕೆ ನಿಗದಿಯಾಗಿದ್ದ ಅನುದಾನದಲ್ಲಿ 20 ಕೋಟಿ ರೂ. ಹಾಗೂ ಕೈ ಬಿಟ್ಟಿರುವ ಹಳೇ ಹುಬ್ಬಳ್ಳಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಣಕ್ಕೆ ಹಂಚಿಕೆಯಾಗಿದ್ದ 20 ಕೋಟಿ ರೂ. ಸೇರಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 40 ಕೋ. ರೂ. ಹಣವನ್ನು ಫ್ಲೈ ಓವರ್ ಕಾಮಗಾರಿಗೆ ವರ್ಗಾಯಿಸುವಂತೆ ಸಚಿವರು ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸಭೆಯ ಬಳಿಕ ‘ವಿಜಯವಾಣಿ’ಗೆ ತಿಳಿಸಿದರು.

    ಹೊಸೂರಿನಿಂದ ವಿಮಾನ ನಿಲ್ದಾಣದವರೆಗೆ 43 ಕೋ. ರೂ. ವೆಚ್ಚದಲ್ಲಿ 5 ಕಿ.ಮೀ. ಸ್ಮಾರ್ಟ್ ರೋಡ್ ನಿರ್ವಣದ ಗುತ್ತಿಗೆಯನ್ನು ಬಿ.ಎಸ್. ಬಿರಾದಾರ್ ಎಂಬುವವರಿಗೆ ನೀಡಲಾಗಿತ್ತು. ಇದೀಗ ಕಡಿತಗೊಂಡಿರುವ ಅನುದಾನಕ್ಕೆ ಅನುಗುಣವಾಗಿ ನಿರ್ಮಾಣ ಕಾಮಗಾರಿಯನ್ನು ಮರು ವಿನ್ಯಾಸಗೊಳಿಸಬೇಕಿದೆ. ಇದರಿಂದ ಈ ಮಾರ್ಗದ 6 ವೃತ್ತಗಳು ಸಾಮಾನ್ಯ ವೃತ್ತಗಳಾಗಿ ಪರಿವರ್ತನೆಯಾಗಲಿದೆ. ಸಾಕಷ್ಟು ಸುಧಾರಿತ ಸ್ಥಿತಿಯಲ್ಲಿರುವ ಈ ರಸ್ತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ 43 ಕೋ. ರೂ. ವೆಚ್ಚ ಮಾಡುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

    ಫ್ಲೈ ಓವರ್ ಕಾಮಗಾರಿಯ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲು ಏಪ್ರಿಲ್ 5ರಂದು ಸಭೆ ಕರೆಯಲು ನಿರ್ಧರಿಸಲಾಯಿತು. ಪೊಲೀಸ್ ಆಯುಕ್ತ ಲಾಭೂರಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸ್ಮಾರ್ಟ್ ಸಿಟಿ ಎಂಡಿ ಶಕೀಲ ಅಹ್ಮದ್, ವಿಶೇಷಾಧಿಕಾರಿ ಎಸ್.ಎಚ್. ನರೇಗಲ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts